ಶ್ರೀಮತಿ ಶೆಟ್ಟಿ ಕೊಲೆ ಆರೋಪಿಗಳ ಬಂಧನ

Team Udayavani, May 16, 2019, 3:05 AM IST

ಮಂಗಳೂರು: ನಗರದ ಮಂಗಳಾದೇವಿ ಬಳಿಯ ಅಮರ್‌ ಆಳ್ವ ರಸ್ತೆಯ ನಿವಾಸಿ ಶ್ರೀಮತಿ ಶೆಟ್ಟಿ (35) ಅವರನ್ನು ಕೊಲೆ ಮಾಡಿ, ಮೃತ ದೇಹವನ್ನು ತುಂಡರಿಸಿ, ಮೂರು ಕಡೆ ಎಸೆದಿದ್ದ ಪೈಶಾಚಿಕ ಕೃತ್ಯವನ್ನು ಮಂಗಳೂರು ಪೊಲೀಸರು ಭೇದಿಸಿದ್ದು, ಆರೋಪಿ ದಂಪತಿಯನ್ನು ಬಂಧಿಸಿದ್ದಾರೆ.

ಮೂಲತಃ ಅತ್ತಾವರ ಬಿ.ವಿ.ರಸ್ತೆಯ ಸೆಮಿನರಿ ಕಾಂಪೌಂಡ್‌ ನಿವಾಸಿಗಳಾಗಿದ್ದು, ಪ್ರಸ್ತುತ ವೆಲೆನ್ಸಿಯಾ ಸೂಟರ್‌ ಪೇಟೆಯ 9ನೇ ಅಡ್ಡರಸ್ತೆಯ ಬಾಡಿಗೆ ಮನೆಯಲ್ಲಿ ನೆಲೆಸಿರುವ ಜೋನಸ್‌ ಜೂಲಿನ್‌ ಸ್ಯಾಮ್ಸನ್‌ (36) ಮತ್ತು ಪತ್ನಿ ವಿಕ್ಟೋರಿಯಾ ಮಥಾಯಿಸ್‌ (46) ಬಂಧಿತರು.

ಕೊಲೆಗೆ ಕಾರಣವೇನು?: ನಂದಿಗುಡ್ಡೆಯಲ್ಲಿ ಫಾಸ್ಟ್‌ಫುಡ್‌ ವ್ಯಾಪಾರ ನಡೆಸುತ್ತಿದ್ದು, ಅದರಲ್ಲಿ ನಷ್ಟ ಅನುಭವಿಸಿದ್ದ ಸ್ಯಾಮ್ಸನ್‌, ಶ್ರೀಮತಿಯಿಂದ ಒಂದು ಲಕ್ಷ ರೂ.ಸಾಲ ಪಡೆದಿದ್ದು, 40 ಸಾವಿರ ರೂ.ಗಳನ್ನು ಮರಳಿಸಿದ್ದ. ಬಾಕಿ 60,000 ರೂ.ಗಳನ್ನು ಕೊಡುವಂತೆ ಕೇಳಲೆಂದು ಮೇ 11ರಂದು ಬೆಳಗ್ಗೆ ಶ್ರೀಮತಿ ಅವರು ಸ್ಯಾಮ್ಸನ್‌ ಮನೆಗೆ ಹೋಗಿದ್ದರು.

ಈ ಸಂದರ್ಭ ವಾಗ್ವಾದ ನಡೆದು, ಸ್ಯಾಮ್ಸನ್‌ ಮರದ ತುಂಡಿನಿಂದ ಶ್ರೀಮತಿಯ ತಲೆಗೆ ಹೊಡೆದ. ಆಕೆ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಇದರಿಂದ ಆತಂಕಗೊಂಡ ಸ್ಯಾಮ್ಸನ್‌ ದಂಪತಿ, ಶವವನ್ನು ದಿನಪೂರ್ತಿ ತಮ್ಮ ಮನೆಯೊಳಗೇ ಇರಿಸಿಕೊಂಡಿದ್ದರು.

ರಾತ್ರಿಯಾಗುತ್ತಿದ್ದಂತೆ ಮಾರಕಾಯುಧದಿಂದ ದೇಹ ಕತ್ತರಿಸಿ, ತನ್ನದೇ ದ್ವಿಚಕ್ರ ವಾಹನದಲ್ಲಿ ಕದ್ರಿ ಹಾಗೂ ನಂದಿಗುಡ್ಡ ಪರಿಸರದಲ್ಲಿ ಮೂರು ಕಡೆ ಸ್ಯಾಮ್ಸನ್‌ ಎಸೆದಿದ್ದ. ಬಳಿಕ, ತನ್ನ ಮನೆ ಮುಂದೆ ನಿಲ್ಲಿಸಿದ್ದ ಶ್ರೀಮತಿಯ ದ್ವಿಚಕ್ರ ವಾಹನವನ್ನು ನಾಗುರಿಯಲ್ಲಿ ಗ್ಯಾರೇಜ್‌ ಮುಂದೆ ಬಿಟ್ಟು ಬಂದಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.

ಮೇ 11ರಂದೇ ಕೊಲೆ ನಡೆದಿದ್ದರೂ, ಮೇ 14ರ ರಾತ್ರಿವರೆಗೂ ಪೊಲೀಸರಿಗೆ ಆರೋಪಿಗಳ ಸುಳಿವು ಸಿಕ್ಕಿರಲಿಲ್ಲ. ಈ ಮಧ್ಯೆ, ಅತ್ತಾವರ ಸಮೀಪ ಎಲೆಕ್ಟ್ರಿಕಲ್‌ ಉತ್ಪನ್ನಗಳ ದುರಸ್ತಿ ಅಂಗಡಿ ನಡೆಸುತ್ತಿದ್ದ ಶ್ರೀಮತಿ ಶೆಟ್ಟಿಯವರು ಮೇ 11ರಂದು ಬೆಳಗ್ಗೆ 9ರ ವೇಳೆಗೆ ಅಂಗಡಿಗೆ ತೆರಳದೆ ತನ್ನ ಸ್ಕೂಟರ್‌ನಲ್ಲಿ ಸಾಲದ ಹಣ ಕೇಳುವುದಕ್ಕಾಗಿ ಸ್ಯಾಮ್ಸನ್‌ ಮನೆಗೆ ಹೋಗಿದ್ದರು.

ಇದು ಸಿಸಿಟಿವಿ ಫ‌ೂಟೇಜ್‌ ಮೂಲಕ ಪೊಲೀಸರಿಗೆ ತಿಳಿದು ಬಂತು. ಇದೇ ವೇಳೆ, ಶ್ರೀಮತಿ ಶೆಟ್ಟಿ ಅವರ ಅಂಗಡಿ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಸ್ಯಾಮ್ಸನ್‌ಗೆ ಸಾಲ ನೀಡಿದ್ದ ವಿಚಾರ, ಈ ಬಗ್ಗೆ ಆಗಾಗ್ಗೆ ನಡೆಯುತ್ತಿದ್ದ ಜಗಳದ ವಿಷಯ ತಿಳಿದು ಬಂತು. ಇವುಗಳ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದರು.

ಮಂಗಳವಾರ ರಾತ್ರಿ ಸ್ಯಾಮ್ಸನ್‌ನ ಮನೆ ಪತ್ತೆ ಮಾಡಿ ಹೋದ ಪೊಲೀಸರು ಎಷ್ಟೇ ಬಾಗಿಲು ಬಡಿದರೂ ಬಾಗಿಲು ತೆರೆಯಲಿಲ್ಲ. ಪೊಲೀಸರು ಛಾವಣಿಯ ಹೆಂಚು ತೆಗೆದು, ಒಳನುಗ್ಗಿ ಆತನನ್ನು ಸೆರೆ ಹಿಡಿಯಬೇಕಾಯಿತು. ಪೊಲೀಸರ ಸುಳಿವರಿತ ಸ್ಯಾಮ್ಸನ್‌, ತಲೆಗೆ ಕತ್ತಿಯಿಂದ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯೊಡ್ಡಿದರೂ, ಪೊಲೀಸರು ಲೆಕ್ಕಿಸದೆ ಆತನನ್ನು ಸೆರೆ ಹಿಡಿದರು.


ಈ ವಿಭಾಗದಿಂದ ಇನ್ನಷ್ಟು

  • ಮಂಗಳೂರು: ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿದ್ದ ನಳಿನ್‌ ಕುಮಾರ್‌ ಕಟೀಲು ಅವರು ಮೂರನೇ ಬಾರಿಗೆ ಸಂಸತ್‌ ಪ್ರವೇಶಿಸುವ ಮೂಲಕ ಕರಾವಳಿ ಮಾತ್ರವಲ್ಲ ಇಡೀ ರಾಷ್ಟ್ರ...

  • ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಹಿಂದಿನ ಎರಡು ಚುನಾವಣೆಗಳಲ್ಲಿಯೂ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಬಿಜೆಪಿ ಅಭ್ಯರ್ಥಿ ನಳಿನ್‌...

  • ಮಂಗಳೂರು: ದಕ್ಷಿಣ ಕನ್ನಡ ಕ್ಷೇತ್ರದಿಂದ ನಿರಂತರ 3ನೇ ಬಾರಿಗೆ ಗೆಲುವು ಸಾಧಿಸಿರುವ ನಳಿನ್‌ ಕುಮಾರ್‌ ಕಟೀಲು ಅವರಿಗೆ ಈ ಬಾರಿಯ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ...

  • ಮಂಗಳೂರು: ದ.ಕ. ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾ ವಣೆಯಲ್ಲಿ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ನಳಿನ್‌ ಕುಮಾರ್‌ ಕಟೀಲು ಕಾಂಗ್ರೆಸ್‌ ಅಭ್ಯರ್ಥಿ, ಜಿಲ್ಲಾ ಯುವ ಕಾಂಗ್ರೆಸ್‌...

  • ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ ಗೆಲುವು ಸಾಧಿಸುವುದಕ್ಕೆ ಶತಾಯಗತಾಯ ಪ್ರಯತ್ನ ನಡೆಸಿದ್ದರೂ ಯಶಸ್ಸು ಕಾಣದಿರಲು ಕಾರಣಗಳೇನು...

ಹೊಸ ಸೇರ್ಪಡೆ