ನಗರದ ಹಾಸ್ಟೆಲ್‌,ಪಿಜಿಗಳಲ್ಲಿ ನೀರಿಗಾಗಿ ಪರದಾಟ

ನಗರದಲ್ಲಿ ಹೆಚ್ಚಿದ ಜಲಕ್ಷಾಮ

Team Udayavani, May 16, 2019, 6:00 AM IST

ಮಹಾನಗರ: ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಗರದ ವಿವಿಧ ಭಾಗಗಳಲ್ಲಿ ಕಾರ್ಯಾಚರಿಸುತ್ತಿರುವ ಪಿಜಿ, ಹಾಸ್ಟೆಲ್‌ಗ‌ಳಲ್ಲಿ ವಸತಿ ಪಡೆದು ಕೊಂಡಿರುವ ಉದ್ಯೋಗಸ್ಥರು, ವಿದ್ಯಾರ್ಥಿಗಳು ನೀರಿನ ಅಭಾವದಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ನಗರದಲ್ಲಿರುವ ವಿವಿಧ ವೃತ್ತಿಪರ ಕೋರ್ಸ್‌ ಸಹಿತ ಇನ್ನಿತರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಉದ್ಯೋಗ ನಿಮಿತ್ತ ಹೊರ ಭಾಗಗಳಿಂದ ಬಂದ ಜನರು ನಗರದ ವಿವಿಧ ಭಾಗಗಳ ಹಾಸ್ಟೆಲ್‌, ಪಿಜಿಗಳಲ್ಲಿ ವಾಸ್ತವ್ಯ ಹೂಡಿದ್ದು, ಇದೀಗ ನೀರಿನ ಸಮಸ್ಯೆಯಿಂದಾಗಿ ಅವರೆಲ್ಲ ಕಂಗಲಾಗಿದ್ದಾರೆ.

ಲಾಲ್‌ಬಾಗ್‌, ಬಂಟ್ಸ್‌ಹಾಸ್ಟೆಲ್‌, ಕೊಡಿಯಾ ಲಬೈಲ್‌ ಭಾಗದಲ್ಲಿ ಹಲವು ಖಾಸಗಿ ಪಿಜಿಗಳಿದ್ದು, ಅಲ್ಲೆಲ್ಲ ಈಗ ನೀರಿನ ಸಮಸ್ಯೆ ವಿಪರೀತವಾಗಿದೆ. ಈ ಹಿನ್ನೆಲೆಯಲ್ಲಿ ಪಿಜಿಗಳಲ್ಲಿ ನೆಲೆಸಿರುವ ಮಂದಿಗೆ ನೀರಿನ ಬಳಕೆಗೆ ಸಂಬಂಧಿಸಿದಂತೆ ಮಾಲಕರು ಕೆಲವೊಂದು ಷರತ್ತುಗಳನ್ನು ಹಾಕುತ್ತಿದ್ದಾರೆ. ನಗರದಲ್ಲಿ ರೇಷನಿಂಗ್‌ನಂತೆ ಯಾವ ದಿನ ನೀರು ಬರುವುದಿಲ್ಲವೋ ಆ ದಿನಗಳಲ್ಲಿ ಬಟ್ಟೆ ತೊಳೆಯದಂತೆ ಸೂಚನೆ ನೀಡಲಾಗಿದೆ. ಕುಡಿಯಲು, ಸ್ನಾನಕ್ಕಾಗಿ ನೀರನ್ನು ಮಿತವಾಗಿ ಬಳಸಬೇಕು; ಇಲ್ಲವಾದರೆ ಪಿಜಿ ಬದಲಾಯಿಸಿಕೊಳ್ಳಿ ಎನ್ನುವ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದ್ದಾರೆ ಎಂಬುದಾಗಿ ಲೇಡಿಸ್‌ ಪಿಜಿಯೊಂದರಲ್ಲಿ ನೆಲೆಸಿರುವ ಮಹಿಳೆ ಹೇಳುತ್ತಾರೆ.

ಒಂದೆಡೆ, ನೀರು ಬರುತ್ತಿಲ್ಲ ಎಂದು ಪಿಜಿ-ಹಾಸ್ಟೆಲ್‌ನಲ್ಲಿ ನೆಲೆಸಿರುವವರು ಚಿಂತೆಯಲ್ಲಿದ್ದರೆ, ಅತ್ತ ಅದರ ಮಾಲಕರು ಕೂಡ ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡಿ ಸುಸ್ತಾಗುತ್ತಿದ್ದಾರೆ. ಇನ್ನು ಕೆಲ ವೆಡೆ, ಟ್ಯಾಂಕರ್‌ ನೀರಿಗೂ ಬೇಡಿಕೆ ಜಾಸ್ತಿ ಯಾಗಿದ್ದು, ಅಗತ್ಯಕ್ಕೆ ತಕ್ಕಂತೆ ಲಭಿಸದ ಪರಿಸ್ಥಿತಿಯಲ್ಲಿ ಪಿಜಿ ಮಾಲಕರಿದ್ದಾರೆ.

30-40 ಮಂದಿ ವಾಸಿಸುವ ಪಿಜಿಗಳಲ್ಲಿ ದಿನದ ನೀರಿನ ಸಂಗ್ರಹ ದಿನಕ್ಕಷ್ಟೇ ಸಾಕಾಗುವುದರಿಂದ, ಸ್ಥಗಿತಗೊಂಡ ದಿನಗಳಲ್ಲಿ ಅಲ್ಲಿ ಸ್ನಾನಕ್ಕೂ ಪರದಾಡುವಂತಾಗಿದೆ.

ಶೈಕ್ಷಣಿಕ ಚಟುವಟಿಕೆಗಳಿಗೆ ಬ್ರೇಕ್‌
ಎಪ್ರಿಲ್‌, ಮೇ ಶಾಲೆಯ ರಜಾವಾಧಿ ಆಗಿರುವುದರಿಂದ ನಗರದ ಬಹುತೇಕ ಖಾಸಗಿ ಶಾಲಾ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿತ್ತು.

ಸ್ಪೆಷಲ್‌ ಕೋರ್ಸ್‌, ಸ್ಪೆಷಲ್‌ ಕ್ಲಾಸ್‌, ಕ್ಯಾಂಪ್‌ ಸಹಿತ ಇನ್ನಿತರ ಚಟುವಟಿಕೆಗಳನ್ನು ಶಾಲಾ ಆಡಳಿತ ಮಂಡಳಿ ಆಯೋಜಿಸುತ್ತಿತ್ತು. ಆದರೆ ಈ ಬಾರಿ ನೀರಿನ ಅಭಾವ ಮನಗಂಡು ಬಹು ತೇಕ ಶಾಲಾ ಕಾಲೇಜುಗಳಲ್ಲಿ ಬೇಸಗೆ ರಜೆಯಲ್ಲಿ ಯಾವುದೇ ಶೈಕ್ಷಣಿಕ ಚಟುವಟಿಕೆಗಳನ್ನು ಆಯೋಜಿಸಲಾಗಿಲ್ಲ.

ಹೊಟೇಲ್‌ಗ‌ೂ ಸಮಸ್ಯೆ
ಜಲಕ್ಷಾಮ ನಗರದ ವ್ಯಾಪಾರ ದ ಮೇಲೂ ಪರಿಣಾಮ ಬೀರಿದೆ. ಕೈಗಾರಿಕೆಗಳು, ಹೊಟೇಲ್‌ಗ‌ಳೂ ನೀರಿನ ಭವಣೆ ಎದುರಿಸುತ್ತಿದೆ. ನಗರದಲ್ಲಿರುವ ಸುಮಾರು 500ರಷ್ಟು ಹೊಟೇಲ್‌ಗ‌ಳಲ್ಲಿ ಕೆಲವು ಬೋರ್‌ವೆಲ್‌, ಬಾವಿ ನೀರನ್ನು ಆಶ್ರಯಿಸಿದ್ದರೆ ಕೆಲವು ಚಿಕ್ಕ ಹೊಟೇಲ್‌ಗ‌ಳು ಪಾಲಿಕೆ ನೀರಿಗಾಗಿ ಕಾಯುವ ಸ್ಥಿತಿ ಎದುರಾಗಿದೆ.

 ಪಿಜಿ ನಿಭಾಯಿಸುವುದು ಕಷ್ಟವಾಗಿದೆ
ನಾಲ್ಕೈದು ಜನ ಮನೆಯಲ್ಲಿ ಇದ್ದರೆ ನೀರನ್ನು ಹೊಂದಿಸಿಕೊಳ್ಳಬಹುದು. ಆದರೆ 25 ಮಂದಿ ಇರುವ ಪಿಜಿಯನ್ನು ನೀರಿಲ್ಲದೆ ನಿಭಾಯಿಸುವುದು ಬಹಳ ಕಷ್ಟ. ದುಬಾರಿ ಬೆಲೆ ನೀಡಿ ಟ್ಯಾಂಕರ್‌ ನೀರು ಎಷ್ಟು ತರಿಸಬಹುದು. ನೀರಿನ ಅಭಾವ ತುಂಬಾ ಕಾಡುತ್ತಿದೆ.
 - ಸುಚೇತಾ,
ಬಂಟ್ಸ್‌ಹಾಸ್ಟೆಲ್‌ ಪಿಜಿ ಮಾಲಕರು


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ