ನೀರಿನ ಬವಣೆಗೆ ಸ್ವಯಂ ಪರಿಹಾರ; ಉಳಿದ ವಲಯಕ್ಕೂ ಸ್ಫೂರ್ತಿಯಾಗಲಿ

Team Udayavani, Jun 17, 2019, 5:29 AM IST

ಮಹಾನಗರ: ನಗರದಲ್ಲಿ ಈ ಬೇಸಗೆಯಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಜಟಿಲಗೊಂಡಿದ್ದರೂ ನಗರದ ಬಹುತೇಕ ಆಸ್ಪತ್ರೆಗಳಿಗೆ ನೀರಿನ ಅಭಾವದ ಬಿಸಿ ತಟ್ಟಿರಲಿಲ್ಲ. ಏಕೆಂದರೆ, ಹೆಚ್ಚಿನ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳ ಆವರಣದಲ್ಲಿ ಮಳೆಕೊಯ್ಲು ಮತ್ತು ಜಲ ಮರುಪೂರಣ ವ್ಯವಸ್ಥೆಗಳನ್ನು ಹಲವಾರು ವರ್ಷಗಳ ಹಿಂದೆಯೇ ಅಳವಡಿಸಿಕೊಳ್ಳಲಾಗಿದೆ. ಆ ಮೂಲಕ, ಇನ್ನು ಕೂಡ ಮಳೆಕೊಯ್ಲು ಅಳವಡಿಸದ ಆಸ್ಪತ್ರೆಗಳು, ಇತರೆ ಖಾಸಗಿ-ಸರಕಾರಿ ಸಂಸ್ಥೆಗಳಿಗೆ ಸ್ಫೂರ್ತಿ ನೀಡುವ ಜತೆಗೆ ಮಳೆ ನೀರು ರಕ್ಷಣೆ ವಿಚಾರದಲ್ಲಿ ಮಾದರಿ ಎನಿಸಿಕೊಂಡಿದೆ.

ಬೇಸಗೆ ನೀರಿನ ಸಮಸ್ಯೆ ನಗರದ ಆಸ್ಪತ್ರೆಗಳ ಮೇಲೂ ತಟ್ಟಬಹುದೋ ಎಂಬ ಆತಂಕ ಸಹಜವಾಗಿಯೇ ಹಲವರಲ್ಲಿತ್ತು. ಏಕೆಂದರೆ, ಡಯಾಲಿಸಿಸ್‌ ಸಹಿತ ವಿವಿಧ ಚಿಕಿತ್ಸಾ ಸಹಿತ ಆಸ್ಪತ್ರೆಗಳಲ್ಲಿ ರೋಗಿಗಳ ಶುಶ್ರೂಷೆಗೆ ದಿನನಿತ್ಯವೂ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಗತ್ಯವಿರುತ್ತದೆ. ಆದರೆ, ಈಗ ಮಾತ್ರವಲ್ಲ, ಭವಿಷ್ಯದಲ್ಲಿಯೂ ನೀರಿನ ಕೊರತೆ ಬಗ್ಗೆ ಅಷ್ಟೊಂದು ಆತಂಕಗೊಳ್ಳುವ ಅಗತ್ಯವೇ ಇಲ್ಲ ಎನ್ನುತ್ತಾರೆ ನಗರದ ಆಸ್ಪತ್ರೆಗಳ ಪ್ರಮುಖರು. ಏಕೆಂದರೆ, ಎಲ್ಲ ಪ್ರಮುಖ ಆಸ್ಪತ್ರೆಗಳಲ್ಲಿಯೂ ಮಳೆಕೊಯ್ಲು ವ್ಯವಸ್ಥೆ ಮಾಡಲಾಗಿದ್ದು, ಸಾಕಷ್ಟು ನೀರನ್ನು ಅದರಿಂದ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ, ಮಳೆಕೊಯ್ಲು ಅಳವಡಿಸಿಕೊಂಡಿರುವ ಆಸ್ಪತ್ರೆಗಳು ಅಷ್ಟಾಗಿ ಬೇರೆ ನೀರಿನ ಮೂಲವನ್ನು ಅವಲಂಬಿಸುವ ಪರಿಸ್ಥಿತಿ ಎದುರಾಗಿಲ್ಲ ಎನ್ನುವುದು ವಾಸ್ತವ.

28 ಲಕ್ಷ ಲೀ.ಸಂಪ್‌ಗೆ ಮಳೆಕೊಯ್ಲು ನೀರು

ಕಂಕನಾಡಿಯಲ್ಲಿರುವ ಫಾದರ್‌ ಮುಲ್ಲರ್‌ ಆಸ್ಪತ್ರೆ ಆವರಣದಲ್ಲಿ 17 ಲಕ್ಷ ಮತ್ತು 11 ಲಕ್ಷ ಲೀಟರ್‌ ಸಾಮರ್ಥ್ಯದ ಸಂಪ್‌ ವ್ಯವಸ್ಥೆ ಇದ್ದು, ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಹಿಡಿದಿಟ್ಟು ಈ ಸಂಪ್‌ಗೆ ಬಿಡುವ ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆ, ಕಾಲೇಜು ಸಹಿತ ಕ್ಯಾಂಪಸ್‌ನಲ್ಲಿರುವ ಎಲ್ಲ ಕಟ್ಟಡಗಳಲ್ಲಿನ ದೈನಂದಿನ ಬಳಕೆಗೆ ಐದಾರು ವರ್ಷಗಳಿಂದ ಈ ನೀರು ಸಾಕಾಗುತ್ತದೆ. ಅಲ್ಲದೆ, ಮೂರು ಬಾವಿಗಳಿಗೂ ಮಳೆ ನೀರನ್ನು ಬಿಡುವ ವ್ಯವಸ್ಥೆ ಇದ್ದು, ಬೇಸಗೆಯಲ್ಲಿ ನೀರಿಗಾಗಿ ಪರಿತಪಿಸುವ ಪ್ರಮೇಯವೇ ಬರುವುದಿಲ್ಲ ಎನ್ನುತ್ತಾರೆ ಫಾದರ್‌ ಮುಲ್ಲರ್‌ ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ವಂ| ಅಜಿತ್‌ ಮಿನೇಜಸ್‌.

ಮಳೆ ನೀರಿನ ಬಳಕೆ

ಲೈಟ್‌ಹೌಸ್‌ ಹಿಲ್ ರಸ್ತೆಯಲ್ಲಿರುವ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ 2004ರಿಂದಲೇ ಬೋರ್‌ವೆಲ್ಗೆ ಮಳೆ ನೀರನ್ನು ಜಲಮರುಪೂರಣ ವ್ಯವಸ್ಥೆ ಮೂಲಕ ಹಾಯಿಸಲಾಗುತ್ತದೆ. ಬೇಸಗೆಯಲ್ಲಿ ಕಾಲೇಜಿನ ಅಗತ್ಯತೆಗಳಿಗೆ ಈ ನೀರು ಬಳಕೆಯಾಗುತ್ತದೆ ಎನ್ನುತ್ತಾರೆ ಕೆಎಂಸಿ ಡೀನ್‌ ಡಾ| ಎಂ. ವಿ. ಪ್ರಭು. ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿಯೂ ಮಳೆಕೊಯ್ಲು ವ್ಯವಸ್ಥೆ ಅಳವಡಿಸಲಾಗಿದೆ.

ದೊಡ್ಡ ಮಟ್ಟದಲ್ಲಿ ಅಳವಡಿಕೆ ಯೋಜನೆ

ಎ.ಜೆ. ಆಸ್ಪತ್ರೆಯ ಆವರಣದಲ್ಲಿ ಹತ್ತು ವರ್ಷಗಳಿಂದ ಸರಳವಾಗಿ ಮಳೆಕೊಯ್ಲು ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ಆಸ್ಪತ್ರೆಯ ಒಂದು ಭಾಗದ ಛಾವಣಿಯಿಂದ ಕೊಳವೆ ಬಾವಿಗೆ ನೀರು ಹರಿಸಿ ಸಂಗ್ರಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ತಜ್ಞರ ಸಲಹೆ ಪಡೆದುಕೊಂಡು ದೊಡ್ಡ ಮಟ್ಟದಲ್ಲಿ ಮಳೆನೀರು ಕೊಯ್ಲು ಅಳವಡಿಸಿಕೊಳ್ಳುವ ಯೋಜನೆ ಇದೆ ಎಂದು ಎ.ಜೆ. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಪ್ರಶಾಂತ್‌ ಮಾರ್ಲ ‘ಉದಯವಾಣಿ’ಗೆ ತಿಳಿಸಿದ್ದಾರೆ.

ಮಳೆಕೊಯ್ಲು ಇದ್ದರೂ ನೀರಿನ ಅಭಾವ

ಜಿಲ್ಲಾ ಸರಕಾರಿ ವೆನ್ಲಾಕ್‌ ಆಸ್ಪತ್ರೆ ಆವರಣದಲ್ಲಿ ಹಲವಾರು ವರ್ಷಗಳಿಂದ ಬಾವಿ, ಬೋರ್‌ವೆಲ್ಗಳಿಗೆ ಜಲ ಮರುಪೂರಣ ವ್ಯವಸ್ಥೆ ಜಾರಿಯಲ್ಲಿದೆ. ಬೇಸಗೆಯಲ್ಲಿ ಆಸ್ಪತ್ರೆಯ ಅಗತ್ಯಗಳಿಗೆ ಈ ನೀರನ್ನು ಬಳಸಲಾಗುತ್ತದೆ. ಮಳೆಕೊಯ್ಲು ಮಾಡಿದರೂ ಆಸ್ಪತ್ರೆಯಲ್ಲಿ ನೀರು ಅತಿಯಾಗಿ ಬೇಕಾಗುವುದರಿಂದ ಬೇಸಗೆಯಲ್ಲಿ ಡಯಾಲಿಸಿಸ್‌ ಸಹಿತ ಕೆಲವೊಂದು ಚಿಕಿತ್ಸೆಗಳಿಗೆ ನೀರಿನ ಸಮಸ್ಯೆ ಉಂಟಾಗಿತ್ತು. ಇದರಿಂದ ಟ್ಯಾಂಕರ್‌ ನೀರನ್ನು ಆಶ್ರಯಿಸಬೇಕಾಗಿ ಬಂದಿತ್ತು.

ಹೊಸ ಕಟ್ಟಡಕ್ಕೆ ಅಳವಡಿಕೆ

ಜಿಲ್ಲಾ ಸರಕಾರಿ ಲೇಡಿಗೋಷನ್‌ ಆಸ್ಪತ್ರೆ ಕಟ್ಟಡ ಹೊಸತಾಗಿ ನಿರ್ಮಾಣವಾಗಿರುವುದರಿಂದ ಇನ್ನೂ ಆಸ್ಪತ್ರೆ ಸುಸಜ್ಜಿತವಾಗಿ ರೂಪು ತಳೆದಿಲ್ಲ. ಎಲ್ಲ ವ್ಯವಸ್ಥೆಗಳನ್ನು ಹಂತಹಂತವಾಗಿ ಮಾಡಲಾಗುವುದು. ನೀರಿನ ಅಭಾವ ತಪ್ಪಿಸಲು ಮಳೆಕೊಯ್ಲು ವ್ಯವಸ್ಥೆಯನ್ನು ಖಂಡಿತವಾಗಿ ಅಳವಡಿಸಿಕೊಳ್ಳಲಾಗುವುದು ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ| ಸವಿತಾ ತಿಳಿಸಿದ್ದಾರೆ. ಹಳೆ ಆಸ್ಪತ್ರೆ ಆವರಣದಲ್ಲಿ ನಿರ್ಮಾಣವಾಗುತ್ತಿರುವ ತಾಯಿ-ಶಿಶು ಆಸ್ಪತ್ರೆಯಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳಲು ಆಸ್ಪತ್ರೆಯವರು ಯೋಜಿಸಿದ್ದಾರೆ.

ಕ್ಷೇಮದಲ್ಲಿ ನೀರಿಗೆ ಕ್ಷಾಮವಿಲ್ಲ

ದೇರಳಕಟ್ಟೆ ಕೆ.ಎಸ್‌.ಹೆಗ್ಡೆ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ಆವರಣದಲ್ಲಿ ಸುಮಾರು ಐದು ವರ್ಷಗಳಿಂದ ಮಳೆಕೊಯ್ಲು ಮೂಲಕ ನೀರು ಪಡೆಯಲಾಗುತ್ತಿದೆ. ಕ್ಯಾಂಪಸ್‌ ಆವರಣದ ಕಟ್ಟಡದ ಮೇಲ್ಛಾವಣಿಯಿಂದ ಬರುವ ನೀರನ್ನು 3 ಲಕ್ಷ ನೀರು ಸಂಗ್ರಹ ಸಾಮರ್ಥ್ಯವುಳ್ಳ ರಾ ವಾಟರ್‌ ಸಂಗ್ರಹಿಸುವ ಟ್ಯಾಂಕ್‌ಗೆ ಬಿಡಲಾಗುತ್ತದೆ. ಅಲ್ಲಿಂದ ಶುದ್ಧೀಕರಣ ಘಟಕಕ್ಕೆ ಕಳುಹಿಸಿ ಬಳಿಕ ಶುದ್ಧೀಕೃತ ನೀರನ್ನು ಉಪಯೋಗಿಸಲಾಗುತ್ತದೆ. ಅಲ್ಲದೆ, ಕ್ಯಾಂಪಸ್‌ನ ಆವರಣದಲ್ಲಿ ಕೆರೆ ನಿರ್ಮಾಣ ಮಾಡಲಾಗಿದ್ದು, ಕ್ಯಾಂಪಸ್‌ನಲ್ಲಿ ಬೀಳುವ ಎಲ್ಲ ನೀರನ್ನು ಈ ಕೆರೆಗೆ ಬಿಡಲಾಗಿದೆ. ಇದರಿಂದಾಗಿ ಅಂತರ್ಜಲ ಮಟ್ಟ ಏರಿಕೆಯಾಗಿದ್ದು, ಹತ್ತಿರದ ಬಾವಿ, ಕೊಳವೆ ಬಾವಿಗಳಲ್ಲಿಯೂ ನೀರು ಸಿಗುವಂತಾಗಿದೆ ಎಂದು ಸಂಸ್ಥೆಯ ಎಂಜಿನಿಯರ್‌ ಅರ್ಜುನ್‌ ಹೇಳುತ್ತಾರೆ.

ದೂರವಾಯ್ತು ನೀರಿನ ಸಮಸ್ಯೆ

ಪಡೀಲ್ನ ಶಾಂತಿನಗರ ನಿವಾಸಿಯಾದ ನೋರ್ಬರ್ಟ್‌ ರೊಡ್ರೀಗಸ್‌ ಅವರ ಮನೆಯಲ್ಲಿ ಕೆಲವು ವರ್ಷಗಳ ಹಿಂದೆ ಬೇಸಗೆ ವೇಳೆ ನೀರಿನ ಸಮಸ್ಯೆ ಉದ್ಭವಿಸುತ್ತಿತ್ತು. ಹಣ ನೀಡಿ ನೀರು ಖರೀದಿಸುತ್ತಿದ್ದರು. ಆದರೆ ಮೂರು ವರ್ಷಗಳ ಹಿಂದೆ ಮಳೆಕೊಯ್ಲು ವಿಧಾನ ಅಳವಡಿಸಿದ ಬಳಿಕ ಈವರೆಗೆ ನೀರಿನ ಸಮಸ್ಯೆ ಉಂಟಾಗಲಿಲ್ಲ.

ಮಳೆ ನೀರು ಪೋಲಾಗಬಾರದು ಎಂಬ ಉದ್ದೇಶದಿಂದ ಪೈಪ್‌ಲೈನ್‌ ಮೂಲಕ ತಮ್ಮ ಬಾವಿಗೆ ಸಂಪರ್ಕ ಕಲ್ಪಿಸಿದ್ದಾರೆ. ಟೆರೇಸ್‌ನಲ್ಲಿ ಫಿಲ್ಟರ್‌ ವ್ಯವಸ್ಥೆ ಮಾಡಲಾಗಿದ್ದು, ಬಾವಿ ಬಳಿ ಪೈಪ್‌ಗೆ ಬಟ್ಟೆಯನ್ನು ಸುತ್ತಿದ್ದಾರೆ. ಯಾವುದೇ ಕಸ, ಕಡ್ಡಿಗಳು ನೀರಿನಲ್ಲಿ ಬಂದರೆ ಬಟ್ಟೆಯಲ್ಲಿ ನಿಂತು ಶುದ್ಧ ನೀರು ಬಾವಿಗೆ ಹೋಗುತ್ತದೆ. ಪ್ರತೀ ವಾರ ಬಟ್ಟೆಯನ್ನು ಶುಚಿ ಮಾಡುತ್ತಾರೆ. ಇದೀಗ ಬೇಸಗೆ ವೇಳೆ ಇವರಿಗೆ ಹಣ ನೀಡಿ ಟ್ಯಾಂಕರ್‌ ಮುಖೇನ ನೀರು ಪಡೆದುಕೊಳ್ಳುವ ಪರಿಸ್ಥಿತಿ ಉದ್ಬವಿಸುವುದಿಲ್ಲ. ಅಲ್ಲದೆ ಅಕ್ಕ ಪಕ್ಕದ ಮನೆಯವರು ನೀರಿನ ಅಭಾವ ಇರುವಾಗ ಇವರ ಮನೆಯಿಂದಲೇ ನೀರು ತೆಗೆದುಕೊಳ್ಳುತ್ತಾರೆ. ಮಳೆನೀರು ಕೊಯ್ಲು ಅಳವಡಿಸಿದ ಕಾರಣ ಪಕ್ಕದ ಮನೆಯ ಬಾವಿಯ ನೀರು ಕೂಡ ಹೆಚ್ಚಾಗಿದೆಯಂತೆ.

ನಗರದ ಬಹುತೇಕ ಆಸ್ಪತ್ರೆಗಳಲ್ಲಿ ಮಳೆಕೊಯ್ಲು ಅಳವಡಿಸಲಾಗಿದ್ದು, ಈ ಬಗ್ಗೆ ಮಾಹಿತಿ ಮತ್ತು ಮಳೆಕೊಯ್ಲು ಸಾಧಕರ ಯಶೋಗಾಥೆ ಇಂದಿನ ಸುದಿನ ಮನೆ-ಮನೆಗೆ ಮಳೆಕೊಯ್ಲು ಅಭಿಯಾನದಲ್ಲಿ ವಿವರಿಸಲಾಗಿದೆ.

72 ಮನೆಗಳಿಗೆ ಸಮಸ್ಯೆಯಾಗಿಲ್ಲ

ನಂದಿಗುಡ್ಡ ಎಸ್‌ಎಂಆರ್‌ ಅಪಾರ್ಟ್‌ಮೆಂಟ್‌ನಲ್ಲಿ ಕಳೆದ ವರ್ಷ ಜಲಮರುಪೂರಣ ವ್ಯವಸ್ಥೆ ಮಾಡಲಾಗಿದ್ದು, ಮಳೆಗಾಲದಲ್ಲಿ ಅಪಾರ್ಟ್‌ಮೆಂಟ್‌ನ ಛಾವಣಿ ನೀರನ್ನು ಬೋರ್‌ವೆಲ್ಗೆ ಬೀಳುವಂತೆ ನೋಡಿಕೊಳ್ಳಲಾಗಿದೆ. ಇದರಿಂದ ಬೋರ್‌ವೆಲ್ನಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದ್ದು, ಬೇಸಗೆಯಲ್ಲಿ ಅಪಾರ್ಟ್‌ಮೆಂಟ್‌ನಲ್ಲಿರುವ 72 ಮನೆಗಳಿಗೂ ನೀರಿನ ಸಮಸ್ಯೆ ಉಂಟಾಗಿಲ್ಲ. ಅಪಾರ್ಟ್‌ಮೆಂಟ್ ಅಸೋಸಿಯೇಶನ್‌ ಅಧ್ಯಕ್ಷ ಅಲನ್‌ ಲೋಬೋ ಅವರ ಮುಂದಾಳತ್ವದಲ್ಲಿ ಎಂಜಿನಿಯರ್‌ ವಿಮಲ್ ಕೀರ್ತಿ ಈ ಜಲಮರುಪೂರಣ ವ್ಯವಸ್ಥೆಯನ್ನು ನಿರ್ಮಿಸಿದ್ದಾರೆ. ಅಪಾರ್ಟ್‌ ಮೆಂಟ್ ಪಕ್ಕದಲ್ಲಿ ಹತ್ತು ಅಡಿ ಆಳದ ಗುಂಡಿ ತೋಡಿ, ಕ್ರಮ ಪ್ರಕಾರ ಜಲ್ಲಿ, ಹೊಗೆ, ಇದ್ದಿಲು ಹಾಕಿ ವ್ಯವಸ್ಥಿತವಾಗಿ ಜಲಮರುಪೂರಣ ವ್ಯವಸ್ಥೆಯನ್ನು ಮಾಡಲಾಗಿದೆ.

ನೀವೂ ಮಳೆಕೊಯ್ಲು ಮಾಡಿದ್ದರೆ ನಮಗೆ ತಿಳಿಸಿ

ನಗರವಾಸಿಗಳಲ್ಲಿ ಅನೇಕರು ಈಗಾಗಲೇ ಇಂಥ ರಚನಾತ್ಮಕ ಪ್ರಯತ್ನವನ್ನು ಕೈಗೊಂಡಿರಬಹುದು. ತಮ್ಮ ಮನೆ-ಬಾವಿ, ಬೋರ್‌ವೆಲ್ ಅಥವಾ ಸೀಮಿತ ಜಾಗ ಹೊಂದಿರುವವರೂ ಕಡಿಮೆ ಖರ್ಚಿನಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿರಬಹುದು. ಆ ಮೂಲಕ, ಮಹಾನಗರ ಪಾಲಿಕೆಯ ನೀರನ್ನೇ ನಂಬಿ ಕುಳಿತುಕೊಳ್ಳುವ ಕಠಿನ ಪರಿಸ್ಥಿತಿಯಿಂದ ಹೊರಬಂದಿರಬಹುದು. ಹೀಗೆ ಶಾಶ್ವತ ಪರಿಹಾರ ಕಂಡುಕೊಂಡವರು ಉಳಿದವರಿಗೂ ಪ್ರೇರಣೆಯಾಗುವಂಥ ತಮ್ಮ ಯಶೋಗಾಥೆಗಳನ್ನು 9900567000 ನಂಬರ್‌ಗೆ ವಾಟ್ಸಪ್‌ ಮಾಡಬಹುದು. ಆಯ್ದವುಗಳನ್ನು ಪ್ರಕಟಿಸಲಾಗುವುದು.

– ಧನ್ಯಾ ಬಾಳೆಕಜೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ