ಸಿಎಂ ನಿರ್ದೇಶನ ಕಟ್ಟುನಿಟ್ಟು ಜಾರಿ: ಜಿಲ್ಲಾಧಿಕಾರಿ
Team Udayavani, Aug 15, 2021, 12:44 AM IST
ಮಂಗಳೂರು: ಮುಖ್ಯಮಂತ್ರಿ ಯವರು ನೀಡಿದ ನಿರ್ದೇಶನಗಳನ್ನು ಕಟ್ಟು ನಿಟ್ಟಾಗಿ ಅನುಷ್ಠಾನಗೊಳಿಸುವ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹಾಗೂ ಪಾಸಿಟಿವಿಟಿಯನ್ನು ನಿಯಂತ್ರಿಸುವಂತೆ ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಶನಿವಾರ ಹಮಿ ಕೊಂಡ ವೀಡಿಯೋ ಸಂವಾದದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಕೊರೊನಾ ಸೋಂಕಿತರನ್ನು ಕೇರ್ ಸೆಂಟರ್‌ಗೆ ದಾಖಲಿಸಲಾಗುತ್ತಿದೆ. ಬಾಧಿತರು ಹೊರಗೆ ಓಡಾಡಿದಲ್ಲಿ ಎಫ್‌ಐಆರ್ ದಾಖಲಿಸಬೇಕು, ಸೋಂಕಿತೆ ಗರ್ಭಿಣಿಯಾಗಿದ್ದಲ್ಲಿ ಆಸ್ಪತ್ರೆಗೆ ದಾಖಲಿಸಬೇಕು, ಕೇರ್ ಸೆಂಟರ್‌ಗೆ ದಾಖಲಿ
ಸುವುದರಿಂದ ವಿನಾಯಿತಿ ನೀಡಬೇಕಿದ್ದಲ್ಲಿ ಅದು ತಹಶೀಲ್ದಾರ್, ತಾ.ಪಂ. ಇಒಗಳು ಹಾಗೂ ತಾಲೂಕು ಆರೋಗ್ಯಾಧಿಕಾರಿಗಳಿಗೆ ತಿಳಿದಿರಬೇಕು ಎಂದರು.
ಹೋಂ ಐಸೊಲೇಶನ್‌ನಲ್ಲಿರುವವರು ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುತ್ತಿರುವ ಬಗ್ಗೆ ಅಧಿಕಾರಿ ಗಳು ಮನೆ ಮನೆಗೆ ಭೇಟಿ ನೀಡಿ ಖಚಿತ ಪಡಿಸಿಕೊಳ್ಳಬೇಕು, ಮನೆಯ ಸುತ್ತಮುತ್ತ ಸೋಂಕಿತರು, ಸಂಪರ್ಕಿತರ ಓಡಾಟ ಕಂಡುಬಂದಲ್ಲಿ ವೀಡಿಯೋ ಮಾಡಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು, ಪಾಸಿಟಿವ್ ಪ್ರಕರಣ ಹೆಚ್ಚುತ್ತಿರುವುದರಿಂದ ತಪಾಸಣೆಯನ್ನು ಮತ್ತಷ್ಟು ಹೆಚ್ಚಿಸಬೇಕು, ದಿನಂಪ್ರತಿ 12ರಿಂದ 15 ಸಾವಿರ ಕೋವಿಡ್ ಪರೀಕ್ಷೆಗಳಾಗಬೇಕು. ರವಿವಾರ ಹಾಗೂ ಹಬ್ಬದ ದಿನಗಳಲ್ಲಿಯೂ ಇದಕ್ಕೆ ವಿನಾಯಿತಿ ಇಲ್ಲ ಎಂದು ಹೇಳಿದರು.
ಸಂಪರ್ಕಿತರ ಪತ್ತೆಗೆ ಬಿಇಒ :
ಸೋಂಕು ನಿರ್ವಹಣೆಗೆ ಸಂಬಂಧಿಸಿ ಎಲ್ಲ ಅಗತ್ಯಗಳು ಹಾಗೂ ಪರಿಕರಗಳು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರಬೇಕು, ಸೋಂಕಿತರ ಸಂಪರ್ಕಿತರ ಪತ್ತೆ ಕಾರ್ಯ ಮತ್ತಷ್ಟು ಚುರುಕಾಗಬೇಕು, ಅದಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಕೋವಿಡ್ ನಿರ್ವಹಣಾ ದೃಷ್ಟಿಯಿಂದ ತಾಲೂಕು ಆರೋಗ್ಯಾಧಿಕಾರಿಗಳಿಗೆ ಅಗತ್ಯವಿದ್ದರೆ ಅನುದಾನ ಬಿಡುಗಡೆ ಮಾಡಲಾಗು ವುದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಮೂಲಕ ಪತ್ರ ಬರೆದು ಅನುದಾನ ಪಡೆಯಬಹುದು, ಅದೇ ರೀತಿ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿ ಗಳಿಗೂ ಅಗತ್ಯವಿದ್ದಲ್ಲಿ ಹಣ ನೀಡಲಾಗು ವುದು, ವಾರಾಂತ್ಯ ಕರ್ಫ್ಯೂ ಅನುಷ್ಠಾನ ಕಟ್ಟುನಿಟ್ಟಾಗಿ ಜಾರಿಯಾಗಬೇಕು. ಪ್ರಯೋಗಾಲಯ ತಂತ್ರಜ್ಞರ ಅಗತ್ಯವಿದ್ದರೆ ನೇಮಕ
ಮಾಡಿಕೊಳ್ಳಬೇಕು, ವಾಹನಗಳ ಅಗತ್ಯ ವಿದ್ದರೆ ಕೂಡಲೇ ಪಡೆದುಕೊಳ್ಳಬೇಕು ಹಾಗೂ ಆ್ಯಂಬುಲೆನ್ಸ್‌ಗಳ ಅಗತ್ಯವಿದ್ದರೆ ಅವುಗಳನ್ನು ಕೂಡಲೇ ಬಾಡಿಗೆಗೆ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಬಾರ್, ಹೊಟೇಲ್‌ಗಳಲ್ಲಿ ಶೇ. 50ರ ಅನುಪಾತದಲ್ಲಿ ನಿರ್ವಹಿಸಬೇಕು, ಪರಿಸ್ಥಿತಿಯ ಗಂಭೀರತೆ ಅರಿತು ಅಧಿಕಾರಿಗಳು ಹಾಗೂ ಸಿಬಂದಿ ಕೆಲಸ ಮಾಡಬೇಕು ಎಂದರು.
ಮನಪಾ ಆಯುಕ್ತ ಅಕ್ಷಯ್ ಶ್ರೀಧರ್, ಎಡಿಸಿ ಪ್ರಜ್ಞಾ ಅಮ್ಮೆಂಬಳ, ಡಿಎಚ್‌ಒ ಡಾ| ಕಿಶೋರ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ನಕಲಿ ಆರ್‌ಟಿಪಿಸಿಆರ್ ವರದಿ ನೀಡಿದರೆ ಪ್ರಕರಣ: ಕಮಿಷನರ್
ಮಂಗಳೂರು: ಆರ್‌ಟಿಪಿಸಿಆರ್ ನಕಲಿ ವರದಿ ನೀಡಿರುವ ಹಿನ್ನೆಲೆಯಲ್ಲಿ ಕೊಡಗು ಪೊಲೀಸರು ಕೇರಳ ಮೂಲದ ಇಬ್ಬರನ್ನು ಬಂಧಿಸಿದ್ದು ದ.ಕ. ಜಿಲ್ಲೆಯ ಗಡಿಭಾಗದಲ್ಲಿಯೂ ಈ ಬಗ್ಗೆ ವಿಶೇಷ ನಿಗಾ ಇರಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ನಕಲಿ ವರದಿ ನೀಡಿದರೆ ಅಂಥವರ ವಿರುದ್ಧ ಐಪಿಸಿ ಹಾಗೂ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗುವುದು. ಗಡಿಯಲ್ಲಿ ಕರ್ತವ್ಯದಲ್ಲಿರುವ ಅಧಿಕಾರಿ ಗಳಿಗೂ ನಕಲಿ ಆರ್‌ಟಿಪಿಸಿಆರ್ ವರದಿ ಬಗ್ಗೆ ಎಚ್ಚರದಿಂದ ಇರುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.