ಬದುಕಿನ ಹಾಳೆಗಳಲ್ಲಿ ಸ್ವಾತಂತ್ರ್ಯ ಸಂಭ್ರಮ ತುಂಬಿಕೊಳ್ಳಬೇಕಿತ್ತು…

ಇದು ಕೊಳಂಬೆಯ ಕತೆ: ಅನ್ನ ನೀಡಿದ ಮೃತ್ಯುಂಜಯ ಎಲ್ಲವನ್ನೂ ಕಸಿದುಕೊಂಡ !

Team Udayavani, Aug 16, 2019, 6:00 AM IST

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೆಲವು ಗ್ರಾಮಗಳು ಈ ಬಾರಿಯ ನೆರೆಯಲ್ಲಿ ಕೊಚ್ಚಿ ಹೋಗಿವೆ. ಆ ಗ್ರಾಮಗಳನ್ನು ಪುನರ್‌ ರೂಪಿಸುವುದು, ಸಂತ್ರಸ್ತರಿಗೆ ಬದುಕನ್ನು ಕಟ್ಟಿಕೊಡುವುದು ಎಲ್ಲರ ಹೊಣೆಗಾರಿಕೆ. ಸರಕಾರ, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ನೊಂದವರ ಬದುಕ ಕಟ್ಟಲು ಹೊರಟಿವೆ. ಬನ್ನಿ ಜತೆಗೂಡೋಣ.

ಬೆಳ್ತಂಗಡಿ: ಶಾಲೆಯ ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಸಮವಸ್ತ್ರ ತೊಟ್ಟು ಸಂಭ್ರಮಿಸಬೇಕಾದವಳು ಮೂಲೆ ಹಿಡಿದು ಅಳುತ್ತಿದ್ದಳು ಒಬ್ಬಳು. ಮುಂದಿನ ಓದಿಗೆ ಅಗತ್ಯವಿದ್ದ ದಾಖಲೆಗಳನ್ನೆಲ್ಲಾ ಕಳೆದುಕೊಂಡು ಮಂಕಾಗಿ ಕುಳಿತಿದ್ದಳು. ಅದರ ಮಧ್ಯೆ ಮನೆಯ ಒಡತಿ ಯಶೋದಾ, ಗಂಟಲವರೆಗೆ ಅಳು ತಂದುಕೊಂಡು ತಡೆದು ಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ಆದರೂ ಕಣ್ಣಾಲಿಗಳು ತೇವಗೊಂಡಿದ್ದವು !
ಸಿನಿಮಾವೊಂದರ ದೃಶ್ಯವಲ್ಲ. ಇದು ಸತ್ಯಕಥೆ. ಆ. 9 ರವರೆಗೂ ಇವರೆಲ್ಲರೂ ಸಂತುಷ್ಟರಾಗಿದ್ದರು; ಇಂದು ಸಂತ್ರಸ್ತರು.

ಇದು ಕೆಲವೇ ದಿನಗಳ ಹಿಂದೆ ನೆರೆಗೆ ತತ್ತರಿಸಿ ಹೋದ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಕೊಳಂಬೆಯ ಒಂದು ಭಾಗದಲ್ಲಿರುವ ಈ ಕುಟುಂಬಗಳೀಗ ಕತ್ತಲೆಯಲ್ಲಿವೆ. ಭರವಸೆಯ ಬೆಳಕಿಗೆ ಹಾತೊರೆಯುತ್ತಿವೆ.

“ಮೃತ್ಯುಂಜಯ ನಮ್ಮ ಪಾಲಿಗೆ ಜೀವನದಿ. ಆದರೆ ಅತಿವೃಷ್ಟಿಯ ದೆಸೆಯಿಂದ ಅಂದು ಮಧ್ಯಾಹ್ನ (ಆ. 9) 3.30ರ ಸುಮಾರಿಗೆ ಉಕ್ಕಿ ಹರಿದು ಹೋದ. ಹೋಗುವಾಗ ನಮ್ಮ ಪ್ರಾಣ ಮತ್ತು ಉಟ್ಟ ಬಟ್ಟೆಯನ್ನಷ್ಟೇ ಬಿಟ್ಟು ಹೋದ’ ಎಂದರು ಯಶೋದಾ.

ನದಿ ತೀರದಲ್ಲಿ ಸುಮಾರು 56 ಸೆಂಟ್ಸ್‌ ಜಾಗವನ್ನು ಹೊಂದಿದ್ದರು ಯಶೋದಾ ಕುಟುಂಬ. ಅಲ್ಲೀಗ ಏನೂ ಇಲ್ಲ. ಕಣ್ಣೆದುರೇ ಎಲ್ಲವೂ ಬಟಾಬಯಲಾಗಿದೆ.

“ಮನೆಮಂಭಾಗದ ಬೃಹದಾಕಾರದ ಮರ ಬಿದ್ದಾಗಲೇ ಆಪತ್ತಿನ ಸೂಚನೆ ಸಿಕ್ಕಿತ್ತು. ಮಕ್ಕಳಿಗೆ ಮನೆ ಬಿಟ್ಟು ಓಡಲು ಹೇಳಿದೆ. ವಯಸ್ಸಾದ ಮಾವನನ್ನು ಪತಿ ಹರೀಶ್‌ ಗೌಡ ಎತ್ತಿಕೊಂಡರು, ಇನ್ನೇನು ನಾನೂ ಓಡುತ್ತೇನೆ ಅನ್ನುವಷ್ಟರಲ್ಲಿ ಹಟ್ಟಿಯಲ್ಲಿದ್ದ ಹಸುಗಳ ರೋದನ ಕೇಳಿಸಿತು. ಅವುಗಳ ಹಗ್ಗ ಬಿಚ್ಚುವಷ್ಟರಲ್ಲಿ ಮೃತ್ಯಂಜಯ ನೆತ್ತಿ ಮುಟ್ಟಿದ್ದ. ಹೇಗೋ ಎತ್ತರದ ಜಾಗಕ್ಕೆ ಹೋಗಿ ಜೀವ ಉಳಿಸಿಕೊಂಡೆವು’ ಎನ್ನುವಾಗ ಯಶೋದಾ ಕೊಂಚ ಗಾಬರಿಗೊಂಡಿದ್ದರು.

ಸ್ಥಳೀಯರಾದ ಚಂದ್ರಶೇಖರ್‌, ಕೆಲವು ವರ್ಷಗಳ ಹಿಂದೆ 86 ಸೆಂಟ್ಸ್‌ ಜಾಗ ಖರೀದಿಸಿದ್ದೆ. ಮಳೆ ಇಲ್ಲದೆ ನೀರಿಗಾಗಿ ಮೊರೆ ಇಡುತ್ತಿದ್ದೆವು. ಅಲ್ಪಸ್ವಲ್ಪ ಗದ್ದೆಯಲ್ಲಿ 20 ದಿನಗಳ ಹಿಂದಷ್ಟೆ ನೇಜಿ ನೆಟ್ಟಿದ್ದೆವು.

ಶುಕ್ರವಾರ 3.40ಕ್ಕೆ ನಾನು ಪೇಟೆಯಲ್ಲಿದ್ದಾಗ ದೊಡ್ಡಪ್ಪನ ಮಗ ಕರೆ ಮಾಡಿ “ನಾವೆಲ್ಲ ಕೊಚ್ಚಿ ಹೋಗುವ ಪರಿಸ್ಥಿತಿ ಯಲ್ಲಿದ್ದೇವೆ’ ಎಂದ. ಸ್ಥಳಕ್ಕೆ ಬಂದಾಗ ಊರು ತುಂಬ ನೀರೇ ಆವರಿಸಿಕೊಂಡಿತ್ತು. ಕೊನೆಗೂ ಹೇಗೋ ಜೀವ ಉಳಿಸಿಕೊಂಡೆವು. ಮರುದಿನ ಆಲ್ಲಿಗೇ ವಾಪಸು ಬಂದಾಗ 40 ಸೆಂಟ್ಸ್‌ ಗದ್ದೆಯಲ್ಲಿ ಎತ್ತ ನೋಡಿದರೂ ಮರಳಿನ ರಾಶಿ. 36 ತೆಂಗಿನ ಗಿಡ ಬುಡ ಸಮೇತ ಮಾಯವಾಗಿತ್ತು. ಇಂಥ ಮಹಾ ಮಳೆಯನ್ನು ಈ ವರೆಗೆ ನೋಡಿಲ್ಲ; ಕೇಳಿಯೂ ಇಲ್ಲ ಎಂದರು.

ಕಡಲೇ ಬಂತೋ ಅನ್ನಿಸಿತು!
ಇದ್ದಕ್ಕಿದ್ದಂತೆ ಮನೆ ಸುತ್ತ ನೀರು ನುಗ್ಗಿದಾಗ ಸಮುದ್ರದ ಮಧ್ಯೆ ನಿಂತ ಅನುಭವವಾಗಿತ್ತು. ಸಾಕು ಪ್ರಾಣಿಗಳನ್ನು ಹಿಡಿದು ಓಡಿದೆವು. 1.45 ಸೆಂಟ್ಸ್‌ ಜಾಗವಿತ್ತು. ಮರುದಿನ ಬಂದು ನೋಡಿದಾಗ ಮನೆ ಎದುರು ಗುರುತೇ ಸಿಗದಂತೆ ನೀರು ಪಾಲಾಗಿತ್ತು ಎಂದು ತಮ್ಮ ಅಂದಿನ ಘಟನೆಯನ್ನು ವಿವರಿಸಿದ್ದಾರೆ ಕುಸುಮಾವತಿ ಕೊಳಂಬೆ.

ಸಮವಸ್ತ್ರವೂ ಇಲ್ಲ; ದಾಖಲೆಗಳೂ ಇಲ್ಲ
ಸುತ್ತಮುತ್ತ ಮನೆಯ ಮಕ್ಕಳಿಗೆ ಶಾಲೆಗೆ ಹೋಗಲು ಸಮವಸ್ತ್ರವಿಲ್ಲ. ಯಶೋದಾ ಅವರ ಮಕ್ಕಳಾದ ಯಕ್ಷಿತ್‌ ಪ್ರಥಮ ಪಿಯುಸಿ, ಯಕ್ಷಿತಾ 9ನೇ ತರಗತಿ ಶಾಲೆಗೆ ರಜೆ ಹಾಕಿ ಕುಳಿತು ಕೊಳ್ಳುವಂತಾಗಿದೆ. ಯಾವುದೇ ದಾಖಲೆಗಳಿಲ್ಲದೇ ಚಿಂತೆಯಾಗಿದೆ ಎನ್ನುತ್ತಾರೆ ತಾಯಂದಿರು.

ಶಾಸಕರು /ಸಂಘ ಸಂಸ್ಥೆಗಳು ಭೇಟಿ
ಸ್ಥಳಕ್ಕೆ ಸಂಘ -ಸಂಸ್ಥೆಗಳು ಶಾಸಕರು, ಅಧಿಕಾರಿಗಳು ಭೇಟಿ ನೀಡಿದ್ದು ಮನೆ ಕಟ್ಟಿ ಕೊಡುವ ಭರವಸೆ ನೀಡಿದ್ದಾರೆ. ಸಂಪೂರ್ಣ ಸ್ವತ್ಛತೆ ಕೆಲಸ ಹಮ್ಮಿಕೊಳ್ಳಲಾಗಿದೆ.

ಕೊಳಂಬೆಯಿಂದ ಅಂತರವರೆಗೆ ಪ್ರದೇಶದ ಹಾನಿ ವಿವರ
04 ಮನೆಗಳು ಸಂಪೂರ್ಣ ಹಾನಿ
08 ಮನೆಗಳು ಭಾಗಶಃ ಹಾನಿ
06 ಮನೆಗಳಿಗೆ ಹೂಳು ತುಂಬಿ ಹಾನಿ
30 ಎಕ್ರೆ ಪ್ರದೇಶದಲ್ಲಿ ಹೂಳು
02 ಎಕ್ರೆ ಪ್ರದೇಶ ಕೊಚ್ಚಿ ಹೋಗಿದೆ
10 ಎಕ್ರೆ ಭತ್ತದ ಗದ್ದೆ ಸಂಪೂರ್ಣ ಹಾನಿ
10 ಮನೆಮಂದಿಗೆ ಬಾಡಿಗೆ ಮನೆ ವ್ಯವಸ್ಥೆ

ಹಿರಿಯರು ನೂರು ವರ್ಷಗಳಿಂದ ಬಾಳಿ ಬದುಕಿದ್ದ ಮನೆಗಳಿವು. 1974ರಲ್ಲಿ ಒಮ್ಮೆ ಪ್ರವಾಹ ಬಂದದ್ದು ನೆನಪಿದೆ. ಆದರೆ ಈ ಮಟ್ಟಕ್ಕೆ ಇರಲಿಲ್ಲ. ನದಿ 150 ಮೀಟರ್‌ ಉದ್ದಕ್ಕೆ ನೆಲವನ್ನು ಆಕ್ರಮಿಸಿದೆ. ಮುಂದಿನ ದಿನಗಳದ್ದೇ ಯೋಚನೆ.
– ಕಮಲಾ, ಸಂತ್ರಸ್ತೆ

16 ಮನೆಗಳ ಸರ್ವೇ ಮುಗಿದಿದೆ. ಇನ್ನಷ್ಟು ಆಗಬೇಕು. 4 ಮನೆಗಳು ನಾಶವಾಗಿದೆ. 20 ಎಕ್ರೆ ಕೃಷಿ ಹಾನಿಯಾಗಿದೆ. 150 ಮೀಟರ್‌ ವ್ಯಾಪ್ತಿಯಲ್ಲಿ ನದಿ ವಿಸ್ತರಿಸಿದೆ.
– ವಿಜಯ್‌, ಗ್ರಾಮ ಕರಣಿಕ, ಚಾರ್ಮಾಡಿ

ಈ ವರೆಗೆ ಇಂಥ ಮಳೆ ಪ್ರವಾಹ ಕಂಡಿರಲಿಲ್ಲ. ನಮಗೆ ಅನ್ನ ನೀಡು ತ್ತಿದ್ದ ಗದ್ದೆಯಲ್ಲಿ ಎರಡಡಿ ಎತ್ತರಕ್ಕೆ ಮರಳು ಬಿದ್ದಿವೆ. 36 ತೆಂಗಿನ ಮರಗಳನ್ನು ಕಳೆದುಕೊಂಡಿದ್ದೇವೆ. ಮುಂದಿನ ದಿನ ಗಳಲ್ಲಿ ಹಿಂದಿನಂತೆ ಭೂಮಿಯನ್ನು ಮತ್ತೆ ಕಟ್ಟಿಕೊಡುವ ಭರವಸೆ ಸಂಘ-ಸಂಸ್ಥೆಗಳಿಂದ ಸಿಕ್ಕಿದೆ. ಅದನ್ನೇ ನಂಬಿ ಕುಳಿತಿದ್ದೇವೆ.
– ಚಂದ್ರಶೇಖರ್‌ ಕೊಳಂಬೆ, ಸಂತ್ರಸ್ತ

ನಾವು ನಿರಾಶ್ರಿತರಾಗಿದ್ದೇವೆ. ಮನೆಯಲ್ಲಿ 4 ಕ್ವಿಂಟಾಲ್‌ ಅಕ್ಕಿ ಇತ್ತು. 8 ಪವನ್‌ ಚಿನ್ನ ಸಹಿತ, 4 ಸಾವಿರ, ಹಣ, ಟಿವಿ ಸಹಿತ ಬಟ್ಟೆ ಬರೆ, ಮಕ್ಕಳ ಪುಸ್ತಕ, ಸಮವಸ್ತ್ರ ಕೊಚ್ಚಿ ಹೋಗಿದ್ದು, ಉಟ್ಟ ಬಟ್ಟೆ ಹಾಗೂ ಜೀವ ಮಾತ್ರ ಉಳಿದಿದೆ. ನಾನಿದ್ದ ಜಾಗದಲ್ಲಿ ಹೊಳೆ ಹರಿಯುತ್ತಿದೆ. ನಾವೀಗ ಮತ್ತೂರು ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದೇವೆ.
– ಯಶೋದಾ, ಸಂತ್ರಸ್ತೆ

ಕಳೆದುಕೊಂಡ ಬದುಕು ಕಟ್ಟಿಕೊಳ್ಳಲು ಹಲವರು ನೆರವಾಗುತ್ತಿದ್ದಾರೆ. ಮನೆಯಲ್ಲಿದ್ದ ಮಕ್ಕಳಿಗೆ ಶಾಲೆಗೆ ಕಳಿಸುವುದೇ ಸವಾಲು. ಆಶ್ರಯ ಕೇಂದ್ರದಲ್ಲಿ ಎಷ್ಟು ದಿನ ಅವಕಾಶ ಸಿಕ್ಕೀತು? ಎಂಬುದು ತಿಳಿದಿಲ್ಲ. ಮತ್ತೆ ನಮ್ಮ ಬದುಕು ಹಾಗಾಗುವುದೇ ಎಂಬುದು ನಮ್ಮ ಚಿಂತೆ.
-ಕುಸುಮಾವತಿ, ಸಂತ್ರಸ್ತೆ

-ಚೈತ್ರೇಶ್‌ ಇಳಂತಿಲ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ