ಕೇರಳ ಸಂಚಾರ ಸದ್ಯಕ್ಕೆ ಬೇಡ
Team Udayavani, Sep 9, 2021, 8:00 AM IST
ಮಂಗಳೂರು: ಕೇರಳ ಭಾಗದಲ್ಲಿ ಕೊರೊನಾ ಹಾಗೂ ನಿಫಾ ಉಲ್ಬಣ ಹಿನ್ನೆಲೆಯಲ್ಲಿ ಕರ್ನಾಟಕ-ಕೇರಳ ಮಧ್ಯೆ ಅನಗತ್ಯ ಸಂಚಾರವನ್ನು ತಾತ್ಕಾಲಿಕವಾಗಿ ಮೊಟಕು ಗೊಳಿಸುವಂತೆ ರಾಜ್ಯ ಸರಕಾರ ಸಾರ್ವ ಜನಿಕರಿಗೆ ಮನವಿ ಮಾಡಿದ್ದು, ಈ ನಿಟ್ಟಿನಲ್ಲಿ ದ.ಕ. ಜಿಲ್ಲಾಡಳಿತವೂ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲು ನಿರ್ಧರಿಸಿದೆ.
ಈ ಸಂಬಂಧ ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. “ಉದಯವಾಣಿ’ ಜತೆಗೆ ಮಾತನಾಡಿ, “ಯಾವುದೇ ತುರ್ತು ಕಾರ್ಯಗಳು ಇಲ್ಲದವರು ಕೇರಳದಿಂದ ಕರ್ನಾಟಕಕ್ಕೆ ಆಗಮಿಸುವುದು ಹಾಗೂ ಕೇರಳಕ್ಕೆ ತೆರಳುವುದನ್ನು ಕೋವಿಡ್ 3ನೇ ಅಲೆ ತಡೆ ದೃಷ್ಟಿಯಿಂದ ಸದ್ಯಕ್ಕೆ ಮುಂದೂ ಡುವಂತೆ ಸಾರ್ವಜನಿಕ ಆರೋಗ್ಯ ಹಿತ ದೃಷ್ಟಿಯಿಂದ ಸರಕಾರ ಸಲಹೆ ನೀಡಿದೆ. ಆರೋಗ್ಯದ ದೃಷ್ಟಿಯಿಂದ ಸಾರ್ವಜನಿಕರ ಸಹಕಾರ ಬಹಳ ಅಗತ್ಯ ಎಂದಿದ್ದಾರೆ.
ಇಲ್ಲಿನ ಶಿಕ್ಷಣ ಸಂಸ್ಥೆಗಳ ಸಿಬಂದಿ, ವಿದ್ಯಾರ್ಥಿಗಳು, ವಿವಿಧ ಸಂಸ್ಥೆಗಳ ನೌಕರರು, ಚಿಕಿತ್ಸೆಗಾಗಿ ಕೇರಳದಿಂದ ಬರುವವರು ಇದ್ದರೆ ಅಂತೆಯೇ ಕೇರಳಕ್ಕೆ ಹೋಗುವು ದಿದ್ದರೆ ಅಕ್ಟೋಬರ್ ಅಂತ್ಯದ ವರೆಗೆ ಮುಂದೂಡುವುದು ಸೂಕ್ತ ಎಂದು ಸಲಹೆ ನೀಡಿರುವ ಅವರು, ತುರ್ತು ಕಾರಣ ಕ್ಕಾಗಿ ಕೇರಳದಿಂದ ಕರ್ನಾಟಕ ಪ್ರವೇಶಿಸುವವರು ಆರ್‌ಟಿಪಿಸಿಆರ್ ನೆಗೆಟಿವ್ ವರದಿ ತರಲೇಬೇಕು ಎಂದು ತಿಳಿಸಿದರು.