ಧರ್ಮನಿಷ್ಠ, ಸಂಸ್ಕೃತಿನಿಷ್ಠ ವ್ಯಕ್ತಿತ್ವ ನಿರ್ಮಾಣದ ಗುರಿ: ರಾಘವೇಶ್ವರ ಶ್ರೀ

ಮಾಣಿ ಪೆರಾಜೆ ಮಠ : ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಮಾರ್ಗದರ್ಶನ ಸಭೆ

Team Udayavani, Jul 12, 2019, 3:22 PM IST

ವಿಟ್ಲ: ಶ್ರೀಶಂಕರರು ಜ್ಞಾನದ ಬಲದಿಂದ ದೇಶ ಪರಿವರ್ತನೆ ಮಾಡಲು ಸಾಧ್ಯವಾಗಿತ್ತು. ಅತ್ಯುತ್ತಮ ಆರ್ಷವಿದ್ಯಾಕೇಂದ್ರದ ಮೂಲಕ ಹೊಸ ಪೀಳಿಗೆಗೆ ಇಂಥ ಜ್ಞಾನ ಬೋಧಿಸಿ ಧರ್ಮನಿಷ್ಠೆ, ದೇಶನಿಷ್ಠೆ, ಸಂಸ್ಕೃತಿನಿಷ್ಠೆಯನ್ನು ಒಳಗೊಂಡ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸುವುದು ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಉದ್ದೇಶ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ನುಡಿದರು.

ಅವರು ಗುರುವಾರ ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದ ಜನಭವನದಲ್ಲಿ ಹಮ್ಮಿಕೊಂಡಿದ್ದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಮಾರ್ಗದರ್ಶನ ಸಭೆಯಲ್ಲಿ ಆಶೀರ್ವಚನ ನೀಡಿದರು.

2020ರ ಎ. 26ರ ಅಕ್ಷಯತೃತೀಯ ದಿನದಂದು ಈ ವಿಶ್ವವಿದ್ಯಾಪೀಠ ಲೋಕಾರ್ಪಣೆಯಾಗಲಿದೆ. ಸೇವಾರ್ಥ ಯೋಜನೆಗಳು ಮತ್ತು ಜ್ಞಾನಾರ್ಥ ಯೋಜನೆಗಳು ಮಠದ ಕಾರ್ಯಗಳಲ್ಲಿ ಪ್ರಮುಖವಾದವು. ವಿಶ್ವವಿದ್ಯಾಪೀಠ ಶ್ರೀಶಂಕರ ಪರಂಪರೆಯ 36ನೇ ತಲೆಮಾರಿನ ಕೊಡುಗೆಯಾಗಿದೆ. ಇದನ್ನು ಸ್ಥಾಪಿಸುವ ಘೋಷಣೆಯನ್ನು ಪೀಠಕ್ಕೆ ಬಂದ ದಿನ ಶಿಷ್ಯರ, ಸಮಾಜದ ಮುಂದೆ ಮಾಡಿಯಾಗಿತ್ತು ಮತ್ತು ಇದೀಗ ಅನುಷ್ಠಾನರೂಪಕ್ಕೆ ಬರುತ್ತಿದೆ ಎಂದರು.

ಗೃಹಸ್ಥರು ಎಲ್ಲದಕ್ಕೂ ಆರ್ಥಿಕ ಲೆಕ್ಕಾಚಾರವನ್ನು ಮಾಡಿ ವ್ಯಾವಹಾರಿಕವಾಗಿ ಚಿಂತಿಸುತ್ತಾರೆ. ಸಂತರು ಹಾಗಲ್ಲ. ದೇಶ, ಸಮಾಜದ ಒಳಿತಿಗೆ ಮತ್ತು ಧರ್ಮ, ಸಂಸ್ಕೃತಿಯನ್ನು ಉಳಿಸುವ ಲೆಕ್ಕಾಚಾರವನ್ನು ಮಾಡುತ್ತಾರೆ. ಜ್ಞಾನದಾನವೇ ಎಲ್ಲ ಮಠಗಳ ಪ್ರಮುಖ ಕರ್ತವ್ಯ. ಅದನ್ನು ಮಾಡದಿದ್ದರೆ ಅದು ದೊಡ್ಡ ಲೋಪವಾಗುತ್ತದೆ. ಇಪ್ಪತ್ತು ವರ್ಷಗಳಲ್ಲಿ ತಲೆಮಾರು ಬದಲಾಗಿದೆ; ಇನ್ನು ವಿಳಂಬ ಮಾಡದೇ ಕಾಲಮಿತಿಯಲ್ಲಿ ವಿಶ್ವವಿದ್ಯಾಪೀಠ ಸ್ಥಾಪನೆ ಮಾಡುವ ಸಂಕಲ್ಪ ಇದೀಗ ಕೈಗೂಡುತ್ತಿದೆ ಎಂದರು.

ಸರ್ಕಾರ, ಸಮಾಜ, ಇತರ ಎಲ್ಲ ಮಠಗಳು ಈ ಕಾರ್ಯವನ್ನು ಎಂದೋ ಮಾಡಬೇಕಾಗಿತ್ತು. ಪರಿಪೂರ್ಣವಾದ ಭಾರತೀಯ ವಿದ್ಯೆಗಳ ಕಲಿಕಾ ಕೇಂದ್ರ ಇಲ್ಲ. ಅಂಥ ವಿಶಿಷ್ಟ ಕಾರ್ಯಕ್ಕೆ ಶ್ರೀಮಠ ಮುಂದಾಗಿದೆ. ಶಂಕರರು ಹಿಂದೆ ಅವತಾರವೆತ್ತಿದ್ದ ಕಾರಣ ಇಂದು ಸಮಾಜ ಉಳಿದುಕೊಂಡಿದೆ. ಅವರ ಅವಿಚ್ಛಿನ್ನ ಪರಂಪರೆ ಮುಂದುವರಿಸಿಕೊಂಡು ಬಂದಿರುವ ಶ್ರೀರಾಮಚಂದ್ರಾಪುರ ಮಠ ಇಂಥ ಕಾರ್ಯವನ್ನು ಕೈಗೆತ್ತಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ದೇಶದ, ಧರ್ಮದ, ಸಮಾಜದ ಒಳಿತಿಗೆ ಅಗತ್ಯವಾದುದನ್ನು ಮಾಡಲೇ ಬೇಕಾಗಿದೆ. ಕಲ್ಪಿಸಿದ ಸಂಕಲ್ಪಗಳು ಕಾರ್ಯಸಾಧ್ಯವಾಗುತ್ತವೆ ಎನ್ನುವುದು ನಮ್ಮ ಮಠದ ಪರಂಪರೆಯಿಂದ ತಿಳಿದುಬಂದಿದೆ. ನಾಲ್ಕೂ ವೇದಗಳ, ಶಾಸ್ತ್ರಗಳ ಕಲಿಕೆಗೆ ಅವಕಾಶ ನೀಡುವ ಕಾರ್ಯ ಆಗಬೇಕು. ಉಪವೇದಗಳು, ವೇದಾಂಗಗಳು, ಅರುವತ್ತನಾಲ್ಕು ಕಲೆಗಳು, ಅನೇಕ ಭಾರತೀಯ ಮೂಲದ ವಿದ್ಯೆಗಳು, ಆಧುನಿಕ ಭಾಷೆ, ತಂತ್ರಜ್ಞಾನ, ಆತ್ಮರಕ್ಷಣೆಗೆ ಸಮರವಿದ್ಯೆಗಳನ್ನು ಒಳಗೊಂಡ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸುವುದು ಈ ವಿದ್ಯಾಪೀಠದ ಉದ್ದೇಶ. ಎಲ್ಲ ಭಾರತೀಯ ವಿದ್ಯೆಗಳ ಪರಿಚಯದ ಜತೆಗೆ ಒಂದು ವಿಷಯದಲ್ಲಿ ಆಳವಾದ ಜ್ಞಾನವನ್ನು ಒದಗಿಸುವುದು ಇಲ್ಲಿನ ವಿಶೇಷ ಎಂದರು.

ಶ್ರೀಮಠ ಇದಕ್ಕಾಗಿ ಸುಮಾರು 10 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿರುವ ಪ್ರಾಚೀನ ಶೈಲಿಯ “ಕುಲಗುರು” ಭವ್ಯ ಗುರುನಿವಾಸವನ್ನು ವಿಶ್ವವಿದ್ಯಾಪೀಠಕ್ಕೆ ಸಮರ್ಪಣೆ ಮಾಡಿದೆ ಎಂದು ಹೇಳಿದರು.

ಡಾ.ಗಜಾನನ ಶರ್ಮ ಪ್ರಸ್ತಾವಿಸಿದರು. ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವ್ಯವಸ್ಥಾ ಸಮಿತಿ ಗೌರವಾಧ್ಯಕ್ಷ ದೇವವ್ರತ ಶರ್ಮ, ಹವ್ಯಕ ಮಹಾಮಂಡಲದ ಅಧ್ಯಕ್ಷೆ ಈಶ್ವರೀ ಬೇರ್ಕಡವು, ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಾಪ್ಪು, ನಿಯೋಜಿತ ಪ್ರಧಾನ ಕಾರ್ಯದರ್ಶಿ ಪಿ.ನಾಗರಾಜ ಭಟ್ ಪೆದಮಲೆ, ಮಾಣಿಮಠ ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭ ಅಡಿಕೆ ಮರಕ್ಕೇರುವ ಯಂತ್ರವನ್ನು ಆವಿಷ್ಕರಿಸಿದ ಗಣಪತಿ ಭಟ್ ಕೋಮಲೆ ಅವರನ್ನು ಶ್ರೀಗಳು ಗೌರವಿಸಿದರು. ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಸೇರಾಜೆ ಸುಬ್ರಹ್ಮಣ್ಯ ಭಟ್ ನಿರೂಪಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ