‘ರಸ ಮಂಟಮೆ’ ತುಳು ಸಂಸ್ಕೃತಿ ವೈಭವ

Team Udayavani, Jun 30, 2019, 5:53 AM IST

ಕಡಬ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ರಾಮ ಕುಂಜದ ನೇತ್ರಾವತಿ ತುಳುಕೂಟದ ಆಶ್ರಯದಲ್ಲಿ ರಾಮಕುಂಜದ ಶ್ರೀ ರಾಮ ಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯ ಸಹಯೋಗದೊಂದಿಗೆ ರಾಮಕುಂಜದಲ್ಲಿ ಶನಿವಾರ ಜರಗಿದ ತುಳು ಕಲಿಕೆಯ ವಿದ್ಯಾರ್ಥಿಗಳು ಹಾಗೂ ವಿವಿಧ ತುಳುಕೂಟಗಳ ಸದಸ್ಯರ ತುಳು ಸಾಂಸ್ಕೃತಿಕ ಸ್ಪರ್ಧೆಗಳ ‘ರಸ ಮಂಟಮೆ’ ತುಳು ಸಂಸ್ಕೃತಿಯ ವೈಭವವನ್ನು ಸಾಕ್ಷೀಕರಿಸಿತು.

ಅವಿಭಜಿತ ದ.ಕ. ಜಿಲ್ಲೆಯ ವಿವಿಧ ಕಡೆಯಿಂದ ಆಗಮಿಸಿದ ಶಾಲಾ ವಿದ್ಯಾರ್ಥಿಗಳು ಹಾಗೂ ವಿವಿಧ ತುಳುಕೂಟಗಳ ಸದಸ್ಯರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

ತುಳು ಜಾನಪದ ಕವಿತೆ, ತುಳು ಭಾವಗೀತೆ, ತೆಂಗಿನ ಗರಿಯಲ್ಲಿ ಕರಕುಶಲ ವಸ್ತು ತಯಾರಿ, ತುಳು ಹಳ್ಳಿ ಜೀವನದ ಚಿತ್ರ ಬಿಡಿಸುವುದು, ತುಳು ಭಾಷಣ, ತುಳು ಜಾನಪದ ಕವಿತೆ, ತುಳು ಗಾದೆ, ತುಳು ಜಾನಪದ ಕುಣಿತ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಶ್ರೀ ರಾಮಕುಂಜ ಆಂಗ್ಲಮಾಧ್ಯಮ ಶಾಲೆಯಲ್ಲಿ ತೆರೆಯಲಾದ ತುಳುನಾಡ ಬಳಕೆಯ ಹಳೆಯ ವಸ್ತುಗಳ ಪ್ರದರ್ಶನ ತುಳುನಾಡಿನ ಗ್ರಾಮೀಣ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಿತ್ತು.

ಸಾಧಕರಿಗೆ ಸಮ್ಮಾನ

ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ತುಳು ಶಿಕ್ಷಕಿ, ತುಳು ಸಂಸ್ಕೃತಿ, ಭಾಷೆಗೆ ಪ್ರೋತ್ಸಾಹ ನೀಡು ತ್ತಿರುವ ಸರಿತಾ ಜನಾರ್ದನ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ತುಳು ಸಂಸ್ಕೃತಿ, ತುಳು ಭಾಷೆಗೆ ಪ್ರೋತ್ಸಾಹ ನೀಡು ತ್ತಿರುವ ಕುಶಾಲಾಕ್ಷಿ ಕಣ್ವತೀರ್ಥ, ನಾರಾಯಣ ರೈ ಕುಕ್ಕುವಳ್ಳಿ, ವಿಜಯ ಲಕ್ಷ್ಮೀ ಕಟೀಲು, ನರೇಶ್‌ ಸಸಿಹಿತ್ಲು, ಅಕ್ಷತಾ ರಾಜ್‌ ಪೆರ್ಲ, ಚಿದಾನಂದ ನಾಯಕ್‌, ನಿವೃತ್ತ ಶಿಕ್ಷಕ ಗುಮ್ಮಣ್ಣ ಗೌಡ ರಾಮಕುಂಜ, ಉಮೇಶ್‌ ಶೆಟ್ಟಿ ಸಾಯಿರಾಂ, ಧನ್ಯಶ್ರೀ ಆಲಂಕಾರು, ಸುಮನಾ ಕೆರೆಕರೆ ಅವರನ್ನು ಗೌರವಿಸಲಾಯಿತು. ತುಳು ಪರಪೋಕು ಕರಜನಕ್ಕೆ (ತುಳುನಾಡ ಹಳೆಯ ವಸ್ತುಗಳ ಸಂಗ್ರಹ) ತುಳು ಸಂಸ್ಕೃತಿ ಬಿಂಬಿಸುವ ಹಳೆಯ ಸಾಮಗ್ರಿಗಳನ್ನು ಒದಗಿಸಿದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರನ್ನೂ ಗುರುತಿಸಲಾಯಿತು. ಶಿಕ್ಷಕಿ ಜ್ಯೋತಿ ಸಮ್ಮಾನಿತರ ಹೆಸರು ವಾಚಿಸಿದರು.

‘ದೊಂಪದ ಬಲಿ’ ಪುಸ್ತಕ ಬಿಡುಗಡೆ

ನಿವೃತ್ತ ಶಿಕ್ಷಕ ಗೋಪಾಲ ಶೆಟ್ಟಿ ಕಳೆಂಜ ಬರೆದಿರುವ ‘ದೊಂಪದ ಬಲಿ’ ಪುಸ್ತಕವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಬಿಡುಗಡೆಗೊಳಿಸಿದರು.

ಬೆಲ್ಲ, ನೀರಿನ ಸ್ವಾಗತ

ತುಳುವ ಸಂಪ್ರದಾಯದಂತೆ ಅತಿಥಿಗಳನ್ನು ಬೆಲ್ಲ, ನೀರು, ಅಡಿಕೆ ಮತ್ತು ವೀಳ್ಯದೆಲೆ ನೀಡಿ ತುಳುನಾಡ ಮುಂಡಾಸು ತೊಡಿಸಿ ಸ್ವಾಗತಿಸಲಾಯಿತು. ವಿದ್ಯುತ್‌ ದೀಪ ಇಲ್ಲದ ಹಿಂದಿನ ಕಾಲದಲ್ಲಿ ಮನೆಗಳನ್ನು ಬೆಳಗುತ್ತಿದ್ದ ಗ್ಯಾಸ್‌ಲೈಟ್ ಮಾದರಿಯ ಲಾಟೀನು ಉರಿಸುವ ಮೂಲಕ ಅತಿಥಿಗಳು ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ತೆಂಗಿನ ಮಡಲು ಉಪಯೋಗಿಸಿ ರಚಿಸಲಾಗಿದ್ದ ಪ್ರಧಾನ ವೇದಿಕೆಗೆ ತುಳುನಾಡ ಅವಳಿ ವೀರರಾದ ಕೋಟಿ-ಚೆನ್ನಯರ ಹೆಸರಿಡಲಾಗಿತ್ತು. ಸಭಾ ಕಾರ್ಯಕ್ರಮದ ಕೊನೆಗೆ ಹರಿವಾಣ, ತೆಂಗಿನಕಾಯಿ ಹಾಗೂ ಕಂಚಿನ ದೀಪ ನೀಡಿ ಅತಿಥಿಗಳನ್ನು ಸತ್ಕರಿಸಲಾಯಿತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ