ಎಸ್ಪಿ ಕಚೇರಿ ಪುತ್ತೂರಿಗೆ ಸ್ಥಳಾಂತರಕ್ಕೆ ಮುಹೂರ್ತ?

ಮತ್ತೆ ಗರಿಗೆದರಿತು 9 ವರ್ಷಗಳ ಹಿಂದಿನ ಪ್ರಸ್ತಾವ; ಗೃಹ ಸಚಿವರ ಆಶ್ವಾಸನೆ

Team Udayavani, Sep 9, 2019, 5:00 AM IST

ಗೃಹ ಸಚಿವ ಬೊಮ್ಮಾಯಿ ಜತೆ ಶಾಸಕ ಸಂಜೀವ ಮಠಂದೂರು ಮಾತುಕತೆ ನಡೆಸಿದರು.

ವಿಶೇಷ ವರದಿ-ಪುತ್ತೂರು : ದ.ಕ. ಜಿಲ್ಲೆಯ ಗ್ರಾಮಾಂತರದ ಕಾರ್ಯವ್ಯಾಪ್ತಿಯನ್ನು ಹೊಂದಿದ್ದರೂ ತಾಂತ್ರಿಕವಾಗಿ ಮಂಗಳೂರಿನಲ್ಲಿ ದ.ಕ. ಜಿಲ್ಲಾ ಪೊಲೀಸ್‌ ಕಚೇರಿಯನ್ನು ಗ್ರಾಮಾಂತರದ ಕೇಂದ್ರ ಸ್ಥಾನದಲ್ಲಿರುವ ಪುತ್ತೂರಿಗೆ ವರ್ಗಾಯಿಸಬೇಕೆಂಬ ಹಲವು ಸಮಯಗಳ ಬೇಡಿಕೆ ಈಡೇರುವ ದಿನಗಳು ಸನ್ನಿಹಿತವಾಗಿವೆ.

ಎಸ್‌ಪಿ ಕಚೇರಿ ವ್ಯಾಪ್ತಿಯಲ್ಲಿದ್ದ ಮಂಗಳೂರು ಮಹಾನಗರದಲ್ಲಿ 2010ರಲ್ಲಿ ಪೊಲೀಸ್‌ ಕಮಿಷನರೇಟ್‌ ಜಾರಿಗೆ ಬಂದಿತ್ತು. ಅನಂತರದಲ್ಲಿ ಮಂಗಳೂರು ಕಂದಾಯ ವಿಭಾಗ ವ್ಯಾಪ್ತಿಯಲ್ಲಿ ಕಮಿಷನರೆಟ್‌ ಬರುವುದರಿಂದ ಎಸ್ಪಿ ಕಚೇರಿಗೆ ಆ ವ್ಯಾಪ್ತಿಯಲ್ಲಿ ಅಧಿಕಾರ ವ್ಯಾಪ್ತಿ ಇಲ್ಲ. ಕಮಿಷನರೆಟ್‌ ವ್ಯವಸ್ಥೆಯನ್ನು ಉದ್ಘಾಟಿಸಿದ್ದ ಅಂದಿನ ಗೃಹ ಸಚಿವ ದಿ| ವಿ.ಎಸ್‌. ಆಚಾರ್ಯ ಅವರು ಎಸ್ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸುವ ಭರವಸೆ ನೀಡಿದ್ದರು.

ಮಂಗಳೂರಿನಿಂದ ಹೊರ ಭಾಗದ ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ಹಾಗೂ ಕಡಬ – ಈ ಗ್ರಾಮಾಂತರ ತಾಲೂಕುಗಳು ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವ್ಯಾಪ್ತಿಗೆ ಬರುತ್ತವೆ. ಈ ಭಾಗದಲ್ಲಿ ಅಹಿತಕರ ಘಟನೆಗಳು ನಡೆದರೆ ಪೊಲೀಸ್‌ ಉನ್ನತಾಧಿಕಾರಿಗಳು ಮಂಗಳೂರಿನಿಂದ ಬರಬೇಕು ಅಥವಾ ಈ ಭಾಗದ ಠಾಣೆಗಳ ಅಧಿಕಾರಿಗಳು ಎಸ್ಪಿ ಸಭೆಗೆ ಮಂಗಳೂರಿಗೆ ಹೋಗಬೇಕು.

ಕಾನೂನು ಸುವ್ಯವಸ್ಥೆ ಸುಲಭ
ಮಂಗಳೂರಿನ ಅನಂತರದ ಎರಡನೇ ಅತಿ ದೊಡ್ಡ ಪಟ್ಟಣವಾಗಿರುವ ಪುತ್ತೂರಿನ ಗಡಿ ಭಾಗದಲ್ಲಿ ಬೆಳ್ತಂಗಡಿ, ಬಂಟ್ವಾಳ, ಸುಳ್ಯ, ಕಡಬ ತಾಲೂಕುಗಳು ಬೆಸೆದುಕೊಂಡಿವೆ. ಫ‌ರಂಗಿಪೇಟೆಯಿಂದ ಸಂಪಾಜೆ ತನಕ ಮತ್ತೂಂದು ಭಾಗದಲ್ಲಿ ಚಾರ್ಮಾಡಿ ಘಾಟಿ ತನಕ ಹಾಗೂ ಕೇರಳ ಗಡಿಭಾಗದ ಈಶ್ವರಮಂಗಲ, ಜಾಲೂÕರು, ಪಾಣಾಜೆ, ವಿಟ್ಲ ಭಾಗಗಳು ಬರುತ್ತವೆ. ಪುತ್ತೂರು ಕೇಂದ್ರ ಸ್ಥಾನವಾದರೆ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಹೆಚ್ಚು ಪ್ರಯೋಜನವಾಗಲಿದೆ.

ಗೃಹ ಸಚಿವರಿಂದ ಭರವಸೆ
ಪುತ್ತೂರು ಶಾಸಕ ಸಂಜೀವ ಮಠಂದೂರು ಪ್ರಸ್ತಾವದ ಕುರಿತು ಶನಿವಾರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಗಮನ ಸೆಳೆದಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಗೃಹ ಸಚಿವರು, 10 ದಿನಗಳೊಳಗಾಗಿ ಮಂಗಳೂರಿಗೆ ಬಂದು ಇಲಾಖೆಯ ಸಭೆ ಕರೆದು ಚರ್ಚಿಸಿ, ತೀರ್ಮಾನಿಸುವ ಭರವಸೆ ನೀಡಿರುವುದು ಆಶಾಕಿರಣ ಮೂಡಿಸಿದೆ.

ಎಸ್ಪಿ ಕಚೇರಿ ಸ್ಥಳಾಂತರವಾಗಬೇಕೆನ್ನುವ ಹಲವು ವರ್ಷಗಳ ಬೇಡಿಕೆ ಇದ್ದರೂ ರಾಜಕೀಯ ಇಚ್ಛಾಶಕ್ತಿಯ ಕಾರಣದಿಂದ ಬಾಕಿ ಉಳಿದಿತ್ತು. ಈ ಹಿಂದಿನ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಎಸ್ಪಿ ಕಚೇರಿ ಸ್ಥಳಾಂತರಕ್ಕೆ ಹಾಗೂ ಇದಕ್ಕೆ ಪೂರಕವಾಗಿ ಪೊಲೀಸ್‌ ತರಬೇತಿ ಕೇಂದ್ರವನ್ನೂ ಸ್ಥಾಪಿಸುವ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದರು. ಆದರೆ ಕೈಗೂಡಿರಲಿಲ್ಲ.

ಏನೇನು ಪ್ರಯೋಜನ?
-ಗ್ರಾಮಾಂತರ ತಾಲೂಕುಗಳಲ್ಲಿ ಅಪರಾಧ ಪತ್ತೆ, ಕಾನೂನು ಸುವ್ಯವಸ್ಥೆಗೆ ಪ್ರಯೋಜನಕಾರಿ.
-ಎಸ್ಪಿ ಕಚೇರಿ ತನ್ನ ಕಾರ್ಯ ವ್ಯಾಪ್ತಿಯಲ್ಲೇ ಇದ್ದರೆ ಜನಸಾಮಾನ್ಯರೊಂದಿಗೂ ನಿಕಟವಾಗಿರಲು ಸಾಧ್ಯ.
-ಎಸ್ಪಿ ಕಚೇರಿ ಸ್ಥಳಾಂತರದೊಂದಿಗೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯೂ ಲಭ್ಯವಾಗುತ್ತದೆ. ಈ ಸಿಬಂದಿ ಬೀಟ್‌ ಪೊಲೀಸ್‌ ಕಾರ್ಯ ನಿರ್ವಹಿಸಬಹುದು.
-ಭವಿಷ್ಯದಲ್ಲಿ ಸೈಬರ್‌ ಪೊಲೀಸ್‌ ಠಾಣೆ ಪುತ್ತೂರಿನಲ್ಲಿ ಕಾರ್ಯ ನಿರ್ವಹಿಸಬಹುದು.
-ಮಂಗಳೂರಿನಿಂದ ನಿರ್ವಹಿಸ ಬೇಕಾದ ಕಾರ್ಯದೊತ್ತಡ ಕಡಿಮೆಯಾಗುತ್ತದೆ.

 ಉತ್ತಮ ಬೆಳವಣಿಗೆ
ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಎಸ್ಪಿ ಕಚೇರಿ ಪ್ರಸ್ತಾವ ಜಾರಿಗೆ ಬಂದರೆ ಪುತ್ತೂರು ಗ್ರಾಮಾಂತರ ಜಿಲ್ಲೆ ರಚನೆಗೂ ಪೂರಕವಾಗಲಿದೆ ಹಾಗೂ ಪ್ರಥಮ ಹಂತ ಎನಿಸಲಿದೆ. ಪುತ್ತೂರಿನ ಶಾಸಕರು ಅಧಿಕಾರಕ್ಕೆ ಬಂದ ಕೆಲವೇ ಸಮಯಗಳಲ್ಲಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವುದು ಉತ್ತಮ ಬೆಳವಣಿಗೆ.
– ಸಂದೀಪ್‌ ಲೋಬೋ
ಪುತ್ತೂರು

 15 ಎಕ್ರೆ ಜಾಗ ಗುರುತಿಸಿದ್ದೇವೆ
ಹಿಂದಿನ ಪ್ರಸ್ತಾವವನ್ನು ಮುಂದಿಟ್ಟಾಗ ಗೃಹ ಸಚಿವರು ಹಾಗೂ ಡಿಜಿ ಅವರಿಂದ ಪೂರಕ ಸ್ಪಂದನೆ ವ್ಯಕ್ತವಾಗಿದೆ. ಎಸ್ಪಿ ಕಚೇರಿಗಾಗಿ ಪುತ್ತೂರು ವ್ಯಾಪ್ತಿಯಲ್ಲಿ 15 ಎಕ್ರೆ ಜಾಗವನ್ನೂ ಗುರುತಿಸಿದ್ದೇವೆ. ಎಸ್ಪಿ ಕಚೇರಿ ಕಮಿಷನರೇಟ್‌ ವ್ಯಾಪ್ತಿಯಿಂದ 30 ಕಿ.ಮೀ. ದೂರದ ಕಾರ್ಯವ್ಯಾಪ್ತಿಯಲ್ಲಿಯೇ ಇರಬೇಕೆಂದಿದೆ. ಕೆಲವೇ ದಿನಗಳಲ್ಲಿ ಮಂಗಳೂರಿಗೆ ಬಂದು ಈ ಕುರಿತು ಚರ್ಚಿಸುವುದಾಗಿ ಗೃಹ ಸಚಿವರು ತಿಳಿಸಿದ್ದಾರೆ.
– ಸಂಜೀವ ಮಠಂದೂರು
ಶಾಸಕರು, ಪುತ್ತೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ