ರಾಕೇಶ್‌ ರೈ, ಪ್ರಶಾಂತ್‌ ಶೆಟ್ಟಿ ಅಭಿಮಾನಿಗಳ ಸಭೆ

Team Udayavani, Oct 2, 2017, 11:36 AM IST

ಸುರತ್ಕಲ್‌ : ಯಕ್ಷಗಾನ ಪ್ರದರ್ಶನದ ದೃಶ್ಯವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಕಲಾವಿದರ ತೇಜೋವಧೆಗೆ ಮುಂದಾದ ವಿದ್ಯಮಾನದ ಹಿನ್ನೆಲೆಯಲ್ಲಿ ಕಲಾವಿದರಾದ ರಾಕೇಶ್‌ ರೈ ಅಡ್ಕ ಹಾಗೂ ಪ್ರಶಾಂತ್‌ ಶೆಟ್ಟಿ ನೆಲ್ಯಾಡಿ ಅವರ ಅಭಿಮಾನಿ ಬಳಗವು ಸುರತ್ಕಲ್‌ ಬಂಟರ ಭವನದಲ್ಲಿ ಸಮಾಲೋಚನ ಸಭೆ ನಡೆಸಿತು.

ಸಭೆಯಲ್ಲಿ ಕಲಾವಿದರಿಬ್ಬರೂ ಮತ್ತೆ ಯಕ್ಷಗಾನದಲ್ಲಿ ಮುಂದುವರಿಯುವಂತೆ ನಿರ್ಣಯ ಕೈಗೊಂಡು, ಅದರ ಜವಾಬ್ದಾರಿಯನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್‌ ಶೆಟ್ಟಿ ಅವರಿಗೆ ವಹಿಸಲಾಯಿತು. ಶಾಸಕ ಮೋಹಿದ್ದೀನ್ ಬಾವ ಮಾತನಾಡಿ, ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಇಂದಿನ ಯುವ ಕಲಾವಿದರು ಮಾಡುತ್ತಿದ್ದಾರೆ. ಯಕ್ಷಗಾನದ ಮೂಲಕ ಶಾಂತಿ, ಸಾಮರಸ್ಯವನ್ನು ಜನತೆಗೆ ತಲುಪಿಸುವ ಕೆಲಸಗಳು ನಡೆಯುತ್ತಿದ್ದು, ಅದೊಂದು ಮೌಲ್ಯಯುತವಾದ ಕಲೆ. ಅವಿವೇಕಿಯೊಬ್ಬನ ಕಿತಾಪತಿಯಿಂದ ಇಂತಹ ಅಪವಾದವನ್ನು ಕಲಾವಿದರು ಎದುರಿಸುವಂತಾಗಿದ್ದು, ಇದಕ್ಕೆ ಕಲಾವಿದರು ಕಿವಿಗೊಡದೆ ಯಕ್ಷಗಾನದ ಸೇವೆಯನ್ನು ಮುಂದುವರಿಯಬೇಕು ಎಂದರು.

ಆತ್ಮಸ್ಥೈರ್ಯ ಹೆಚ್ಚಿಸಬೇಕಾಗಿದೆ
ಅಧ್ಯಕ್ಷತೆ ವಹಿಸಿದ್ದ ಪಟ್ಲ ಫೌಂಡೇಶನ್‌ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಕಲಾವಿದರ ಕುರಿತು ಕೀಳುಮಟ್ಟದ ವಿಮರ್ಶೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕಲಾವಿದರು ಯಕ್ಷಗಾನ ರಂಗದಿಂದ ನಿವೃತ್ತಿಗೆ ಮುಂದಾಗುವಂತಹ ಸನ್ನಿವೇಶ ಸೃಷ್ಟಿಯಾಗಿದೆ. ಇಂತಹ ಹೊತ್ತಿನಲ್ಲಿ ಕಲಾವಿದರಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಕೆಲಸವನ್ನು ನಾವು ಮಾಡಬೇಕಾಗಿದೆ. ಸುಮಾರು 600ಕ್ಕೂ ಹೆಚ್ಚು ಶಿಷ್ಯರನ್ನು ಪಡೆದಿರುವ ರಾಕೇಶ್‌ ರೈ ಹಾಗೂ ಪ್ರಶಾಂತ್‌ ಶೆಟ್ಟಿ ಅವರು ಕಲಾ ಬದುಕಿನಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದವರಾಗಿದ್ದಾರೆ ಎಂದರು.

ಪ್ರಮುಖರಾದ ಆರ್‌.ಕೆ. ಭಟ್‌, ಹಿರಿಯ ಕಲಾವಿದರಾದ ಶೀನಪ್ಪ ರೈ, ಶಿವರಾಮ ಪಣಂಬೂರು ಮಾತನಾಡಿದರು. ರವೀಂದ್ರನಾಥ ಶೆಟ್ಟಿ, ಅಶ್ವಿ‌ನ್‌ ತೇಜಸ್‌, ಬಿಂದಿಯಾ ಶೆಟ್ಟಿ, ವೃಂದಾ ಕೊನ್ನಾರ್‌ ಮೊದಲಾದವರು ಅಭಿಪ್ರಾಯ ವ್ಯಕ್ತಪಡಿಸಿದರು. ಸುರತ್ಕಲ್‌ ಬಂಟರ ಸಂಘದ ಅಧ್ಯಕ್ಷ ಉಲ್ಲಾಸ್‌ ಶೆಟ್ಟಿ, ಉಪಾಧ್ಯಕ್ಷ ಸುಧಾಕರ ಪೂಂಜ, ಕಾರ್ಪೊರೇಟರ್‌ ಗುಣಶೇಖರ ಶೆಟ್ಟಿ, ಪದ್ಮನಾಭ ಎಲ್‌. ಶೆಟ್ಟಿ, ಶರತ್‌ ಶೆಟ್ಟಿ ಪಡು, ಮುಂಡೋಟ್ಟು ರಾಧಾಕೃಷ್ಣ ಭಟ್‌, ರವಿ ಶೆಟ್ಟಿ ಅಶೋಕನಗರ ಮೊದಲಾದವರು ಉಪಸ್ಥಿತರಿದ್ದರು. 

ಮಾಧವ ಶೆಟ್ಟಿ ಬಾಳ ಸ್ವಾಗತಿಸಿ, ಸಂಘಟಕ ಲೀಲಾಧರ ಶೆಟ್ಟಿ ಕಟ್ಲ ವಂದಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ