ಏರುತ್ತಿದೆ ಉರಿ ಬಿಸಿಲು: ಹನ್ನೊಂದು ವರ್ಷಗಳಲ್ಲೇ ಅತೀ ಹೆಚ್ಚು ತಾಪಮಾನ !

ನವೆಂಬರ್‌ನಲ್ಲಿ ವಾಡಿಕೆ ಮಳೆ ಕಡಿಮೆ

Team Udayavani, Nov 23, 2019, 4:56 AM IST

ಮಹಾನಗರ: ಕರಾವಳಿ ಭಾಗದಲ್ಲಿ ಕಳೆದ ಹನ್ನೊಂದು ವರ್ಷಗಳಲ್ಲೇ ಅತೀ ಹೆಚ್ಚು ಅಂದರೆ 37 ಡಿ.ಸೆ. ತಾಪಮಾನ ಈಗಾಗಲೇ ದಾಖಲಾಗಿದ್ದು, ಬಿಸಿಲಿನ ತಾಪ ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಮೋಡಗಳ ಚಲನೆ ಇಲ್ಲದ ಕಾರಣ ಮಳೆ ಕೂಡ ಮರೆಯಾಗುತ್ತಿದೆ.

ನವೆಂಬರ್‌ ತಿಂಗಳಿನಲ್ಲಿ ಹಿಂಗಾರು ವೇಳೆ ಸಾಮಾನ್ಯವಾಗಿ ಸಂಜೆ ವೇಳೆ ಗುಡುಗು ಸಿಡಿಲಿನಿಂದ ಕೂಡಿದ ಮಳೆಯಾಗುತ್ತದೆ. ಆದರೆ ಈ ಬಾರಿ ಅಕ್ಟೋಬರ್‌ನಲ್ಲಿ ಉತ್ತಮ ಮಳೆಯಾಗಿತ್ತು. ನವೆಂಬರ್‌ನಲ್ಲಿ ಮಳೆ ಕ್ಷೀಣಿಸಿದೆ. ಹಾಗಾಗಿ ನಗರದಲ್ಲಿ ನವೆಂಬರ್‌ ತಿಂಗಳಿನ ಹಿಂಗಾರು ಮಳೆ ವಾಡಿಕೆ ಮಳೆಗಿಂತ ಶೇ.6ರಷ್ಟು ಕೊರತೆ ಇದೆ. ಬಿಸಿಲಿನ ತೀವ್ರತೆ ಹೆಚ್ಚಿದ ಹಿನ್ನೆಲೆಯಲ್ಲಿ ಮಧ್ಯಾಹ್ನ ವೇಳೆ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಕಡಿಮೆಯಾಗುತ್ತಿದ್ದು, ಸಾರ್ವಜನಿಕರ ಓಡಾಟವೂ ವಿರಳವಾಗುತ್ತಿದೆ. ಇನ್ನು, ಬೀದಿ ವ್ಯಾಪಾರಸ್ಥರು ಕೂಡ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಪ್ರತೀ ವರ್ಷ ಆಗಸ್ಟ್‌ ತಿಂಗಳಿನಿಂದ ಒಂದು ವರ್ಷದವರೆಗೆ ಮೀನುಗಾರರು ಕಡಲಿಗಿಳಿದು ಮೀನುಗಾರಿಕೆಯಲ್ಲಿ ತೊಡಗುತ್ತಾರೆ. ಆದರೆ ಈವರೆಗೆ ಸೈಕ್ಲೋನ್‌ ಪ್ರಭಾವ ಉಂಟಾಗಿದ್ದರೆ, ಇದೀಗ ಬಿಸಿಲಿನ ತಾಪಕ್ಕೆ ಕಡಲಿನಲ್ಲಿ ಮೀನುಗಳು ಸಮುದ್ರದ ಆಳಕ್ಕೆ ಹೋಗುತ್ತಿದ್ದು, ಮೀನುಗಳು ಬಲೆಗೆ ಸಿಗುತ್ತಿಲ್ಲ. ಮೀನುಗಾರಿಕೆಗೆ ತೆರಳಿದವರು ಹನ್ನೊಂದು ದಿನಗಳ ಬಳಿಕ ಬರುವಾಗ ಈ ಹಿಂದೆ ಒಂದು ಬೋಟ್‌ನಲ್ಲಿ ಸುಮಾರು 7 ಲಕ್ಷ ರೂ. ಮೌಲ್ಯದ ಮೀನುಗಳನ್ನು ಹೊತ್ತು ತರುತ್ತಿದ್ದರು. ಇದೀಗ ಅರ್ಧಕ್ಕರ್ಧ ನಷ್ಟ ಅನುಭವಿಸುತ್ತಿದ್ದಾರೆ.

ಹೂವಿನ ಇಳುವರಿ ಕಡಿಮೆ
ಕರಾವಳಿ ಭಾಗದಲ್ಲಿ ಬೆಳಗ್ಗಿನ ವೇಳೆ ಇಬ್ಬನಿ ಇದ್ದು, ಮಧ್ಯಾಹ್ನ ವೇಳೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಇದರ ಪರಿಣಾಮ ಹೂವಿನ ವ್ಯಾಪಾರಸ್ಥರ ಮೇಲೂ ಬಿದ್ದಿದ್ದು, ಹೂವಿನ ಇಳುವರಿ ಕಡಿಮೆಯಾಗಿದೆ.  ಹೂವಿನ ವ್ಯಾಪಾರಿ ಸಂತೋಷ್‌ ಪೈ ಅವರು “ಸುದಿನ’ಕ್ಕೆ ಪ್ರತಿಕ್ರಿಯಿಸಿ “ಉಡುಪಿ ಶಂಕರಾಪುರ ಮಲ್ಲಿಗೆ, ಭಟ್ಕಳ ಮಲ್ಲಿಗೆ ಆಮದು ಕಡಿಮೆಯಾಗಿದೆ. ಉಳಿದ ಹೂವುಗಳು ಬಿಸಿಲಿನ ತಾಪಕ್ಕೆ ಬಾಡಿ ಹೋಗುತ್ತಿದ್ದು, ಒದ್ದೆ ಬಟ್ಟೆಯನ್ನು ಸುತ್ತವರಿದು ಹೂವು ಇಡಲಾಗುತ್ತದೆ ಎಂದಿದ್ದಾರೆ.

ಸೂರ್ಯ ಮೇಲೇಳುತ್ತಿದ್ದಂತೆ ಬಿಸಿಲಿನ ತಾಪ ಏರತೊಡಗಿದೆ. ಸುಡು ಬಿಸಿಲಿನಿಂದ ದೇಹ ತಂಪಾಗಿಸಿಕೊಳ್ಳುವುದು ಸಾಮಾನ್ಯವಾಗಿದೆ. ಬಹುತೇಕ ತಂಪು ಪಾನೀಯ ಅಂಗಡಿಯಲ್ಲಿ ಸೋಡಾ, ಶರಬತ್‌, ಮಜ್ಜಿಗೆ ಮುಂತಾದ ತಂಪು ಪಾನೀಯಗಳಿಗೆ ಜನ ಮುಗಿ ಬೀಳುತ್ತಿದ್ದಾರೆ. ಎಳನೀರು ಬೆಲೆ ಕೂಡ ಏರಿಕೆಯಾಗಿದೆ. ದೊಡ್ಡ ಗಾತ್ರದ ಎಳನೀರಿಗೆ 35 ರೂ. ಬೆಲೆ ಇದ್ದು, ಗೆಂದಾಳೆಗೆ 40 ರೂ.ಗೆ ಏರಿಕೆಯಾಗಿದೆ.

ಹನ್ನೊಂದು ವರ್ಷಗಳಲ್ಲಿ ದಾಖಲೆ
ಕರಾವಳಿ ಪ್ರದೇಶದಲ್ಲಿ ನವೆಂಬರ್‌ನಲ್ಲಿ ಈ ರೀತಿಯ ಸುಡು ಬಿಸಿಲು ಇರುವುದಿಲ್ಲ. ಆದರೆ, ಹವಾಮಾನ ವೈಪರಿತ್ಯದಿಂದಾಗಿ ಉರಿ ಬಿಸಿಲು ಹೆಚ್ಚುತ್ತಿದೆ. ಹವಾಮಾನ ಇಲಾಖೆ ಅಂಕಿ ಅಂಶದ ಪ್ರಕಾರ ನವೆಂಬರ್‌ ತಿಂಗಳಿನಲ್ಲಿ 2008ರಲ್ಲಿ 36.8 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿತ್ತು. ಇದೀಗ 11 ವರ್ಷಗಳ ಬಳಿಕ ಅಂದರೆ 2019ರ ನವೆಂಬರ್‌ 19ರಂದು 37 ಡಿ.ಸೆ. ತಲುಪಿತ್ತು.

ಮೀನು ಲಭ್ಯತೆ ಕಡಿಮೆ
ಈ ಬಾರಿಯ ಮೀನುಗಾರಿಕಾ ಋತುವಿನಲ್ಲಿ ಮೀನುಗಾರರು ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಈವರೆಗೆ ಸೈಕ್ಲೋನ್‌ ಪ್ರಭಾವ ಒಂದೆಡೆಯಾದರೆ ಇದೀಗ ಗರಿಷ್ಠ ಪ್ರಮಾಣದ ಉಷ್ಣಾಂಶ ದಾಖಲಾಗುತ್ತಿದೆ. ಇದರಿಂದ ಮೀನು ಲಭ್ಯತೆ ಕಡಿಮೆ ಇದೆ.
 - ಮೋಹನ್‌ ಬೆಂಗ್ರೆ, ಮೀನುಗಾರಿಕಾ

 ನವೀನ್‌ ಭಟ್‌ ಇಳಂತಿಲ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ