ಮೈ ಬೀಟ್ ಮೈ ಪ್ರೈಡ್‌: ಹೊಸ ಪೊಲೀಸ್‌ ಬೀಟ್ ವ್ಯವಸ್ಥೆಗೆ ಚಾಲನೆ

Team Udayavani, Aug 17, 2019, 5:29 AM IST

ಮಹಾನಗರ: ಇದುವರೆಗೆ ಪೊಲೀಸ್‌ ಸಿಬಂದಿ (ಕಾನ್ಸ್‌ಟೆಬಲ್) ಮನೆ ಮನೆಗೆ ಗಸ್ತು ತಿರುಗುವ ವ್ಯವಸ್ಥೆ (ಬೀಟ್) ಇತ್ತು. ಇನ್ನು ಮುಂದೆ ನಾಗರಿಕರ ಮನೆ ಬಾಗಿಲಿಗೆ ಪೊಲೀಸ್‌ ಅಧಿಕಾರಿಗಳು ಬೀಟ್ ನಡೆಸಲಿದ್ದಾರೆ.

ಇಂಥದ್ದೊಂದು ಹೊಸ ಕಲ್ಪನೆಗೆ ಮಂಗಳೂರಿನಲ್ಲಿ ಮೂರ್ತರೂಪ ಸಿಕ್ಕಿದೆ. ನೂತನ ಪೊಲೀಸ್‌ ಆಯುಕ್ತ ಡಾ| ಹರ್ಷ ಪಿ.ಎಸ್‌. ಅವರು ಅಧಿಕಾರ ವಹಿಸಿಕೊಂಡ ವಾರದೊಳಗೆ ಹೊಸ ಬೀಟ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ.

ಈ ಹೊಸ ಬೀಟ್ ವ್ಯವಸ್ಥೆಯನ್ನು ‘ಮೈ ಬೀಟ್ ಮೈ ಪ್ರೈಡ್‌’ (ನನ್ನ ಗಸ್ತು ನನ್ನ ಹೆಮ್ಮೆ) ಎಂಬುದಾಗಿ ಹೆಸರಿಸಿದ್ದಾರೆ. ಹೆಸರೇ ಸೂಚಿ ಸುವಂತೆ ಈ ಬೀಟ್‌ನಲ್ಲಿ ಪೊಲೀಸರು ಮತ್ತು ನಾಗರಿಕರು ಹೆಮ್ಮೆಯಿಂದ ತಮ್ಮನ್ನು ಪಾಲ್ಗೊಳ್ಳಲಿದ್ದಾರೆ.

ನಾಗರಿಕರ ಪಾಲ್ಗೊಳ್ಳುವಿಕೆ
ಪೊಲೀಸ್‌ ಬೀಟ್ ವ್ಯವಸ್ಥೆ ಹೊಸದಲ್ಲ, ಆದರೆ ಈ ವ್ಯವಸ್ಥೆಯಲ್ಲಿ ಮುಂದೆ ಕೇವಲ ಪೊಲೀಸರು ಮಾತ್ರವಲ್ಲ ನಾಗರಿಕರು ಕೂಡ ಬೀಟ್ ವ್ಯವಸ್ಥೆಯಲ್ಲಿ ತೊಡಗಿ ಸಿಕೊಳ್ಳುವರು. ಪೊಲೀಸರ ಬೀಟ್‌ಗೆ ನಾಗರಿಕರು ಸಾಥ್‌ ನೀಡುತ್ತಾರೆ. ಪೊಲೀಸ್‌ ಆಯುಕ್ತರಿಂದ ತೊಡಗಿ ಡಿಸಿಪಿ, ಎಸಿಪಿ, ಇನ್‌ಸ್ಪೆಕ್ಟರ್‌, ಪಿಎಸ್‌ಐ, ಎಎಸ್‌ಐ ಕೂಡ ಬೀಟ್ ನಡೆಸಲಿದ್ದಾರೆ.

ಹಗಲು ಹೊತ್ತು ನಡೆಯುವ ಈ ‘ಮೈ ಬೀಟ್ ಮೈ ಪ್ರೈಡ್‌’ ವ್ಯವಸ್ಥೆಗೆ ಪೊಲೀಸ್‌ ಆಯುಕ್ತ ಡಾ| ಪಿ.ಎಸ್‌. ಹರ್ಷ ಅವರು ಶುಕ್ರವಾರ ಚಾಲನೆ ನೀಡಿ ದರು. ಈ ಹೊಸ ವ್ಯವಸ್ಥೆಯಲ್ಲಿ ಸ್ವತಃ ಪೊಲೀಸ್‌ ಆಯುಕ್ತರು ಕೂಡ ಬೀಟ್ ಪೊಲೀಸರ ಜತೆಗೆ ಸುತ್ತಾಡಲಿ ದ್ದಾರೆ. ಈ ಮೂಲಕ ನಾಗರಿಕರ ಬೇಕು, ಬೇಡಗಳಿಗೆ ಸ್ಪಂದಿಸಲಿದ್ದಾರೆ.

ಸಂಬಂಧ ವೃದ್ಧಿಗೆ ಪೂರಕ
ಪೊಲೀಸ್‌, ಜನರ ನಡುವಿನ ಸಂಬಂಧ ವೃದ್ಧಿಸಲು, ತ್ವರಿತವಾಗಿ ಪೊಲೀಸ್‌ ಸೇವೆಗಳನ್ನು ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ.

ನಗರವನ್ನು ಚಿಕ್ಕದಾದ ಬೀಟ್‌ಗಳನ್ನಾಗಿ ವಿಂಗಡಿಸಿ ಪ್ರತಿ ಯೊಂದು ಬೀಟ್‌ಗೆ ಒಬ್ಬ ಕಾನ್‌ಸ್ಟೆಬಲ್ ಅಥವಾ ಹೆಡ್‌ ಕಾನ್‌ಸ್ಟೆಬಲ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಪ್ರತಿ ಬೀಟ್‌ಗೆ ಒಂದು ವಾಟ್ಸಪ್‌ ಗ್ರೂಪ್‌ ರಚಿಸಿ ಅದರಲ್ಲಿ ಸಮಾಜದ ಎಲ್ಲ ವರ್ಗ, ಜಾತಿಯವರನ್ನು ಸೇರಿಸಿಕೊಂಡು ಪ್ರತಿದಿನ ಅವರಿಂದ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುವುದು ಎಂದು ಡಾ| ಹರ್ಷ ತಿಳಿಸಿದರು.

ತಿಂಗಳಿಗೊಂದು ಬಾರಿ ಆಯುಕ್ತರಿಂದ ಪಿಎಸ್‌ಐ ತನಕದ ಅಧಿಕಾರಿಗಳು ಬೀಟ್ ಕರ್ತವ್ಯ ನಿರ್ವಹಿಸುತ್ತಾರೆ. ಯಾರಿಗೆ ಎಲ್ಲೆಲ್ಲಿ ಬೀಟ್ ಎಂಬುದನ್ನು ಹಿರಿಯ ಅಧಿಕಾರಿಗಳು ನಿಗದಿ ಪಡಿಸುತ್ತಾರೆ. ಅಧಿಕಾರಿಗಳು ಬೀಟ್ ಮಾಡುವುದರಿಂದ ಜನರ ಸಮಸ್ಯೆ ನೇರ ಪರಿಚಯವಾಗುತ್ತದೆ. ಕಂಟ್ರೋಲ್ ರೂಂನಲ್ಲಿ ಇದನ್ನು ನಿರ್ವಹಣೆ ಮಾಡಲಾಗುತ್ತದೆ. ಕಾನ್‌ಸ್ಪೆಬಲ್ ಹಂತದಲ್ಲಿ ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ದಾಗ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಇತ್ಯರ್ಥ ಪಡಿಸಲು ಇದರಿಂದ ಸಾಧ್ಯವಾಗಲಿದೆ ಎಂದರು.

ಕೆನರಾ ಬಸ್‌ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌, ವೈದ್ಯ ಡಾ| ಉದಯ್‌, ನಿವೃತ್ತ ಡಿವೈಎಸ್ಪಿ ಟಿ.ಸಿ.ಎಂ ಶರೀಫ್, ವಾಮಂಜೂರಿನ ಸಮಾಜ ಸೇವಾ ಕಾರ್ಯಕರ್ತ ಸಿರಿಲ್ ಫೆರ್ನಾಂಡಿಸ್‌ ಮಾತನಾಡಿ ಹೊಸ ಬೀಟ್ ವ್ಯವಸ್ಥೆಗು ಶುಭ ಹಾರೈಸಿದರು. ಡಿಸಿಪಿಗಳಾದ ಅರುಣಾಂಶು ಗಿರಿ, ಲಕ್ಷ್ಮೀ ಗಣೇಶ್‌ ಉಪಸ್ಥಿತರಿದ್ದರು.

ಮಂಗಳೂರು ದಕ್ಷಿಣ ಎಸಿಪಿ ಕೋದಂಡ ರಾಮ ಸ್ವಾಗತಿಸಿದರು. ದಕ್ಷಿಣ ವಿಭಾಗದ ಟ್ರಾಫಿಕ್‌ ಇನ್‌ಸ್ಪೆಕ್ಟರ್‌ ಗುರುದತ್‌ ಕಾಮತ್‌ ನಿರ್ವಹಿಸಿದರು.

ಮನೆ ಬಾಗಿಲಿಗೆ ಪೊಲೀಸ್‌ ಸೇವೆ

ಹೊಸ ಬೀಟ್ ವ್ಯವಸ್ಥೆಯಿಂದ ಜನರಿಗೆ ಪಾಸ್‌ಪೋರ್ಟ್‌, ಉದ್ಯೋಗ ದಾಖಲೆಗಳ ಅಡ್ಡಪರಿಶೀಲನೆ, ತಾವು ನೀಡಿದ ಪ್ರಕರಣಗಳ ತನಿಖಾ ಪ್ರಗತಿ, ತನಿಖಾ ಸಂಬಂಧ ನೋಟಿಸ್‌ ಮುಂತಾದ ಪೊಲೀಸ್‌ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸಲು ಸಹಕಾರಿಯಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯೊಂದಿಗೆ ಕೈ ಜೋಡಿಸಬೇಕು ಎಂದು ಡಾ| ಹರ್ಷ ಮನವಿ ಮಾಡಿದರು. ಹೊಸ ಬೀಟ್ ವ್ಯವಸ್ಥೆಯ ಮೊದಲ ದಿನವೇ ಪೊಲೀಸ್‌ ಕಮಿಷನರ್‌ ಡಾ| ಪಿ.ಎಸ್‌.ಹರ್ಷ ಅವರು ನಗರದ ಕಂಡತ್‌ಪಳ್ಳಿಯಿಂದ ಮಿಷನ್‌ ಕಾಂಪೌಂಡ್‌ ವರೆಗೆ ಪೊಲೀಸ್‌ ಸಿಬಂದಿ ಜತೆಗೆ ಬೀಟ್ ನಡೆಸಿದರು. ಒಂದು ಬೀಟ್ ಅಂದರೆ ಸುಮಾರು ನಾಲ್ಕೈದು ಮನೆಗಳ ವ್ಯಾಪ್ತಿ ಒಳಗೊಂಡಿರುತ್ತವೆ.

ಮಳೆ ಬಂದು ಹದಗೆಟ್ಟ ರಸ್ತೆ, ಅಲ್ಲಲ್ಲಿ ಕಸದ ರಾಶಿ; ದೂರು

ಇದು ನಗರ ಪೊಲೀಸ್‌ ಆಯುಕ್ತ ಡಾ| ಪಿ.ಎಸ್‌. ಹರ್ಷ ಅವರು ಶುಕ್ರವಾರ ‘ನನ್ನ ಗಸ್ತು -ನನ್ನ ಹೆಮ್ಮೆ’ ವ್ಯವಸ್ಥೆಗೆ ಚಾಲನೆ ನೀಡಿದ ಬಳಿಕ ಸಂಜೆ ನಡೆಸಿದ ಬೀಟ್‌ನಲ್ಲಿ ಕೇಳಿಬಂದ ದೂರು-ದುಮ್ಮಾನಗಳು. ಸಂಜೆ 4 ಗಂಟೆ ವೇಳೆಗೆ ನಗರದ ಕಂಡತ್‌ಪಳ್ಳಿ ಭಾಗದಿಂದ ಬಂದರ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಬೀಟ್ ನಂ.8ರ ಬೀಟ್ ಸಿಬಂದಿ ಈಶಪ್ರಸಾದ್‌ ಜತೆಗೆ ಬೀಟ್ ನಡೆಸಿದರು. ಬೀಟ್ ವೇಳೆ 8-10 ಮನೆಗಳು, ಅಂಗಡಿ ಮುಂಗಟ್ಟು, ಮಸೀದಿ, ಚರ್ಚ್‌ ಹಾಗೂ ಕೊನೆಯಲ್ಲಿ ಕುದ್ರೋಳಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಭೇಟಿ ನೀಡಿದ ಕಡೆಗಳಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಸಂಭವಿಸಿದ ರಸ್ತೆ ಹಾನಿ, ಕಸದ ರಾಶಿ, ತ್ಯಾಜ್ಯ ವಿಲೇವಾರಿ ಇತ್ಯಾದಿ ಪೊಲೀಸ್‌ ಇಲಾಖೆಗೆ ನೇರವಾಗಿ ಸಂಬಂಧಪಡದ ವಿಚಾರಗಳ ಬಗ್ಗೆ ನಾಗರಿಕರಿಂದ ದೂರು ವ್ಯಕ್ತವಾಯಿತು. ಈ ಬಗ್ಗೆ ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿ ಗಳ ಗಮನಕ್ಕೆ ತಂದು ಸಮಸ್ಯೆ ನಿವಾರಿಸುವ ಭರವಸೆ ನೀಡಿದರು. ಆದರೆ ಸಂಚಾರ, ಕಾನೂನು, ಸುವ್ಯವಸ್ಥೆ ಅಥವಾ ಪೊಲೀಸ್‌ ಇಲಾಖೆಯ ಬಗ್ಗೆ ಯಾವುದೇ ನೇರ ದೂರು ವ್ಯಕ್ತಗೊಂಡಿಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ.

722 ವಾಟ್ಸಪ್‌ ಗ್ರೂಪ್‌

‘ನನ್ನ ಗಸ್ತು ನನ್ನ ಹೆಮ್ಮೆ’ ಯೋಜನೆಯಲ್ಲಿ ಕಮಿಷನರೆಟ್ ವ್ಯಾಪ್ತಿಯಲ್ಲಿ 722 ವಾಟ್ಸಪ್‌ ಗ್ರೂಪ್‌ ರಚಿಸಲಾಗಿದೆ. ಬೀಟ್ ಸಿಬಂದಿಗೆ ಇದಕ್ಕಾಗಿ ಪ್ರತ್ಯೇಕ ಮೊಬೈಲ್ ಸಿಮ್‌ ಒದಗಿಸಲಾಗಿದೆ. ಈ ಗುಂಪಿನಲ್ಲಿ ಕಾನೂನು, ಸುವ್ಯವಸ್ಥೆಗೆ ಸಂಬಂಧಿಸಿದ ಎಲ್ಲ ವಿಚಾರಗಳನ್ನು ಹಂಚಿಕೊಳ್ಳಲು ಅವಕಾಶ ಇದೆ. ಅಹಿತಕರ ಘಟನೆ ಅಥವಾ ಇನ್ನಿತರ ತೊಂದರೆಗಳು ಸಂಭವಿಸಿದಾಗ ತತ್‌ಕ್ಷಣಕ್ಕೆ ಗಸ್ತು ವಾಹನ, ಬೀಟ್ ಸಿಬಂದಿ ಕಳುಹಿಸಿ ನಿಜಾಂಶಗಳನ್ನು ಕಂಡುಕೊಳ್ಳಲು ಸುಲಭ ವಾಗಲಿದೆ. ಅಲ್ಲದೆ ಜನತೆಗೂ ತಪ್ಪು ಮಾಹಿತಿ ರವಾನೆಯಾಗದಂತೆ ಗ್ರೂಪ್‌ಗ್ಳಲ್ಲಿ ಸಂದೇಶಗಳನ್ನು ಅಪ್‌ಡೇಟ್ ಮಾಡಲಾಗುತ್ತದೆ. ಇದು ಏಕಕಾಲದಲ್ಲಿ ಲಕ್ಷಾಂತರ ನಾಗರಿಕರನ್ನು ತಲುಪಲು ಸಾಧ್ಯವಿದೆ. ಸಾರ್ವ ಜನಿಕರು ವಾಟ್ಸಪ್‌ ನಂಬ್ರ 9480802300ಗೆ ಮಾಹಿತಿ ನೀಡಬಹುದು.

ಶೀಘ್ರ ಹೊಸ ಆ್ಯಪ್‌

ಒಂದು ತಿಂಗಳಲ್ಲಿ ಹೊಸ ಆ್ಯಪ್‌ ಕೂಡ ಬರಲಿದೆ. ಆಸಕ್ತರು ಇದಕ್ಕೆ ಲಾಗಿನ್‌ ಆಗಿ ಬೀಟ್ ಪೊಲೀಸರ ಜತೆ ಸೇವೆ ಮಾಡಬಹುದು. ಸೀಮಿತ ಸಂಖ್ಯೆಯ ಪೊಲೀಸರು ಇರುವುದರಿಂದ ಇಂತಹ ಯೋಜನೆ ಮೂಲಕ ಸಮಾಜದಲ್ಲಿ ಶಾಂತಿ, ಸೌಹಾರ್ದಕ್ಕೂ ಉಪಯುಕ್ತವಾಗಲಿದೆ ಎಂದು ಡಾ| ಪಿ.ಎಸ್‌. ಹರ್ಷ ವಿವರಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ