ಪಡಂಗಡಿ: ಪ್ರಾಥಮಿಕ ಆರೋಗ್ಯ ಕೇಂದ್ರ ಖಾಲಿ ಖಾಲಿ

Team Udayavani, Jul 4, 2018, 2:35 AM IST

ವೇಣೂರು: ಪಡಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರವು ವೈದ್ಯರು ಹಾಗೂ ಸಿಬಂಯಿಲ್ಲದೆ ಸೊರಗಿ ಹೋಗಿದೆ. ವೈದ್ಯಾಧಿಕಾರಿ ಸಹಿತ 16 ಸಿಬಂದಿಯಲ್ಲಿ ಕೇವಲ 5 ಮಂದಿ ಸಿಬಂದಿ ಸೇವೆ ನೀಡುತ್ತಿದ್ದು, ಇದರಿಂದಾಗಿ ಗ್ರಾಮೀಣ ಭಾಗದ ಜನತೆ ಮೂಲ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ವೈದ್ಯರೇ ಇಲ್ಲ
ಇಲ್ಲಿ  ಪೂರ್ಣಕಾಲಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ| ಆಶಾಲತಾ ಅವರು ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸಕ್ಕಾಗಿ ಕಳೆದ ಮೇ ತಿಂಗಳಲ್ಲಿ ತೆರಳಿದ್ದು, ಆ ಬಳಿಕ ಇಲ್ಲಿ ವೈದ್ಯಾಧಿಕಾರಿ ಹುದ್ದೆ ಖಾಲಿ ಇದೆ. ಹೊರಗುತ್ತಿಗೆ ಆಧಾರದಲ್ಲಿ ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಇಲ್ಲಿಗೆ ವಾರದ ಮಂಗಳವಾರ ಮತ್ತು ಶುಕ್ರವಾರ ಎರಡು ದಿನ ಭೇಟಿ ನೀಡುತ್ತಾರೆ. ಉಳಿದ ದಿನಗಳಲ್ಲಿ ಈ ಆಸ್ಪತ್ರೆ ಗ್ರಾಮಸ್ಥರಿಗೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.

ಆರೋಗ್ಯ ಸಹಾಯಕರೇ ಇಲ್ಲ
ಪಡಂಗಡಿ ಪ್ರಾ.ಆ. ಕೇಂದ್ರಕ್ಕೆ ಪುರುಷ ಕಿರಿಯ 4 ಮಂದಿ ಆರೋಗ್ಯ ಸಹಾಯಕರನ್ನು ಮಂಜೂರುಗೊಳಿಸಲಾಗಿದ್ದರೂ ಒಂದೇ ಒಂದು ಸಿಬಂದಿಯ ನೇಮಕವಾಗಿಲ್ಲ. 7 ಮಂದಿ ಕಿರಿಯ ಆರೋಗ್ಯ ಸಹಾಯಕಿಯರನ್ನು ಮಂಜೂರುಗೊಳಿಸಲಾಗಿದ್ದು, 4 ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 3 ಹುದ್ದೆ ಖಾಲಿ ಇದೆ.

ಸಿಬಂದಿಯೂ ಇಲ್ಲ
ಪ್ರಥಮ ದರ್ಜೆ ಸಹಾಯಕ, ಫಾರ್ಮಸಿಸ್ಟ್‌, ಲ್ಯಾಬ್‌ ಟೆಕ್ನಾಲಾಜಿಸ್ಟ್‌ ಹುದ್ದೆಯೂ ಖಾಲಿ ಇದೆ. ಕೇವಲ ಗ್ರೂಪ್‌ ಡಿ ಸಿಬಂದಿಯೊಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಹೊರಗುತ್ತಿಗೆ ಆಧಾರದಲ್ಲಿ ಲ್ಯಾಬ್‌ ಟೆಕ್ನಾಲಾಜಿಸ್ಟ್‌ ಸಿಬಂದಿಯನ್ನು ನೇಮಿಸಲಾಗಿದೆ. ಒಟ್ಟು 16 ಮಂದಿ ಸಿಬಂದಿಯಲ್ಲಿ ಕೇವಲ 5 ಮಂದಿ ಇದ್ದು, ಬರೋಬ್ಬರಿ 11 ಹುದ್ದೆ ಖಾಲಿ ಇದೆ.

ಈ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗೆ ಪಡಂಗಡಿ, ಕುವೆಟ್ಟು, ಗರ್ಡಾಡಿ, ಮುಂಡೂರು, ಸೋಣಂದೂರು, ಮಾಲಾಡಿ ಹಾಗೂ ಓಡಿಲ್ನಾಲ ಹೀಗೆ 7 ಉಪಕೇಂದ್ರಗಳು ಇವೆ. 3 ಮಂದಿ ಆರೋಗ್ಯ ಸಹಾಯಕಿಯರು ಈ 7 ಉಪಕೇಂದ್ರಗಳನ್ನು ನಿರ್ವಹಿಸಬೇಕಿದೆ. ಅದರಲ್ಲೂ ಗರ್ಡಾಡಿ ಹಾಗೂ ಓಡಿಲ್ನಾಲ ಆರೋಗ್ಯ ಉಪಕೇಂದ್ರಗಳ ಆರೋಗ್ಯ ಸಹಾಯಕಿಯರು ಈಗಾಗಲೇ ವರ್ಗಾವಣೆ ಬೇಡಿಕೆ ಇರಿಸಿದ್ದು, ಅವರೂ ವರ್ಗಾವಣೆಗೊಂಡರೆ ಇಲ್ಲಿಯ ಗತಿ ಅಧೋಗತಿ ಆಗಲಿದೆ.

ಸುಸಜ್ಜಿತ ಕಟ್ಟಡ
2012ರಲ್ಲಿ ಪಡಂಗಡಿ ಪ್ರಾ.ಆ. ಕೇಂದ್ರವು ನೂತನ ಕಟ್ಟಡದಲ್ಲಿ ಕಾರ್ಯಾರಂಭಗೊಂಡಿದೆ. ವೈದ್ಯಾಧಿಕಾರಿಗಳ ಕೊಠಡಿ, ಔಷಧ ಕೊಠಡಿ, ಹಿರಿಯ/ಕಿರಿಯ ಆರೋಗ್ಯ ಸಹಾಯಕಿಯರ ಕೊಠಡಿ, ಕಚೇರಿ, ಔಷಧ ಉಗ್ರಾಣ, ಪ್ರಯೋಗಾಲಯ, ದಾದಿಯರ ಕೊಠಡಿ, 4 ಬೆಡ್‌ಗಳಿರುವ ಒಳರೋಗಿ ಕೊಠಡಿ, ಹೆರಿಗೆ ಕೊಠಡಿ, ಶಸ್ತ್ರಚಿಕಿತ್ಸೆ ಕೊಠಡಿ ಸಹಿತ ಗಂಡಸರ ಹಾಗೂ ಹೆಂಗಸರ ಪ್ರತ್ಯೇಕ ಶೌಚಾಲಯ ಇದೆ. ಕಟ್ಟಡದ ಸುತ್ತ ಸುಸಜ್ಜಿತವಾಗಿ ಕಂಪೌಂಡ್‌ ಕೂಡಾ ನಿರ್ಮಿಸಲಾಗಿದೆ.

ಸಿಬಂದಿಯೇ ಇಲ್ಲ; ಆಂದೋಲನ ಎಲ್ಲಿಂದ?
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ಸಂಯೋಜನೆಯಡಿ ಜು. 2ರಿಂದ ಜು. 13ರವರೆಗೆ ಸಕ್ರೀಯ ಕ್ಷಯರೋಗ ಪತ್ತೆ ಆಂದೋಲವನ್ನು ಆರಂಭಿಸಿದೆ. ಈ ಆಂದೋಲನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆರೋಗ್ಯ ಸಹಾಯಕಿಯರು ಆಶಾ ಕಾರ್ಯಕರ್ತರನ್ನು ಸೇರಿಸಿ ಗ್ರಾಮಗಳ ಮನೆ ಭೇಟಿ ನೀಡಬೇಕಿದೆ. ಜು. 2ರ ಅಪರಾಹ್ನ ಪಡಂಗಡಿ ಆರೋಗ್ಯ ಕೇಂದ್ರಕ್ಕೆ ತೆರಳಿದಾಗ ಆಸ್ಪತ್ರೆ ಬಿಕೋ ಎನ್ನುತ್ತಿತ್ತು. ಒಬ್ಬ ದಾದಿ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಲಾದ ಲ್ಯಾಬ್‌ ಟೆಕ್ನಾಲಾಜಿಸ್ಟ್‌ ಬಿಟ್ಟರೆ ಅಲ್ಲಿ ಬೇರೆ ಯಾರೂ ಇರಲಿಲ್ಲ. ಇದ್ದ 3 ಮಂದಿ ಆರೋಗ್ಯ ಸಹಾಯಕಿಯರು ಫೀಲ್ಡ್‌ಗೆ ತೆರಳಿದ್ದು, ಆಸ್ಪತ್ರೆ ಖಾಲಿ ಆಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಗ್ರಾಮೀಣ ಭಾಗದ ಜನತೆಗೆ ಆರೋಗ್ಯಭಾಗ್ಯ ಮರೀಚಿಕೆಯೇ ಸರಿ.

ಸಮರ್ಪಕ ಚಿಕಿತ್ಸೆ ಲಭ್ಯವಿಲ್ಲ
ಪ್ರತೀ ದಿನ ನೂರಾರು ಜನರು ಆಶ್ರಯಿಸುತ್ತಿದ್ದ ಈ  ಆರೋಗ್ಯ ಕೇಂದ್ರಕ್ಕೆ ಈಗ ಜನ ಚಿಕಿತ್ಸೆಗೆಂದು ಬರುತ್ತಿಲ್ಲ. ಬಂದರೂ ವೈದ್ಯರು, ಸಿಬಂದಿ ಕೊರತೆಯಿಂದಾಗಿ ಸಮರ್ಪಕ ಚಿಕಿತ್ಸೆ ಲಭ್ಯವಿಲ್ಲ. ಮಳೆಗಾಲ ಕಾರಣ ಸಾಂಕ್ರಾಮಿಕ ರೋಗ ಕಾಡುತ್ತಿದ್ದು, ಖಾಸಗಿ ಆಸ್ಪತ್ರೆಗಳನ್ನೇ ಆಶ್ರಯಿಸಬೇಕಾದ ಸ್ಥಿತಿ ಬಡ ನಿವಾಸಿಗಳದ್ದು. ಇಲ್ಲಿನ ಜನತೆ ಸರಕಾರಿ ಆಸ್ಪತ್ರೆಯನ್ನು ಆಶ್ರಯಿಸಬೇಕಾದರೆ ಏಳೆಂಟು ಕಿ.ಮೀ. ದೂರದ ವೇಣೂರು ಅಥವಾ ಬೆಳ್ತಂಗಡಿಗೆ ತೆರಳಬೇಕಿದೆ.

ಸಮ್ಮಿಶ್ರ ಸರಕಾರ ಐಸಿಯುನಲ್ಲಿದೆ
ಬೆಳ್ತಂಗಡಿ ತಾ|ನ ಹೆಚ್ಚಿನ ಪ್ರಾ.ಆ. ಕೇಂದ್ರಗಳಲ್ಲಿ ವೈದ್ಯಾಧಿಕಾರಿ, ಸಿಬಂದಿ ಕೊರತೆ ಇರುವುದು ದುರದೃಷ್ಟಕರ. ನೇಮಕ ಮಾಡುವಂತೆ ದ.ಕ. ಜಿಲ್ಲಾ  ವೈದ್ಯಾಧಿಕಾರಿ ಜತೆ ಮಾತನಾಡಿದ್ದೇನೆ. ಸೌಲಭ್ಯ ಸಿಗದೇ ಅನಾರೋಗ್ಯಪೀಡಿತರು ಖಾಸಗಿ ಆಸ್ಪತ್ರೆಗಳ ಐಸಿಯುನಲ್ಲಿರಬೇಕಾದ ಸ್ಥಿತಿ ನಿರ್ಮಾಣ ಆಗಿದೆ. ಇದಕ್ಕೆ ಕಾರಣ ಕಾಂಗ್ರೆಸ್‌ – ಜೆಡಿಎಸ್‌ ಸಮ್ಮಿಶ್ರ ಸರಕಾರ ಐಸಿಯುನಲ್ಲಿರುವುದಾಗಿದೆ. ಬಡ ಜನತೆಯ ಆರೋಗ್ಯದಲ್ಲಿ ರಾಜ್ಯ ಸರಕಾರ ಚೆಲ್ಲಾಟವಾಡುತ್ತಿದೆ. 
– ಹರೀಶ್‌ ಪೂಂಜ, ಶಾಸಕರು

ತತ್‌ ಕ್ಷಣ ವೈದ್ಯರ ನೇಮಕ
ಪಡಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 2 ದಿನಗಳೊಳಗೆ ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ನೇಮಕ ಮಾಡುತ್ತೇವೆ. ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಬಂದಿ ಕೊರತೆ ಇರುವ ಬಗ್ಗೆ ಗಮನದಲ್ಲಿದೆ. ಶೀಘ್ರ ನೇಮಕಕ್ಕೆ ಸರಕಾರಕ್ಕೆ ಬರೆಯಲಾಗಿದೆ. ಮುಂದಿನ ದಿನಗಳಲ್ಲಿ ಕೌನ್ಸೆಲಿಂಗ್‌ ನಡೆಯಲಿದ್ದು, ಹೊರಗುತ್ತಿಗೆ 
ಹಾಗೂ ಖಾಯಂ ಸಿಬಂದಿ ನೇಮಕ ಶೀಘ್ರ ಆಗಲಿದೆ. 
– ಡಾ| ಕಲಾಮಧು, ತಾ|ವೈದ್ಯಾಧಿಕಾರಿ, ಬೆಳ್ತಂಗಡಿ

— ಪದ್ಮನಾಭ ವೇಣೂರು


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ