ಪ್ರಚಾರದ ಅಖಾಡದಲ್ಲಿ ರಾಜ್ಯ ನಾಯಕರ ದಂಡು

ರಂಗೇರಿದ ಮನಪಾ ಚುನಾವಣೆ

Team Udayavani, Nov 8, 2019, 4:18 AM IST

ಮಹಾನಗರ: ಮಹಾನಗರ ಪಾಲಿಕೆ ಚುನಾವಣೆಯನ್ನು ಕಾಂಗ್ರೆಸ್‌ ಹಾಗೂ ಬಿಜೆಪಿ ಪ್ರತಿಷ್ಠೆಯ ಕಣವಾಗಿ ಪರಿಗಣಿಸಿದ್ದು, ಎರಡೂ ಪಕ್ಷಗಳ ರಾಜ್ಯಾಧ್ಯಕ್ಷರು ಸಹಿತ ರಾಜ್ಯನಾಯಕರ ದಂಡು ಇದೀಗ ಚುನಾವಣ ಪ್ರಚಾರದಲ್ಲಿ ಭಾಗವಹಿಸುವ ಮುಖೇನ ರಾಜಕೀಯ ಅಖಾಡ ಕುತೂಹಲ ಹಂತಕ್ಕೆ ತಲುಪಿದೆ.

ಮಂಗಳೂರು ಪಾಲಿಕೆಯಲ್ಲಿ ನ. 12ರಂದು ಮತದಾನ ನಡೆಯುವ ಹಿನ್ನೆಲೆಯಲ್ಲಿ ಚುನಾವಣ ಪ್ರಚಾರಕ್ಕೆ ಇನ್ನು ಕೇವಲ ಮೂರು ದಿನಗಳು ಮಾತ್ರ ಬಾಕಿಯಿದೆ. ಹೀಗಾಗಿ ಮತದಾರರ ಮನಸ್ಸು ಗೆಲ್ಲುವ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳು ಇದೀಗ ಅಂತಿಮ ಹಂತದ ಕಸರತ್ತಿನಲ್ಲಿ ತೊಡಗಿಸಿಕೊಂಡಿವೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರು ಗುರುವಾರ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣ ಪ್ರಚಾರದಲ್ಲಿ ಪಾಲ್ಗೊಂಡರು.
ಅವರಿಗೆ ಇದು ಮೊದಲ ಹಾಗೂ ತವರು ನೆಲದ ಚುನಾವಣೆಯಾದ್ದರಿಂದ ಪ್ರಚಾರವನ್ನು ಭರ್ಜರಿಯಾಗಿ ಆರಂಭಿಸಿದ್ದಾರೆ. ಹೀಗಾಗಿ, ನಳಿನ್‌ ಜತೆಗೆ ಇತರ ಬಿಜೆಪಿಯ ಪ್ರಮುಖ ಕೆಲವು ನಾಯಕರು ಹಾಗೂ ಶಾಸಕರು ಸೇರಿಕೊಂಡು ಪಾಲಿಕೆ ವ್ಯಾಪ್ತಿಯಲ್ಲಿ ವ್ಯಾಪಕವಾದ ಪ್ರಚಾರ ನಡೆಸುವತ್ತ ಗಮನಹರಿಸಿದ್ದಾರೆ.

ಇನ್ನೊಂದೆಡೆ, ಕಾಂಗ್ರೆಸ್‌ ಕೂಡ ಇದೀಗ ತಮ್ಮ ಪ್ರಚಾರ ಕಾರ್ಯ ವೈಖರಿಯನ್ನು ಚುರುಕುಗೊಳಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಮನಪಾ ಗದ್ದುಗೆ ಮತ್ತೆ ಕೈ ವಶಕ್ಕೆ ಸಿಗಬೇಕು ಎಂಬ ನಿಟ್ಟಿನಲ್ಲಿ ಬುಧವಾರ ತಡರಾತ್ರಿಯವರೆಗೆ ಕಾಂಗ್ರೆಸ್‌ ವೀಕ್ಷಕರ ಹಾಗೂ ಪ್ರಮುಖರ ಜತೆಗೆ ಮಂಗಳೂರಿನಲ್ಲಿ ವಿಶೇಷ ಸಭೆ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ – ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೂಡ ಪಕ್ಷದ ಪ್ರಮುಖರ ಜತೆಗೆ ಸಭೆ ನಡೆಸಿ ಮನೆ ಮನೆಗೆ ಭೇಟಿ ನೀಡುವುದಕ್ಕೆ ಹೆಚ್ಚು ಆದ್ಯತೆ ನೀಡುವ ಸಂಬಂಧ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಈ ಮೂಲಕ ಎರಡೂ ಪಕ್ಷದ ರಾಜ್ಯ ನಾಯಕರು ಇದೀಗ ಪಾಲಿಕೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ.

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ನಡೆಸಿದರು. ಶಾಸಕರಾದ ವೇದವ್ಯಾಸ ಕಾಮತ್‌, ಡಾ| ಭರತ್‌ ಶೆಟ್ಟಿ ವೈ. ಸಹಿತ ಬಿಜೆಪಿ ಮುಖಂಡರು ಗುರುವಾರ ನಗರದ ವಿವಿಧ ಭಾಗಗಳಲ್ಲಿ ಮತಯಾಚನೆ ನಡೆಸಿದರು.

ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿ ಮಾಜಿ ಸಚಿವರಾದ ಬಿ. ರಮಾನಾಥ ರೈ, ವಿನಯ ಕುಮಾರ್‌ ಸೊರಕೆ, ಶಾಸಕ-ಮಾಜಿ ಸಚಿವ ಯು.ಟಿ. ಖಾದರ್‌, ವಿಧಾನಪರಿಷತ್‌ ಸದಸ್ಯ ಐವನ್‌ ಡಿ’ ಸೋಜಾ, ಮಾಜಿ ಶಾಸಕರಾದ ಜೆ.ಆರ್‌. ಲೋಬೋ, ಮೊದಿನ್‌ ಬಾವಾ, ಮಿಥುನ್‌ ರೈ ಸಹಿತ ಕಾಂಗ್ರೆಸ್‌ ಮುಖಂಡರು ಕೂಡ ಗುರುವಾರ ನಗರದ ವಿವಿಧೆಡೆಗಳಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು.
ಉಳಿದಂತೆ ಜೆಡಿಎಸ್‌, ಎಸ್‌ಡಿಪಿಐ, ಸಿಪಿಎಂ, ಸಿಪಿಐ, ಕರ್ನಾಟಕ ರಾಷ್ಟ್ರ ಸಮಿತಿ, ಪಕ್ಷೇತರರು ನಿರ್ಣಾ ಯಕ ಸ್ಥಾನ ಪಡೆದುಕೊಳ್ಳುವ ನಿಟ್ಟಿನಲ್ಲಿ ಮತಯಾಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಸ್ಥಳೀಯ ಸಮಸ್ಯೆ-ಸವಾಲು; ಅಸ್ತ್ರ!
ಮಂಗಳೂರು ಪಾಲಿಕೆಯ ಎಲ್ಲೆಡೆ ಸಮರ್ಪಕ ಕುಡಿಯುವ ನೀರು, ರಸ್ತೆ ನಿರ್ಮಾಣಕ್ಕೆ ಆದ್ಯತೆ, ತ್ಯಾಜ್ಯ ನಿರ್ವಹಣೆಗೆ ಕ್ರಮ, ಸರಕಾರದಿಂದ ಸಿಗುವ ಸವಲತ್ತುಗಳ ಲಭ್ಯತೆ, ಅಧಿಕಾರಿಗಳ ಜವಾಬ್ದಾರಿ ಸಹಿತ ಕೆಲವು ವಿಚಾರಗಳೇ ಪಾಲಿಕೆಯ ಈ ಬಾರಿಯ ಚುನಾವಣ ಪ್ರಚಾರದ ಅಸ್ತ್ರಗಳು.

ಇಂತಹ ವಿಚಾರಗಳನ್ನೇ ಮುಂದಿಟ್ಟು ಎರಡೂ ಪಕ್ಷಗಳು ಜನರಲ್ಲಿ ಭರವಸೆಯ ಮಹಾಪೂರವನ್ನೇ ಹರಿಸಿದೆ. ಎರಡೂ ಪಕ್ಷಗಳು ಬುಧವಾರ ಪ್ರಣಾಳಿಕೆ ಬಿಡುಗಡೆ ಮಾಡಿದ್ದ ಹಿನ್ನೆಲೆಯಲ್ಲಿ ಜನರಿಗೆ ಅದರ ಪ್ರತಿಯನ್ನು ನೀಡಲಾಗುತ್ತಿದೆ. ಹೀಗಾಗಿ ಸ್ಥಳೀಯ ಸಮಸ್ಯೆ-ಸವಾಲು-ಭರವಸೆಗಳೇ ಪಾಲಿಕೆ ಚುನಾವಣೆಗೆ ಅಸ್ತ್ರವಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷ, ಶಾಸಕ ಸಂಜೀವ ಮಠಂದೂರು, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ಅವರ ಪಾಲಿಗೆ ಇದು ಮಹತ್ವದ ಚುನಾವಣೆ.

ನಾಳೆ ನಗರಕ್ಕೆ ದೇವೇಗೌಡ, ಕುಮಾರಸ್ವಾಮಿ
ಜೆಡಿಎಸ್‌ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುವುದಕ್ಕೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ವಿಧಾನ ಪರಿಷತ್‌ ಸದಸ್ಯರಾದ ಬಿ.ಎಂ. ಫಾರೂಕ್‌ ಹಾಗೂ ಭೋಜೇಗೌಡ ಅವರು ಶನಿವಾರ ಮಂಗಳೂರಿಗೆ ಆಗಮಿಸುವ ಸಾಧ್ಯತೆಯಿದೆ. ಈ ರಾಷ್ಟ್ರ-ರಾಜ್ಯ ನಾಯಕರು ಜೆಡಿಎಸ್‌ ಅಭ್ಯರ್ಥಿಗಳು ಸ್ಪರ್ಧಿಸುತ್ತಿರುವ ವಾರ್ಡ್‌ಗಳಲ್ಲಿ ಬಿರುಸಿನ ಪ್ರಚಾರ ನಡೆಸುವ ಸಾಧ್ಯತೆಯಿದೆ.

2 ದಿನಗಳಲ್ಲಿ ಬಹಿರಂಗ ಪ್ರಚಾರ ಅಂತ್ಯ
ಬಹಿರಂಗ ಪ್ರಚಾರಕ್ಕೆ ನ. 10ರಂದು ಸಂಜೆಯ ವರೆಗೆ ಮಾತ್ರ ಅವಕಾಶವಿರುತ್ತದೆ. ಪ್ರಚಾರಕ್ಕಾಗಿ ಆಗಮಿಸಿದ ಎಲ್ಲ ಪಕ್ಷಗಳ ಹೊರ ಭಾಗದ ನಾಯಕರು ಅಂದು ಸಂಜೆ ಪಾಲಿಕೆ ವ್ಯಾಪ್ತಿಯನ್ನು ಬಿಟ್ಟು ತೆರಳಬೇಕು. ನ. 11ರಂದು ಅಭ್ಯರ್ಥಿಗಳ ಮನೆ ಮನೆಗೆ ಭೇಟಿಗೆ ಮಾತ್ರ ಅವಕಾಶವಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ