ಶಿರಾಡಿ ರೈಲು ಮಾರ್ಗದಲ್ಲಿ ಆಪರೇಶನ್‌ ಹೆಬ್ಬಂಡೆ!

ಜೀವಭಯದ ನಡುವೆ ಕಾರ್ಯಾಚರಣೆ; ಕುಸಿಯುವಂತಿದೆ ಇನ್ನೊಂದು ಬಂಡೆ

Team Udayavani, Jul 22, 2019, 5:24 AM IST

ಸತತ ಮಳೆ, ಕೆಸರು ಮಣ್ಣು ಜರಿಯುವ ಪ್ರತಿಕೂಲ ಸನ್ನಿವೇಶದಲ್ಲಿ ಹಿಟಾಚಿ, ಕಾರ್ಮಿಕರನ್ನು ಬಳಸಿ ಬಂಡೆ ತೆರವು ನಡೆಸಲಾಗುತ್ತಿದೆ.

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ರಸ್ತೆ- ಸಕಲೇಶಪುರ ರೈಲು ಮಾರ್ಗದ ನಡುವಣ ಸಿರಿಬಾಗಿಲು ಪ್ರದೇಶದ ಮಣಿಬಂಡ ಬಳಿ ಹಳಿಯ ಮೇಲೆ ಉರುಳಲು ಸಿದ್ಧವಾಗಿರುವ ಬಂಡೆಗಲ್ಲು ತೆರವು ಪ್ರಯತ್ನ ಸತತವಾಗಿ ನಡೆಯುತ್ತಿದೆ.

ಪ್ರತಿಕೂಲ ಹವಾಮಾನದ ಮಧ್ಯೆ “ಆಪರೇಶನ್‌ ಹೆಬ್ಬಂಡೆ’ ರವಿವಾರ ಎರಡನೇ ದಿನಕ್ಕೆ ಕಾಲಿರಿಸಿದೆ. ಇದೇ ಸ್ಥಳದಲ್ಲಿ ಇನ್ನೊಂದು ಬಂಡೆ ಕುಸಿಯುವ ಹಂತದಲ್ಲಿದ್ದು, ಆತಂಕಕ್ಕೆ ಕಾರಣವಾಗಿದೆ.

ರೈಲು ಮಾರ್ಗದ ಕಿ.ಮೀ. 86 ಹಳಿಯ ಪಕ್ಕ ಕಾರ್ಯಾಚರಣೆ ನಡೆಯುತ್ತಿದೆ. ಮೈಸೂರು ರೈಲ್ವೇ ವಿಭಾಗದ ಪರಿಣಿತ ತಾಂತ್ರಿಕ ಅಧಿಕಾರಿಗಳು ನೇತೃತ್ವ ವಹಿಸಿ ದ್ದಾರೆ. ಜು.20ರಂದು ಬೆಳಗ್ಗೆ ಆರಂಭ ಗೊಂಡ ಕೆಲಸ ತಡರಾತ್ರಿಯ ತನಕವೂ ಮುಂದುವರಿದಿತ್ತು. ಸಕಲೇಶಪುರ ಮತ್ತು ಸುಬ್ರಹ್ಮಣ್ಯ ವಿಭಾಗದ 80 ಮಂದಿ ಕಾರ್ಮಿಕರು ಕೆಲಸ ನಿರತರಾಗಿದ್ದಾರೆ.

ತೆರವು ಕಾರ್ಯಾಚರಣೆಗೆ ಮಳೆ ಅಡ್ಡಿಯಾಗಿದೆ. ಕೆಲಸ ನಿರತ ರೈಲ್ವೇ ಇಲಾಖೆಯ ತುರ್ತು ನಿರ್ವಹಣ ಘಟಕದ ಕಾರ್ಮಿಕರಿಗೆ ಆಹಾರ, ಯಂತ್ರಗಳಿಗೆ ಇಂಧನ ಪೂರೈಸುವುದು ಸಮಸ್ಯೆಯಾಗಿದೆ. ಕಾಮಗಾರಿ ತ್ವರಿತಗತಿಯಲ್ಲಿ ಸಾಗಲು ಇನ್ನಷ್ಟು ಪರಿಣಿತ ಅಧಿಕಾರಿಗಳು ಮತ್ತು ಕಾರ್ಮಿಕರನ್ನು ನಿಯೋಜಿಸುವ ಅಗತ್ಯ ವಿದ್ದು, ಬಂಡೆ ಕುಸಿಯುವ ಪರಿಸ್ಥಿತಿಯಲ್ಲಿ ರುವ ಸ್ಥಳವು ಸುರಂಗದ ಪ್ರವೇಶ ದ್ವಾರದಲ್ಲೆ ಇರುವುದು ಇನ್ನಷ್ಟು ಅಡ್ಡಿ ಸೃಷ್ಟಿಸಿದೆ.

ಮಣ್ಣು ಸಡಿಲಗೊಂಡು ಗುಡ್ಡದಿಂದ ಬಂಡೆಗಲ್ಲುಗಳು ಹಳಿಯತ್ತ ಜಾರುತ್ತಿವೆ. ಇದರಿಂದ ಮಣ್ಣು, ಕೆಸರು ಮತ್ತು ಅಪಾಯಕಾರಿ ಬಂಡೆಗಲ್ಲು ತೆರವು ಬಹಳಷ್ಟು ತ್ರಾಸದಾಯಕವಾಗಿದೆ.

ಮತ್ತೂಂದು ಬಂಡೆ ಕುಸಿಯಲು ಸಿದ್ಧ!
ಮಣಿಬಂಡದಲ್ಲಿ ಜರಿದು ಬೀಳಲು ಸಿದ್ಧವಾದ ಬಂಡೆಯನ್ನು ಸ್ಫೋಟಿಸಿ ಪುಡಿ ಮಾಡಿ ತೆರವುಗೊಳಿಸುವ ಕಾಮಗಾರಿ ರವಿವಾರ ಸಂಜೆಗೆ ಶೇ.70ರಷ್ಟು ಪೂರ್ಣ ಗೊಂಡಿದೆ. ಇದಕ್ಕೆ ತಾಗಿಕೊಂಡಿರುವ ಇನ್ನೊಂದು ಬಂಡೆ ಕೂಡ ಕುಸಿಯುವ ಹಂತದಲ್ಲಿದೆ. ಹೀಗಾಗಿ ಕಾರ್ಯಾಚರಣೆ ಅನಿರ್ದಿಷ್ಟಾವಧಿ ತನಕ ಮುಂದುವರಿಯು ಕುರಿತು ರೈಲ್ವೇ ಮೂಲಗಳಿಂದ ಮಾಹಿತಿ ದೊರಕಿದೆ. ರವಿವಾರವೂ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿತ್ತು.

ಕಠಿನ ವಾತಾವರಣವಿದೆ
ಬಂಡೆಗಲ್ಲು ತೆರವು ಕಾರ್ಯಾಚರಣೆ ತೀವ್ರಗತಿಯಲ್ಲಿ ನಡೆಯುತ್ತಿದೆ. ಮಳೆ ಮತ್ತು ವಾತಾವರಣ ಪ್ರತಿಕೂಲವಾಗಿದ್ದು, ಕಾರ್ಯಾಚರಣೆಗೆ ಅಡ್ಡಿಯಾಗಿದೆ.
– ಕೆ.ಪಿ. ನಾಯ್ಡು
ಸೀನಿಯರ್‌ ಸೆಕ್ಷನ್‌ ಎಂಜಿನಿಯರ್‌ ರೈಲ್ವೇ ಮೈಸೂರು ವಿಭಾಗ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ