ಕುದ್ರೋಳಿ, ಮಂಗಳಾದೇವಿಯಲ್ಲಿ ನವರಾತ್ರಿ ಸಂಭ್ರಮ ಆರಂಭ

Team Udayavani, Sep 30, 2019, 5:00 AM IST

ಮಹಾನಗರ: “ಮಂಗಳೂರು ದಸರಾ’ ಎಂದೇ ಪ್ರಖ್ಯಾತಿ ಪಡೆದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಪುರಾಣ ಪ್ರಸಿದ್ಧ ಶ್ರೀ ಮಂಗಳಾದೇವಿ ದೇವಸ್ಥಾನ ಸಹಿತ ನಗರದ ವಿವಿಧ ದೇವಸ್ಥಾನಗಳಲ್ಲಿ ನವರಾತ್ರಿ ಮಹೋತ್ಸವ ಅತ್ಯಂತ ಶ್ರದ್ಧಾಭಕ್ತಿಯಿಂದ ರವಿವಾರದಿಂದ ಆರಂಭಗೊಂಡಿತು.

ವಿವಿಧೆಡೆ ಆಚರಣೆ
ಬೋಳಾರ ಶ್ರೀ ಮಾರಿಯಮ್ಮ ಮಹಿಷಾಮರ್ದಿನಿ ದೇವಸ್ಥಾನ, ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನ, ಕೊಡಿಯಾಲಬೈಲ್‌-ಕುದ್ರೋಳಿ ಶ್ರೀ ಭಗವತೀ ದೇವಸ್ಥಾನ ಸಹಿತ ನಗರದ ಪ್ರಸಿದ್ಧ ಪುಣ್ಯ ಕ್ಷೇತ್ರಗಳು, ಪ್ರಮುಖ ದೇವಿ ಕ್ಷೇತ್ರ ಗಳಲ್ಲಿ ಒಂಬತ್ತು ದಿನಗಳ ವಿಶೇಷ ಪೂಜೆ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯ ಕ್ರಮಗಳಿಗೆ ರವಿವಾರ ಚಾಲನೆ ದೊರೆತಿದೆ.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಆಚರಿಸಲ್ಪಡುವ ವೈಭವದ ಮಂಗಳೂರು ದಸರಾದ ಅಂಗವಾಗಿ ಗಣಪತಿ ಸಹಿತ ನವದುರ್ಗೆಯರು, ಶಾರದಾ ಮಾತೆಯನ್ನು ರವಿವಾರ ಬೆಳಗ್ಗೆ ಪ್ರತಿಷ್ಠಾಪಿಸಲಾಯಿತು.

ಬಣ್ಣ ಬಣ್ಣಗಳ ವಿದ್ಯುದೀಪಗಳಿಂದ ಅಲಂಕಾರ ಕ್ಷೇತ್ರದ ದರ್ಬಾರ್‌ ಮಂಟಪದಲ್ಲಿನ ಶಾರದಾ ಮಾತೆ ಪ್ರತಿಷ್ಠಾಪಿಸಿರುವ ವೇದಿಕೆ ಯನ್ನು ಅರ್ಕೆಲಿಕ್‌ ವರ್ಣಾ ಲಂಕಾರದ ಜತೆಗೆ ಬಣ್ಣ ಬಣ್ಣದ ವಿದ್ಯುದೀಪಗಳಿಂದ ಅಲಂಕರಿಸಲಾಗಿದೆ.

ಮಂಟಪವನ್ನು ವಿಶೇಷ ಅಲಂಕಾ ರದೊಂದಿಗೆ ಮೂಲ್ಕಿ ಸುವರ್ಣ ಆರ್ಟ್ಸ್ನ ಚಂದ್ರಶೇಖರ ಸುವರ್ಣ ತಂಡದವರು ಸಜ್ಜುಗೊಳಿಸಿದ್ದಾರೆ. ಶಿವಮೊಗ್ಗದ ಕುಬೇರ, ತಂಡದವರು ಶಾರದಾ ಮಾತೆಯ ಮೂರ್ತಿ ರಚಿಸಿದ್ದಾರೆ. ಅರಮನೆ ದರ್ಬಾರನ್ನು ಹೋಲುವ ರೀತಿಯಲ್ಲಿ ಪ್ರತೀವರ್ಷ ಹೊಸ ಹೊಸ ವಿನ್ಯಾಸದೊಂದಿಗೆ ಮಂಟಪವನ್ನು ಅಲಂಕಾರಗೊಳಿಸಲಾಗುತ್ತದೆ.

ಗಮನ ಸೆಳೆದ ಹುಲಿ ಕುಣಿತ
ರವಿವಾರ ನವದುರ್ಗೆಯರು ಹಾಗೂ ಶಾರದಾ ಪ್ರತಿಷ್ಠೆಯ ವೇಳೆ ನಗರದ ಹುಲಿ ವೇಷದವರ ತಂಡದಿಂದ ನಡೆದ ಕುಣಿತ ಗಮನ ಸೆಳೆಯಿತು. ಬೆಳಗ್ಗೆ 8.30ಕ್ಕೆ ಗುರುಪ್ರಾರ್ಥನೆ, ಪುಣ್ಯಾಹ ಹೋಮ, ನವಕಲಶಾಭಿಷೇಕ, 11ಕ್ಕೆ ಕಲಶ ಪ್ರತಿಷ್ಠೆ ನಡೆಯಿತು. 11.20ಕ್ಕೆ ನವದುರ್ಗೆಯರ ಹಾಗೂ ಶಾರದಾ ಪ್ರತಿಷ್ಠೆ 12.30ಕ್ಕೆ ಪುಷ್ಪಾಲಂಕಾರ ಮಹಾಪೂಜೆ, ರಾತ್ರಿ 7ರಿಂದ ಭಜನೆ, ಬಳಿಕ ಶ್ರೀ ದೇವಿ ಪುಷ್ಪಾಲಂಕಾರ ಮಹಾಪೂಜೆ ನೆರವೇರಿತು.

ಇಂದಿನ ಕಾರ್ಯಕ್ರಮ
ಬೆಳಗ್ಗೆ 10ಕ್ಕೆ ದುರ್ಗಾ ಹೋಮ, 12.30ಕ್ಕೆ ಪುಷ್ಪಾಲಂಕಾರ ಮಹಾಪೂಜೆ, ರಾತ್ರಿ 7ರಿಂದ ಭಜನೆ , 9ರಿಂದ ಶ್ರೀದೇವಿ ಪುಷ್ಪಾಲಂಕಾರ ಮಹಾಪೂಜೆ, ಉತ್ಸವ ನಡೆಯಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಶ್ರೀ ಮಂಗಳಾದೇವಿಯಲ್ಲಿ ನವರಾತ್ರಿ ಉತ್ಸವ
ಪುರಾಣ ಪ್ರಸಿದ್ಧ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ರವಿವಾರ ಆರಂಭಗೊಂಡಿತು. ಅ. 9ರ ವರೆಗೆ ಕ್ಷೇತ್ರದಲ್ಲಿ ನವರಾತ್ರಿ ಸಂಭ್ರಮವಿರಲಿದೆ.

ಬೆಳಗ್ಗೆ 9ಕ್ಕೆ ಗಣಪತಿ ಪ್ರಾರ್ಥನೆ ನಡೆದು ನವರಾತ್ರಿ ಮಹೋತ್ಸವ ಆರಂಭಗೊಂಡಿತು. ಮಂಗಳೂರು ಪೊಲೀಸ್‌ ಆಯುಕ್ತ ಡಾ| ಹರ್ಷ ಅವರು ಉತ್ಸವ ಉದ್ಘಾಟಿಸಿದರು. ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ನಿತಿನ್‌ ಕುಮಾರ್‌, ಮಾಜಿ ಕಾರ್ಪೊರೇಟರ್‌ ಪ್ರೇಮಾನಂದ ಶೆಟ್ಟಿ, ಕ್ಷೇತ್ರದ ಆಡಳಿತ ಮೊಕ್ತೇಸರ ಪಿ. ರಮಾನಾಥ ಹೆಗ್ಡೆ, ಪ್ರಮುಖರಾದ ರಾಮ ನಾೖಕ್‌, ರಘುರಾಮ ಉಪಾಧ್ಯಾಯ, ಶ್ರೀನಿವಾಸ ಐತಾಳ್‌, ಪ್ರೇಮಲತಾ ಎಸ್‌. ಕುಮಾರ್‌ ಉಪಸ್ಥಿತರಿದ್ದರು.

ಶರನ್ನವರಾತ್ರಿಯ ಪ್ರಥಮ ದಿನದ ಪಾಡ್ಯದಂದು ಶ್ರೀಮಂಗಳಾದೇವಿ ಅಮ್ಮನವರಿಗೆ “ದುರ್ಗಾ ದೇವಿ’ಯ ಅಲಂಕಾರ ಮಾಡಲಾಗಿತ್ತು. ನವರಾತ್ರಿ ಸಂದರ್ಭದಲ್ಲಿ ಉಳಿದ 9 ದಿನಗಳಲ್ಲಿ ವಿಶೇಷ ಅಲಂಕಾರವಾಗಿ ಶ್ರೀದೇವಿಗೆ ಆರ್ಯದೇವಿ, ಭಗವತಿ, ಕುಮಾರಿ, ಅಂಬಿಕೆ, ಮಹಿಷಮರ್ದಿನಿ, ಚಂಡಿಕೆ, ಸರಸ್ವತಿ, ವಾಗೀಶ್ವರಿ, ಮಂಗಳಾ ದೇವಿಯ ಅಲಂಕಾರ ವಿರುತ್ತದೆ.

ಇಂದಿನ ಕಾರ್ಯಕ್ರಮ
ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು ಸಂಜೆ 4ರಿಂದ ಭಜನೆ, ಕುಂಬಳೆ ನಾಟ್ಯವಿದ್ಯಾಲಯದವರಿಂದ ನೃತ್ಯ ಸಂಭ್ರಮ, ಬಳಿಕ ಕದ್ರಿ ನೃತ್ಯ ವಿದ್ಯಾಲಯದ ಕಲಾವಿದರಿಂದ ನೃತ್ಯ ವೈವಿಧ್ಯ ಜರಗಲಿದೆ.

ಕುಳಾಯಿ ಶ್ರೀ ಕಾಳಿಕಾಂಬಾ ದೇವಸ್ಥಾನ
ಮಹಾನಗರ: ಕುಳಾಯಿ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಪೂಜಾ ಮಹೋತ್ಸವ ರವಿವಾರದಿಂದ ಆರಂಭವಾಗಿದೆ.

ಬೆಳಗ್ಗೆ ದೇವತಾ ಪ್ರಾರ್ಥನೆ, ಪುಣ್ಯಾಹ ವಾಚನ, ಮಹಾಗಣಪತಿ ಹೋಮ, ಆ ಬಳಿಕ ಕಲಶ ಪ್ರತಿಷ್ಠೆ, ನವಕಲಾ ಹೋಮ, ನವಕಲಷಾಭಿಷೇಕ, ಮಧ್ಯಾಹ್ನ ಮಹಾಪೂಜೆ ನೆರವೇರಿತು. ರವಿವಾರದಿಂದ ಅ. 6ರ ವರೆಗೆ ರಾತ್ರಿ 7ರಿಂದ ನಿತ್ಯಭಜನೆ ನೆರವೇರಲಿದೆ ಎಂದು ಪ್ರಕಟನೆ ತಿಳಿಸಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ