ಗುರಿ ಸಾಧಿಸಿದ ಕಲ್ಲಾರೆಯ ಜಾಗೃತಿ

Team Udayavani, Apr 16, 2019, 6:27 AM IST

ಪುತ್ತೂರು: ಪುತ್ತೂರಿನ ನರೇಂದ್ರ ಪ.ಪೂ. ಕಾಲೇಜು ಆರಂಭಗೊಂಡು ಪ್ರಥಮ ಬ್ಯಾಚ್‌ನಲ್ಲೇ ರಾಜ್ಯಕ್ಕೆ ಮೂರನೇ ರ್‍ಯಾಂಕ್‌ ಪಡೆದುಕೊಂಡಿದೆ. ಕಾಲೇಜಿನ ವಿದ್ಯಾರ್ಥಿನಿ ಜಾಗೃತಿ ಜೆ. ನಾಯಕ್‌ ವಿಜ್ಞಾನ ವಿಭಾಗದಲ್ಲಿ 592 ಅಂಕ ಗಳಿಸುವ ಮೂಲಕ 3ನೇ ರ್‍ಯಾಂಕ್‌ ಪಡೆದುಕೊಂಡಿದ್ದಾರೆ.

ಈಕೆ ನರೇಂದ್ರ ಪ.ಪೂ. ಸಂಸ್ಥೆಯಲ್ಲಿ ಶಿಕ್ಷಣ ಪಡೆದರೂ ಸಹೋದರ ಸಂಸ್ಥೆಯಾದ ವಿವೇಕಾನಂದ ಪ.ಪೂ. ಪೂರ್ವ ಕಾಲೇಜಿನ ಮೂಲಕ ಪರೀಕ್ಷೆ ಬರೆದಿದ್ದು, ಅಂಕಪಟ್ಟಿ ವಿವೇಕಾನಂದ ಕಾಲೇಜಿನ ಹೆಸರಿನಲ್ಲಿ ಬಿಡುಗಡೆಗೊಂಡಿದೆ.

ಕಲ್ಲಾರೆ ನಿವಾಸಿ ಜಗನ್ನಾಥ ನಾಯಕ್‌ ಮತ್ತು ಜ್ಯೋತಿ ನಾಯಕ್‌ ದಂಪತಿಯ ಪುತ್ರಿ ಈಕೆ. ತಂದೆ ವಿವೇಕಾನಂದ ಪದವಿ ಕಾಲೇಜಿನಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದಾರೆ.

ಎಸೆಸೆಲ್ಸಿಯಲ್ಲಿ 606 ಅಂಕ ಗಳಿಸುವ ಸಾಧನೆ ಮಾಡಿದ್ದ ಜಾಗೃತಿ ಪ್ರಸ್ತುತ ಪಿಯುಸಿಯ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರಗಳಲ್ಲಿ ತಲಾ 100 ಅಂಕ, ಸಂಸ್ಕೃತ- 99, ಇಂಗ್ಲಿಷ್‌- 97, ಜೀವಶಾಸ್ತ್ರ- 96 ಅಂಕ ಗಳಿಸಿದ್ದಾರೆ.

ಸಂಭ್ರಮಕ್ಕೆ ಅಡ್ಡಿಯಾದ ಸಹೋದರಿಯ ಅನಾರೋಗ್ಯ
ಮಗಳು ಮನೆಗೆ ಹಾಗೂ ಕಾಲೇಜಿಗೆ ಕೀರ್ತಿ ತಂದಿದ್ದಾಳೆ ಎಂದು ತಂದೆ ಜಗನ್ನಾಥ ನಾಯಕ್‌ ಖುಷಿ ವ್ಯಕ್ತಪಡಿಸಿದ್ದಾರೆ. ಜಾಗೃತಿಯ ಸಹೋದರಿ ಜೀವಿತಾ ನಾಯಕ್‌ ಪ್ರಸ್ತುತ 10ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಸಹೋದರಿ ಸಣ್ಣ ಮಟ್ಟಿನ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ರುವುದರಿಂದ ಹೆಚ್ಚಿನ ಸಂಭ್ರಮಾಚರಣೆ ಇವರಿಗೆ ಸಾಧ್ಯವಾಗಿಲ್ಲ.

ಮುಂಜಾನೆ ಅಭ್ಯಾಸ
ಯಾವುದೇ ಟ್ಯೂಶನ್‌ಗೆ ಹೋಗಿಲ್ಲ. ಸಾಧನೆಗಾಗಿ ಗುರಿ ಇರಿಸಿಕೊಂಡಿದ್ದೆ. ರಾತ್ರಿ ಓದಿದರೂ ಮುಂಜಾನೆಯ ಅಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೆ. ಇಷ್ಟೇ ಅಂಕ ಗಳಿಸುವ ನಿರೀಕ್ಷೆ ಇರಲಿಲ್ಲ. ಆದರೆ ತೃಪ್ತಿ ಇದೆ ಎಂದು ಖುಷಿ ವ್ಯಕ್ತಪಡಿಸಿರುವ ಜಾಗೃತಿ ನೀಟ್‌ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಮೆಡಿಕಲ್‌ ಕಲಿಯುವ ಇಚ್ಛೆ ಹೊಂದಿರುವುದಾಗಿ ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ