ಮಂಗಳೂರು ರಥಬೀದಿಯಲ್ಲಿ ಶೂಟೌಟ್‌; ಕಾರ್ಮಿಕನ ಕಾಲಿಗೆ ಗುಂಡಿನ ಗಾಯ

Team Udayavani, Dec 9, 2017, 7:51 AM IST

ಮಂಗಳೂರು: ನಗರದ ಕಾರ್‌ ಸ್ಟ್ರೀಟ್‌ನಲ್ಲಿರುವ ಎಂ. ಸಂಜೀವ ಶೆಟ್ಟಿ ಸಿಲ್ಕ್ಸ್ ಆ್ಯಂಡ್‌ ಸಾರೀಸ್‌ ಬಟ್ಟೆ ಮಳಿಗೆಯಲ್ಲಿ ಶುಕ್ರವಾರ ರಾತ್ರಿ ಏಕಾಏಕಿ ಗುಂಡಿನ ದಾಳಿ ನಡೆದಿದ್ದು, ಅಂಗಡಿಯ ಕಾರ್ಮಿಕರೊಬ್ಬರು ಘಟನೆಯಲ್ಲಿ ಗಾಯಗೊಂಡಿದ್ದಾರೆ. 

ಗಾಯಗೊಂಡಿರುವ ಕೆಲಸಗಾರ ಮಹಾಲಿಂಗ ನಾಯ್ಕ ಅವರನ್ನು ಖಾಸಗಿ ಆಸ್ಪತ್ರೆಗೆ  ದಾಖಲಿಸಲಾಗಿದೆ. ರಾತ್ರಿ 8 ಗಂಟೆ  ವೇಳೆಗೆ, ತಲೆಗೆ ಮಂಕಿ ಕ್ಯಾಪ್‌ ಹಾಕಿದ ಯುವಕನೋರ್ವ ಗ್ರಾಹಕರ ಸೋಗಿನಲ್ಲಿ ಅಂಗಡಿಯೊಳಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾನೆ. 

ದುಷ್ಕರ್ಮಿಯು ಅಂಗಡಿಯ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಈ ಗುಂಡಿನ ದಾಳಿ ನಡೆಸಿ ಕ್ಷಣಮಾತ್ರದಲ್ಲಿ ಅಲ್ಲಿಂದ ಪರಾರಿಯಾಗಿದ್ದಾನೆ. ಆದರೆ  ಈ ದಾಳಿ ವೇಳೆ ಗುಂಡು ಕಾರ್ಮಿಕನ ಕಾಲಿಗೆ ತಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಘಟನೆ ವಿಷಯ ತಿಳಿಯುತ್ತಿದ್ದಂತೆ ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌, ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್‌ ಸೇರಿದಂತೆ ಉನ್ನತ ಮಟ್ಟದ ಪೊಲೀಸ್‌ ಅಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್‌ ಸಿಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಸದ್ಯಕ್ಕೆ ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. 

ಕಾರಣವೇನು?
ಸಂಜೀವ ಶೆಟ್ಟ ಬಟ್ಟೆ ಅಂಗಡಿಯು ನಗರದ ಹೃದಯ ಭಾಗವಾದ ಕಾರ್‌ ಸ್ಟ್ರೀಟ್‌ನಲ್ಲಿರುವುದರಿಂದ ಸಾಮಾನ್ಯವಾಗಿ ಈ ರಸ್ತೆಯಲ್ಲಿ ಹೆಚ್ಚಿನ  ಜನಸಂದಣಿ ಹಾಗೂ ವಾಹನಗಳ ದಟ್ಟಣೆ ಇರುತ್ತದೆ. ಈ ಕಾರಣಕ್ಕೆ ಶೂಟ್‌ಔಟ್‌ ವಿಚಾರ ಗೊತ್ತಾಗುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕೂಡ ಆತಂಕಕ್ಕೆ ಒಳಗಾಗಿ ಅಂಗಡಿ ಮುಂದೆ ಜಮಾಯಿಸಿದ್ದರು. ಇದರಿಂದ ಕಾರ್‌ ಸ್ಟ್ರೀಟ್‌ ರಸ್ತೆಯಲ್ಲಿಯೂ ಕೆಲವು ಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.   ಆದರೆ ಮೂಲಗಳ ಪ್ರಕಾರ ಈ ಶೂಟ್‌ಔಟ್‌ನ ಹಿಂದೆ ಹಫ್ತಾ ವಸೂಲಿ ಮಾಡುವವರ ಕೈವಾಡವಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಹಫ್ತಾ ನೀಡದಿರುವ ಕಾರಣಕ್ಕೆ ಈ ರೀತಿ ಅಂಗಡಿ ಮಾಲಕರನ್ನು ಹೆದರಿಸುವ ಉದ್ದೇಶದಿಂದ ಈ ರೀತಿ ಅಂಗಡಿಗೆ ಬಂದು ಏಕಾಏಕಿ ಅಲ್ಲಿನ ಕೆಲಸಗಾರರ ಮೇಲೆ ಗುಂಡಿನ ದಾಳಿ ನಡೆಸಿ ಭಯಭೀತಿ ಹುಟ್ಟಿಸುವ ಕೃತ್ಯ ಎಸಗಿರುವ ಸಾಧ್ಯತೆಯಿದೆ ಎಂಬ ಸಂಶಯ ವ್ಯಕ್ತವಾಗಿದೆ. 

ಆದರೆ ಈ ಶೂಟ್‌ಔಟ್‌ ಹಳೇ ದ್ವೇಷಕ್ಕೆ ಅಥವಾ ಇನ್ನಾವುದೇ ವೈಯಕ್ತಿಕ ಕಾರಣಗಳಿಗೆ ನಡೆದಿದೆಯೇ ಎಂಬುದು ಪೊಲೀಸರ ಸಮಗ್ರ ತನಿಖೆಯಿಂದಷ್ಟೇ ಬೆಳಕಿಗೆ ಬರಬೇಕಿದೆ. ದುಷ್ಕರ್ಮಿಗಳ ಮಾಹಿತಿ ಕಲೆ ಹಾಕಲಾಗುತ್ತಿದೆ. ಅಂಗಡಿಯ ಒಳಗೆ ಮತ್ತು ಹೊರಗೆ ಹಾಗೂ ಅಕ್ಕಪಕ್ಕದಲ್ಲಿರುವ ಸಿಸಿಟಿವಿಗಳ ಫುಟೇಜ್‌ಗಳನ್ನು ಪರಿಶೀಲಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಲಾಗುವುದು ಎಂದು ಮಂಗಳೂರು ಪೊಲೀಸ್‌ ಆಯುಕ್ತ ಟಿ. ಆರ್‌. ಸುರೇಶ್‌ ಅವರು ತಿಳಿಸಿದ್ದಾರೆ.  

ಘಟನೆ ಹೇಗೆ ನಡೆಯಿತು
ದುಷ್ಕರ್ಮಿಗಳು ಅಂಗಡಿ ಮುಚ್ಚುವುದನ್ನು ಕಾಯುತ್ತಿದ್ದರು. ಹೊರಗಡೆಯ ಲೈಟ್‌ ಆಫ್‌ ಮಾಡುತ್ತಿರುವಂತೆ ಗ್ರಾಹಕನ ಸೋಗಿನಲ್ಲಿ ಬಂದ ದುಷ್ಕರ್ಮಿಗಳ ಪೈಕಿ ಓರ್ವ ಅಂಗಡಿಯೊಳಗೆ ಹೋಗಿ ಟೀಶರ್ಟ್‌ ಕೇಳಿದ. ಇನ್ನೋರ್ವ ಹೊರಗಡೆ ನಿಂತುಕೊಂಡಿದ್ದ. ಅಂಗಡಿಯವರು ಮಳಿಗೆ ಮುಚ್ಚುವ ಸಮಯ ಆಗಿದ್ದರಿಂದ ಹೊರಡುವ ತರಾತುರಿಯಲ್ಲಿದ್ದು, ನಾಳೆ ಬರುವಂತೆ ಸೂಚಿಸಿದರು. ಅಂಗಡಿ ಕೆಲಸಗಾರ ಮಹಾಲಿಂಗ ನಾಯ್ಕ ಬಾಗಿಲು ಮುಚ್ಚಲು ಸಿದ್ಧತೆ ಮಾಡುತ್ತಿದ್ದಾಗ ದುಷ್ಕರ್ಮಿ ಹಿಂಬದಿಯಿಂದ ರಿವಾಲ್ವರ್‌ ಮೂಲಕ ಗುಂಡು ಹಾರಿಸಿ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ. ಮಹಾಲಿಂಗ ನಾಯ್ಕ ಅವರು ಮೂಲತಃ ಕಾಸರಗೋಡಿನವರು. ಅಂಗಡಿಯಲ್ಲಿ ಮಾಲಕ ಸಂಜೀವ ಶೆಟ್ಟಿ ಸಹಿತ ಮೂವರು ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ