ಪಾಪದ ವಿರುದ್ಧ ಜಯಗಳಿಸಿದ ಭರವಸೆಯ ನವೀಕರಣವೇ ಪುನರುತ್ಥಾನದ ಸ್ಮರಣೆ

Team Udayavani, Apr 21, 2019, 6:30 AM IST

ಪ್ರವಾದಿ ಏಸು ಕ್ರಿಸ್ತರು ಶಿಲುಬೆಗೇರಿದ ಮೂರನೇ ದಿನಕ್ಕೆ ಪುನರುತ್ಥಾನಗೊಂಡ ದಿನವನ್ನು ಈಸ್ಟರ್‌ ಹಬ್ಬವನ್ನಾಗಿ ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಪಾಪಿಗಳ ಪಾಪವನ್ನು ಕ್ಷಮಿಸಿ, ಪ್ರೀತಿ, ಔದಾರ್ಯ ಮತ್ತು ದಯ ಕರುಣಿಸಬೇಕು ಎಂಬುದು ಈ ಹಬ್ಬದ ಸಂದೇಶ.

ಮಂಗಳೂರು: ಶಿಲುಬೆ ಗೇರಿಸಿದ ಯೇಸು ಕ್ರಿಸ್ತರು ತೃತೀಯ ದಿನ ಸಮಾಧಿಯಿಂದ ಪುನರುತ್ಥಾನಗೊಂಡ ಹಬ್ಬದ ಆಚರಣೆಯೇ ಈಸ್ಟರ್‌. “ಓರ್ವ ವ್ಯಕ್ತಿ ನಮ್ಮ ಪಾಪಗಳಿಗಾಗಿ ಯಾತನೆಯನ್ನು ಅನುಭವಿಸಿ, ಸಾವನ್ನಪ್ಪಿ ತೃತೀಯ ದಿನ ಪುನರುತ್ತಾನಗೊಳ್ಳುತ್ತಾನೆ’ ಎಂಬುದಾಗಿ ಪ್ರವಾದಿಗಳು ನುಡಿದ ಭವಿಷ್ಯ ನಿಜವಾದ ದಿನವೇ ಈಸ್ಟರ್‌ ಎನ್ನುವುದು ಕ್ರೈಸ್ತರ ನಂಬಿಕೆ.
ಯೇಸು ಕ್ರಿಸ್ತರ ಪುನರುತ್ಥಾನವನ್ನು ಸ್ಮರಿಸುವುದೆಂದರೆ ಪಾಪದ ವಿರುದ್ಧ ಜಯ ಸಾಧಿಸಿದ ಬಗ್ಗೆ ಭರವಸೆಯನ್ನು ನವೀಕರಿಸುವುದು ಎಂದರ್ಥ.

ಬೈಬಲಿನ ಹೊಸ ಒಡಂಬಡಿಕೆಯ ಪ್ರಕಾರ ಯೇಸು ಕ್ರಿಸ್ತರು ಶಿಲುಬೆಯಲ್ಲಿ ಮರಣಿಸಿದ ಬಳಿಕ 3ನೇ ದಿನ ಈಸ್ಟರ್‌ ಬರುತ್ತದೆ.

ಒಂದು ತಿಂಗಳ ಅವಧಿಯ ವ್ರತಾಚರಣೆ ಬಳಿಕ ಈಸ್ಟರ್‌ ಆಚರಣೆ ನಡೆಯುತ್ತದೆ. ವಿಭೂತಿ ಬುಧವಾರ ಆರಂಭವಾಗುವ ವ್ರತಾಚರಣೆ ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನವನ್ನಾಗಿ ಆಚರಿಸುವ ಶುಭ ಶುಕ್ರವಾರದಂದು ಕೊನೆಗೊಳ್ಳುತ್ತದೆ. ಈಸ್ಟರ್‌ ಆಚರಿಸಲಾಗುವ ಕೊನೆಯ ವಾರವನ್ನು ಪವಿತ್ರ ವಾರ (ಸಪ್ತಾಹ) ಅಥವಾ ಯಾತನೆಯ ವಾರ (ಪ್ಯಾಶನ್‌ ವೀಕ್‌) ಎಂದು ಸಂಬೋಧಿಸಲಾಗುತ್ತಿದೆ. ಯೇಸು ಕ್ರಿಸ್ತರು ಜೆರುಸಲೆಂ ಪಟ್ಟಣಕ್ಕೆ ವೈಭವದಿಂದ ಪ್ರವೇಶಿಸುವ ದಿನ ಅರ್ಥಾತ್‌ ಗರಿಗಳ ರವಿವಾರ ಈ ಸಪ್ತಾಹ ಆರಂಭವಾಗುತ್ತದೆ.

ಯೇಸು ಕ್ರಿಸ್ತರ ಕೊನೆಯ ಭೋಜನದ ದಿನ “ಪವಿತ್ರ ಗುರುವಾರ’, ಯೇಸು ಕ್ರಿಸ್ತರನ್ನು ಶಿಲುಬೆಗೇರಿಸಿದ ದಿನ “ಶುಭ ಶುಕ್ರವಾರ’ (ಗುಡ್‌ಫ್ರೈಡೆ), ಈಸ್ಟರ್‌ ಜಾಗರಣೆಯ ದಿನ “ಸ್ತೋತ್ರ ಅರ್ಪಣೆಯ ಶನಿವಾರ’ ಮತ್ತು ಕೊನೆಯದಾಗಿ ಈಸ್ಟರ್‌ ರವಿವಾರ ಆಚರಿಸಲಾಗುತ್ತಿದೆ.

ಶಿಲುಬೆಗೇರಿಸುವ ಮುಂಚಿನ ದಿನ ಯೇಸು ಕ್ರಿಸ್ತರು ತನ್ನ ಶಿಷ್ಯರ ಜತೆ ಪಸ್ಕ ಹಬ್ಬದ ಭೋಜನವನ್ನು ಸೇವಿಸಿದ್ದರು. ಇದನ್ನು ಯೇಸು ಕ್ರಿಸ್ತರ ಕೊನೆಯ ಭೋಜನ ಎನ್ನುತ್ತಾರೆ.

ಪಸ್ಕ ಹಬ್ಬದ ಭೋಜನದ ವೇಳೆ ಯೇಸು ಕ್ರಿಸ್ತರು ತಾನು ಮುರಿದ ರೊಟ್ಟಿಯು (ಬ್ರೆಡ್‌) ತನ್ನ ದೇಹದ ಸಂಕೇತವಾಗಿದೆ ಮತ್ತು ಪಾತ್ರೆಗೆ ಸುರಿದ ದ್ರಾಕ್ಷಾ ರಸವು (ವೈನ್‌) ತನ್ನ ರಕ್ತ ಆಗಿದ್ದು, ಲೋಕದ ಜನರ ಪಾಪಗಳ ವಿಮೋಚನೆಯ ಸಂಕೇತವಾಗಿದೆ ಎಂಬುದಾಗಿ ತನ್ನ ಶಿಷ್ಯರಿಗೆ ಹೇಳಿದ್ದರು ಎಂದು ಬೈಬಲ್‌ ತಿಳಿಸುತ್ತದೆ. ಹಾಗಾಗಿ ಯೇಸು ಕ್ರಿಸ್ತರು ಜನರ ಪಾಪ ವಿಮೋಚನೆಗಾಗಿ ತಮ್ಮ ಪ್ರಾಣವನ್ನು ಅರ್ಪಿಸಿದರು ಎನ್ನುವುದು ಕ್ರೈಸ್ತರ ನಂಬಿಕೆ.

ಯೇಸು ಕ್ರಿಸ್ತರು ಮರಣದಿಂದ ಜೀವಿತದ ಕಡೆಗೆ ದಾಟಿದರು. ಅದೇ ರೀತಿ ಯೇಸು ಕ್ರಿಸ್ತರ ಮೇಲೆ ವಿಶ್ವಾಸ ಇರಿಸಿ ಅವರ ಅನುಯಾಯಿಗಳಾದ ಕ್ರೈಸ್ತರು ಕತ್ತಲೆಯಿಂದ ಬೆಳಕಿಗೆ, ಅಸತ್ಯದಿಂದ ಸತ್ಯದೆಡೆಗೆ, ಪಾಪದ ಕೂಪದಿಂದ ದೇವರ ಕೃಪೆಗೆ ಪಾತ್ರರಾಗುತ್ತಾರೆ ಎನ್ನುವುದರ ಆಚರಣೆಯೇ ಈಸ್ಟರ್‌. ಇದನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ.

ಧಾರ್ಮಿಕವಾಗಿ ಹೆಚ್ಚಿನ ಮಹತ್ವ
ಯೇಸು ಕ್ರಿಸ್ತರು ದೇವರ ಪುತ್ರ ಎನ್ನುವುದು ಕ್ರೈಸ್ತರ ನಂಬಿಕೆ. ಯೇಸು ಕ್ರಿಸ್ತರ ಜನನದ ಹಬ್ಬ ಕ್ರಿಸ್ಮಸ್‌, ಪುನರುತ್ಥಾನದ ಹಬ್ಬ ಈಸ್ಟರ್‌ ಕ್ರೈಸ್ತರ ಪ್ರಮುಖ ಎರಡು ಹಬ್ಬಗಳು. ಕ್ರಿಸ್ಮಸ್‌ ಆಚರಣೆಯ ಸಂದರ್ಭ ಇರುವ ಸಡಗರ, ಸಂಭ್ರಮ ಈಸ್ಟರ್‌ ಸಂದರ್ಭ ಇರುವುದಿಲ್ಲ; ಆದರೆ ಈ ಹಬ್ಬದ ಸಂದರ್ಭದಲ್ಲಿ ಧಾರ್ಮಿಕವಾಗಿ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಬೇಸಗೆ ಕಾಲದಲ್ಲಿ ಆಚರಿಸಲಾಗುತ್ತಿರುವುದರಿಂದ ಮನೆಯ ಕುಟುಂಬಗಳ ಬಹುತೇಕ ಸದಸ್ಯರು ಹಾಜರಿರುತ್ತಾರೆ.

ಸಂದೇಶ
ಯೇಸುಸ್ವಾಮಿಯ ಪುನರುತ್ಥಾನವು ಈ ವಿಶ್ವದ ಚರಿತ್ರೆಯಲ್ಲೇ ನಡೆದ ಅತ್ಯದ್ಭುತ ಘಟನೆ. ಈ ಮೂಲಕ, ಪ್ರತಿ ಮಾನವನಿಗೂ ಅನಂತ ಜೀವದ ನಿರೀಕ್ಷೆ ದೊರಕಿದೆ.

ನಮ್ಮ ಜೀವನದ ಕಷ್ಟ, ಸಾವು, ಅರ್ಥರಹಿತವಲ್ಲ, ಬದಲಾಗಿ ದೇವರು ತಮ್ಮ ಯೋಜನೆಗಳನ್ನು ನಮ್ಮಲ್ಲಿ ಕಾರ್ಯಗತಗೊಳಿಸುವ ಗಾಢ ಅರ್ಥವನ್ನು ಈಸ್ಟರ್‌ ಒಳಗೊಂಡಿವೆ. ಕಷ್ಟಗಳಿಂದ ವಿಚಲಿತರಾದರೂ, ದೇವರಲ್ಲಿ ಅಚಲ ವಿಶ್ವಾಸವಿಟ್ಟರೆ, ಜೀವನದಲ್ಲಿ ಕಷ್ಟಗಳ ಕತ್ತಲೆ ಕಳೆದು, ಬೆಳಕು ಮೂಡುವುದು ನಿಶ್ಚಿತ.

ಮಾನವ ಜನಾಂಗದ ಮೇಲೆ ದಯೆ ತೋರುವ ಈಸ್ಟರ್‌ ಹಬ್ಬವನ್ನು ಆಚರಿಸೋಣ. ಈ ಹಬ್ಬ ನಮ್ಮೆಲ್ಲರನ್ನು ಕತ್ತಲೆಯಿಂದ ಬೆಳಕಿಗೆ, ಅಸತ್ಯದಿಂದ ಸತ್ಯದೆಡೆಗೆ ದಾಟಿಸಿ ಚಿರಂಜೀವಿಯಾಗಿಸಲಿ. ಎಲ್ಲರಿಗೂ ನಾನು ಪಾಸ್ಖ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ.

– ಪ|ಪೂ|ಜೆರಾಲ್ಡ್‌ ಲೋಬೊ ಉಡುಪಿಯ ಧರ್ಮಾಧ್ಯಕ್ಷರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ