ಉಳ್ಳಾಲ ಸೇತುವೆ ಬಳಿ ಹೆದ್ದಾರಿಯೇ ಈಗ “ಡಂಪಿಂಗ್‌ ಯಾರ್ಡ್‌’

ಪ್ರಕರಣ ದಾಖಲಿಸಿದರೂ ಸಮಸ್ಯೆ ಪರಿಹಾರವಾಗಿಲ್ಲ!

Team Udayavani, Nov 25, 2019, 5:48 AM IST

ಮಹಾನಗರ: ರಾಷ್ಟ್ರೀಯ ಹೆದ್ದಾರಿ 66ರ ಉಳ್ಳಾಲ ಸೇತುವೆಯ ದಕ್ಷಿಣ ತುದಿಯಲ್ಲಿ ಹೆದ್ದಾರಿ ಬದಿ ತ್ಯಾಜ್ಯ ಎಸೆಯಲಾಗುತ್ತಿದ್ದು, ಅನಧಿಕೃತ ಡಂಪಿಂಗ್‌ ಯಾರ್ಡ್‌ ಆಗಿ ಪರಿವರ್ತನೆಯಾಗುತ್ತಿದೆ.

ಕೇರಳ ಭಾಗದಿಂದ ಮಂಗಳೂರು ಕಡೆಗೆ ಬರುವ ಪ್ರಯಾಣಿಕರನ್ನು ಸೇತುವೆ ಪ್ರವೇಶಿಸುತ್ತಿದ್ದಂತೆ ಕೊಳೆತ ಮೀನು, ಮಾಂಸ, ಇತರ ತ್ಯಾಜ್ಯದ ವಾಸನೆ ಸ್ವಾಗತಿಸುತ್ತದೆ. ಮಂಗಳೂರಿನಿಂದ ತೊಕ್ಕೊಟು, ಉಳ್ಳಾಲ, ಕೊಣಾಜೆ, ಕಾಸರಗೋಡು ಕಡೆಗೆ ಪ್ರಯಾಣಿಸುವ ಜನರಿಗೆ ಉಳ್ಳಾಲ ಸೇತುವೆಯ ತುದಿ ತಲಪುತ್ತಿದ್ದಂತೆ ಈ ದುರ್ಘ‌ಂಧದ ಅನುಭವವಾಗುತ್ತದೆ.

ತೊಕ್ಕೊಟು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಉಳ್ಳಾಲ ಸೇತುವೆಗೆ ಪ್ರವೇಶಿಸುವಲ್ಲಿ ರಸ್ತೆಯ ಎಡ ಬದಿ ಮರ, ಗಿಡ, ಪೊದೆಗಳಿದ್ದು, ಇಲ್ಲಿ ಕೆಲವು ವರ್ಷಗಳಿಂದ ಕಸ- ಕಡ್ಡಿ, ತ್ಯಾಜ್ಯ ವಸ್ತುಗಳನ್ನು ಎಸೆಯುತ್ತಿದ್ದು, ಸುಮಾರು ಒಂದು ತಿಂಗಳಿನಿಂದ ಈಚೆಗೆ ಅದರ ಪ್ರಮಾಣ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಮಂಗಳೂರು ಕಡೆಗೆ ಕಾರು, ಲಾರಿ, ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವವರು ಪ್ಲಾಸ್ಟಿಕ್‌ ಲಕೋಟೆಯಲ್ಲಿ ಕಸ, ತ್ಯಾಜ್ಯ ತುಂಬಿಸಿ ಇಲ್ಲಿ ಎಸೆಯುತ್ತಾರೆ. ಸತ್ತ ಪ್ರಾಣಿಗಳನ್ನು ಇಲ್ಲಿ ತಂದು ಹಾಕುತ್ತಾರೆ. ರಾತ್ರಿ ವೇಳೆ ಮೀನಿನ ಲಾರಿಗಳವರು ಮಲಿನ ನೀರನ್ನು ಇಲ್ಲಿ ಸುರಿಯುತ್ತಾರೆ. ಕೆಲವರು (ಸ್ಥಳೀಯರಲ್ಲ) ಕೋಳಿ ಮತ್ತು ಇತರ ಮಾಂಸದ ತ್ಯಾಜ್ಯಗಳನ್ನು ಇಲ್ಲಿ ತಂದು ಎಸೆಯುತ್ತಾರೆ. ಇದೆಲ್ಲವೂ ಕೊಳೆತು ಈ ಪ್ರದೇಶದಲ್ಲಿ ವಾಸನೆ ಸೃಷ್ಟಿಯಾಗಿದೆ.

ತಮ್ಮ ಮನೆ, ವ್ಯಾಪಾರ ಮಳಿಗೆಯಲ್ಲಿ ಉತ್ಪನ್ನವಾಗುವ ತಾಜ್ಯವನ್ನು ಸಾರ್ವಜನಿಕ ಸ್ಥಳದಲ್ಲಿ ಸುರಿದು ಪರಿಸರ ಮಾಲಿನ್ಯ ಉಂಟು ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬಗ್ಗೆ ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳದಿರುವ ಬಗ್ಗೆ ಅಸಮಾಧಾನದ ಮಾತುಗಳು ಕೇಳಿ ಬರುತ್ತಿವೆ.

ಮನವಿ ಮಾಡಿದರೂ ಪ್ರಯೋಜನವಾಗಿಲ್ಲ
ಈ ಸಮಸ್ಯೆಯ ಬಗ್ಗೆ ಸ್ಥಳೀಯರು, ಈ ಮಾರ್ಗವಾಗಿ ದಿನಂಪ್ರತಿ ವಾಹನಗಳಲ್ಲಿ ಓಡಾಡುವ ಪ್ರಯಾ ಣಿಕರು ಸಂಬಂಧಪಟ್ಟ ಅಧಿಕಾ ರಿಗಳಿಗೆ ಮನವಿ ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಪೊಲೀಸ್‌ ಫೋನ್‌ ಇನ್‌ ಕಾರ್ಯಕ್ರಮಗಳಲ್ಲಿ ದೂರು ನೀಡಲಾಗಿದೆ. ಪೊಲೀಸರು ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೂ ತಂದಿದ್ದಾರೆ. ಆದರೆ ಇದುವರೆಗೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

ಈ ಪ್ರದೇಶ ಮಹಾನಗರ ಪಾಲಿಕೆಯ ಜಪ್ಪಿನಮೊಗರು ವಾರ್ಡ್‌ ವ್ಯಾಪ್ತಿಗೆ ಬರುತ್ತದೆ. ಪಾಲಿಕೆಯ ಆರೋಗ್ಯ ಅಧಿಕಾರಿಗಳನ್ನು ವಿಚಾರಿಸಿದರೆ, ಈ ಕುರಿತಂತೆ ಇದುವರೆಗೆ ತಮ್ಮ ಗಮನಕ್ಕೆ ಬಂದಿಲ್ಲ ಎನ್ನುತ್ತಾರೆ. ಕಂಕನಾಡಿ ನಗರ ಠಾಣೆ, ಮಂಗಳೂರು ನಗರ ದಕ್ಷಿಣ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಗೆ ಈ ಪ್ರದೇಶ ಬರುತ್ತಿದ್ದು, ಈ ಎರಡೂ ಠಾಣೆಗಳ ಪೊಲೀಸರು ಈಗಾಗಲೇ ಇಲ್ಲಿ ಮೀನಿನ ತ್ಯಾಜ್ಯ ನೀರು ಸುರಿಯುತ್ತಿದ್ದ ಕೆಲವು ಲಾರಿಗಳ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕಾಸರಗೋಡು- ಮಂಗಳೂರು ಬಸ್‌ಗಳಲ್ಲಿ ಸಂಚರಿಸುವ ಪ್ರಯಾ ಣಿಕರು, ಕಾರು ಮತ್ತಿತರ ಕೆಲವು ವಾಹನಗಳಲ್ಲಿ ಓಡಾಡುವವ ಕೆಲವರು ಈ ದುರ್ವಾಸನೆಯ ನಿರಂತರತೆಯನ್ನು ಗಮನಿಸಿ “ಇದು ಸ್ಮಾರ್ಟ್‌ ಸಿಟಿಯಾಗಿ ಬೆಳೆಯುತ್ತಿರುವ ಮಂಗಳೂರು ಅಲ್ಲವೇ’ ಎಂದು ಗೇಲಿ ಮಾಡುವಂತಾಗಿದೆ. ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಮಾತ್ರವಲ್ಲ ಪಕ್ಕದ ರೈಲು ಮಾರ್ಗದಲ್ಲಿ ಓಡಾಡುವ ರೈಲು ಪ್ರಯಾಣಿಕರೂ ಇಲ್ಲಿನ ದುರ್ವಾಸನೆಯನ್ನು ಅನುಭವಿಸುತ್ತಾರೆ.

ಜಿಲ್ಲಾಡಳಿತಕ್ಕೆ ತಿಳಿಸಲಾಗುವುದು
ಇಲ್ಲಿ ಮಲಿನ ನೀರು ಸುರಿಯುತ್ತಿರುವ ಮೀನು ಸಾಗಾಟದ ಕೆಲವು ಲಾರಿಗಳನ್ನು ಪತ್ತೆ ಮಾಡಿ ಕೇಸು ದಾಖಲಿಸಲಾಗಿದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ದ.ಕ. ಜಿಲ್ಲಾಡಳಿತಕ್ಕೆ ಹಲವು ಬಾರಿ ಪತ್ರ ಬರೆಯಲಾಗಿದೆ. ಆದರೆ ಯಾವುದೇ ಕ್ರಮ ಆಗಿಲ್ಲ. ಮತ್ತೂಮ್ಮೆ ಜಿಲ್ಲಾಡಳಿತಕ್ಕೆ ಪತ್ರ ಬರೆಯುತ್ತೇವೆ.
– ಡಾ| ಹರ್ಷಾ ಪಿ.ಎಸ್‌.,ಪೊಲೀಸ್‌ ಆಯುಕ್ತರು

ಕ್ರಮ ಕೈಗೊಳ್ಳಲಾಗುವುದು
ಈ ತಾಜ್ಯ ಸಮಸ್ಯೆಯ ಗಂಭೀರತೆ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ.ಈ ಕೂಡಲೇ ಅಲ್ಲಿ ತ್ಯಾಜ್ಯ ತಂದು ಸುರಿಯುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಡಲಾಗುವುದು.
– ಡಿ.ವೇದವ್ಯಾಸ ಕಾಮತ್‌,ಶಾಸಕರು

ಗಮನಕ್ಕೆ ಬಂದಿಲ್ಲ
ಇದು ಮಹಾನಗರ ಪಾಲಿಕೆಯ ವ್ಯಾಪ್ತಿ ಆಗಿದ್ದರೂ ಈ ತ್ಯಾಜ್ಯ ಸಮಸ್ಯೆ ಬಗ್ಗೆ ಇದುವರೆಗೆ ನಮ್ಮ ಗಮನಕ್ಕೆ ಬಂದಿಲ್ಲ. ಸ್ಥಳೀಯರ ಆರೋಗ್ಯ ದೃಷ್ಟಿಯಿಂದ ಶೀಘ್ರ ಕ್ರಮ ಕೈಗೊಳ್ಳಲಾಗುವುದು.ಇಲ್ಲಿ ಕಸ, ತ್ಯಾಜ್ಯ ವಸ್ತು ಹಾಕುವುದನ್ನು ತಡೆಯಲು ಕೂಡಲೇ ಕ್ರಮ ವಹಿಸಲಾಗುವುದು.
– ಡಾ| ಮಂಜಯ್ಯ ಶೆಟ್ಟಿ,
ಮನಪಾ ಆರೋಗ್ಯ ಅಧಿಕಾರಿ

ದೂರುಗಳು ಬಂದಿಲ್ಲ
ಈ ಸಮಸ್ಯೆ ಬಗ್ಗೆ ನಮಗೆ ದೂರುಗಳು ಬಂದಿಲ್ಲ. ದೂರುಗಳು ಬಂದರೆ ಸೂಕ್ತ ಕ್ರಮಕ್ಕಾಗಿ ಸ್ಥಳೀಯ ಆಡಳಿತ ಸಂಸ್ಥೆಯ (ಮನಪಾ) ಗಮನಕ್ಕೆ ತರಲಾಗುವುದು.
– ರಾಜಶೇಖರ ಪುರಾಣಿಕ್‌,ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿ

ಹೊರಗಿನವರು ಕಸ ಹಾಕುತ್ತಾರೆ
ನಾನು ಪಾಲಿಕೆ ಚುನಾವಣೆಯಲ್ಲಿ ಗೆದ್ದ ಮರು ದಿನವೇ ನನಗೆ ಇಲ್ಲಿನ ಸಮಸ್ಯೆ ಬಗ್ಗೆ ದೂರು ಬಂದಿತ್ತು. ಈ ಕುರಿತಂತೆ ಕ್ರಮ ಕೈಗೊಳ್ಳುವಂತೆ ಶಾಸಕರ ಗಮನಕ್ಕೆ ತಂದಿದ್ದೇನೆ. ಹೊರಗಿನಿಂದ ಬರುವವರು ಇಲ್ಲಿ ಕಸ ತಂದು ಹಾಕುತ್ತಾರೆ.
– ವೀಣಾ ಮಂಗಳಾ,ಕಾರ್ಪೊರೇಟರ್‌, ಜಪ್ಪಿನಮೊಗರು

ಹಲವು ಬಾರಿ ದೂರು
ಹಲವು ಬಾರಿ ಪೊಲೀಸರಿಗೆ ದೂರು ನೀಡಿದ್ದೇವೆ. ಪೊಲೀಸರು ಈಗಾಗಲೇ ಇಲ್ಲಿ ತ್ಯಾಜ್ಯ ಸುರಿಯುವ ಕೆಲವು ಮೀನಿನ ಲಾರಿ ಮತ್ತು ಇತರ ವಾಹನಗಳನ್ನು ರೆಡ್‌ ಹ್ಯಾಂಡ್‌ ಆಗಿ ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ್ದಾರೆ. ಆದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.
– ಜಿ.ಡಿ’ಸೋಜಾ,
ಸ್ಥಳೀಯ ನಿವಾಸಿ

– ಹಿಲರಿ ಕ್ರಾಸ್ತಾ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ