ಹೆದ್ದಾರಿ 66ರಲ್ಲಿ 25ಕ್ಕೂ ಅಧಿಕ ಅವಘಡ ವಲಯ!

ಚತುಷ್ಪಥ ಹೆದ್ದಾರಿಗಳಾಗಿ ಮೇಲ್ದರ್ಜೆಗೇರಿದರೂ ಅಪಘಾತ ಕಡಿಮೆಯಾಗಿಲ್ಲ

Team Udayavani, Sep 15, 2019, 5:00 AM IST

ರಾಷ್ಟ್ರೀಯ ಹೆದ್ದಾರಿಯ ಮೂಲ್ಕಿ ಕಾರ್ನಾಡು ಪ್ರದೇಶದ ನೋಟ.

ದಕ್ಷಿಣ ಕನ್ನಡ ಜಿಲ್ಲೆಯನ್ನು ಹಾದುಹೋಗುವ ಮೂರು ರಾಷ್ಟ್ರೀಯ ಹೆದ್ದಾರಿಗಳಲ್ಲಿ 66 ಮತ್ತು 75 ಪ್ರಮುಖವಾಗಿವೆ. ಚತುಪ್ಪಥಗಳಾಗಿ ಮೇಲ್ದರ್ಜೆಗೇರಿದರೂ ಅಪಘಾತಗಳೇನೂ ಕಡಿಮೆಯಾಗಿಲ್ಲ. ತೀರಾ ಹದೆಗಟ್ಟಿರುವ ರಸ್ತೆಗಳಿಂದಲೇ ಹೆಚ್ಚಿನ ಅಪಘಾತ ಆಗುತ್ತಿವೆ. ಹೆದ್ದಾರಿ 66ರಲ್ಲಿ ತಲಪಾಡಿಯಿಂದ ಹೆಜಮಾಡಿ ನಡುವೆ 25ಕ್ಕೂ ಹೆಚ್ಚಿನ ಅಪಘಾತ ವಲಯಗಳಿರುವುದು ರಸ್ತೆಯ ಗಂಭೀರತೆಯನ್ನು ಸಾರುತ್ತವೆ.

ಉದಯವಾಣಿ ವಾಸ್ತವ ವರದಿ-  ಮಂಗಳೂರು ಟೀಮ್‌

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕೆಲವು ಜಂಕ್ಷನ್‌ ಮತ್ತು ತಿರುವುಗಳು ಅಪಘಾತ ವಲಯಗಳೆಂದೇ ಗುರುತಿಸಲ್ಪಟ್ಟಿವೆ. ರಾ.ಹೆ. 66 ಮತ್ತು 75 ಚತುಷ್ಪಥಗಳಾಗಿ ದ್ದರೂ ಅಪಘಾತಗಳೇನೂ ಕಡಿಮೆ ಯಾಗಿಲ್ಲ. ಚಾಲಕರ ನಿರ್ಲಕ್ಷ್ಯ, ಅಜಾಗ್ರತೆ ಮತ್ತು ವೇಗದ ಚಾಲನೆ, ವಾಹನಗಳ ತಾಂತ್ರಿಕ ವೈಫಲ್ಯ ಅಪಘಾತಕ್ಕೆ ಸಾಮಾನ್ಯ ಕಾರಣಗಳಾದರೂ ಇತ್ತೀಚಿನ ದಿನಗ‌ಳಲ್ಲಿ ರಸ್ತೆ ತೀರಾ ಕೆಟ್ಟು ಹೋಗಿರುವುದರಿಂದಲೇ ಅಧಿಕ ಅಪಘಾತಗಳು ಸಂಭವಿಸುತ್ತಿವೆ.

ರಾಷ್ಟ್ರೀಯ ಹೆದ್ದಾರಿ 66
ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿ-ಹೆಜಮಾಡಿ ನಡುವಣ 46 ಕಿ.ಮೀ. ವ್ಯಾಪ್ತಿಯಲ್ಲಿ 25ಕ್ಕೂ ಮಿಕ್ಕಿ ಅಪಘಾತ ತಾಣಗಳಿವೆ. ಕೆ.ಸಿ.ರೋಡು ಜಂಕ್ಷನ್‌ (ತಲಪಾಡಿ), ಉಚ್ಚಿಲ, ಕೋಟೆಕಾರು ಬೀರಿ, ಅಡ್ಕ, ಕೊಲ್ಯ, ಕುಂಪಲ, ತೊಕ್ಕೊಟ್ಟು, ಕಲ್ಲಾಪು, ಆಡಂಕುದ್ರು, ಜಪ್ಪಿನಮೊಗರು, ಪಂಪ್‌ವೆಲ್‌ ಜಂಕ್ಷನ್‌, ನಂತೂರು ಜಂಕ್ಷನ್‌, ಕೆಪಿಟಿ ಜಂಕ್ಷನ್‌, ಎ.ಜೆ. ಆಸ್ಪತ್ರೆ ಬಳಿ, ದಡ್ಡಲಕಾಡು ಕ್ರಾಸ್‌, ಕೋಡಿಕಲ್‌ ಕ್ರಾಸ್‌, ಕುದುರೆಮುಖ ಜಂಕ್ಷನ್‌, ಪಣಂಬೂರು ಬೀಚ್‌ ಕ್ರಾಸ್‌, ಬೈಕಂಪಾಡಿ ಜೋಕಟ್ಟೆ ಕ್ರಾಸ್‌, ಬೈಕಂಪಾಡಿ, ಸುರತ್ಕಲ್‌ ಜಂಕ್ಷನ್‌, ಎನ್‌ಐಟಿಕೆ, ಪಡುಪಣಂಬೂರು. ಕೊಳ್ನಾಡು, ಮೂಲ್ಕಿ ಬಪ್ಪನಾಡು- ಪ್ರಮುಖವಾದವು.

ಅಪಘಾತ ವಲಯಗಳು
ಜಪ್ಪಿನಮೊಗರು ಜಂಕ್ಷನ್‌

ಎನ್‌ಎಚ್‌ 66ರಲ್ಲಿ ತೊಕ್ಕೊಟ್ಟು ಕಡೆಗೆ ಹೋಗಬೇಕಾದರೆ ಜಪ್ಪಿನಮೊಗರು ಜಂಕ್ಷನ್‌ ಇದ್ದು, ಎಡಬದಿಗೆ ಜನವಸತಿ ಪ್ರದೇಶ, ಬಲ ಭಾಗಕ್ಕೆ ಮಂಗಳಾದೇವಿ ಕಡೆಗೆ ಹೋಗುವ ರಸ್ತೆಯಿದೆ. ಈ ಜಂಕ್ಷನ್‌ ಅಪಘಾತ ವಲಯವಾಗಿದೆ.

ಮಂಗಳೂರು ಕಡೆಯಿಂದ ಬರುವ ವಾಹನಗಳ ನಡುವೆ ಮಂಗಳಾದೇವಿ ಕಡೆಗೆ ಹೋಗುವವರು ತೊಕ್ಕೊಟ್ಟು ಕಡೆಯಿಂದ ಬರುವ ಹೆದ್ದಾರಿ ಪಥವನ್ನು ದಾಟಿಕೊಂಡು ಯೂ-ಟರ್ನ್ ತೆಗೆದುಕೊಳ್ಳಬೇಕು. ಹೆದ್ದಾರಿಯ ಎರಡೂ ಪಥಗಳಲ್ಲಿ ಬರುವ ವಾಹನಗಳಿಗೆ ಮುನ್ಸೂಚನೆ ನೀಡುವುದಕ್ಕೆ ಇಲ್ಲಿ ಸೂಕ್ತ ಸೂಚನಾ ಫಲಕಗಳೇ ಇಲ್ಲ. ಹೀಗಾಗಿ, ಸವಾರರು ಒಂದೆಡೆಯಿಂದ ಮತ್ತೂಂದು ಕಡೆಗೆ ರಸ್ತೆಗೆ ನುಗ್ಗುವ ವೇಳೆ ಗೊಂದಲಕ್ಕೆ ಎಡೆಯಾಗಿ ಪದೇಪದೇ ಅಪಘಾತಗಳು ಸಂಭವಿಸುತ್ತಿವೆ.

ಬೀರಿ ಜಂಕ್ಷನ್‌
ತೊಕ್ಕೊಟ್ಟಿನಿಂದ ಮುಂದಕ್ಕೆ ಹೋದಂತೆ ಹೆದ್ದಾರಿಯಲ್ಲಿ ಸಿಗುವ ಬೀರಿ ಜಂಕ್ಷನ್‌ನಲ್ಲಿ ನಾಲ್ಕು ದಿಕ್ಕುಗಳಿಗೂ ವಾಹನಗಳು ಚಲಿಸುತ್ತಿದ್ದು, ಸರಿಯಾದ ಸುರಕ್ಷತಾ ವ್ಯವಸ್ಥೆಯಿಲ್ಲದೆ ಅಪಘಾತ ತಾಣವಾಗಿ ಗುರುತಿಸಿಕೊಂಡಿದೆ. ಇಲ್ಲಿ ತೊಕ್ಕೊಟ್ಟು ಕಡೆಯಿಂದ ಬರುವಾಗ ಮಾಡೂರು, ದೇರಳಕಟ್ಟೆ ಕಡೆಗೆ ಹೋಗುವ ಸವಾರರು ಎಡಕ್ಕೆ ತಿರುಗಿ ಚಲಿಸಬೇಕು. ಹಾಗೆಯೇ ಮಾಡೂರು ಕಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಮಂಗಳೂರು ಕಡೆಗೆ ತಿರುವು ಪಡೆಯಬೇಕಾದರೆ ಹೆದ್ದಾರಿಯಲ್ಲಿ ಹಾದು ಹೋಗುವ ವಾಹನಗಳ ನಡುವೆ ನುಸುಳಿಕೊಂಡು ಇನ್ನೊಂದು ಹೆದ್ದಾರಿ ಪಥಕ್ಕೆ ಸೇರಿಕೊಳ್ಳಬೇಕು. ಇದರಿಂದ ಸವಾರರು ಗೊಂದಲಕ್ಕೆ ಒಳಗಾಗಿ ಅಪಘಾತಕ್ಕೆ ಕಾರಣವಾಗಬಹುದು. ಅಷ್ಟೇಅಲ್ಲ, ಸರ್ವೀಸ್‌ ರಸ್ತೆಯಲ್ಲಿ ಬಸ್‌ ತಂಗುದಾಣವಿದ್ದರೂ ಅಲ್ಲಿ ನಿಲ್ಲದೇ ಬೀರಿ ಜಂಕ್ಷನ್‌ನಲ್ಲಿ ಬಸ್‌ ನಿಲ್ಲುವುದು ಕೂಡ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ.

ಪೆರ್ನೆತಿರುವು
ಎನ್‌ಎಚ್‌ 75ರಲ್ಲಿ ಬಿಸಿ ರೋಡ್‌ನಿಂದ ಉಪ್ಪಿನಂಗಡಿ ಕಡೆಗೆ ಹೋಗಬೇಕಾದರೆ ಪೆರ್ನೆ ಎನ್ನುವ ಜಾಗವಿದೆ. ಇಲ್ಲಿ ಬಹಳ ಕಠಿನವಾದ ತಿರುವು ಇದ್ದು, ಈಗಾಗಲೇ ಅನೇಕ ಭೀಕರ ಅಪಘಾತಗಳಿಗೆ ಸಾಕ್ಷಿಯಾಗಿದೆ. ಇಲ್ಲಿ ರಸ್ತೆ ವಿರುದ್ಧ ದಿಕ್ಕಿನಿಂದ ಬರುವ ವಾಹನಗಳು ತತ್‌ಕ್ಷಣಕ್ಕೆ ಕಾಣಿಸುವುದಿಲ್ಲ. ಅಷ್ಟೇ ಅಲ್ಲ, ಈ ದೊಡ್ಡ ತಿರುವಿನಲ್ಲಿ ಹೆದ್ದಾರಿಯಲ್ಲಿ ಇರಬೇಕಾದ ಅಗತ್ಯ ಮುನ್ಸೂಚನಾ ಫಲಕವನ್ನೂ ಹಾಕಿಲ್ಲ.

ಅಪಘಾತ ವಲಯ ಗುರುತಿಸಲು ರಾಜ್ಯಗಳಿಗೆ ಸೂಚನೆ
ರಾಷ್ಟ್ರೀಯ ಹೆದ್ದಾರಿ ಅಪಘಾತಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಈ ಸಂಬಂಧ ಮಾರ್ಗಸೂಚಿ ಸಿದ್ಧಪಡಿಸಿ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಪ್ರಮುಖ ಅಪಘಾತ ವಲಯಗಳನ್ನು ಗುರುತಿಸಿ ಅಲ್ಲಿ ಪದೇ ಪದೇ ಆಗುವ ಅಪಘಾತಗಳಿಗೆ ಕಾರಣಗಳ ಬಗ್ಗೆ ಸಮೀಕ್ಷೆ ನಡೆಸಬೇಕು. ಆ ಮೂಲಕ, ಹೆದ್ದಾರಿಗಳಲ್ಲಿರುವ ಅಪಘಾತ ವಲಯಗಳನ್ನು ಹೇಗೆ ಕಡಿಮೆ ಮಾಡಬಹುದೆಂದು ವರದಿ ಕೂಡ ಸಲ್ಲಿಸುವಂತೆ ರಾಜ್ಯಗಳ ಮುಖ್ಯ ಕಾರ್ಯದರ್ಶಿ, ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸುತ್ತೋಲೆ ರವಾನಿಸಲಾಗಿದೆ. ಹೆದ್ದಾರಿಗಳ ಅಪಘಾತ ವಲಯಗಳನ್ನು ದೂರ ಮಾಡಲು ಸುಮಾರು 14,000 ಕೋಟಿ ರೂ. ಗಳ ಯೋಜನೆಯನ್ನು ಕೂಡ ಕೇಂದ್ರ ಸಾರಿಗೆ ಇಲಾಖೆ ರೂಪಿಸಿದೆ.

ದೇಶದಲ್ಲಿ 789 ಅಪಘಾತ ವಲಯಗಳು
ಅಂದಾಜಿನ ಪ್ರಕಾರ ರಾಷ್ಟ್ರೀಯ ಹೆದ್ದಾರಿಗಳಲ್ಲಿ 789 ಪ್ರಮುಖ ಅಪಘಾತ ವಲಯಗಳಿವೆ. 2016ರ ಮಾಹಿತಿಯಂತೆ ಕರ್ನಾಟಕದ ರಾಷ್ಟ್ರೀಯ ಹೆದ್ದಾರಿಯಲ್ಲಿ 86 ದೊಡ್ಡ ಅಪಘಾತ ವಲಯಗಳನ್ನು ಗುರುತಿಸಲಾಗಿತ್ತು. ಈ ನಿಟ್ಟಿನಲ್ಲಿ ಕರ್ನಾಟಕ 3ನೇ ಹಾಗೂ ತಮಿಳುನಾಡು 1ನೇ ಸ್ಥಾನದಲ್ಲಿತ್ತು. ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ 21 ಅಪಘಾತ ವಲಯಗಳನ್ನು ಪೊಲೀಸರು ಗುರುತಿಸಿದ್ದಾರೆ.

2017ರಲ್ಲಿ ದೇಶದ ಹೆದ್ದಾರಿ ಜಂಕ್ಷನ್‌ಗಳಲ್ಲಿ ಒಟ್ಟು 56,363 ಅಪಘಾತ ಸಂಭವಿಸಿದ್ದು, 16,939 ಮಂದಿ ಸಾವನ್ನಪ್ಪಿದ್ದಾರೆ. 15,167 ಜನ ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದರು. ಕರ್ನಾಟಕದಲ್ಲಿ 2830 ಅಪಘಾತಗಳು ಸಂಭವಿಸಿದ್ದು, 533 ಸಾವ, 1443 ಮಂದಿ ತೀವ್ರ ಗಾಯಗೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 75
ರಾಷ್ಟ್ರೀಯ ಹೆದ್ದಾರಿ 75ರ ನಂತೂರು-ಬಿ.ಸಿ. ರೋಡ್‌ ನಡುವೆ 10ಕ್ಕೂ ಅಧಿಕ ಅಪಘಾತ ವಲಯಗಳಿವೆ. ಬಿಕರ್ನಕಟ್ಟೆ, ಪಡೀಲ್‌ ಜಂಕ್ಷನ್‌, ವಳಚ್ಚಿಲ್‌, ಫ‌ರಂಗಿಪೇಟೆ, ಮಾರಿಪಳ್ಳ, ತುಂಬೆ, ಬ್ರಹ್ಮರಕೂಟ್ಲು ಪ್ರಮುಖವಾದವು.

ರಾಷ್ಟ್ರೀಯ ಹೆದ್ದಾರಿ 169
ರಾ.ಹೆ. 169 ಇನ್ನೂ ಚತುಷ್ಪಥ ಆಗಿಲ್ಲ; ಇದರಲ್ಲಿ ಮಂಗಳೂರು- ಮೂಡುಬಿದಿರೆ ಮಧ್ಯೆ ವಾಹನ ಓಡಾಟ ಜಾಸ್ತಿಯಾಗಿದ್ದು, ಆಗಿಂದಾಗ್ಗೆ ಅಪಘಾತಗಳು ಸಂಭವಿಸುತ್ತಿವೆ.

ಬ್ರಹ್ಮರಕೂಟ್ಲು
ಎನ್‌ಎಚ್‌ 75ರಲ್ಲಿ ಬ್ರಹ್ಮರಕೂಟ್ಲು ಬಳಿ ಒಂದಷ್ಟು ಉದ್ದದ ರಸ್ತೆಯು ವಿವಾದದ ಕಾರಣಕ್ಕೆ ಚತುಷ್ಪಥದ ಬದಲಿಗೆ ದ್ವಿಪಥವಾಗಿಯೇ ಉಳಿದಿದೆ. ಮೇಲ್ನೋಟಕ್ಕೆ ಅದು ಎರಡೂ ದಿಕ್ಕುಗಳಿಂದ ಏಕಮುಖದ ಸಂಚಾರ ರೀತಿಯಲ್ಲಿಯೇ ಕಾಣಿಸುವುದರಿಂದ ಅದು ಅಪಘಾತ ವಲಯವಾಗಿದೆ. ಈ ಜಾಗದಲ್ಲಿ ಸವಾರರಿಗೆ ಮುನ್ಸೂಚನೆ ನೀಡುವ ಸೂಚನಾ ಫಲಕಗಳನ್ನು ಅಲ್ಲಿ ಹಾಕದಿರುವುದು ಕೂಡ ಅಪಘಾತಗಳಿಗೆ ಕಾರಣವಾಗುತ್ತಿದೆ. ಉಪ್ಪಿನಂಗಡಿ ಸಮೀಪದ ಗೋಳಿತೊಟ್ಟು ಕೂಡ ಅಪಘಾತ ವಲಯವಾಗಿದೆ.

ನೀವೂ ಸಮಸ್ಯೆ ತಿಳಿಸಿ
ದಕ್ಷಿಣ ಕನ್ನಡದಲ್ಲಿ ಹಾದು ಹೋಗುವ ಎರಡು ಮುಖ್ಯ ರಾ.ಹೆ. 75 ಮತ್ತು 66ರಲ್ಲಿ ಹೆಚ್ಚುತ್ತಿರುವ ಅಪಘಾತಗಳು ಕೊನೆಯಾಗಬೇಕೆನ್ನುವುದು ಉದಯವಾಣಿ ಕಾಳಜಿ. ಈ ಎರಡು ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಬಂಧಿಸಿದ ನಿಮ್ಮ ಸಲಹೆ-ಅಭಿಪ್ರಾಯ, ಸಮಸ್ಯೆಯನ್ನು ಈ ಸಂಖ್ಯೆಗೆ 9964169554 ಫೂಟೋ ಸಮೇತ ವಾಟ್ಸಾ ಪ್‌ ಮಾಡಿ.

ರಾಷ್ಟ್ರೀಯ ಹೆದ್ದಾರಿ 66 (ತಲಪಾಡಿ-ಹೆಜಮಾಡಿ)
2019: ಜನವರಿ-ಸೆಪ್ಟಂಬರ್‌
171 ಅಪಘಾತ
41 ಸಾವು
41 ಮಾರಣಾಂತಿಕ
180 ಗಾಯ

ಜಂಕ್ಷನ್‌ಗಳಲ್ಲಿ ದೇಶದಲ್ಲಿ
ನಡೆದ ಅಪಘಾತಗಳು: 56,363
ಮೃತರು: 16,939
ತೀವ್ರ ಗಾಯ: 15,167
ಕರ್ನಾಟಕದಲ್ಲಿ ಜಂಕ್ಷನ್‌ಅಪಘಾತ
2,830
ಸತ್ತವರು: 533
ತೀವ್ರ ಗಾಯ: 1,443

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ