60 ಸಾವಿರಕ್ಕಾಗಿ ನಡೆಯಿತು ಪೈಶಾಚಿಕ ಕೃತ್ಯ!

ಮಹಿಳೆ ಕೊಲೆ ಪ್ರಕರಣ ಭೇದಿಸಿದ ಪೊಲೀಸರು; ಆರೋಪಿ ದಂಪತಿ ಸೆರೆ

Team Udayavani, May 16, 2019, 6:00 AM IST

ಆರೋಪಿಗಳಾದ ಜೋನಸ್‌ ಜೂಲಿನ್‌ ಸ್ಯಾಮ್ಸನ್‌ ಮತ್ತು ಪತ್ನಿ ವಿಕ್ಟೋರಿಯಾ ಮಥಾಯಿಸ್‌ .

ಮಂಗಳೂರು: ನಗರದ ಮಂಗಳಾದೇವಿ ಬಳಿಯ ಅಮರ್‌ ಆಳ್ವ ರಸ್ತೆಯ ನಿವಾಸಿ ಶ್ರೀಮತಿ ಶೆಟ್ಟಿ (35) ಅವರನ್ನು ಕೊಲೆ ಮಾಡಿ ಮೃತ ದೇಹವನ್ನು ತುಂಡರಿಸಿ 3 ಕಡೆ ಎಸೆದಿದ್ದ ಪೈಶಾಚಿಕ ಕೃತ್ಯವನ್ನು ಮಂಗಳೂರು ಪೊಲೀಸರು ಭೇದಿಸಿದ್ದು, ಆರೋಪಿ ದಂಪತಿಯನ್ನು ಬಂಧಿಸಿದ್ದಾರೆ.

ಮೂಲತಃ ಅತ್ತಾವರ ಬಿ.ವಿ. ರಸ್ತೆಯ ಸೆಮಿನರಿ ಕಾಂಪೌಂಡ್‌ ನಿವಾಸಿ ಗಳಾಗಿದ್ದು, ಪ್ರಸ್ತುತ ವೆಲೆನ್ಸಿಯಾ ಸೂಟರ್‌ ಪೇಟೆಯ 9ನೇ ಅಡ್ಡ ರಸ್ತೆಯ ಬಾಡಿಗೆ ಮನೆಯಲ್ಲಿ ನೆಲೆಸಿರುವ ಜೋನಸ್‌ ಜೂಲಿನ್‌ ಸ್ಯಾಮ್ಸನ್‌ (36) ಮತ್ತು ಪತ್ನಿ ವಿಕ್ಟೋರಿಯಾ ಮಥಾಯಿಸ್‌ (46) ಬಂಧಿತರು.

ಹಣಕಾಸಿನ ವ್ಯವಹಾರ ಸಂಬಂಧ ಕೊಲೆ ನಡೆಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ಬುಧ ವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಶ್ರೀಮತಿ ಅವರಿಂದ ಆರೋಪಿಗಳು ಒಂದು ಲಕ್ಷ ರೂ. ಸಾಲ ಪಡೆದಿದ್ದು, 40 ಸಾವಿರ ರೂ.ಗಳನ್ನು ಮರಳಿಸಿದ್ದರು. ಬಾಕಿ 60,000 ರೂ.ಗಳನ್ನು ಕೊಡುವಂತೆ ಕೇಳಲೆಂದು ಮೇ 11ರಂದು ಬೆಳಗ್ಗೆ ಶ್ರೀಮತಿ ಅವರು ಸ್ಯಾಮ್ಸನ್‌ ಮನೆಗೆ ಹೋಗಿದ್ದರು. ಈ ಸಂದರ್ಭ ವಾಗ್ವಾದ ನಡೆದು ಆಕೆಯನ್ನು ದಂಪತಿ ಕೊಲೆ ಮಾಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದರು.

ಸುಳಿವು ನೀಡಿದ್ದ ಸಿಸಿ ಕೆಮರಾ
ಅತ್ತಾವರ ಸಮೀಪ ಎಲೆಕ್ಟ್ರಿಕಲ್‌ ಉತ್ಪನ್ನಗಳ ದುರಸ್ತಿ ಅಂಗಡಿ ನಡೆಸುತ್ತಿದ್ದ ಶ್ರೀಮತಿ ಶೆಟ್ಟಿ ಮೇ 11ರಂದು ಅಂಗಡಿಗೆ ತೆರಳದೆ ತನ್ನ ಸ್ಕೂಟರ್‌ನಲ್ಲಿ ಸಾಲದ ಹಣ ಕೇಳುವುದಕ್ಕಾಗಿ ಸೂಟರ್‌ಪೇಟೆಯ ಸ್ಯಾಮ್ಸನ್‌ ಮನೆಗೆ ಹೋಗಿದ್ದರು. ಅತ್ತಾವರದಿಂದ ಹೊರಟು ಗೋರಿಗುಡ್ಡೆ ಮಾರ್ಗವಾಗಿ ಸೂಟರ್‌ಪೇಟೆ 9ನೇ ಅಡ್ಡರಸ್ತೆ ತನಕ ಸಂಚರಿಸಿರುವುದು ಹಲವು ಕಡೆಯ ಸಿಸಿ ಟಿವಿ ಫುಟೇಜ್‌ ಮೂಲಕ ಪೊಲೀಸರಿಗೆ ತಿಳಿದುಬಂತು. ಸುಮಾರು 9ರಿಂದ 9.30ರ ಅವಧಿಯಲ್ಲಿ ಆಕೆ ಈ ಮಾರ್ಗದಲ್ಲಿ ಸಾಗಿದ್ದರು. ಈ ಸಿಸಿ ಟಿವಿ ದೃಶ್ಯ ಆರೋಪಿಯ ಜಾಡು ಹಿಡಿಯುವುದಕ್ಕೆ ಪೊಲೀಸರಿಗೆ ಪ್ರಮುಖ ಸುಳಿವು ನೀಡಿತ್ತು.

ಇನ್ನೊಂದೆಡೆ ಶ್ರೀಮತಿ ಶೆಟ್ಟಿ ಅವರ ಅಂಗಡಿ ಸಿಬಂದಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಸೂಟರ್‌ಪೇಟೆಯ ಸ್ಯಾಮ್ಸನ್‌ ಎಂಬಾತ ಆಕೆಯಿಂದ ಸಾಲ ಪಡೆದ್ದ ವಿಚಾರ, ಆ ಬಗ್ಗೆ ಆಗಿಂದಾಗ್ಗೆ ಮಾತುಕತೆ ನಡೆಯುತ್ತಿದ್ದ ಮಾಹಿತಿ ಲಭಿಸಿತ್ತು. ಕೊಲೆ ಬಗ್ಗೆ 3 ತಂಡಗಳು ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದವು. ಮೇ 11ರಂದು ಕೊಲೆ ನಡೆದಿದ್ದರೂ ಮೇ 14 ರಾತ್ರಿ ವರೆಗೆ ಪೊಲೀಸರಿಗೆ ಆರೋಪಿಗಳು ಸಿಕ್ಕಿರಲಿಲ್ಲ.

ಶ್ರೀಮತಿ ಶೆಟ್ಟಿ ಅವರೊಂದಿಗೆ ಸಂಪರ್ಕ ಹೊಂದಿದ್ದ 20ಕ್ಕೂ ಅಧಿಕ ಮಂದಿಯನ್ನು ವಿಚಾರಿಸಲಾಗಿತ್ತು.ಜೈಲಿನಲ್ಲಿದ್ದ ಆಕೆಯ 2ನೇ ಪತಿ ಸುದೀಪ್‌ನನ್ನೂ ವಿಚಾರಣೆ ಮಾಡಲಾ ಗಿತ್ತು. ಅಲ್ಲದೆ ನಾಲ್ವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ ಈ ಆಯಾಮದ ತನಿಖೆಯಿಂದ ಯಾವುದೇ ಸುಳಿವು ಲಭ್ಯವಾಗದ ಕಾರಣ ಪೊಲೀಸರು ಸಿಸಿ ಟಿವಿ ದೃಶ್ಯ, ಕೆಲಸದವರು ನೀಡಿದ್ದ ಸುಳಿವಿನ ಬೆನ್ನು ಹಿಡಿದಿದ್ದರು. ಅದರಂತೆ ಸ್ಯಾಮ್ಸನ್‌ನ ಮನೆ ಪತ್ತೆ ಮಾಡಿ ಮಂಗಳವಾರ ರಾತ್ರಿ ಆತನ ವಿಚಾರಣೆಗೆ ತೆರಳಿದ್ದರು. ಪೊಲೀಸರು ಎಷ್ಟೇ ಬಾಗಿಲು ಬಡಿದರೂ ಆತ ತೆರೆಯಲಿಲ್ಲ. ಮತ್ತಷ್ಟು ಅನು ಮಾನಗೊಂಡ ಪೊಲೀಸರು ಛಾವಣಿಯ ಹೆಂಚು ತೆಗೆದು ಒಳನುಗ್ಗಿ ಆತನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

ಹ‌ಣಕಾಸಿನ ವಿಚಾರದಲ್ಲಿ ಕಗ್ಗೊಲೆ
ಮೇ 11ರಂದು ಶ್ರೀಮತಿ ಶೆಟ್ಟಿ ಸ್ಯಾಮ್ಸನ್‌ ಮನೆಗೆ ತೆರಳಿದ್ದು, ಮನೆ ಯೊಳಗೆ ಹೋಗುತ್ತಿದ್ದಂತೆಯೇ ಹಣ ನೀಡುವಂತೆ ಕೇಳಿದ್ದರು. ತನ್ನ ಬಳಿ ಈಗ ಹಣವಿಲ್ಲ ಎಂದು ಆತ ತಿಳಿಸಿದ್ದ. ಬಳಿಕ ಈ ವಿಚಾರದಲ್ಲಿ ಇಬ್ಬರೊಳಗೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಸ್ಯಾಮ್ಸನ್‌ ಮರದ ತುಂಡಿನಿಂದ ಆಕೆಯ ತಲೆಗೆ ಹೊಡೆದಿದ್ದು, ಆಕೆ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಇದರಿಂದ ಆತಂಕಗೊಂಡ ಸ್ಯಾಮ್ಸನ್‌ ದಂಪತಿ ಶವವನ್ನು ದಿನಪೂರ್ತಿ ತಮ್ಮ ಮನೆಯೊಳಗೇ ಇರಿಸಿಕೊಂಡಿದ್ದರು. ರಾತ್ರಿಯಾಗುತ್ತಿದ್ದಂತೆ ಮಾರಕಾ ಯುಧದಿಂದ ಕತ್ತರಿಸಿ ಬಳಿಕ ತನ್ನದೇ ದ್ವಿಚಕ್ರ ವಾಹನದಲ್ಲಿ ಕದ್ರಿ, ನಂದಿಗುಡ್ಡ ಪರಿಸರ ಸೇರಿದಂತೆ ಮೂರು ಕಡೆ ಸ್ಯಾಮ್ಸನ್‌ ಎಸೆದಿದ್ದ.

ಶವ ಕತ್ತರಿಸಿದ್ದು ಏಕೆ ?
ಶವವನ್ನು ಸಾಗಿಸುವುದಕ್ಕೆ ಸ್ಯಾಮ್ಸನ್‌ ಬಳಿ ತತ್‌ಕ್ಷಣಕ್ಕೆ ಯಾವುದೇ ದೊಡ್ಡ ವಾಹನವಿರಲಿಲ್ಲ. ಇಡೀ ಶವವನ್ನು ದ್ವಿಚಕ್ರ ವಾಹನದಲ್ಲಿ ಸಾಗಿಸಲು ಸಾಧ್ಯವಾಗದ ಕಾರಣಕ್ಕೆ ಕಂಡುಕೊಂಡ ಉಪಾಯವೇ ದೇಹವನ್ನು ಕತ್ತರಿಸಿ ಪ್ರತ್ಯೇಕಿಸುವುದು. ಅದರಂತೆ ಮನೆಯಲ್ಲಿದ್ದ ಕತ್ತಿಯಿಂದ ಶ್ರೀಮತಿಯ ರುಂಡ – ಮುಂಡ, ಕೈಕಾಲುಗಳನ್ನು ತುಂಡು ಮಾಡಿ ಪ್ರತ್ಯೇಕಿಸಿ ಗೋಣಿ ಚೀಲದಲ್ಲಿ ತುಂಬಿಸಿ ಬೇರೆ ಬೇರೆ ಎಸೆದು ಸಾಕ್ಷ é ನಾಶ ಮಾಡಲು ಯತ್ನಿಸಿದ್ದ. ಶವ ಎಸೆದ ಬಳಿಕ ಆತ ತನ್ನ ವಾಹನವನ್ನು ಸ್ನೇಹಿತ ರಾಜು ಎಂಬಾ ತನ ಮನೆಯಲ್ಲಿ ಇರಿಸಿದ್ದ. ಈ ಬಗ್ಗೆ ರಾಜುವನ್ನು ವಿಚಾರಣೆ ನಡೆಸಲಾಗಿದೆ.

ಚಿನ್ನ ವಶ
ಶ್ರೀಮತಿ ಅವರ ದೇಹದಲ್ಲಿದ್ದ 8 ಚಿನ್ನದ ಉಂಗುರ, ಸರವನ್ನು ಆರೋಪಿ ಸ್ಯಾಮ್ಸನ್‌ ಬಳಿಯಿಂದ ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಈ ಚಿನ್ನವನ್ನು ಆತ ಅಡವಿಟ್ಟು ಹಣ ಪಡೆಯಲು ಯತ್ನಿಸಿದ್ದ ಎಂಬ ಮಾಹಿತಿಯೂ ಲಭ್ಯವಾಗಿದೆ.

ಆರ್ಥಿಕ ಮುಗ್ಗಟ್ಟು
ಸ್ಯಾಮ್ಸನ್‌ ನಷ್ಟದ ಕಾರಣ ಫಾಸ್ಟ್‌ ಫುಡ್‌ ವ್ಯಾಪಾರವನ್ನು ತಿಂಗಳ ಹಿಂದೆ ಮುಚ್ಚಿದ್ದ. ಸೂಟರ್‌ಪೇಟೆಯಲ್ಲಿ 7 ತಿಂಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಬಾಡಿಗೆಯನ್ನೂ ಸರಿಯಾಗಿ ಪಾವತಿಸುತ್ತಿರಲಿಲ್ಲ. ಆತ ನೀಡಿದ್ದ ಠೇವಣಿ ಯಿಂದಲೇ ಮನೆ ಮಾಲಕರು ಬಾಡಿಗೆ ಕಡಿತ ಮಾಡುತ್ತಿದ್ದು, ಇದೀಗ ಅದೂ ಮುಗಿಯುತ್ತಾ ಬಂದಿರುವುದರಿಂದ ಮನೆ ಖಾಲಿ ಮಾಡಲು ಸೂಚಿಸಿದ್ದರು.

ಕಾರ್ಯಾಚರಣೆಗೆ ಶ್ಲಾಘನೆ
ಭೀಕರ ಕೊಲೆಯ ರಹಸ್ಯವನ್ನು ನಾಲ್ಕೇ ದಿನಗಳಲ್ಲಿ ಭೇದಿಸಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗಿದೆ. ಪತ್ತೆ ಕಾರ್ಯದಲ್ಲಿ ಎಸಿಪಿ ಸುಧೀರ್‌ ಹೆಗಡೆ, ಸಿಸಿಬಿ ಇನ್ಸ್‌ಪೆಕ್ಟರ್‌ ಶಿವಪ್ರಕಾಶ್‌, ಕದ್ರಿ ಇನ್ಸ್‌ಪೆಕ್ಟರ್‌ ಮಹೇಶ್‌, ಕಂಕನಾಡಿ ಇನ್ಸ್‌ಪೆಕ್ಟರ್‌ ಜಗದೀಶ್‌, ಸಿಸಿಬಿ ಸಬ್‌ ಇನ್ಸ್‌ಪೆಕ್ಟರ್‌ಗಳಾದ ಕಬ್ಟಾಳ್‌ರಾಜ್‌ ಮತ್ತು ಶಂಕರ ನಾಯಿರಿ, ಎಎಸ್‌ಐಗಳಾದ ಹರೀಶ್‌ ಪದವಿನಂಗಡಿ, ಶಶಿಧರ ಶೆಟ್ಟಿ, ಸಿಬಂದಿಗಳಾದ ರಾಮ ಪೂಜಾರಿ, ಚಂದ್ರಶೇಖರ, ಸುಬ್ರಹ್ಮಣ್ಯ, ಚಂದ್ರಹಾಸ, ರಾಜೇಂದ್ರ ಪ್ರಸಾದ್‌, ಅಬ್ದುಲ್‌ ಜಬ್ಟಾರ್‌, ಚಂದ್ರ, ರಾಜ, ಅಜಿತ್‌ ಡಿ’ಸೋಜಾ, ಹಿತೇಶ್‌, ವಿಶ್ವನಾಥ್‌ ಭಾಗವಹಿಸಿದ್ದರು.ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀಗಣೇಶ್‌ ಪತ್ರಿಕಾಗೋಷ್ಠಿಲ್ಲಿದ್ದರು.

ಆತ್ಮಹತ್ಯೆಗೆ ಯತ್ನಿಸಿದ ಆರೋಪಿ ಆಸ್ಪತ್ರೆಗೆ
ಪೊಲೀಸರು ಮನೆಯೊಳಗೆ ನುಗ್ಗುತ್ತಿದ್ದಂತೆ ಸ್ಯಾಮ್ಸನ್‌ ತಲೆಗೆ ಕತ್ತಿಯಿಂದ ಕೊಯ್ದುªಕೊಂಡು ಆತ್ಮಹತ್ಯೆ ಮಾಡುವ ಬೆದರಿಕೆಯೊಡ್ಡಿದ್ದ. ಅದನ್ನು ಲೆಕ್ಕಿಸದೆ ಪೊಲೀಸರು ಕಾರ್ಯಾಚರಣೆ ಮುಂದಾದಾಗ ಆತ ತಲೆಗೆ ತೀವ್ರ ಸ್ವರೂಪದ ಗಾಯ ಮಾಡಿಕೊಂಡಿದ್ದ. ಸದ್ಯ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಯಾಮ್ಸನ್‌ ವಿರುದ್ಧ ಕೊಲೆ ಆರೋಪದ ಜತೆಗೆ ಆತ್ಮ ಹತ್ಯೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಮನೆಗೆ ದಾಳಿ ಮಾಡುವ ವೇಳೆ ಆತನ ಪತ್ನಿ ವಿಕ್ಟೋರಿಯಾ ಮಥಾಯಿಸ್‌ ಅಲ್ಲಿದ್ದು, ಆಕೆಯನ್ನೂ ಬಂಧಿಸಲಾಗಿದೆ. ಮುಖ್ಯ ಆರೋಪಿ ಸ್ಯಾಮ್ಸನ್‌ ಚೇತರಿಸಿದ ಬಳಿಕ ಆತನನ್ನು ವಿಚಾರಣೆಗೆ ಒಳಪಡಿಸಿ ಆತನಿಂದ ಕೊಲೆಗೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ಪಡೆಯಲಾಗುವುದು ಎಂದು ಆಯುಕ್ತ ಸಂದೀಪ್‌ ಪಾಟೀಲ್‌ ವಿವರಿಸಿದರು.

ಪೊಲೀಸ್‌ ತಂಡಕ್ಕೆ ಪುರಸ್ಕಾರ
ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಎಲ್ಲ 30 ಮಂದಿ ಪೊಲೀಸ್‌ ಅಧಿಕಾರಿ, ಸಿಬಂದಿಗೆ ಸೂಕ್ತ ಬಹುಮಾನ ನೀಡುವುದಾಗಿ ಸಂದೀಪ್‌ ಪಾಟೀಲ್‌ ಘೋಷಿಸಿದರು.

ಸ್ಯಾಮ್ಸನ್‌ ಹಳೆ ಆರೋಪಿ
ಸ್ಯಾಮ್ಸನ್‌ ಹಳೆ ಆರೋಪಿಯಾಗಿದ್ದು, ಈ ಹಿಂದೆ ಒಂದು ಕೊಲೆ ಮತ್ತು ಇನ್ನೊಂದು ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾದ ಆರೋಪಗಳಿವೆ.

1 ತಿಂಗಳಿನಿಂದ ಫಾಸ್ಟ್‌ಫುಡ್‌ ಬಂದ್‌
ಸ್ಥಳೀಯರು ಹೇಳುವ ಪ್ರಕಾರ, ಆರೋಪಿ ಸ್ಯಾಮ್ಸನ್‌ ಈ ಹಿಂದೆ ವಿದೇಶದಲ್ಲಿದ್ದನಂತೆ. ಬಳಿಕ ಊರಿಗೆ ಬಂದು ಇಲ್ಲಿ ನಂದಿಗುಡ್ಡ ಸಮೀಪ ತಿರುವಿನಲ್ಲಿ ಫಾಸ್ಟ್‌ಫುಡ್‌ ವ್ಯಾಪಾರ ನಡೆಸುತ್ತಿದ್ದ. ಕಾರಿನಲ್ಲಿ ವ್ಯವಹಾರ ನಡೆಯುತ್ತಿತ್ತು. ಮನೆಯಲ್ಲಿಯೇ ಫಾಸ್ಟ್‌ಫುಡ್‌ ತಯಾರಿಸಿ ಇಲ್ಲಿ ಮಾರುತ್ತಿದ್ದ. ಕಳೆದ ಕೆಲವು ತಿಂಗಳಿನಿಂದ ವ್ಯಾಪಾರ ಕೂಡ ಸ್ಥಗಿತಗೊಳಿಸಿದ್ದ. ಕಾರು ಅನಾಥವಾಗಿ ರಸ್ತೆ ಬದಿಯಲ್ಲಿದೆ.

ಶವವನ್ನು ದಿನವಿಡೀ ಮನೆಯೊಳಗಿರಿಸಿಕೊಂಡಿದ್ದ ಹಂತಕರು !
ಶ್ರೀಮತಿ ಅವರನ್ನು ಕೊಲೆಗೈದು ಮೃತದೇಹವನ್ನು ತುಂಡರಿಸಿದ್ದ ಆರೋಪಿಗಳಾದ ಸ್ಯಾಮ್ಸನ್‌ ದಂಪತಿ ದಿನವಿಡೀ ಶವದೊಂದಿಗೇ ಕಳೆದಿದ್ದರು!

ಇಡೀ ಜಿಲ್ಲೆಯನ್ನು ಬೆಚ್ಚಿ ಬೀಳಿಸಿರುವ ಈ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ಉದಯವಾಣಿ ಸಿಬಂದಿ ಹಂತಕ ವಾಸವಾಗಿದ್ದ ಮನೆಬಳಿ ಬುಧವಾರ ತೆರಳಿದ್ದು, ಈ ಸಂದರ್ಭ ಅಕ್ಕ-ಪಕ್ಕ ಹಲವು ಮನೆಗಳಿ
ದ್ದರೂ ಯಾರಿಗೂ ಗೊತ್ತಾಗದ ಆಕೆಯನ್ನು ಹೇಗೆ ಹೊಡೆದು ಕೊಲೆ ಮಾಡಿದ ಎನ್ನುವ ಆಶ್ಚರ್ಯ ಹಾಗೂ ಆತಂಕವನ್ನು ನೆರೆ-ಹೊರೆಯವರು ವ್ಯಕ್ತಪಡಿಸಿದರು.

ಕೃತ್ಯ ನಡೆದಂದು ಹಗಲಿನಲ್ಲಿ ಆತ ಒಂದೆರಡು ಬಾರಿ ಮನೆಯಿಂದ ಹೊರಗೆ ಬಂದು ಓಡಾಡಿದ್ದನ್ನು ಕೆಲವರು ನೋಡಿದ್ದಾರೆ. ಹೆಚ್ಚಿನ ವೇಳೆಯೂ ಮನೆಯ ಬಾಗಿಲು ಮುಚ್ಚಿಕೊಂಡೇ ಇತ್ತು¤. ರಾತ್ರಿಯಾದ ಮೇಲೆ ಅಕ್ಕ-ಪಕ್ಕದವರೆಲ್ಲ ತಮ್ಮ ಮನೆಗಳಲ್ಲಿ ಟಿವಿ ನೋಡುತ್ತಿದ್ದ ಸಂದರ್ಭ ಆರೋಪಿಯು ಶವವನ್ನು ತುಂಡರಿಸಿ ಸಾಗಾಟ ಮಾಡಿರಬಹುದು. ಆದ್ದರಿಂದ ನ‌ಮಗೆ ಯಾವುದೇ ಸುಳಿವುಅಥವಾ ಅನುಮಾನ ಬಂದಿರಲಿಲ್ಲ ಎನ್ನುತ್ತಾರೆ ಸ್ಥಳೀಯರು.

ಆರೋಪಿ ದಂಪತಿಯು ಸ್ಥಳೀಯ ರೊಂದಿಗೆ ಹೆಚ್ಚು ಬೆರೆಯುತ್ತಿರಲಿಲ್ಲ. ಮನೆಗೆ ಪ್ರತ್ಯೇಕ ಗೇಟ್‌ ಇದ್ದು, ಸುತ್ತಲೂ ಹೂವಿನ ಗಿಡಗಳು ಬೆಳೆದು ನಿಂತಿವೆ. ಮನೆಯಲ್ಲಿ ಎರಡು ನಾಯಿಯನ್ನು ಕೂಡ ಸಾಕುತ್ತಿದ್ದರು. ಆದ್ದರಿಂದ ಅಲ್ಲಿ ಏನು ನಡೆದರೂ ಹೊರಗಿನವರಿಗೆ ಗೊತ್ತಾಗುವ ಸಾಧ್ಯತೆ ಕಡಿಮೆ.

ಗಂಡ ಹೆಂಡತಿ ಇಬ್ಬರು ಪ್ರತಿದಿನ ದ್ವಿಚಕ್ರ ವಾಹನದಲ್ಲಿಯೇ ಹೊರಗೆ ಹೋಗುತ್ತಿದ್ದರು. ಮನೆಯಲ್ಲಿಯೇ ನೂಡಲ್ಸ್‌ ಸೇರಿದಂತೆ ಫಾಸ್ಟ್‌ ಫುಡ್‌ ವ್ಯವಹಾರ ನಡೆಸುತ್ತಿದ್ದರು. ಹೀಗಾಗಿ ಅವರ ಮನೆಯಲ್ಲಿ ಹರಿತವಾದ ಕತ್ತಿ ಕೂಡ ಇದ್ದಿರಬಹುದು. ಅದರಲ್ಲಿಯೇ ಶ್ರೀಮತಿ ಶೆಟ್ಟಿ ಅವರನ್ನು ಹತ್ಯೆ ಮಾಡಿರಬಹುದು ಎನ್ನುವುದು ಸ್ಥಳೀಯರ ಅನುಮಾನ.

ಹತ್ಯೆಗೆ ಬಳಸಿದ್ದ ಮಾರಕಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಂತಕನ ಪತ್ನಿ ವಿಕ್ಟೋರಿಯಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬುಧವಾರ ಆಕೆಯನ್ನು ಮನೆಗೆ ಕರೆತರಲಾಗಿತ್ತು. ಸದ್ಯ ಮನೆಯ ಬಾಗಿಲು ತೆರೆದುಕೊಂಡೇ ಇದ್ದು, ಗೇಟ್‌ಗೆ ಪೊಲೀಸರೇ ಬೀಗ ಹಾಕಿದ್ದಾರೆ.

ಎಲ್ಲೋ ಎಂದುಕೊಂಡಿದ್ದೆವು……
“ಮಂಗಳೂರಿನ ವಿವಿಧ ಭಾಗಗಳಲ್ಲಿ ಮಹಿಳೆಯ ದೇಹದ ಭಾಗ ದೊರಕಿರುವ ವಿಚಾರ ರವಿವಾರ ನಮಗೆ ಗೊತ್ತಾಗಿತ್ತು. ಎಷ್ಟು ಭೀಕರವಾಗಿ ಹತ್ಯೆಗೈಯಲಾಗಿದೆ ಎಂದು ನಾವು ಪಕ್ಕದ ಮನೆಯವರ ಜತೆಗೆ ಮಾತನಾಡುತ್ತಿದ್ದೆವು. ಆದರೆ ಇಂದು ಗೊತ್ತಾಯಿತು; ಆರೋಪಿಗಳು ಎಲ್ಲೋ ಇಲ್ಲ ನಮ್ಮ ಪಕ್ಕದಲ್ಲೇ ಇದ್ದಾರೆ ಎಂಬುದು ಎಂದು ಆತಂಕದಿಂದ ಹಿರಿಯ ಮಹಿಳೆಯೊಬ್ಬರು ಹೇಳಿದರು.

ನಂತೂರು ಬಳಿ ಪಾದದ ತುಂಡು ಪತ್ತೆ
ಕೊಲೆ ನಡೆದು ಮೂರು ದಿನಗಳಾಗಿದ್ದರೂ ಶ್ರೀಮತಿಯ ಪಾದದ ಭಾಗ ಲಭಿಸದ ಕಾರಣ ಪೊಲೀಸರಿಂದ ತೀವ್ರ ಹುಡುಕಾಟ ಮುಂದುವರಿದಿತ್ತು. ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಪಾದ ಎಸೆದಿರುವ ಜಾಗದ ಸುಳಿವು ನೀಡಿದ್ದರು. ಅದರಂತೆ ಬುಧವಾರ ಬೆಳಗ್ಗೆ ನಂತೂರು ಪದವು ಬಳಿಯ ಶ್ರೀನಿವಾಸ ಮಲ್ಯ ಪಾರ್ಕ್‌ ಬಳಿ ಪರಿಶೋಧಿಸಿದಾಗ ಪಾದದ ಭಾಗವು ತರಗೆಲೆ ಹಾಕಿ ಮುಚ್ಚಿದ್ದ ಸ್ಥಿತಿಯಲ್ಲಿ ಪತ್ತೆಯಾಯಿತು. ಆಕೆಯ ಮೊಬೈಲ್‌ ಕೂಡ ನಾಗುರಿ ಬಳಿ ನಿಲ್ಲಿಸಿ ಹೋಗಿದ್ದ ಸ್ಕೂಟರ್‌ನೊಳಗೆಯೇ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

  • ಮಂಗಳೂರು: ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿದ್ದ ನಳಿನ್‌ ಕುಮಾರ್‌ ಕಟೀಲು ಅವರು ಮೂರನೇ ಬಾರಿಗೆ ಸಂಸತ್‌ ಪ್ರವೇಶಿಸುವ ಮೂಲಕ ಕರಾವಳಿ ಮಾತ್ರವಲ್ಲ ಇಡೀ ರಾಷ್ಟ್ರ...

  • ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಹಿಂದಿನ ಎರಡು ಚುನಾವಣೆಗಳಲ್ಲಿಯೂ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಬಿಜೆಪಿ ಅಭ್ಯರ್ಥಿ ನಳಿನ್‌...

  • ಮಂಗಳೂರು: ದಕ್ಷಿಣ ಕನ್ನಡ ಕ್ಷೇತ್ರದಿಂದ ನಿರಂತರ 3ನೇ ಬಾರಿಗೆ ಗೆಲುವು ಸಾಧಿಸಿರುವ ನಳಿನ್‌ ಕುಮಾರ್‌ ಕಟೀಲು ಅವರಿಗೆ ಈ ಬಾರಿಯ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ...

  • ಮಂಗಳೂರು: ದ.ಕ. ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾ ವಣೆಯಲ್ಲಿ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ನಳಿನ್‌ ಕುಮಾರ್‌ ಕಟೀಲು ಕಾಂಗ್ರೆಸ್‌ ಅಭ್ಯರ್ಥಿ, ಜಿಲ್ಲಾ ಯುವ ಕಾಂಗ್ರೆಸ್‌...

  • ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ ಗೆಲುವು ಸಾಧಿಸುವುದಕ್ಕೆ ಶತಾಯಗತಾಯ ಪ್ರಯತ್ನ ನಡೆಸಿದ್ದರೂ ಯಶಸ್ಸು ಕಾಣದಿರಲು ಕಾರಣಗಳೇನು...

ಹೊಸ ಸೇರ್ಪಡೆ