ಪಠ್ಯದೊಂದಿಗೆ ಮಕ್ಕಳಿಗೆ ಭತ್ತದ ಬೇಸಾಯ

ಕಡಬ ಸರಸ್ವತೀ ವಿದ್ಯಾಲಯ: ಕೃಷಿ ಸಂಸ್ಕೃತಿ ಉಳಿಸುವಲ್ಲಿ ವಿಶಿಷ್ಟ ಪ್ರಯತ್ನ

Team Udayavani, Nov 15, 2019, 5:26 AM IST

ಕಡಬ: ಕೃಷಿ ಸಂಸ್ಕೃತಿಯಿಂದ ಯುವ ಸಮುದಾಯ ದೂರ ಸರಿಯುತ್ತಿರುವ ಕಾಲಘಟ್ಟದಲ್ಲಿ ಕಡಬದ ಸರಸ್ವತೀ ವಿದ್ಯಾಲಯ ಸಮೂಹ ಶಿಕ್ಷಣ ಸಂಸ್ಥೆಯು ಭತ್ತದ ಕೃಷಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ವಿಶಿಷ್ಟ ಪ್ರಯತ್ನ ನಡೆಸುತ್ತಿದೆ.

ಇದು ಕೇವಲ ನೇಜಿ ನೆಡುವ ಕೆಲಸದ ಪ್ರಾತ್ಯಕ್ಷಿಕೆಗೆ ಸೀಮಿತವಾಗಿರದೆ ನೇಜಿ ನಾಟಿಯಿಂದ ಹಿಡಿದು ಭತ್ತದ ಕೊçಲಿನ ತನಕ ಭತ್ತದ ಕೃಷಿಯ ಪೂರ್ಣ ಪ್ರಕ್ರಿಯೆಯನ್ನು ವಿದ್ಯಾರ್ಥಿಗಳೇ ನಿರ್ವಹಿಸುತ್ತಿದ್ದಾರೆ. ಕೈ ಕೆಸರಾದರೆ ಬಾಯಿ ಮೊಸರು “ಸಂಸ್ಕಾರದೊಂದಿಗೆ ಶಿಕ್ಷಣ’ ಎನ್ನುವ ಧ್ಯೇಯದೊಂದಿಗೆ ಆರಂಭಗೊಂಡಿರುವ ಕಡಬದ ಸರಸ್ವತೀ ಸಮೂಹ ಶಿಕ್ಷಣ ಸಂಸ್ಥೆ ಕಡಬದ ಪಂಜ ರಸ್ತೆಯಲ್ಲಿರುವ ವಿದ್ಯಾನಗರ ಹಾಗೂ ಕೇವಳದ ಹನುಮಾನ್‌ ನಗರದಲ್ಲಿ ಕಾರ್ಯಾಚರಿಸುತ್ತಿದೆ. ವಿದ್ಯಾನಗರದಲ್ಲಿ ಪ್ರಾಥಮಿಕ ಶಾಲೆ, ಶಿಶುಮಂದಿರ ಹಾಗೂ ಹನುಮಾನ್‌ನಗರದಲ್ಲಿ ಪ್ರೌಢಶಾಲೆ ಮತ್ತು ಪ.ಪೂ. ವಿದ್ಯಾಲಯವಿದೆ. ಸುಮಾರು 700 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಸಂಸ್ಥೆಯಲ್ಲಿ ಈ ವರ್ಷದಿಂದ ತಮ್ಮ ಮಧ್ಯಾಹ್ನದ ಉಚಿತ ಬಿಸಿಯೂಟಕ್ಕೆ ವಿದ್ಯಾರ್ಥಿಗಳೇ ಉತ್ತು, ಬಿತ್ತಿ, ಬೆಳೆ ತೆಗೆದು ಅಕ್ಕಿ ತಯಾರಿಸುವ ಯೋಜನೆ ರೂಪಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಕೃಷಿಯತ್ತ ಒಲವು ಮೂಡಿಸುವುದು, ರೈತರ ಕಷ್ಟದ ಬಗ್ಗೆ ಅರಿವು ಮೂಡಿಸುವುದು, ಕೈ ಕೆಸರಾದರೆ ಬಾಯಿ ಮೊಸರು ಎನ್ನುವ ನಾಣ್ಣುಡಿಯನ್ನು ಅರ್ಥೈಸುವ ಉದ್ದೇಶ ಈ ಯೋಜನೆಯಲ್ಲಿ ಅಡಕವಾಗಿದೆ.

ವಿದ್ಯಾರ್ಥಿಗಳಿಂದ ಕೆಲಸ
ಸುಮಾರು 4 ತಿಂಗಳ ಹಿಂದೆ ವಿದ್ಯಾಲಯದ ಆಯ್ದ 200ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಗದ್ದೆಗಿಳಿದು ನೇಜಿ ನಾಟಿ ಮಾಡಿದ್ದರು. ಇದೀಗ ಅಂದು ನೆಟ್ಟಿದ್ದ ನೇಜಿ ಬೆಳೆದು ಬಂಗಾರದಂತಹ ಭತ್ತದ ತೆನೆಗಳಿಂದ ಕಂಗೊಳಿಸುತ್ತಿದೆ. ವಿದ್ಯಾಲಯವು ಭತ್ತದ ಕೃಷಿ ಮಾಡಲು ಆಯ್ಕೆ ಮಾಡಿಕೊಂಡಿರುವ ಗದ್ದೆ ಹಡೀಲು ಬಿದ್ದ ಭೂಮಿ. ಅದರಲ್ಲಿ ಭತ್ತದ ಕೃಷಿ ಮಾಡುವ ಮೂಲಕ ನೀರಿಂಗಿಸುವ ಕಾರ್ಯಕ್ಕೂ ಚಾಲನೆ ನೀಡಿದಂತಾಗಿದೆ. ಇನ್ನೊಂದು ವಿಶೇಷವೆಂದರೆ ಭತ್ತದ ಬೇಸಾಯವನ್ನು ಸಾವಯವ ಗೊಬ್ಬರ ಬಳಸಿಯೇ ಮಾಡಿದ್ದು, ಅದಕ್ಕಾಗಿ ವಿದ್ಯಾರ್ಥಿಗಳು ಮನೆಯಿಂದ ತಂದ ಸೆಗಣಿ ಹಾಗೂ ಸಂಸ್ಥೆಯಲ್ಲಿ ಅಡುಗೆಗೆ ಬಳಸುವ ಕಟ್ಟಿಗೆಯಿಂದ ಸಿಕ್ಕಿದ ಬೂದಿಯನ್ನೂ ಬಳಸಲಾಗಿದೆ.

ಪಕ್ಕದ ಗದ್ದೆಯಲ್ಲಿ ಕೃಷಿ ಪಾಠ
ಹನುಮಾನ್‌ ನಗರದ (ಕೇವಳ) ಸರಸ್ವತೀ ಪದವಿಪೂರ್ವ ಕಾಲೇಜಿನ ಪಕ್ಕದಲ್ಲಿರುವ ಈ ಭತ್ತದ ಗದ್ದೆ ಸಂಕೇಶ ನಾರಾಯಣ ಗೌಡ ಅವರಿಗೆ ಸೇರಿದ್ದಾಗಿದೆ. 60 ಸೆಂಟ್ಸ್‌ ವಿಸ್ತೀರ್ಣವಿರುವ ಈ ಗದ್ದೆಯನ್ನು ಶಾಲೆಗಾಗಿ ಕೃಷಿ ಮಾಡಲು ಗೌಡರು ಬಿಟ್ಟುಕೊಟ್ಟಿದ್ದಾರೆ.

ಗದ್ದೆಯಲ್ಲಿ ನೇಜಿ ನಾಟಿಗಾಗಿ ನಾರಾಯಣ ಗೌಡರೇ ಭತ್ತ ಬೀಜ ಹಾಕಿದ್ದರು. ಟಿಲ್ಲರ್‌ನಿಂದ ಉಳುಮೆ ಮಾಡಿದ ಬಳಿಕ ವಿದ್ಯಾರ್ಥಿಗಳೇ ನೇಜಿ ಕಿತ್ತು, ನಾಟಿ ಮಾಡುವ ಕಾರ್ಯ ಮಾಡಿದ್ದರು. ಹಿಂದೆ ಗದ್ದೆಗಳಲ್ಲಿ ಉಳುಮೆಯಾದ ಬಳಿಕ ನೇಜಿ ನೆಡುವ ಮೊದಲು ಗದ್ದೆಯ ಕೆಸರನ್ನು ಸಮತಟ್ಟು ಮಾಡುವ ಕಾರ್ಯ ಮರದ ಹಲಗೆಯಿಂದ ಮಾಡಲಾಗುತ್ತಿತ್ತು. ಈಗ ಅದೆಲ್ಲ ಮಾಯವಾಗಿರುವುದರಿಂದ ವಿದ್ಯಾರ್ಥಿಗಳು ಅಡಕೆ ಮರದ ತುಂಡುಗಳಿಗೆ ಹಗ್ಗ ಕಟ್ಟಿ ಎಳೆದು ಕೆಸರು ಸಮತಟ್ಟು ಮಾಡಿದ್ದರು. ಸಂಸ್ಥೆಯ ಸಂಚಾಲಕ ವೆಂಕಟರಮಣ ರಾವ್‌ ಮಂಕುಡೆ ಅವರು ಭತ್ತ ಕಟಾವು ಕಾರ್ಯಕ್ಕೆ ಚಾಲನೆ ನೀಡಿದರು. ಆಡಳಿತ ಮಂಡಳಿ ನಿರ್ದೇಶಕರಾದ ಶಿವಪ್ರಸಾದ್‌ ರೈ ಮೈಲೇರಿ, ಪ್ರಮೀಳಾ ಲೋಕೇಶ್‌, ಪೋಷಕಿ ಪೂರ್ಣಿಮಾ ರಾಮಚಂದ್ರ, ಗದ್ದೆಯ ಮಾಲಕ ನಾರಾಯಣ ಗೌಡ ಸಂಕೇಶ, ಉಪನ್ಯಾಸಕ ನಾಗರಾಜ್‌ ವಿದ್ಯಾರ್ಥಿಗಳಿಗೆ ಸಾಥ್‌ ನೀಡಿದರು.

ಸ್ವಾವಲಂಬಿ ಬದುಕಿಗೆ…
ಕೃಷಿಯನ್ನು ನಂಬಿದವರಿಗೆ ಎಂದಿಗೂ ದುರ್ಭಿಕ್ಷವಿಲ್ಲ. ಜೀವನದಲ್ಲಿ ಸ್ವಾವಲಂಬಿಯಾಗಿ ಬದುಕಲು ಕೃಷಿ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಭತ್ತದ ಕೃಷಿಯ ಬಗ್ಗೆ ಸ್ಫೂರ್ತಿ ತುಂಬುವ ಪ್ರಯತ್ನ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇದಲ್ಲದೆ ಬೇರೆ ಗದ್ದೆಯನ್ನೂ ಪಡೆದು ಭತ್ತದ ಕೃಷಿ ಮಾಡುವ ಯೋಜನೆಯಿದೆ. ಅದರ ಮೂಲಕ ಮಕ್ಕಳಿಗೆ ಕೃಷಿಯ ಬಗ್ಗೆ ಆಸಕ್ತಿ ಹುಟ್ಟಿಸುವುದು ಮತ್ತು ಶಾಲೆಯ ಅಕ್ಷರದಾಸೋಹಕ್ಕೆ ಅಕ್ಕಿ ಕ್ರೋಡೀಕರಿಸುವ ಉದ್ದೇಶವಿದೆ.
– ವೆಂಕಟರಮಣ ರಾವ್‌ ಮಂಕುಡೆ ಸಂಚಾಲಕ, ಸರಸ್ವತೀ ವಿದ್ಯಾಲಯ

ವಿಶಿಷ್ಟ ಅನುಭವ
ನಮಗೆ ಇದೊಂದು ವಿಶಿಷ್ಟ ಅನುಭವ. ನಮ್ಮದು ಗ್ರಾಮೀಣ ಪ್ರದೇಶವಾದರೂ ಗದ್ದೆಗಳು ಮಾಯವಾಗಿ ಭತ್ತದ ಕೃಷಿ ನೋಡಲು ಸಿಗುವುದೇ ವಿರಳ. ಅಂತಹ ಸಂದರ್ಭದಲ್ಲಿ ನಾವೇ ಗದ್ದೆಗಿಳಿದು ಕೆಲಸ ಮಾಡುವ ವೇಳೆ ಅನುಭವಿಸಿದ ಸಂತೋಷ ವರ್ಣಿಸಲು ಸಾಧ್ಯವಿಲ್ಲ.
– ಯಶಸ್ವಿ ಬಲ್ಯ , ವಿದ್ಯಾರ್ಥಿನಿ

ನಾಗರಾಜ್‌ ಎನ್‌.ಕೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ