ಕೊಟ್ಟಾರ ಚೌಕಿ ಮೇಲ್ಸೇತುವೆ ಸ್ವಚ್ಛತೆ, ಇಂಟರ್‌ಲಾಕ್‌ ಅಳವಡಿಕೆಗೆ ಚಾಲನೆ

ರಾಮಕೃಷ್ಣ ಮಿಷನ್‌ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನ

Team Udayavani, Sep 16, 2019, 5:20 AM IST

ಮಹಾನಗರ: ರಾಮಕೃಷ್ಣ ಮಿಷನ್‌ ನೇತೃತ್ವದಲ್ಲಿ 5 ವರ್ಷಗಳಿಂದ ನಗರದಲ್ಲಿ ಹಮ್ಮಿಕೊಳ್ಳುತ್ತಿರುವ ಸ್ವಚ್ಛತಾ ಅಭಿಯಾನದ 5ನೇ ಹಂತದ 41ನೇ ಶ್ರಮದಾನವನ್ನು ಕೊಟ್ಟಾರ ಚೌಕಿ ಸುತ್ತ ಮುತ್ತಲಿನ ಪ್ರದೇಶದಲ್ಲಿ ಸೆ. 15ರಂದು ನಡೆಸಲಾಯಿತು.

ಮುಂಜಾನೆ 7.30ಕ್ಕೆ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಅವರ ಉಪಸ್ಥಿತಿಯಲ್ಲಿ ಶಾಸಕ ಭರತ್‌ ಶೆಟ್ಟಿ ಹಾಗೂ ಮಾಜಿ ಮೇಯರ್‌ ಶಶಿಧರ್‌ ಹೆಗ್ಡೆ ಜಂಟಿಯಾಗಿ ಶ್ರಮದಾನಕ್ಕೆ ಚಾಲನೆ ನೀಡಿದರು.

ಸ್ವಚ್ಛತೆಗೆ ನೂತನ ಆಯಾಮ
ಶಾಸಕ ಡಾ| ಭರತ್‌ ಶೆಟ್ಟಿ ವೈ. ಅವರು ಮಾತನಾಡಿ, ಮುಂದಿನ ಜನಾಂಗಕ್ಕಾಗಿ ಸ್ವಚ್ಛ ಹಾಗೂ ಸುಂದರ ಸಮಾಜವನ್ನು ರೂಪಿಸಿಕೊಡಬೇಕಾಗಿದೆ. ಸರಕಾರವೊಂದು ಮಾಡಬೇಕಾದ ಕಾರ್ಯವನ್ನು ರಾಮಕೃಷ್ಣ ಮಿಷನ್‌ ಅತ್ಯಂತ ಶ್ರದ್ಧೆಯಿಂದ ಒಂದು ವ್ರತದಂತೆ ಪಾಲಿಸಿಕೊಂಡು, ಸ್ವಚ್ಛತೆಗೆ ನೂತನ ಆಯಾಮವನ್ನೇ ನೀಡಿದೆ ಎಂದರು.

ಮಾಜಿ ಮೇಯರ್‌ ಶಶಿಧರ್‌ ಹೆಗ್ಡೆ ಮಾತನಾಡಿ, ಐದು ವರ್ಷಗಳಲ್ಲಿ ಸ್ವಚ್ಛತೆಯಲ್ಲಿ ಕೇಂದ್ರ ಸರಕಾರ ನೀಡುವ ಪ್ರಶಸ್ತಿಗೆ ನಮ್ಮ ಮಂಗಳೂರು ಮಹಾನಗರ ಪಾಲಿಕೆ ಭಾಜನವಾಗಿದೆ. ಅದಕ್ಕೆ ರಾಮಕೃಷ್ಣ ಮಿಷನ್‌ ಕೊಡುಗೆ ಗಣನೀಯವಾದುದು. ಅಭಿವೃದ್ಧಿ ಹೊಂದುತ್ತಿರುವ ನಗರಕ್ಕೆ ಪ್ರತಿಯೊಬ್ಬರು ಸಹಕರಿಸಬೇಕು. ಇದು ಕೇವಲ ಓರ್ವನ ಜವಾಬ್ದಾರಿಯಲ್ಲ. ಬದ ಲಿಗೆ ಎಲ್ಲರೂ ಜವಾಬ್ದಾರರಾಗಿ ವರ್ತಿಸಿದಾಗ ನಗರ ಸುವ್ಯವಸ್ಥಿತವಾಗಿ ಬೆಳೆದು ಸುಂದರ ನಗರವಾಗಿ ಕಂಗೊಳಿಸಲು ಸಾಧ್ಯ ಎಂದರು.

ನಾಗೇಶ್‌ ರಾವ್‌, ಕಿರಣಕುಮಾರ್‌ ಕೋಡಿಕಲ್, ಧನವೀರ್‌ ಶೆಟ್ಟಿ, ರಾಜ ಗೋಪಾಲ ಶೆಟ್ಟಿ, ಶಂಕರನಾರಾಯಣ ಕಾರಂತ, ಯಶವಂತ ಆಚಾರ್‌, ತಾರಾ ನಾಥ್‌ ಆಳ್ವ, ಚಿತ್ತರಂಜನ್‌, ಶ್ರೀನಿವಾಸ್‌ ಉಪಸ್ಥಿತರಿದ್ದರು. ರಂಜನ್‌ ಬೆಳ್ಳರ್ಪಾಡಿ ಸ್ವಾಗತಿಸಿ, ವಂದಿಸಿದರು.

ಕೊಟ್ಟಾರಚೌಕಿ ಫ್ಲೈ ಓವರ್‌ ಸ್ವಚ್ಛತೆ
ರಾಮಕೃಷ್ಣ ಮಿಷನ್‌ ಸ್ವಚ್ಛತಾ ಅಭಿಯಾ ನದಡಿಯಲ್ಲಿ ಕೊಟ್ಟಾರಚೌಕಿಯಲ್ಲಿರುವ ಫ್ಲೈ ಓವರ್‌ ಕೆಳಭಾಗವನ್ನು ಸ್ವಚ್ಛಗೊಳಿಸಿ ಸುಂದರಗೊಳಿಸಲು ಯೋಜನೆ ರೂಪಿಸಲಾಗಿದೆ. ಯೋಜನೆಗೆ ಸ್ವಾಮಿಜಿತಕಾ ಮಾನಂದಜಿ ಹಾಗೂ ಶಾಸಕ ಡಾ| ಭರತ್‌ಶೆಟ್ಟಿ ವೈ. ರವಿವಾರ ಚಾಲನೆ ನೀಡಿದರು.

ಬೃಹತ್‌ ಕಂಬಗಳನ್ನು ಸ್ವಚ್ಛಗೊಳಿಸಿ ಅವುಗಳಿಗೆ ಬಣ್ಣ ಬಳಿದು ಅತ್ಯಾಕರ್ಷಕ ಚಿತ್ರ ಕಲಾಕೃತಿಗಳನ್ನು ರಚಿಸಲು ಈಗಾಗಲೇ ಆರಂಭಿಸಲಾಗಿದೆ. ಒಟ್ಟು ಹದಿನೇಳು ಬೃಹತ್‌ ಕಲಾಕೃತಿಗಳನ್ನು ಆದಿತತ್ವ ಆರ್ಟ್‌ನ ವಿಕ್ರಮ ಶೆಟ್ಟಿ ನೇತೃತ್ವದಲ್ಲಿ ಚಿತ್ರಿಸಲಾಗುವುದು. ಸಾಮಾಜಿಕ ಸಂದೇಶ ಹಾಗೂ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಕಲಾಕೃತಿಗಳು ಅಲ್ಲಿ ಮೂಡಿಬರಲಿವೆ. ಜತೆಗೆ ಮೇಲ್ಸೇತುವೆಯ ಕೆಳಭಾಗದಲ್ಲಿರುವ ನೆಲವನ್ನು ಸಮತಟ್ಟು ಮಾಡಿ ಅದಕ್ಕೆ ಸುಮಾರು 35,000 ಚದರ ಅಡಿ ಇಂಟರ್‌ಲಾಕ್‌ ಅಳವಡಿಸಿ ಅಲ್ಲಿ ವಾಹನಗಳಿಗೆ ವ್ಯವಸ್ಥಿತವಾದ ಪಾರ್ಕಿಂಗ್‌ ಅನುಕೂಲ ಮಾಡಿಕೊಡಲು ಯೋಜನೆ ರೂಪಿಸಲಾಗಿದೆ. 100ಕ್ಕೂ ಅಧಿಕ ಮಂದಿಗೆ ಕುಳಿತುಕೊಳ್ಳುವ ಆಸನಗಳನ್ನು ಅಲ್ಲಿ ಅಳವಡಿಸಲಾಗುವುದು. ಜತೆಗೆ ಕೆಲವೆಡೆ ಆಲಂಕಾರಿಕ ಹೂಗಿಡಗಳ ಕುಂಡಗಳನ್ನಿಟ್ಟು ಅಂದಗೊಳಿಸಲಾಗುವುದು.

ಸುಪ್ರೀತ್‌ ಆಳ್ವ ಸುಂದರೀಕರಣದ ರೂಪರೇಖೆಗಳನ್ನು ವಿನ್ಯಾಸ ಮಾಡಿದ್ದಾರೆ. ಸ್ವಚ್ಛ ಮಂಗಳೂರು ಅಭಿಯಾನದ ಪ್ರಧಾನ ಸಂಯೋಜಕ ದಿಲ್ರಾಜ್‌ ಆಳ್ವ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಇದನ್ನು ಅ. 2ರಂದು ಲೋಕಾರ್ಪಣೆಗೊಳಿಸಲು ನಿರ್ಧರಿಸಲಾಗಿದೆ. ರಾಮಕೃಷ್ಣ ಮಿಷನ್‌ ಸ್ವಚ್ಛತಾ ಅಭಿಯಾನದ ಈ ಎಲ್ಲ ಚಟುವಟಿಕೆಗಳಿಗೆ ಎಂ.ಆರ್‌.ಪಿ.ಎಲ್. ಸಂಸ್ಥೆ ಪ್ರಾಯೋಜಕತ್ವ ನೀಡಿ ಪ್ರೋತ್ಸಾಹಿಸುತ್ತಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ