ಸೋಮೇಶ್ವರ ಗ್ರಾಮ ಪಂಚಾಯತ್‌ ಪುರಸಭೆಯಾಗಿ ಮೇಲ್ದರ್ಜೆಗೆ

12 ವರ್ಷಗಳ ನಿರಂತರ ಹೋರಾಟಕ್ಕೆ ಸಂದ ಜಯ

Team Udayavani, Jul 22, 2019, 5:35 AM IST

ಸೋಮೇಶ್ವರ: ರಾಜ್ಯದ ಅತೀದೊಡ್ಡ ಪಂಚಾಯತ್‌ ಆಗಿರುವ ಮಂಗಳೂರು ತಾಲೂಕಿನ ಸೋಮೇಶ್ವರ ಗ್ರಾಮ ಪಂಚಾಯತ್‌ ಪುರಸಭೆಯಾಗಿ ಮೇಲ್ದರ್ಜೆಗೇರಿದೆ. ರಾಜ್ಯ ಸರಕಾರ ಪಂಚಾಯತ್‌ ಮೇಲ್ದರ್ಜೇಗೇರಿಸುವ ನಿಟ್ಟಿ ನಲ್ಲಿ ಕರಡು ಅಧಿಸೂಚನೆ ಹೊರಡಿಸಿದ ಒಂದು ವರ್ಷದ ಬಳಿಕ ಪುರಸಭೆಯಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದು ಮುಖ್ಯಾಧಿಕಾರಿಯನ್ನು ನೇಮಕ ಮಾಡಿ ಆದೇಶ ನೀಡಿದೆ.

12 ವರ್ಷಗಳಿಂದ ಸೋಮೇಶ್ವರ ಪಂ. ಮೇಲ್ದರ್ಜೆಗೇರಿಸಬೇಕು ಎಂದು ಹೋರಾಟ, ಚುನಾವಣೆ ಬಹಿ ಷ್ಕಾರ ಸಹಿತ ಹಲವು ರೀತಿಯಲ್ಲಿ ಜನಪ್ರತಿನಿ ಧಿಗಳು, ಮುಖಂಡರು ಮತ್ತು ಗ್ರಾಮ ಸ್ಥರು ರಾಜ್ಯ ಸರಕಾರಕ್ಕೆ ಒತ್ತಾಯಿಸಿ ಮೇಲ್ದರ್ಜೆ ಗೇರಿಸುವಂತೆ ಮನವಿ ಮಾಡಿದ್ದರು. ಜನಸಂಖ್ಯೆಯ ಆಧಾರದಲ್ಲಿ ಕಡಿಮೆಯಿದ್ದ ಕೋಟೆಕಾರು ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿದ ಬಳಿಕ ಸೋಮೇ ಶ್ವರವನ್ನು ಮೇಲ್ದರ್ಜೆಗೇರಿಸುವ ಭರವಸೆ ನೀಡಿದ್ದ ಸಚಿವ ಯು.ಟಿ. ಖಾದರ್‌ ಪುರ ಸಭೆ ಮಾಡುವ ನಿಟ್ಟಿನಲ್ಲಿ ಪ್ರಕ್ರಿಯೆಗೆ ಚಾಲನೆ ನೀಡಿದ್ದರು. ಸೋಮೇಶ್ವರ ಪುರಸಭೆಯಾಗುವ ಹಿನ್ನೆಲೆಯಲ್ಲಿ 2018ರ ಜು. 23ರಂದು ಕರ್ನಾಟಕ ವಿಶೇಷ ರಾಜ್ಯ ಪತ್ರದಲ್ಲಿ ಕರಡು ಅಧಿಸೂಚನೆಯನ್ನು ಹೊರಡಿಸಿದ್ದು, ಸಲಹೆಗಳು ಆಕ್ಷೇಪಗಳು ಇದ್ದಲ್ಲಿ ಒಂದು ತಿಂಗಳೊಳಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು. ಪಂಚಾ ಯತ್‌ ಅಧಿಸೂಚನೆಯ ಪತ್ರವನ್ನು ನೋಟಿಸ್‌ ಬೋರ್ಡ್‌ನಲ್ಲಿ ಅಳವಡಿಸಿದ್ದು ಯಾವುದೇ ಆಕ್ಷೇಪಗಳು ಬಂದಿರಲಿಲ್ಲ. ಈಗ ವರ್ಷದ ಬಳಿಕ ಅಧಿಕೃತವಾಗಿ ಪುರಸಭೆಯಾಗಿ ಮಾನ್ಯತೆಯನ್ನು ನೀಡಿದ್ದು ಮುಖ್ಯಾಧಿಕಾರಿಯನ್ನು ನೇಮಕ ಮಾಡಿದೆ.

ಸೋಮೇಶ್ವರ ಗ್ರಾ.ಪಂ. 2,063 ಎಕ್ರೆ ವಿಸ್ತೀರ್ಣ ಹೊಂದಿರುವ ಸೋಮೇಶ್ವರ ಗ್ರಾ. ಪಂ.ನಲ್ಲಿ 61 ಸದಸ್ಯರಿದ್ದು, 2011ರ ಜನಗಣತಿಯ ಪ್ರಕಾರ 24,660 ಜನಸಂಖ್ಯೆ ಹೊಂದಿದ್ದು ಪ್ರಸ್ತುತ 30 ಸಾವಿರ ಜನಸಂಖ್ಯೆಯನ್ನು ಹೊಂದಿದೆ. 5,681 ಮನೆ ಮತ್ತು ವಾಣಿಜ್ಯ ಸಂಕೀರ್ಣಗಳು ಈ ಗ್ರಾಮದಲ್ಲಿದ್ದು ಅನುದಾನದ ಕೊರತೆಯಿಂದ ಗ್ರಾಮದ ಅಭಿವೃದ್ಧಿಗೆ ಸಮಸ್ಯೆಯಾಗಿತ್ತು.

12 ವರ್ಷಗಳ ಹೋರಾಟ
ರಾಜ್ಯದ ಎರಡನೇ ಅತೀ ದೊಡ್ಡ ಪಂಚಾಯತ್‌ ಆಗಿದ್ದ ಸೋಮೇಶ್ವರ ಗ್ರಾ.ಪಂ. ಪ. ಪಂ. ಆಗಿ ಮೇಲ್ದರ್ಜೆಗೇರಿಸಬೇಕೆಂದು ಪಕ್ಷಾತೀತವಾಗಿ ಸುಮಾರು 12 ವರ್ಷಗಳ ಹಿಂದೆಯೇ ಹೋರಾಟ ಆರಂಭವಾಗಿತ್ತು. ಹಲವು ವರ್ಷಗಳಿಂದ ಬಿಜೆಪಿ ಆಡಳಿತದಲ್ಲಿದ್ದ ಈ ಗ್ರಾ.ಪಂ. ನ ಹೋರಾಟಕ್ಕೆ ಕಾಂಗ್ರೆಸ್‌ ಸಹಿತ ವಿವಿಧ ಪಕ್ಷಗಳು ಸಾಥ್‌ ನೀಡಿದ್ದವು. ಪಂ.ನ ಅಭಿವೃದ್ಧಿಗೆ ಬಿಡುಗಡೆಯಾಗುವ ಅನುದಾನ ಸಾಕಾಗುವುದಿಲ್ಲ, ವಿದ್ಯುತ್‌ ಬಿಲ್ ಕೋಟಿ ರೂ.ದಾಟುವ ಕಾರಣ ಹೆಚ್ಚುವರಿ ಅನುದಾನಕ್ಕಾಗಿ ಪ.ಪಂ. ಆಗಬೇಕು ಎಂದು ಹೋರಾಟ ನಡೆದಿದ್ದರೂ ಈಗ 12 ವರ್ಷದ ಬಳಿಕ ನೇರವಾಗಿ ಪ. ಪಂ. ಆಗದೆ ಜನಸಂಖ್ಯಾ ಆಧಾರದಲ್ಲಿ ಮೇಲ್ದರ್ಜೆಗೇರುವ ಪ್ರಕ್ರಿಯೆ ಆರಂಭವಾಗಿದೆ.

ಚುನಾವಣೆ ಬಹಿಷ್ಕರಿಸಲಾಗಿತ್ತು
ಸೋಮೇಶ್ವರವನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ 2008ರಲ್ಲಿ ಚುನಾವಣೆಯನ್ನು ಬಹಿಷ್ಕರಿಸಲಾಗಿತ್ತು. ಸರ್ವ ಪಕ್ಷಗಳು ಪಂ. ಚುನಾವಣೆಯನ್ನು ಬಹಿಷ್ಕರಿಸಿದ್ದರಿಂದ 2008ರ ಜನವರಿ 6ರಿಂದ 2010 ಜೂನ್‌ವರೆಗೆೆ ಸುಮಾರು 2 ವರ್ಷ 5 ತಿಂಗಳ ಕಾಲ ಆಡಳಿತಾಧಿಕಾರಿಯ ಕೈಯಲ್ಲಿ ಆಡಳಿತವಿತ್ತು. ಈ ಸಂದರ್ಭ ರಾಜ್ಯದಲ್ಲಿದ್ದ ಬಿಜೆಪಿ ಸರಕಾರ ಸೋಮೇಶ್ವರ ಗ್ರಾ.ಪಂ.ಗೆ ಒಂದು ಕೋಟಿ ವಿಶೇಷ ಅನುದಾನ ಘೋಷಣೆ ಮಾಡಿ ಚುನಾವಣೆ ನಡೆಸಲು ಸ್ಥಳಿಯ ರಾಜಕೀಯ ಪಕ್ಷಗಳನ್ನು ಓಲೈಸಿದ್ದು ಅದರಂತೆ 2010ರ ಜೂನ್‌ನಲ್ಲಿ ಚುನಾವಣೆ ನಡೆದು ಎಂಟು ವರ್ಷಗಳಿಂದ ಬಿಜೆಪಿ ನೇತೃತ್ವದ ಆಡಳಿತ ಅಧಿಕಾರ ನಡೆಸುತ್ತಿದ್ದು 10 ವರ್ಷಗಳ ಹಿಂದಿನ ಹೋರಾಟಕ್ಕೆ ಈಗ ಮಾನ್ಯತೆ ಲಭಿಸಿದ್ದು ಪುರಸಭೆಯಾಗಿ ಮೇಲ್ದರ್ಜೆಗೇರುವ ಕನಸು ನನಸಾಗಿದೆ.

ಹಲವು ವರ್ಷಗಳಿಂದ ಸೋಮೇಶ್ವರ ಗ್ರಾ.ಪಂ. ಬಿಜೆಪಿ ಭದ್ರಕೋಟೆಯಾಗಿತ್ತು. ಜಿ. ಪಂ. ಸದಸ್ಯರು ಮತ್ತು ಎರಡು ತಾ.ಪಂ. ಗಳಲ್ಲೂ ಬಿಜೆಪಿ ಸದಸ್ಯರಿದ್ದಾರೆ. ಈಗಿನ ಚುನಾಯಿತ ಸದಸ್ಯರ ಅಧಿಕಾರ ಅವಧಿ ಮುಂದಿನ ಚುನಾವಣೆವರೆಗೆ ಮುಂದುವರೆಯಲಿದ್ದು, ಪ್ರಸ್ತುತ ಇರುವ 61 ಸದಸ್ಯರ ಸಂಖ್ಯೆಯೂ ಕಡಿತಗೊಳ್ಳಲಿದೆ.

ಮುಖ್ಯಾಧಿಕಾರಿಯಾಗಿ ವಾಣಿ ಆಳ್ವ

ಉಳ್ಳಾಲ ನಗರಸಭೆಯಲ್ಲಿ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ವಾಣಿ ಆಳ್ವ ಅವರನ್ನು ನೂತನ ಸೋಮೇಶ್ವರ ಪುರಸಭೆಗೆ ಮುಖ್ಯಾಧಿಕಾರಿಯನ್ನಾಗಿ ಜಿಲ್ಲಾಡಳಿತ ನೇಮಿಸಿದೆ. ವಾರದೊಳಗೆ ವಾಣಿ ಆಳ್ವ ಅಧಿಕಾರ ಸ್ವೀಕರಿಸಿಲಿದ್ದು, ಈಗಿರುವ ಪಿಡಿಒ, ಕಾರ್ಯ ದರ್ಶಿ ಅಧಿಕಾರ ಹಸ್ತಾಂತರಿಸಿದ ಬಳಿಕ ಅಧಿಕೃತವಾಗಿ ಪುರಸಭೆಯ ಕಾರ್ಯ ಆರಂಭವಾಗಲಿದೆ.

ಹೊಸ ವ್ಯವಸ್ಥೆಗೆ ಬದಲಾಗುವ ಅಗತ್ಯ

ಸೋಮೇಶ್ವರ ಪುರಸಭೆಯಾಗಿ ಮೇಲ್ದರ್ಜೆಗೇರುವುದರಿಂದ ಅಭಿವೃದ್ಧಿಗೆ ಪೂರಕವಾಗಲಿದೆ. ಈ ಹಿಂದೆ ಮೇಲ್ದರ್ಜೆಗೇರಿಸಲು ಪ್ರಯತ್ನಿಸಿದ್ದೆ, ಈ ಬಾರಿ ನನ್ನದೇ ಇಲಾಖೆಯಡಿ ಬರುವುದರಿಂದ ಪ್ರಥಮ ಹಂತದಲ್ಲೇ ಪುರಸಭೆಯಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಅಧಿಸೂಚನೆ ಹೊರಡಿಸಲಗಿದೆ.ಹೊಸ ವ್ಯವಸ್ಥೆಗೆ ಬದಲಾಗುವ ಅಗತ್ಯವಿದೆ.
– ಯು.ಟಿ. ಖಾದರ್‌, ನಗರಾಭಿವೃದ್ಧಿ ಸಚಿವರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ