ಸಂಪೂರ್ಣ ಸೋಲಾರ್‌ ಅಳವಡಿಸಿ ಜಿಲ್ಲೆಗೆ ಮಾದರಿಯಾಗುವ ಹಂಬಲ

ಸಾವಿರಾರು ಮಂದಿಯ ಭವಿಷ್ಯ ರೂಪಿಸಿದ ಆಲಂಕಾರು ಸರಕಾರಿ ಶಾಲೆಗೆ 100ರ ಸಂಭ್ರಮ

Team Udayavani, Nov 25, 2019, 5:54 AM IST

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

ಆಲಂಕಾರು: ಹತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದ ಶರವೂರು ಲಕ್ಷ್ಮೀ ನಾರಾಯಣ ರಾವ್‌ ಅವರ ಆಲಂಕಾರು ಸರಕಾರಿ ಶಾಲೆಗೆ ಈ ವರ್ಷ ನೂರರ ಸಂಭ್ರಮ. ಕ್ರಿ.ಶ. 1919ರಂದು ಆರಂಭವಾದ ಶಾಲೆ ಈ ವರ್ಷ ಶತಮಾನೋತ್ಸವವನ್ನು ಆಚರಿಸುತ್ತಿದ್ದು, ಶಾಲೆಗೆ ಸಂಪೂರ್ಣ ಸೋಲಾರ್‌ ಅಳವಡಿಸುವ ಮೂಲಕ ಜಿಲ್ಲೆಯಲ್ಲೇ ಮಾದರಿ ಶಾಲೆಯಾಗಿ ರೂಪುಗೊಳಿಸಲು ಸಕಲ ಸಿದ್ದತೆಗಳು ಭರದಿಂದ ಸಾಗುತ್ತಿದೆ.

ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಾಲಯದ ರಥಬೀದಿಯಯಲ್ಲಿ ಆರಂಭವಾದ ಶಾಲೆ ಹಲವು ಸಂಕಷ್ಟವನ್ನು ಎದುರಿಸಿಕೊಂಡು ಬೆಳೆದು ನಿಂತಿದೆ. 1952ರಲ್ಲಿ ಆಲಂಕಾರು ಪೇಟೆಗೆ ಸ್ಥಳಾಂತರಗೊಂಡು ನಾರಾಯಣ ರಾವ್‌ ಅವರ ಬಾಡಿಗೆ ಕಟ್ಟಡದಲ್ಲಿ, ಬಳಿಕ ಪೇಟೆಯಲ್ಲಿರುವ ದೇವಾಲಯದ ಕಟ್ಟಡದಲ್ಲಿ 5ನೇ ತರಗತಿಯವರೆಗೆ ತರಗತಿಗಳು ನಡೆದುಕೊಂಡು ಬಂದಿದ್ದವು.

ಶಿಶು ವಿಹಾರ ಸ್ಥಾಪನೆ
1956ರಲ್ಲಿ ಮಹಾಲಕ್ಷ್ಮೀ ಅಮ್ಮನವರ ಮುಳಿ ಹುಲ್ಲಿನ ಕಟ್ಟಡದಲ್ಲಿ ಶಾಲಾ ತರಗತಿಗಳನ್ನು ಮುಂದುವರಿಸಲಾಯಿತು. ಇದೇ ವೇಳೆ ಪದ್ಮಾವತಿ ಅಮ್ಮನವರು ಶಾಲೆಯಲ್ಲಿ ಶಿಶುವಿಹಾರವನ್ನು ಸ್ಥಾಪಿಸಿ ಮುನ್ನಡೆಸಿದ ಮಹಿಳಾ ಸಾಧಕಿಯಾಗಿ ಗುರುತಿಸಿಕೊಂಡಿದ್ದರು. ಬಳಿಕ ಆಲಂಕಾರು ಮಂಡಲ ಪಂಚಾಯತ್‌ ಸರಕಾರಿ ಶಾಲೆಗೆ ಜಾಗವನ್ನು ಮಂಜೂರುಗೊಳಿಸಿ ಕಟ್ಟಡ ನಿರ್ಮಿಸಿ 7ನೇ ತರಗತಿಗೆ ಉನ್ನತೀಕರಿಸಿತು. ಆಲಂಕಾರು, ಪೆರಾಬೆ, ಕುಂತೂರು, ಹಳೆನೇರಂಕಿ, ರಾಮಕುಂಜ ಗ್ರಾಮಗಳ ವ್ಯಾಪ್ತಿಗೆ ಈ ಶಾಲೆಯು ಒಳಪಟ್ಟಿತ್ತು. ಆರಂಭದಲ್ಲಿ 40 ವಿದ್ಯಾರ್ಥಿಗಳ ಸೇರ್ಪಡೆಯೊಂದಿಗೆ ತರಗತಿಗಳು ಆರಂಭವಾಗಿದ್ದವು. ಇಂದು ಎಲ್ಲ ಗ್ರಾಮಗಳಲ್ಲಿ ಸರಕಾರಿ ಶಾಲೆಗಳ ನಿರ್ಮಾಣವಾಗಿದೆ. ಇದೀಗ ಆಲಂಕಾರು ಶಾಲೆಯಲ್ಲಿ 1ರಿಂದ 7ನೇ ತರಗತಿಗಳಿದ್ದು ಒಟ್ಟು 306 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಬೆಂಕಿ ಬಿದ್ದು ದಾಖಲೆ ನಾಶ
1956ರಲ್ಲಿ ಶಾಲೆಗೆ ಬೆಂಕಿ ಬಿದ್ದು ಎಲ್ಲ ದಾಖಲೆ ಪತ್ರಗಳು ನಾಶವಾಗಿತ್ತು. ಕೆಲವೊಂದು ದಾಖಲೆಗಳ ಪ್ರಕಾರ ಈ ಹಿಂದೆ ಸೇಸಪ್ಪ ಪೂಜಾರಿ, ರಾಮಣ್ಣ ಗೌಡ, ಪೆರ್ಗಡೆ ಗೌಡ, ವೆರೋನಿಕಾ ವೇಗಸ್‌, ಕೆ. ದಾಮೋದರ, ಲಕ್ಷ್ಮೀನಾರಾಯಣ ರಾವ್‌, ಸಿ.ಎಚ್‌. ಗಣಪತಿ ಭಟ್‌, ಎಂ. ತಿಮ್ಮಪ್ಪ ಪೂಜಾರಿ, ಈಶ್ವರ ಭಟ್‌, ಶೇಖರ ಶೆಟ್ಟಿ, ಗುಮ್ಮಣ್ಣ ಗೌಡ, ಕೆ.ಟಿ. ಪೂಜಾರಿ ಮೊದಲಾದ ಪ್ರಮುಖ ಶಿಕ್ಷಕರು ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಪ್ರಸ್ತುತ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಮುಖ್ಯ ಶಿಕ್ಷಕ ಕೆ.ಪಿ. ನಿಂಗರಾಜು ಅವರ ನೇತೃತ್ವದಲ್ಲಿ 10 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕಾಮಗಾರಿ ಪ್ರಗತಿಯಲ್ಲಿ
2.33 ಎಕ್ರೆ ಜಾಗದ ಆಸ್ತಿಯನ್ನು ಹೊಂದಿದ್ದು ಮೂರು ಕಟ್ಟಡಗಳು ಕ್ರೀಡಾಂಗಣ, ಶುದ್ಧ ಕುಡಿಯುವ ನೀರಿನ ಘಟಕ, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ, ಗ್ರಂಥಾಲಯ, ಸ್ಮಾರ್ಟ್‌ ಕ್ಲಾಸ್‌, ಪ್ರಯೋಗಾಲಯ, ಕಂಪ್ಯೂಟರ್‌ ತರಬೇತಿ ತರಗತಿ ಮೊದಲಾದ ಮೂಲ ಸೌಕರ್ಯದ ವ್ಯವಸ್ಥೆಯನ್ನು ಮಾಡಲಾಗಿದೆ. ಶತಮಾನೋತ್ಸವದ ಸವಿ ನೆನಪಿಗಾಗಿ ಸುಸಜ್ಜಿತ ಬಯಲು ರಂಗಮಂದಿರ, ಒಂದು ಅಂತಸ್ತಿನ ಕಟ್ಟಡ, ಭೋಜನ ಶಾಲೆ, ಕ್ರೀಡಾಂಗಣ ವಿಸ್ತರಣೆ, ಇಂಟರಾಕ್ಟ್ ಬೋರ್ಡ್‌, ಶಾಲಾ ಲೈಟ್‌ ಬೋರ್ಡ್‌, ಹೈಮಾಸ್ಟ್‌ ದೀಪ ಅಳವಡಿಕೆಗೆ ಯೋಜನೆ ಹಾಕಿಕೊಳ್ಳಲಾಗಿದ್ದು, ಕಾಮಗಾರಿಗಳು ಭರದಿಂದ ಸಾಗುತ್ತಿವೆ.

ಸರಕಾರಿ ಉದ್ಯೋಗ ಬೇಕು, ಸರಕಾರದ ಯೋಜನೆಗಳ ಎಲ್ಲ ಪ್ರಯೋಜನಗಳು ಬೇಕು. ಆದರೆ ಇಂದು ಸರಕಾರಿ ಶಾಲೆಗಳು ಬೇಡ. ಸರಕಾರಿ ಆಸ್ಪತ್ರೆ ಬೇಡ. ಸರಕಾರಿ ಬಸ್‌ ಬೇಡದ ಪರಿಸ್ಥಿತಿ ನಿರ್ಮಾಣವಾಗಿದೆ. ಸರಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಸೆಳೆಯುವ ಉದ್ದೇಶದಿಂದ ಈ ಶಾಲೆಯಲ್ಲಿ ವಿಶೇಷ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ವಿಶ್ವ ಸಂಸ್ಥೆಯ ಯುನಿಸೆಫ್ ಪ್ರಾಯೋಜಕತ್ವದಲ್ಲಿ ಚೆನ್ನೈ ಮೂಲದ ಕಂಪೆನಿ ಶಾಲೆಯ 5ರಿಂದ 7ನೇ ತರಗತಿಯವರೆಗೆ ಇಂಗ್ಲಿಷ್‌ ಕಲಿಕಾ ತರಗತಿಗಳನ್ನು ಒದಗಿಸಿದೆ. ಇದಕ್ಕಾಗಿ ಕಂಪೆನಿ 40 ಇಂಚಿನ ಎಲ್‌ಇಡಿ ಟಿವಿಯನ್ನು ಅಳವಡಿಸಿದೆ. ಜತೆಗೆ ಸುಮಾರು 70 ಸಾವಿರ ಮೊತ್ತದ ಕಲಿಕಾ ಸಾಮಗ್ರಿ ನೀಡಿದೆ.
– ನಾರಾಯಣ ನಡುಮನೆ
ಅಧ್ಯಕ್ಷರು, ಹಿರಿಯ ವಿದ್ಯಾರ್ಥಿ ಸಂಘ

ಶಾಲೆಗೆ ಬಣ್ಣ ಬಳಿದು ಗೋಡೆಯ ತುಂಬಾ ವರ್ಲಿ ಚಿತ್ರಗಳನ್ನು ಬಿಡಿಸಲಾಗಿದೆ. ಆವರಣವನ್ನು ಹೂಕುಂಡ, ಹೂದೋಟದಿಂದ ಸಿಂಗರಿಸಲಾಗಿದೆ. ಸರ್ವಧರ್ಮ ಸಮನ್ವಯದ 7ಬಣ್ಣಗಳ ಏಕತೆಯ ಧ್ವಜವನ್ನು ಹಾಕಲಾಗಿದೆ. 1ರಿಂದ 4ನೇ ತರಗತಿಗೆ ಮೀಸಲಾಗಿರುವ ಗುಬ್ಬಚ್ಚಿ ಸ್ಪೀಕಿಂಗ್‌ ತರಗತಿಯನ್ನು 7ನೇ ತರಗತಿಯವರೆಗೆ ವಿಸ್ತರಿಸಲಾಗಿದೆ. ವಿದ್ಯಾರ್ಥಿಗಳಿಗೆ ನ್ಪೋಕನ್‌ ಇಂಗ್ಲಿಷ್‌, ಸೆಂಟೆನ್ಸ್‌ ಪ್ರಾಕ್ಟೀಸ್‌ನ 45ನಿಮಿಷದ ತರಗತಿಗಳನ್ನು ಪ್ರತೀದಿನ ನೀಡಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಸ್ವಾವಲಂಬನೆಯ ಜೀವನವನ್ನು ರೂಪಿಸುವ ಉದ್ದೇಶದಿಂದ ಟೈಲರಿಂಗ್‌ ತರಬೇತಿ ಜತೆಗೆ ಕಂಪ್ಯೂಟರ್‌ ಶಿಕ್ಷಣ ನೀಡಲಾಗುತ್ತಿದೆ.
– ಕೆ.ಪಿ. ನಿಂಗರಾಜು
ಮುಖ್ಯ ಶಿಕ್ಷಕರು

ಎಲ್‌ಕೆಜಿ, ಯುಕೆಜಿ
ತರಗತಿಯೂ ಆರಂಭ
ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಲಾಗಿದೆ. ಶತಮಾನೋತ್ಸವದ ನೆನೆಪಿಗಾಗಿ ಶಾಲಾ ವಾಹನದ ವ್ಯವಸ್ಥೆಗೆ ಯೋಜನೆ ಹಾಕಿಕೊಳ್ಳಲಾಗಿದೆ. ಸರಕಾರಿ ಶಾಲೆಗಳು ಖಾಸಗಿ ಶಾಲೆಗಿಂತ ಕಡಿಮೆ ಇಲ್ಲ ಎಂಬುವುದನ್ನು ತೋರಿಸುವುದೇ ನಮ್ಮ ಉದ್ದೇಶ ಎಂದು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹೇಳಿದ್ದಾರೆ.

-ಸದಾನಂದ ಆಲಂಕಾರು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ