ವಿದ್ಯಾರ್ಥಿ ವೇತನಕ್ಕೆ ಕುತ್ತು

306ವಿದ್ಯಾರ್ಥಿಗಳ ಆಧಾರ್‌, ಇತರ ದಾಖಲೆಗಳಲ್ಲಿ ಮಾಹಿತಿ ಲೋಪ

Team Udayavani, Jul 12, 2019, 5:53 AM IST

ಸುಳ್ಯ : ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಸರಕಾರದ ಶಿಷ್ಯ ವೇತನ ಪಡೆಯಲು ಆನ್‌ಲೈನ್‌ ಮೂಲಕ ಅರ್ಜಿ ತುಂಬಲು ಆಧಾರ್‌ ಕಾರ್ಡ್‌ ಸಹಿತ ವಿವಿಧ ದಾಖಲೆಗಳಲ್ಲಿರುವ ಲೋಪದ ಕಾರಣ ಪುತ್ತೂರು ಮತ್ತು ಸುಳ್ಯ ತಾಲೂಕಿನ 306 ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ ಕುತ್ತು ಬಂದಿದೆ.

ಶೈಕ್ಷಣಿಕ ವರ್ಷ ಆರಂಭಗೊಂಡು ಒಂದೂವರೆ ತಿಂಗಳು ಕಳೆಯುತ್ತ ಬಂದಿದೆ. ಮುಖ್ಯವಾಗಿ ಆಧಾರ್‌ ಕಾರ್ಡ್‌ ಲಿಂಕ್‌ ಆಗದಿರುವ ಸಮಸ್ಯೆ ಯಿಂದ ಸ್ಕಾಲರ್‌ಶಿಪ್‌ ಪಡೆಯಲು ಅರ್ಹತೆ ಹೊಂದಿರುವ ವಿದ್ಯಾರ್ಥಿಗಳ ವಿವರ ಇನ್ನೂ ಅಪ್‌ಡೇಟ್ ಆಗಿಲ್ಲ. ವಿವರ ತುಂಬಿರುವ ಮಕ್ಕಳಿಗಷ್ಟೇ ವಿದ್ಯಾರ್ಥಿ ವೇತನ ಪಾವತಿಸಿದ್ದು, ಉಳಿದ ವಿದ್ಯಾರ್ಥಿಗಳ ಸ್ಥಿತಿ ಅತಂತ್ರವಾಗಿದೆ.

ಆಧಾರ್‌ ಸಮಸ್ಯೆ

ಹಿಂದುಳಿದ ವರ್ಗಗಳ ಇಲಾಖೆ, ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡ ಇಲಾಖೆ, ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆ ವತಿಯಿಂದ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸರಕಾರದಿಂದ 1,000 ರೂ. ತನಕ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಈ ಬಾರಿ ಆಧಾರ್‌ ಲಿಂಕ್‌ ಸಮಸ್ಯೆಯಿಂದ ಪುತೂರಿನ 217 ಮತ್ತು ಸುಳ್ಯದ 89 ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ಗೆ ಕತ್ತರಿ ಬಿದ್ದಿದೆ.

ಮಾಹಿತಿ ಲೋಪ

ಆಧಾರ್‌ ಕಾರ್ಡ್‌ ಸಮಸ್ಯೆ ಸಹಿತ ಜಾತಿ, ಆದಾಯ ಪ್ರಮಾಣ ಪತ್ರದಲ್ಲಿರುವ ಲೋಪಗಳಿಂದ ತಾಲೂಕಿನ 89 ವಿದ್ಯಾರ್ಥಿ ಗಳಿಗೆ ಸ್ಕಾಲರ್‌ಶಿಪ್‌ ಅರ್ಜಿ ತುಂಬಲು ಸಾಧ್ಯವಾಗಿಲ್ಲ. ಸರಿಪಡಿಸುವಿಕೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಸೂಕ್ತ ದಾಖಲೆ ಸಿಕ್ಕಿದರೆ ಮಾತ್ರ ಅಪ್ಲೋಡ್‌ ಮಾಡಲು ಸಾಧ್ಯವಿದೆ.

– ಮಹಾದೇವ, ಕ್ಷೇತ್ರ ಶಿಕ್ಷಣಾಧಿಕಾರಿ, ಸುಳ್ಯ

ಗೃಹಾಧಾರಿತ ಕೆಲವು ಮಕ್ಕಳಲ್ಲಿ ದೃಷ್ಟಿ, ಅಂಗ ವೈಕಲ್ಯದ ಸಮಸ್ಯೆ ಇದೆ. ಅಂತಹವ ರಿಗೆ ಆಧಾರ್‌ ಕಾರ್ಡ್‌ ನೋಂದಣಿ ಸಾಧ್ಯ ವಾಗುತಿಲ್ಲ. ಇನ್ನು, ಕೆಲವು ವಿದ್ಯಾರ್ಥಿಗಳು ಸಲ್ಲಿಸಿರುವ ಮಾಹಿತಿ, ದಾಖಲೆಯಲ್ಲಿ ಸಮಸ್ಯೆ ಇದೆ. ತಾಲೂಕಿನ 217 ವಿದ್ಯಾರ್ಥಿಗಳ ಅರ್ಜಿ ತುಂಬಲು ಸಾಧ್ಯವಾಗಿಲ್ಲ.

– ವಿಷ್ಣುಪ್ರಸಾದ್‌, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು

ಏನು ಸಮಸ್ಯೆ?: ಕೆಲವು ವಿದ್ಯಾರ್ಥಿಗಳಲ್ಲಿ ಆಧಾರ್‌ ಕಾರ್ಡ್‌ ಇಲ್ಲ. ಎರಡೂ ತಾಲೂಕುಗಳಲ್ಲಿ ಆಧಾರ್‌ ನೋಂದಣಿ, ತಿದ್ದುಪಡಿ ಕೇಂದ್ರಗಳು ಸಮರ್ಪಕವಾಗಿಲ್ಲ. ಇನ್ನೊಂದೆಡೆ ಅಂಗವೈಕಲ್ಯ, ದೃಷ್ಟಿ ಸಮಸ್ಯೆ ಇರುವ ವಿದ್ಯಾರ್ಥಿಗಳಲ್ಲಿ ಹೆಬ್ಬೆಟ್ಟು, ಕಣ್ಣಿನ ಬಿಂಬ ಸಮರ್ಪಕವಾಗಿ ದಾಖಲಾಗದೆ ಆಧಾರ್‌ ಕಾರ್ಡ್‌ ದೊರೆಯುತ್ತಿಲ್ಲ. ಹೀಗಾಗಿ ಅಂತಹವರಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ.

ಆಧಾರ್‌ ಕಾರ್ಡ್‌ ಇರುವವರಲ್ಲಿ ಬ್ಯಾಂಕ್‌ ಖಾತೆ ಲಿಂಕ್‌ ಆಗದಿರುವುದು, ವಿಳಾಸ ಅದಲು ಬದಲಾಗಿರುವುದು, ಹೆತ್ತವರು ನೀಡಿದ ಮಾಹಿತಿ, ಆಧಾರ್‌ ಮಾಹಿತಿ ತಾಳೆ ಆಗದಿರುವುದು ಹೀಗೆ ಹತ್ತಾರು ಸಮಸ್ಯೆಗಳಿಂದ ಸ್ಕಾಲರ್‌ಶಿಪ್‌ ಆನ್‌ಲೈನ್‌ ಅರ್ಜಿ ತುಂಬಲು ಸಾಧ್ಯವಾಗುತ್ತಿಲ್ಲ.

– ಕಿರಣ್‌ ಪ್ರಸಾದ್‌ ಕುಂಡಡ್ಕ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ