ಪುಣಚ, ಪೆರುವಾಯಿ ಪ್ರಾ. ಆ. ಕೇಂದ್ರಕ್ಕೆ ಒಬ್ಬರೇ ವೈದ್ಯರು

Team Udayavani, Jul 2, 2018, 2:20 AM IST

ವಿಟ್ಲ: ಬಂಟ್ವಾಳ ತಾಲೂಕಿನ ಪುಣಚ ಮತ್ತು ಪೆರುವಾಯಿ ಗ್ರಾಮಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಸದ್ಯದ ಪರಿಸ್ಥಿತಿಯಲ್ಲಿ ಒಬ್ಬರೇ ವೈದ್ಯಾಧಿಕಾರಿ ಇದ್ದಾರೆ. ಪುಣಚದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ| ಯದುರಾಜ್‌ ಉನ್ನತ ವ್ಯಾಂಸಗಕ್ಕೆ ತೆರಳಿರುವುದರಿಂದ ಹುದ್ದೆ ಖಾಲಿಯಾಗಿದೆ. ಡಾ| ಕೃಷ್ಣಮೂರ್ತಿ ಅವರು ಪೆರುವಾಯಿ ಪ್ರಾ.ಆ. ಕೇಂದ್ರದ ವೈದ್ಯಾಧಿಕಾರಿಯಾಗಿದ್ದು, ಇದೀಗ ಪುಣಚಕ್ಕೆ ಬುಧವಾರ ಮತ್ತು ಶುಕ್ರವಾರ ತೆರಳುತ್ತಿದ್ದಾರೆ. ಈ ಎರಡೂ ಆಸ್ಪತ್ರೆಗಳಲ್ಲಿ ಪ್ರತಿದಿನವೂ 70ರಿಂದ 80 ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಮಳೆ ಜೋರಾಗಿರುವುದರಿಂದ ವೈರಲ್‌ ಜ್ವರ ಕಾಡುತ್ತಿದೆ. ಅವರಿಗೆ ತತ್‌ಕ್ಷಣ ಚಿಕಿತ್ಸೆ ಸಿಕ್ಕಲ್ಲಿ ಗುಣಮುಖ ಹೊಂದುತ್ತಾರೆ. ವೈದ್ಯಾಧಿಕಾರಿ ಅಲ್ಲಿ ಇಲ್ಲಿ ಅಲೆದಾಡಿದರೆ ರೋಗಿಗಳು ತತ್ತರಿಸುತ್ತಾರೆ. ಇದೀಗ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ವೈದ್ಯಾಧಿಕಾರಿಗಳಿಲ್ಲದೇ ಇರುವುದು ಬಹಳ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಪುಣಚ ಪ್ರಾ. ಆರೋಗ್ಯ ಕೇಂದ್ರ
ಪುಣಚ ಪ್ರಾಥಮಿಕ ಆರೋಗ್ಯ ಕೇಂದ್ರವು 6 ಬೆಡ್‌ ಹೊಂದಿರುವ ಆಸ್ಪತ್ರೆ. ಇಲ್ಲಿ ವೈದ್ಯಾಧಿಕಾರಿಗಳು ಕ್ಲರ್ಕ್‌ ಮಾಡಬೇಕಾದ ಕರ್ತವ್ಯವನ್ನೂ ಮಾಡಬೇಕಾದ ಅನಿವಾರ್ಯತೆಯಿದೆ. ಸ್ಟಾಫ್‌ ನರ್ಸ್‌ ಇದ್ದಾರೆ. ಕಿರಿಯ ಆರೋಗ್ಯ ಸಹಾಯಕಿಯರ ಎರಡು ಹುದ್ದೆ, ಹಿರಿಯ ಆರೋಗ್ಯ ಸಹಾಯಕಿಯರ ಒಂದು ಹುದ್ದೆ ಖಾಲಿಯಾಗಿದೆ. ಲ್ಯಾಬ್‌ ಟೆಕ್ನೀಶಿಯನ್‌, ಗ್ರೂಪ್‌ ಡಿ, ಫಾರ್ಮಾಸಿಸ್ಟ್‌ ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದೆ. ಸುಸಜ್ಜಿತ ಆಸ್ಪತ್ರೆಯಾಗಿದ್ದು, ಮೂರು ವರ್ಷಗಳ ಹಿಂದೆ ನಿರ್ಮಾಣವಾದ ಕಟ್ಟಡ. ಜಾಗ ವಿಶಾಲವಾಗಿದೆ. ವಾಸ್ತವವಾಗಿ ಈ ಆಸ್ಪತ್ರೆಗೆ ಆರೋಗ್ಯ ಸಹಾಯಕಿಯರ ಕರ್ತವ್ಯ ನಿರ್ವಹಣೆಯನ್ನು ವಿಭಜಿಸಲಿಲ್ಲ. ಅಡ್ಯನಡ್ಕ ಆಸ್ಪತ್ರೆಯಿಂದ ಅವರನ್ನು ಕಳುಹಿಸಿ, ನಿಭಾಯಿಸಲಾಗುತ್ತದೆ. ಈ ಬಗ್ಗೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಪೆರುವಾಯಿ ಪ್ರಾ. ಆ. ಕೇಂದ್ರ

ಪೆರುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರವೂ 6 ಬೆಡ್‌ ಗಳ ಆಸ್ಪತ್ರೆ. ಆದರೆ ಜಾಗ ವಿಶಾಲವಾಗಿಲ್ಲ. ಕೇವಲ 3 ಬೆಡ್‌ ಗಳಲ್ಲಿ ರೋಗಿಗಳನ್ನು ನಿಭಾಯಿಸಲಾಗುತ್ತದೆ. ಕಟ್ಟಡವೂ ಹಳೆಯದು. ಕೆಲವು ಕಡೆಗಳಲ್ಲಿ ಸೋರುತ್ತಿದೆ. ಕಿಟಕಿಗಳ ದುರಸ್ತಿಯಾಗಬೇಕಾಗಿದೆ. ಆವರಣಗೋಡೆ ಎದುರು ಭಾಗದಲ್ಲಿದ್ದರೂ ಉಳಿದ ಭಾಗಗಳಲ್ಲಿಲ್ಲ. ಹೊಸ ಕಟ್ಟಡ ನಿರ್ಮಾಣ ಮಾಡುವುದಿದ್ದಲ್ಲಿ ಗುಡ್ಡ ಸಮತಟ್ಟು ಮಾಡದಿದ್ದಲ್ಲಿ ಸಮರ್ಪಕ  ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಲಾಗದು ಎಂಬ ಅಭಿಪ್ರಾಯ ಗ್ರಾಮಸ್ಥರದ್ದು. ಇಲ್ಲಿ ಸ್ಟಾಫ್‌ ನರ್ಸ್‌ ಇದ್ದಾರೆ. ಕಿರಿಯ, ಹಿರಿಯ ಆ. ಸಹಾಯಕಿಯರ ಹುದ್ದೆ ಖಾಲಿಯಿದೆ. ಹೊರಗುತ್ತಿಗೆ ಆಧಾರದಲ್ಲಿ ಲ್ಯಾಬ್‌ ಟೆಕ್ನೀಶಿಯನ್‌, ಗ್ರೂಪ್‌ ಡಿ ನೌಕರರಿದ್ದು, ಫಾರ್ಮಾಸಿಸ್ಟ್‌ ಹುದ್ದೆ ಖಾಲಿಯಾಗಿದೆ.

ಔಷಧ ಕೊರತೆಯಿದೆ 
ರಾಜ್ಯಾದ್ಯಂತ ಎಲ್ಲ ಆಸ್ಪತ್ರೆಗಳಲ್ಲಿಯೂ ಈಗ ಔಷಧ ಕೊರತೆಯಿದೆ. ಇದಕ್ಕೆ ಕಾರಣವೂ ಇದೆ. ಮಾರ್ಚ್‌ ತಿಂಗಳಲ್ಲಿ ಇರುವ ಬಜೆಟ್‌ ಮೊತ್ತದಲ್ಲಿ ಸಾಕಷ್ಟು ಔಷಧ ಖರೀದಿಸಬೇಕು. ಸರಕಾರದ ನಿಯಮಾನುಸಾರ ಹೊಸ ಬಜೆಟ್‌ ಮಂಡನೆ ಆಗಬೇಕು. ಈ ಬಾರಿ ಚುನಾವಣೆ ನಡೆಸಿ, ಸರಕಾರ ಅಸ್ತಿತ್ವಕ್ಕೆ ಬರುವುದಕ್ಕೆ ತಡವಾಗಿರುವುದರಿಂದ ಈ ಅನುದಾನ ಬಿಡುಗಡೆಗೊಂಡಿಲ್ಲ. ಪರಿಣಾಮವಾಗಿ ಔಷಧ ಸರಬರಾಜಲ್ಲಿ ಸ್ವಲ್ಪ ಮಟ್ಟಿನ ಕೊರತೆಯಿದ್ದು, ಎಲ್ಲ ಆಸ್ಪತ್ರೆಗಳಲ್ಲೂ ಸೆಪ್ಟಂಬರ್‌ ವರೆಗೆ ರೋಗಿಗಳು ಪರದಾಡಬೇಕಾಗಬಹುದು.

ಗಡಿ ಗುರುತಿಸಲು ಮನವಿ
ಪುಣಚ ಆಸ್ಪತ್ರೆಗೆ ವೈದ್ಯಾಧಿಕಾರಿ ಶೀಘ್ರದಲ್ಲೇ ಆಗಮಿಸಲಿದ್ದಾರೆ. ಆರೋಗ್ಯ ಸಹಾಯಕಿಯರ ಹುದ್ದೆ ಖಾಲಿಯಿದೆ. ಅದಕ್ಕೆ ಪ್ರಸ್ತುತ ಅಡ್ಯನಡ್ಕ ಆಸ್ಪತ್ರೆಯ ಆರೋಗ್ಯ ಸಹಾಯಕಿಯರು ಆಗಮಿಸುತ್ತಾರೆ. ಸರಕಾರದ ನಿಯಮಾನುಸಾರ ಪ್ರಸ್ತುತ ಅಡ್ಯನಡ್ಕ ಆಸ್ಪತ್ರೆಯ ಸಿಬಂದಿಗೆ ಫೀಲ್ಡ್‌ ನೀಡಬೇಕಾಗುತ್ತದೆ. ಸರಕಾರ ಗ್ರಾಮಗಳನ್ನು ವಿಂಗಡಿಸಿ, ವಿವಿಧ ಆಸ್ಪತ್ರೆಗಳ ವ್ಯಾಪ್ತಿಯನ್ನು ಗುರುತಿಸುತ್ತದೆ. ಆಗ ಆರೋಗ್ಯ ಸಹಾಯಕಿಯರಿಗೆ ಕರ್ತವ್ಯವನ್ನು ನಿಯೋಜಿಸಲಾಗುತ್ತದೆ. ಗಡಿ ಗುರುತಿಸುವ ಕಾರ್ಯಕ್ಕೆ ನಾವು ಸರಕಾರಕ್ಕೆ ಮನವಿ ಮಾಡಿದ್ದೇವೆ. ಪೆರುವಾಯಿ ಆಸ್ಪತ್ರೆ ಕಟ್ಟಡ ದುರಸ್ತಿ ಮಾಡಲಾಗಿದೆ. ಇನ್ನೂ ಅವಶ್ಯವಿದ್ದಲ್ಲಿ ಅನುದಾನ ಹೊಂದಿಸಿ ದುರಸ್ತಿಗೊಳಿಸಲಾಗುವುದು. 
– ಡಾ| ದೀಪಾ ಪ್ರಭು, THO

— ಉದಯಶಂಕರ್‌ ನೀರ್ಪಾಜೆ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ