ತುಳುನಾಡಿನ ಭೂಮಿಪೂಜೆ ಗದ್ದೆಕೋರಿ ಈಗಲೂ ಇಲ್ಲಿ ಜೀವಂತ

  ಪಾಲ್ತಾಡಿಯಲ್ಲಿ ನಡೆಯಿತು ಅನಾದಿ ಕಾಲದ ಸಂಪ್ರದಾಯ

Team Udayavani, Nov 7, 2019, 5:58 AM IST

ಸವಣೂರು: ಸವಣೂರು ಸಮೀಪದ ಪಾಲ್ತಾಡಿ ಗ್ರಾಮದ ಬಂಬಿಲಗುತ್ತಿನಲ್ಲಿ ಅನಾದಿ ಕಾಲದ ಸಂಪ್ರದಾಯ ತುಳುನಾಡಿನ ಭೂಮಿ ಪೂಜೆ ಗದ್ದೆಕೋರಿ ವಿವಿಧ ಧಾರ್ಮಿಕ, ವೈಚಾರಿಕ ಕಾರ್ಯಕ್ರಮಗಳೊಂದಿಗೆ ಬಂಬಿಲಗುತ್ತು ಪ್ರಕಾಶ್‌ ಕುಮಾರ್‌ ಆರಿಗ ಅವರ ನೇತೃತ್ವದಲ್ಲಿ ಗುತ್ತು, ಬಾರಿಕೆ ಹಾಗೂ ಗ್ರಾಮಸ್ಥರ ಪಾಲ್ಗೊಳ್ಳುವಿಕೆಯಿಂದ ನ. 4 ಹಾಗೂ ನ. 5ರಂದು ನಡೆಯಿತು.

ನ. 4ರಂದು ರಾತ್ರಿ ಗದ್ದೆಯ ಸುತ್ತ ಕೋಲುತಿರಿ ಉರಿಸಿ ನಾಗಣಿಸುವುದು, ಅನ್ನಸಂತರ್ಪಣೆ ನಡೆಯಿತು. ನ. 5ರಂದು ಕೊರಗ ಕೋಲ, ಕುದುರೆ ಕೋಲ, ಕಂಡದ ಉರವ, ಎರುಕೋಲ ನಡೆಯಿತು. ಕಂಬಳ ಗದ್ದೆಗೆ ಪೂಕರೆ, ಬಳ್ಳಿ ಗದ್ದೆಗೆ ಬಾಳೆಗಿಡವನ್ನು ಹಾಕಿ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಗ್ರಾಮ ದೈವ ಅಬ್ಬೆಜಲಾಯ ಮತ್ತು ಕಲ್ಲುರ್ಟಿ ದೈವದ ನೇಮ ನಡೆಯಿತು.

ಈ ಹಿಂದೆ ತುಳುನಾಡಿನ ವಿವಿಧೆಡೆ ಈ ಸಂಪ್ರದಾಯ ನಡೆಯುತ್ತಿದ್ದರೂ, ಕಾಲ ಕ್ರಮೇಣ ದೂರವಾಗುತ್ತಾ ಬಂದಿದೆ. ಆದರೆ ಪಾಲ್ತಾಡಿ ಗ್ರಾಮದ ಬಂಬಿಲಗುತ್ತಿನಲ್ಲಿ ಇದು ಅನಾದಿಕಾಲದಿಂದ ಈಗಿನವರೆಗೂ ನಿರಂತರವಾಗಿ ಪ್ರತೀ ವರ್ಷ ನಡೆಯುತ್ತಿದೆ.

ಕಂಬಳ ಗದ್ದೆಕೋರಿ
ಭೂಮಿಯನ್ನು ಪೂಜಿಸಿ ಆರಾಧಿಸುವಂತಹ ತುಳುವರ ಸಂಪ್ರದಾಯ ಅನಾದಿಕಾಲದಿಂದಲೂ ನಡೆದುಕೊಂಡ ಬಂದಿರುವ ಪದ್ದತಿಯಾಗಿದೆ. ಇದನ್ನು ಆರಾಧಿಸುವಲ್ಲಿ ಪ್ರಾದೇಶಿಕವಾರು ಹಲವು ಕಟ್ಟುಪಾಡುಗಳಿವೆ.

ಹೆಚ್ಚಾಗಿ ಅಜಿಲರ ಸೀಮೆ, ಪಂಜ ಸಾರ ಸೀಮೆಗಳಲ್ಲಿ ಗದ್ದೆಕೋರುವ ಹಿಂದಿನ ದಿವಸ ನಾಗನನ್ನು ಆರಾಧಿಸುವ ಒಂದು ಅಂಶ ಕಟ್ಟುಪಾಡಿನಂತೆ ನಡೆಯುತ್ತದೆ. ಇದನ್ನು ನಾಗಣಿಸುವುದು ಎನ್ನುತ್ತಾರೆ. ಗುತ್ತು ಹಾಗೂ ಗ್ರಾಮಸ್ಥರು ಸೇರಿ ದೈವದ ಚಾವಡಿಯಲ್ಲಿ ದೀಪವನ್ನು ಉರಿಸಿ ವಾಲಗದೊಂದಿಗೆ ದೈವಪಾತ್ರಿ ಶುದ್ಧೀಕರಿಸಿದ ಬಟ್ಟೆಯನ್ನು ಹರಿದು ಕೋಲು ತಿರಿಗೆ (ಬಿದಿರಿನ ಕಡ್ಡಿ) ಬಟ್ಟೆಯನ್ನು ಸುತ್ತಿ, ಎಣ್ಣೆಯಲ್ಲಿ ಅದ್ದಿ ದೈವದ ಪಾತ್ರಿಯಲ್ಲಿ ಕೊಟ್ಟು ಸಂಬಂಧಪಟ್ಟ ದೈವದ ಮಂಚಮದಲ್ಲಿ ಇಟ್ಟ ಪ್ರತ್ಯೇಕ ಪಾತ್ರೆಯಲ್ಲಿ ಹಾಲು, ತುಪ್ಪ ಹಾಗೂ ಸ್ವಸ್ತಿಕವನ್ನು ಇಟ್ಟು ಗುತ್ತು, ಗ್ರಾಮದವರು ದೈವದಲ್ಲಿ ಪ್ರಾರ್ಥನೆ ಮಾಡಿಕೊಂಡು ವಿಜ್ರಂಭಣೆಯಿಂದ ಗದ್ದೆಯ ನಿಗದಿಪಡಿಸಿದ ಸ್ಥಳಕ್ಕೆ ವಾಲಗದೊಂದಿಗೆ ಆಗಮಿಸುತ್ತಾರೆ.

ಕಂಬಳ ಗದ್ದೆಗೆ ಹಾಲು, ತುಪ್ಪವನ್ನು ಹಾಕಿ ಕೋಲುತಿರಿಯನ್ನು ಉರಿಸಿ ಗ್ರಾಮಸ್ಥರು ಗದ್ದೆಯ ಸುತ್ತ ಹಚ್ಚುವ ಕ್ರಮವಿದೆ. ಅನಂತರ ಗದ್ದೆ ಕೋರಿಗೆ ಆರಂಭದ ಕ್ರಮವಿದೆ. ಆ ಕ್ರಮಗಳು ಮುಕ್ತಾಯಗೊಂಡ ಬಳಿಕ ಕಂಬಳ ಗದ್ದೆಗೆ ಇಳಿಯುವ ಕೋಣಗಳು ಮತ್ತು ಎತ್ತುಗಳನ್ನು ವಾದ್ಯಗೋಷ್ಠಿಯೊಂದಿಗೆ ಬಹಳ ಸಂಭ್ರಮದಿಂದ ಇಳಿಸುತ್ತಾರೆ.

ಪೂಕರೆ
ಗದ್ದೆಯನ್ನು ಉತ್ತು ಅನಂತರ ಅಡಿಕೆ ಮರದಿಂದ ತಯಾರಿಸಿದ ಪೂಕರೆಯನ್ನು ಹೂವಿನಿಂದ ಅಲಂಕರಿಸಿ ಗುತ್ತು ಗ್ರಾಮದವರ ಪ್ರಾರ್ಥನೆಯನ್ನು ಮಾಡಿ ಕಂಬಳಗದ್ದೆಗೆ ಪೂಕರೆಯನ್ನೂ ಬಲ್ಲಿ ಗದ್ದೆಗೆ (ಬಾಳೆ ಹಾಕುವ ಗದ್ದೆ) ಒಂದು ಬಾಳೆ ಗಿಡವನ್ನೂ ಹಾಕುತ್ತಾರೆ. ಅದೇ ದಿನ ರಾತ್ರಿ ಗ್ರಾಮದೈವಗಳಿಗೆ ನೇಮ ನಡೆಯುತ್ತದೆ. ಈ ಗದ್ದೆ ಕೋರಿಯನ್ನು ತುಳುವಿನಲ್ಲಿ ಭೂಮಿದ ಮದಿಮೆ, ಕಂಬುಳದ ವಿಳಯ ಚಾವಡಿದ ಮೆಚ್ಚಿಗೆ ಕಂಬಳದ ಗದ್ದೆ ಕೋರಿ ಎಂಬ ಹೆಸರಿನಿಂದ ನಾಡಿನ ಹಬ್ಬದಂತೆ ವಿಜೃಂಭಣೆಯಿಂದ ಆಚರಿಸುವಂತಹ ಪದ್ಧತಿ ತುಳುನಾಡಿನಾದ್ಯಂತ ನಡೆಯುತ್ತದೆ.

ಏನಿದು ಗದ್ದೆಕೋರಿ?
ತುಳುನಾಡು ಸಂಸ್ಕೃತಿ, ಸಂಸ್ಕಾರಗಳ ತವರೂರು. ಇಲ್ಲಿ ಅನೇಕ ಆಚರಣೆಗಳು, ಪದ್ಧತಿಗಳು ಚಾಲ್ತಿಯಲ್ಲಿವೆ ಹಾಗೂ ಅವುಗಳಿಗೆ ತಮ್ಮದೇ ಆದ ಮಹತ್ವಗಳಿವೆ. ಇಂತಹ ಆಚರಣೆಗಳಲ್ಲಿ ಗದ್ದೆ ಕೋರಿಯೂ ಒಂದು. ಇದಕ್ಕೆ ತುಳುನಾಡಿನ ಭೂಮಿ ಪೂಜೆ ಎಂದೂ ಕರೆಯುತ್ತಾರೆ.

ಪರಶುರಾಮಸೃಷ್ಟಿಯ ತುಳುನಾಡಿನಲ್ಲಿ ಬಳ್ಳಾಕುಲು ಅವರ ಆಡಳಿತಕ್ಕೊಳಪಟ್ಟ ರಾಜಮನೆತನಗಳಿದ್ದು, ಗ್ರಾಮೀಣ ಪ್ರದೇಶದಲ್ಲಿ ಅರಸು ಮನೆತನಗಳಿಗೆ ಸಂಬಂಧಪಟ್ಟಂತಹ ಉಪಮನೆತನಗಳಿವೆ. ಅವುಗಳಲ್ಲಿ ಬೀಡು, ರಾಜ್ಯ ಗುತ್ತು, ಗುತ್ತು, ಬಾರಿಕೆ, ತಲೆ ಮನೆ ಎಂಬ ಮನೆತನಗಳು ಅಂದಿನ ಕಾಲದ ರಾಜಕೀಯ ಪದ್ಧತಿಯ ವ್ಯವಸ್ಥೆಗಳಾಗಿದ್ದು, ಆ ಕಾಲದಲ್ಲಿ ಕಂಬಳ ಗದ್ದೆಗಳಿದ್ದು, ಅಂತಹ ಕಂಬಳ ಗದ್ದೆಗಳು ಆ ಗ್ರಾಮದ ದೈವಗಳ ಆರಾಧನೆಗೂ ನಿಕಟ ಸಂಬಂಧವಿತ್ತು.

ಸರಕಾರದ ಪ್ರೋತ್ಸಾಹ ಬೇಕಿದೆ
ಭೂಮಿಯನ್ನು ಪೂಜಿಸಿ ಆರಾಧಿಸುವಂತಹ ತುಳುವರ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದುಕೊಂಡ ಬಂದ ಪದ್ಧತಿ. ಇದರಲ್ಲಿ ಗದ್ದೆ ಕೋರಿ ಪ್ರಮುಖವಾದದ್ದು. ಇಂದಿನ ಕಾಲದಲ್ಲಿ ಆಡಳಿತ ವ್ಯವಸ್ಥೆಯ ಬದಲಾವಣೆಯ ಜತೆಗೆ ಅಂದಿನ ಪದ್ಧತಿಗಳು ನಶಿಸಿ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ಪ್ರತಿಯೋರ್ವ ನಾಗರಿಕನ ಜವಾಬ್ದಾರಿಯೂ ಆಗಿದೆ. ಇವುಗಳು ಮುಂದಿನ ತಲೆಮಾರಿಗೂ ಮುಂದುವರಿಯಲು ಸರಕಾರ ಅಥವಾ ಅಕಾಡೆಮಿಗಳ ಪ್ರೋತ್ಸಾಹವೂ ದೊರಕುವಂತಾಗಬೇಕು.

– ಪ್ರವೀಣ್‌ ಚೆನ್ನಾವರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ