ಮಳೆ ಕೊಯ್ಲು ಯಶೋಗಾಥೆ: ಉಳಿದವರಿಗೆ ಪ್ರೇರಣೆಯಾಗಲಿ

Team Udayavani, Jun 11, 2019, 5:50 AM IST

ಮಹಾನಗರ: ನಗರದಲ್ಲಿ ನೀರಿನ ಉಳಿತಾಯ ಮತ್ತು ಅಂತರ್ಜಲ ವೃದ್ಧಿಸುವ ಉದ್ದೇಶದಿಂದ “ಸುದಿನ’ವು ಹಮ್ಮಿಕೊಂಡಿರುವ ಮಳೆಕೊಯ್ಲು ಅಭಿಯಾನಕ್ಕೆ ಓದುಗರಿಂದ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗುತ್ತಿದೆ. ಮಳೆಕೊಯ್ಲು ವ್ಯವಸ್ಥೆ ಅಳವಡಿಕೆಯಿಂದ ತಮಗೆ ಆಗಿರುವ ಲಾಭ, ಮಹತ್ವದ ಬಗ್ಗೆ ಹಲವು ಓದುಗರು ಅಭಿಯಾನದ ವೇದಿಕೆಯಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

“10 ವರ್ಷಗಳಿಂದ ಪಾಲಿಕೆಯ ನೀರನ್ನೇ ಅವಲಂಬಿಸಿಲ್ಲ’
ಕದ್ರಿ ಮಲ್ಲಿಕಟ್ಟೆಯ ಲೋಬೋಲೇನ್‌ನ ವೈದ್ಯ ಡಾ| ಶಿವರಾಮ ರೈ ಅವರು 10 ವರ್ಷಗಳ ಹಿಂದೆಯೇ ಮಳೆಕೊಯ್ಲು ವ್ಯವಸ್ಥೆಯನ್ನು ತಮ್ಮ ಮನೆಯಲ್ಲಿ ಅಳವಡಿಸಿದ್ದು, ಹಾಗಾಗಿ ಅವರು ಇವತ್ತಿನವರೆಗೂ ಪಾಲಿಕೆಯ ನೀರನ್ನು ವಲಂಬಿಸಿಲ್ಲ!

“ನಮ್ಮ ಮನೆ ನಿವೇಶನಲ್ಲಿ 16 ಸೆಂಟ್ಸ್‌ ಜಾಗವಿದ್ದು, ಒಂದು ಹನಿ ಮಳೆ ನೀರು ಕೂಡ ಕಾಂಪೌಂಡ್‌ನಿಂದ ಹೊರಗೆ ಹೋಗುತ್ತಿಲ್ಲ. ಮನೆಯಂಗಳದ ಬಾವಿಯ ಸಮೀಪ 20x8x5 ಅಡಿ ಗಾತ್ರದ ಹೊಂಡ ನಿರ್ಮಾಣ ಮಾಡಲಾಗಿದ್ದು, ಎಲ್ಲ ನೀರನ್ನು ಅದಕ್ಕೆ ಬಿಡಲಾಗುತ್ತಿದೆ. ನಮ್ಮ ಬಾವಿ ಸುಮಾರು 35 ಅಡಿ ಆಳವಿದ್ದು, ಅದರಲ್ಲಿ ಈಗ ಸರಿ ಸುಮಾರು 15 ಅಡಿ ನೀರಿದೆ. ಮನೆಯ ನಿರ್ವಹಣೆಗೆ ಬೇಕಾದಷ್ಟು ನೀರು ಈ ಬಾವಿಯಲ್ಲಿ ಲಭಿಸುತ್ತದೆ ಎಂದು ಡಾ| ಶಿವರಾಮ ರೈ ತಿಳಿಸಿದ್ದಾರೆ.

ಮಳೆ ನೀರು ಕೊಯ್ಲು ಮಾಡುವುದರಿಂದ ಅಂತರ್ಜಲ ಪ್ರಮಾಣ ಹೆಚ್ಚಳ, ರಸ್ತೆಗಳಲ್ಲಿ ಕೃತಕ ನೆರೆಗೆ ತಡೆ, ನೀರಿನ ವ್ಯವಸ್ಥೆಗೆ ಸಂಬಂಧಿಸಿ ಸಂಪೂರ್ಣ ಸ್ವಾವಲಂಬನೆ ಹಾಗೂ ಹಣ ಉಳಿತಾಯ ಮಾಡಬಹುದು ಎನ್ನುತ್ತಾರೆ.

ಸಿವಿಲ್‌ ಎಂಜಿನಿಯರ್‌ ಪದವೀಧರರಾದ ನವೀನ್‌ ಕಾರ್ಡೊಜಾ ಅವರು ಪರಿಸರ ವಿಜ್ಞಾನವನ್ನು ಐಚ್ಚಿಕ ವಿಷಯವಾಗಿ ಅಭ್ಯಾಸ ಮಾಡಿದ್ದರು. ತಾವು ನಿರ್ಮಿಸಿದ ಕಟ್ಟಡಗಳಲ್ಲಿ ಮಳೆಕೊಯ್ಲು ಅಳವಡಿಸಿ ಅದರಿಂದಾಗುವ ಲಾಭ-ಅನುಕೂಲವನ್ನು ಕಣ್ಣಾರೆ ನೋಡಿದ್ದಾರೆ.

“2008ರಲ್ಲಿ ದೇರೆಬೈಲ್‌ನಲ್ಲಿ 8 ಮನೆಗಳ ವಸತಿ ಸಮುಚ್ಚಯ ನಿರ್ಮಿಸಿದ್ದು, ಅಲ್ಲಿ ಕೊರೆದ ಬೋರ್‌ವೆಲ್‌ನಲ್ಲಿ ಕೇವಲ ಮುಕ್ಕಾಲು ಇಂಚು ಮಾತ್ರ ನೀರು ಸಿಕ್ಕಿತ್ತು. ಮನೆಗಳು ಕಡಿಮೆಯಿದ್ದ ಕಾರಣ ಪಾಲಿಕೆ ನೀರು ಸಾಕಾಗುತ್ತಿತ್ತು. ಅದೇವೇಳೆ ಮಳೆಕೊಯ್ಲು ಅಳವಡಿಸಿ ಬೋರ್‌ವೆಲ್‌ ಅನ್ನು ಕೂಡ ರಿಚಾರ್ಚ್‌ ಮಾಡಲಾಗಿದೆ. ಇದೀಗ ಬೋರ್‌ವೆಲ್‌ನಲ್ಲಿಯೂ ಯಥೇತ್ಛ ನೀರಿದೆ. ನಾನು 2008ರಿಂದಲೂ ನಿರ್ಮಿಸಿದ ಎಲ್ಲ ವಸತಿ ಸಮುಚ್ಚಯಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಿದ್ದೇನೆ. ಹೀಗಾಗಿ, ಮಳೆಕೊಯ್ಲಿನಿಂದ ಆಗುವ ಅನುಕೂಲದ ಬಗ್ಗೆ ಒಬ್ಬ ಬಿಲ್ಡರ್‌ ಆಗಿ ನನ್ನ ಬಳಿಯೇ ಸಾಕಷ್ಟು ನಿದರ್ಶನಗಳಿದ್ದು, ನಗರದ ಎಲ್ಲ ಮನೆ-ಕಚೇರಿ, ವಿದ್ಯಾಸಂಸ್ಥೆಗಳಲ್ಲಿ ಇದು ಜಾರಿಗೆ ಬರಬೇಕು. ಮಂಗಳೂರಿನಲ್ಲಿ ಶೇ.70ರಷ್ಟು ಟೆರೇಸ್‌ ಮನೆಗಳಿದ್ದು, ಮಳೆಕೊಯ್ಲು ಅಳವಡಿಕೆಯಾದರೆ ಮನೆ ಬಳಕೆಗೆ ನೀರು ಲಭಿಸುವ ಜತೆಗೆ ಅಂತರ್ಜಲವೂ ವೃದ್ಧಿಯಾಗುತ್ತದೆ. ಸದ್ಯ ಮಳೆಗಾಲ ಶುರುವಾಗಿದ್ದು, ಸುದಿನವು ಸಂದಭೋìಚಿತವಾಗಿ ಈ ಅಭಿಯಾನ ಪ್ರಾರಂಭಿಸಿದ್ದು, ಪತ್ರಿಕೆ ಆಶಯದಂತೆ ಮಂಗಳೂರಿನಲ್ಲಿ ಸಾಧ್ಯವಿರುವ ಎಲ್ಲ ಜಾಗಗಳಲ್ಲಿ ಮಳೆಕೊಯ್ಲು ಅಳವಡಿಸಿಕೊಳ್ಳುವತ್ತ ಜನರನ್ನು ಉತ್ತೇಜಿಸಲು, ಮಾರ್ಗದರ್ಶನ ನೀಡಲು ಸಿದ್ಧ’ ಎನ್ನುತ್ತಾರೆ ಕ್ರೆಡೈ ಅಧ್ಯಕ್ಷ ನವೀನ್‌ ಕಾಡೋಜಾ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ