ತೊಡಿಕಾನ-ಬಾಳೆಕಜೆ-ಹರ್ಲಡ್ಕ ರಸ್ತೆ ತುಂಬ ಕೆಸರಿನ ಹೊಂಡ
Team Udayavani, Aug 9, 2018, 11:24 AM IST
ಅರಂತೋಡು : ತೊಡಿಕಾನ- ಬಾಳೆಕಜೆ–ಹರ್ಲಡ್ಕರಸ್ತೆ ಕೆಸರು ಗದ್ದೆಯಾಗಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳಿಗೆ ನರಕಯಾತನೆಯಾಗಿ ಪರಿಣಮಿಸಿದೆ. ತೊಡಿಕಾನದಿಂದ ಹರ್ಲಡ್ಕಕ್ಕೆ 3 ಕಿ.ಮೀ. ದೂರವಿದೆ. ಈ ರಸ್ತೆ ಕೆಲವೆಡೆ ಸಂಪೂರ್ಣ ಕೆಸರುಮಯವಾಗಿ ಹೊಂಡ-ಗುಂಡಿಗಳಿಂದ ಕೂಡಿದೆ. ಈ ಭಾಗದಿಂದ ನೂರಾರು ಶಾಲಾ ಮಕ್ಕಳು ಈ ರಸ್ತೆಯ ಮೂಲಕ ಶಾಲೆ, ಕಾಲೇಜುಗಳಿಗೆ ತೆರಳುತ್ತಾರೆ. ರಸ್ತೆಯಲ್ಲಿ ನಡೆದುಕೊಂಡು ಹೋಗುವವರ ಗೋಳು ಕೇಳುವವರೇ ಇಲ್ಲ.
ತೊಡಿಕಾನ-ಬಾಳೆಕಜೆ-ಹರ್ಲಡ್ಕ ಸಂಪರ್ಕ ರಸ್ತೆ ಚಿಟ್ಟನ್ನೂರು ಪೆರ್ಡಮಲೆ, ಹಾಸ್ಪಾರೆ, ಪಾರೆಮಜಲು, ಬಾಳೆಕಜೆ, ಹರ್ಲಡ್ಕ ಭಾಗಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ಭಾಗದಲ್ಲಿ ಹಿಂದುಳಿದ ವರ್ಗ, ಪರಿಶಿಷ್ಟ, ಜಾತಿ, ಪರಿಶಿಷ್ಟ ಪಂಗಡದ ನೂರಾರು ಕುಟುಂಬಗಳು ವಾಸಿಸುತ್ತಿವೆ. ಇದನ್ನು ಸರ್ವಋತು ರಸ್ತೆಯಾಗಿ ಅಭಿವೃದ್ಧಿಪಡಿಸಲು ಪಾರೆಮಜಲು ಬಳಿ ಹೊಳೆಗೆ ಶಾಸಕರ ಅನುದಾನ ಮತ್ತು ಜಿ.ಪಂ. ಅನುದಾನದಿಂದ ಕಿರು ಸೇತುವೆ ನಿರ್ಮಾಣ ಮಾಡಲಾಗಿದೆ. ಶಾಸಕರ ಮತ್ತು ತಾ.ಪಂ.ಅನುದಾನದಿಂದ ರಸ್ತೆಯ ಸ್ವಲ್ಪ ಭಾಗ ಕಾಂಕ್ರೀಟ್ ಕಾಮಗಾರಿ ನಡೆಸಲಾಗಿದೆ. ತೊಡಿಕಾನದಿಂದ ಸುಮಾರು 3 ಕಿ.ಮೀ. ರಸ್ತೆ ಸರ್ವಋತು ರಸ್ತೆಯಾಗಿ ಪರಿವರ್ತನೆಯಾಗಲು ಬಾಕಿ ಉಳಿದಿದೆ.
ಕೆಲವು ವರ್ಷಗಳ ಹಿಂದೆ ಪಾರೆಮಜಲು ತೋಡಿಗೆ ಸೇತುವೆ ಇಲ್ಲದ ಸಂದರ್ಭ ಇಲ್ಲಿಯ ಜನರು ನರಕಯಾತನೆ ಅನುಭವಿಸುತ್ತಿದ್ದರು. ಈ ವರ್ಷ ಹೊಳೆಗೆ ಸೇತುವೆ ನಿರ್ಮಾಣವಾಗಿದೆ. ತೊಡಿಕಾನ- ಬಾಳೆಕಜೆ- ಹರ್ಲಡ್ಕ ರಸ್ತೆ ಅರಂತೋಡು ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟಿದೆ. ಇದು ಸರ್ವಋತು ರಸ್ತೆಯಾಗಿ ಅಭಿವೃದ್ಧಿಗೊಳ್ಳಬೇಕು ಎನ್ನುವುದು ಇಲ್ಲಿಯ ಜನರ ಬಹುದಿನಗಳ ಕನಸು. ಜನಪ್ರತಿನಿಧಿಗಳು ರಸ್ತೆ ಅಭಿವೃದ್ಧಿ ಬಗ್ಗೆ ಗಮನ ಹರಿಸಬೇಕು ಎಂಬುದು ಸ್ಥಳೀಯರ ಒತ್ತಾಯ.
ನನ್ನ ಗಮನಕ್ಕೆ ಬಂದಿಲ್ಲ
ಈ ರಸ್ತೆಯ ಸಮಸ್ಯೆ ನನ್ನ ಗಮನಕ್ಕೆ ಬಂದಿಲ್ಲ. ಸರ್ವಋತು ರಸ್ತೆಯಾಗಿ ಅಭಿವೃದ್ಧಿಪಡಿಸಲು ಸ್ಥಳೀಯರು ಯಾರೂ ಲಿಖಿತವಾಗಿ ಮನವಿ ಮಾಡಿಕೊಂಡಿಲ್ಲ. ಕಿರುಸೇತುವೆ ನಿರ್ಮಾಣಕ್ಕೆ ಅನುದಾನ ಒದಗಿಸಿಕೊಡಲಾಗಿದೆ. ಮುಂದಿನ ದಿನದಲ್ಲಿ ಈ ರಸ್ತೆ ಅಭಿವೃದ್ಧಿ ಬಗ್ಗೆ ಗಮನ ಹರಿಸಲಾಗುವುದು.
- ಎಸ್. ಅಂಗಾರ,
ಶಾಸಕರು
ಇನ್ನಷ್ಟು ಅನುದಾನ ಬೇಕು
ತೊಡಿಕಾನ-ಬಾಳೆಕಜೆ-ಹರ್ಲಡ್ಕ ರಸ್ತೆ ಸಮಸ್ಯೆ ಗಂಭೀರ ವಿಷಯವಾಗಿದೆ. ಶಾಸಕರು, ಜಿ.ಪಂ. ಸದಸ್ಯರು ಸೇತುವೆ ನಿರ್ಮಾಣಕ್ಕೆ, ರಸ್ತೆ ಕಾಂಕ್ರೀಟ್ ಕಾಮಗಾರಿ ನಡೆಸಲು ತಮ್ಮ ಅನುದಾನ ಒದಗಿಸಿಕೊಟ್ಟಿದ್ದಾರೆ. ಮುಂದೆ ರಸ್ತೆ ಅಭಿವೃದ್ಧಿಗಾಗಿಯೂ ಅನುದಾನ ಒದಗಿಸಿಕೊಡುವ ಅಗತ್ಯ ಇದೆ.
– ಜನಾರ್ದನ ಬಾಳೆಕಜೆ, ಸ್ಥಳೀಯರು
ವಿಶೇಷ ವರದಿ