ಕಾರ್ನಾಡಿನ ಮೊದಲ ಶಾಲೆಗೆ ಈಗ 177ರ ಹರೆಯ

ಬಾಸೆಲ್‌ ಮಿಶನ್‌ ಸಂಸ್ಥೆಯಿಂದ ಶಾಲೆ ಆರಂಭ

Team Udayavani, Nov 9, 2019, 5:00 AM IST

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

1842 ಶಾಲೆ ಆರಂಭ
ಆರಂಭದಲ್ಲಿ 18 ವಿದ್ಯಾರ್ಥಿಗಳಿಗೆ ಶಿಕ್ಷಣ

ಮೂಲ್ಕಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಶೈಕ್ಷಣಿಕ ಮತ್ತು ಆರೋಗ್ಯ ವಿಚಾರಗಳ ಕಾಂತ್ರಿಯಲ್ಲಿ ಮುಂಚೂಣಿಯಲ್ಲಿದ್ದ ಬಾಸೆಲ್‌ ಮಿಶನ್‌ ಸಂಸ್ಥೆಯ ಮುಖಂಡರಲ್ಲಿ ಒಬ್ಬರಾದ ರೆ| ಜೆ.ಜೆ.ಅಮನ್ನಾ ಅವರು 1842ರಲ್ಲಿ ಕಾರ್ನಾಡಿನಲ್ಲಿ ಮೊತ್ತ ಮೊದಲು ಯು.ಬಿ.ಎಂ.ಸಿ. ಹಿರಿಯ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಿದರು. 1842ರಿಂದ 1865ರ ತನಕ ನಡೆದ ಈ ಶಾಲೆಯಲ್ಲಿ ಆರಂಭದಲ್ಲಿ 18 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು 1865ರಲ್ಲಿ ಶಾಲೆಯನ್ನು ಮೂಲ್ಕಿ ಮಿಷನ್‌ ಕಾಂಪೌಂಡ್‌ನ‌ಲ್ಲಿ ಇದ್ದ ಬಾಲಿಕಾಶ್ರಮದ ಶಾಲೆಯ ಜತೆಗೆ ವಿಲೀನಗೊಳಿಸಲಾಯಿತು.

1875ರಲ್ಲಿ ಶಾಲೆ ಪುನರಾರಂಭ
ಈ ಶಾಲೆ ಇಲ್ಲದೆ ಹತ್ತು ವರ್ಷ ಪರಿಸರದ ಮಕ್ಕಳಿಗೆ ಉಂಟಾದ ತೊಡಕನ್ನು ಗಮನಿಸಿದ ಮೂಲ್ಕಿಯ ಪ್ರಸಿದ್ಧ ಚೌಟರ ಮನೆಯ ತಿಮ್ಮಪ್ಪ ಶೆಟ್ಟಿಯವರು ಜನರ ಆಪೇಕ್ಷೆಯಂತೆ 1975ರಲ್ಲಿ ಮತ್ತೆ ಅದೇ ಸ್ಥಳದಲ್ಲಿ ಒಂದು ಹುಲ್ಲು ಚಾವಣಿಯ ಕಟ್ಟಡ ನಿರ್ಮಿಸಿ 20 ಮಕ್ಕಳಿಗೆ ಅವಕಾಶ ಕಲ್ಪಿಸಿದರು. 200 ಚದರ ಅಡಿಯ ವಿಸ್ತೀರ್ಣದ ಈ ಶಾಲೆಯ ಮೊದಲ ಅಧ್ಯಾಪಕರು ಕೂಡಾ ಅವರೇ ಆಗಿದ್ದರು.

ಮತ್ತೆ ಈ ಶಾಲೆಯನ್ನು 1895ರಲ್ಲಿ ಈ ಶಾಲೆಗೆ ಸರಕಾರದ ಮಂಜೂರಾತಿಯು ದೊರೆತು ತಿಮ್ಮಪ್ಪ ಶೆಟ್ಟಿಯವರು ಈ ಶಾಲೆಯನ್ನು ಮತ್ತೆ ಕೆಲವು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿ ವಿಸ್ತರಿಸಿದರು. ಮಾತ್ರವಲ್ಲ ನಿವೃತ್ತಿಯ ತನಕ ಅವರೇ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಾಸೆಲ್‌ ಮಿಶನ್‌ ಸಂಸ್ಥೆಯ ಸಹಕಾರದಿಂದ ಶಾಲೆಯನ್ನು ಬಾಸೆಲ್‌ ಜರ್ಮನ್‌ ಮಿಶನ್‌ ಕಿರಿಯ ಪ್ರಾಥಮಿಕ ಶಾಲೆಯಾಗಿ ಹೆಸರಿಸಲಾಯಿತು.

1945ರಲ್ಲಿ 6ನೇ ತರಗತಿ 1946ರಲ್ಲಿ 7ನೇ ತರಗತಿ ಆರಂಭವಾಗಿ ಈ ಶಾಲೆಯು ಹಿರಿಯ ಪ್ರಾಥಮಿಕ ಶಾಲೆಯಾಗಿ ಪರಿವರ್ತನೆಯಾಯಿತು.
ಈ ಎಲ್ಲ ಬೆಳವಣಿಗೆಯಲ್ಲಿ ಮೂಲ್ಕಿಯ ಹಿರಿಯ ಸಮಾಜ ಸೇವಾಕರ್ತ ಜಿಲ್ಲಾ ಬೋರ್ಡ್‌ ಸದಸ್ಯ ಮೂಲ್ಕಿ ರಾಮಕೃಷ್ಣ ಪೂಂಜಾ ಮತ್ತು ಬಾಲಿಕಾಶ್ರಮದ ಸಿಸ್ಟರ್‌ ಹನ್ನಅಶಿಮನ್‌ ಅವರ ಸಹಾಯ ಹಸ್ತವೂ ಇದೆ.

ಸೌಲಭ್ಯ
ಈ ಶಾಲೆಯಲ್ಲಿ ಆಟದ ಮೈದಾನ, ಗ್ರಂಥಾಲಯ, ಶೌಚಾಲಯ ಮಾತ್ರವಲ್ಲ ಉತ್ತಮ ಬಸ್‌ ಸೌಕರ್ಯದಿಂದ ಹಿಡಿದು ಅಗತ್ಯ ಇರುವ ಎಲ್ಲ ಸೌಲಭ್ಯಗಳನ್ನು ಶಾಲಾ ಆಡಳಿತ ಮಂಡಳಿ ಮತ್ತು ಜನರು ಒಟ್ಟಾಗಿ ಪೂರೈಸಿದ್ದಾರೆ. ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳನ್ನು ಹೊಂದಿದ್ದ ಈ ಶಾಲೆಯ ಕನ್ನಡ ಮಾಧ್ಯಮ ದಲ್ಲಿ 42 ವಿದ್ಯಾರ್ಥಿಗಳನ್ನು ಹೊಂದಿದೆ. ಇಲ್ಲಿ ಆಡಳಿತ ಮಂಡಳಿಯು ಸಿ.ಎಸ್‌.ಐ. ಆಂಗ್ಲಮಾಧ್ಯಮ ಶಾಲೆಯನ್ನು ಆರಂಭಿಸಿದೆ. ಇಲ್ಲಿ ಸುಮಾರು 500ಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ಇಲ್ಲಿಯ ಹಳೆ ವಿದ್ಯಾರ್ಥಿಗಳಾದ ಸೆಂಟ್ರಲ್‌ ಯುನಿವರ್ಸಿಟಿಯ ವೈಸ್‌ ಚಾನ್ಸೆಲರ್‌ ಪ್ರೊ| ಎನ್‌.ಆರ್‌ ಶೆಟ್ಟಿ , ಡ್ರಗ್‌ ಕಂಟ್ರೋಲರ್‌ ಆಫ್ ಇಂಡಿಯಾ ಆಗಿರುವ ಪ್ರೇಮಾನಂದ ಶೆಟ್ಟಿ , ಉದ್ಯಮಿ ಅರವಿಂದ ಪೂಜಾರಿ ಸಹಿತ ಹಲವಾರು ಮಂದಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ.

ಮರುನಾಮಕರಣ
1952ರಲ್ಲಿ ಈ ಶಾಲೆಯು ಯು.ಬಿ.ಎಂ.ಸಿ. ಶಾಲೆಯಾಗಿ ಮರುನಾಮಕರಣಗೊಂಡು ಅಭಿವೃದ್ದಿಯ ಪಥದಲ್ಲಿ ಮುಂದುವರಿಯಿತು. 1975ರಲ್ಲಿ ಶಾಲೆಯು ವಜ್ರ ಮಹೋತ್ಸವ ಆಚರಿಸಿ ಹೊಸ ತರಗತಿಗಳ ಕಟ್ಟಡವನ್ನು ಹೊಂದಿ ಮೂಲ್ಕಿ ಪರಿಸರದ ಸಾವಿರಾರು ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳ ಶಿಕ್ಷಣಕ್ಕೆ ಪ್ರಮುಖ ತಾಣವಾಯಿತು.

ಈ ಶಾಲೆಯ ವಾತಾವರಣ ಬಾಲ್ಯದ ನೆನಪುಗಳನ್ನು ಈಗಲೂ ಹಚ್ಚ ಹಸುರಾಗಿರಿಸಿದೆ ಮಾತ್ರವಲ್ಲ.ಇಲ್ಲಿಯ ಶಿಕ್ಷಣ ಕ್ರಮದ ಗುಣ ಮಟ್ಟ ಮತ್ತು ಶಿಕ್ಷಕರ ಶ್ರಮ ನನ್ನನ್ನು ಈ ವರೆಗೆ ಬೆಳೆಸಿದೆ.
-ಡಾ| ಹಂಸರಾಜ ಶೆಟ್ಟಿ ಜಿ.ಎಂ., ಹಳೆ ವಿದ್ಯಾರ್ಥಿ,
ಮುಖ್ಯಸ್ಥರು ವೇಲ್ಸ್‌ ಯುನಿವರ್ಸಿಟಿ ಲಂಡನ್‌

ಇತಿಹಾಸ ಇರುವ ಶಾಲೆಯಲ್ಲಿ ಕಲಿತ ವಿಧ್ಯಾರ್ಥಿಗಳು ಶಾಲೆಗೆ ಬೇಟಿಯಿತ್ತು ತಮ್ಮ ವಿದ್ಯಾರ್ಥಿ ಬದುಕನ್ನು ನೆನಪಿಸಿಕೊಂಡು ಹೆಮ್ಮೆ ಪಡುತ್ತಾರೆ.ಇಲ್ಲಿಯ ಆಡಳಿತ ಮಂಡಳಿ ಮತ್ತು ಹೆತ್ತವರು ಶಿಕ್ಷಣ ವ್ಯವಸ್ಥೆಯಲ್ಲಿ ಸಂಪೂರ್ಣವಾಗಿ ಸಹಕರಿಸುವ ಮೂಲಕ ಮುಖ್ಯ ಶಿಕ್ಷಕಿಯಾಗಿ ದುಡಿಯಲು ಉತ್ಸಾಹ ತುಂಬುತ್ತದೆ.
-ಪ್ರೀತಿ ಸುನೀತಾ,
ಮುಖ್ಯ ಶಿಕ್ಷಕಿ ಯು.ಬಿ.ಎಂ.ಸಿ. ಕನ್ನಡ ಮಾಧ್ಯಮ ಶಾಲೆ ಕಾರ್ನಾಡು ಮೂಲ್ಕಿ

- ಸರ್ವೋತ್ತಮ ಅಂಚನ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ