ದ.ಕ., ಉಡುಪಿ ಜಿಲ್ಲೆಗಳ 9 ಸಾವಿರ ಮಕ್ಕಳಿಗೆ ಬಿಸಿಯೂಟದ ಸವಿ

ಖಾಸಗಿ ಕನ್ನಡ ಶಾಲೆಗಳಿಗೂ ಅಕ್ಷರದಾಸೋಹ ಯೋಜನೆ

Team Udayavani, Nov 12, 2019, 5:45 AM IST

ಮಂಗಳೂರು: ಅಕ್ಷರದಾಸೋಹ ಯೋಜನೆಯನ್ನು ಖಾಸಗಿ ಕನ್ನಡ ಶಾಲೆಗಳ ಮಕ್ಕಳಿಗೂ ವಿಸ್ತರಿಸುವ ಯೋಚನೆ ಸರಕಾರದ ಮುಂದಿದ್ದು, ಜಾರಿಯಾದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 150 ಶಾಲೆಗಳ 9,000 ಮಕ್ಕಳು ಮಧ್ಯಾಹ್ನದ ಬಿಸಿಯೂಟ ಸವಿಯಲಿದ್ದಾರೆ.

ಸರಕಾರಿ ಶಾಲೆಗಳ ಮಕ್ಕಳಿಗೆ ಬಿಸಿಯೂಟ ನೀಡುವ ಅಕ್ಷರದಾಸೋಹ ಯೋಜನೆ 2003ರಿಂದಲೇ ರಾಜ್ಯದಲ್ಲಿ ಜಾರಿಯಲ್ಲಿದೆ. 2007ರಲ್ಲಿ ಸರಕಾರಿ ಪ್ರೌಢ ಶಾಲೆಗಳಿಗೂ ವಿಸ್ತರಿಸಲಾಗಿತ್ತು. ಇದೀಗ ಕನ್ನಡ ಶಾಲೆಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಖಾಸಗಿ ಕನ್ನಡ ಶಾಲೆಗಳಿಗೂ ವಿಸ್ತರಿಸುವ ಯೋಚನೆ ಸರಕಾರದ್ದು. ಇದಕ್ಕೆ ಮುಖ್ಯಮಂತ್ರಿಗಳ ಒಪ್ಪಿಗೆಯೂ ದೊರೆತಿದೆ. ಆದರೆ ಈ ವರ್ಷವೇ ಜಾರಿಯಾಗುತ್ತದೆಯೋ ಮುಂದಿನ ಶೈಕ್ಷಣಿಕ ವರ್ಷದಿಂದಲೋ ಎಂಬ ಸ್ಪಷ್ಟ ಮಾಹಿತಿ ಅಧಿಕಾರಿಗಳಿಗೆ ಇಲ್ಲ.

ದ.ಕ.: 7,671 ಮಕ್ಕಳು
ಈ ಶೈಕ್ಷಣಿಕ ವರ್ಷದೊಳಗೇ ಖಾಸಗಿ ಕನ್ನಡ ಶಾಲೆಗಳ ಮಕ್ಕಳಿಗೆ ಬಿಸಿಯೂಟ ಯೋಜನೆ ಜಾರಿಯಾದಲ್ಲಿ ದ.ಕ. ಜಿಲ್ಲೆಯ 7,671 ಮಕ್ಕಳು ಇದರ ಫ‌ಲಾನುಭವಿಗಳಾಗಲಿದ್ದಾರೆ. ಅವರಲ್ಲಿ 4,832 ಮಂದಿ ಪ್ರಾಥಮಿಕ ಶಾಲೆಯ ಮಕ್ಕಳಾದರೆ, 2,839 ಮಂದಿ ಪ್ರೌಢಶಾಲೆಯವರು. ಜಿಲ್ಲೆಯಲ್ಲಿ ಒಟ್ಟು 140 ಖಾಸಗಿ ಕನ್ನಡ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿವೆ.

ಉಡುಪಿ ಜಿಲ್ಲೆಯ 10 ಶಾಲೆಗಳ 1,329 ಮಂದಿ ವಿದ್ಯಾರ್ಥಿಗಳು ಪ್ರಯೋಜನ ಪಡೆಯಲಿದ್ದಾರೆ.

1,403 ಮಕ್ಕಳಿಗೆ ಬಿಸಿಯೂಟ
ಅಕ್ಷರದಾಸೋಹ ಆರಂಭವಾ ದಾಗಿನಿಂದ ದ.ಕ. ಜಿಲ್ಲೆಯ 1,403 ಶಾಲೆಗಳ ಮಕ್ಕಳು ಪ್ರತಿದಿನ ಬಿಸಿಯೂಟ ಸವಿಯುತ್ತಿದ್ದಾರೆ. 914 ಸರಕಾರಿ ಪ್ರಾಥಮಿಕ, 169 ಸರಕಾರಿ ಪ್ರೌಢಶಾಲೆ, 203 ಅನುದಾನಿತ ಪ್ರಾಥಮಿಕ ಮತ್ತು 117 ಅನುದಾನಿತ ಪ್ರೌಢಶಾಲೆ ಮಕ್ಕಳಿಗೆ ಬಿಸಿಯೂಟ ಸೌಲಭ್ಯ ಸಿಗುತ್ತಿದೆ.

ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಖಾಸಗಿ ಕನ್ನಡ ಶಾಲೆಗಳಿಗೂ ವಿಸ್ತರಿಸುವುದಾಗಿ ಸರಕಾರ ಹೇಳಿದೆ. ಆದರೆ ಯಾವಾಗ ಮಕ್ಕಳಿಗೆ ಈ ಸೌಲಭ್ಯ ಸಿಗಲಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.
– ರಾಜಲಕ್ಷ್ಮೀ, ಶಿಕ್ಷಣಾಧಿಕಾರಿ, ಅಕ್ಷರದಾಸೋಹ ಯೋಜನೆ, ದ.ಕ.

ಉಡುಪಿ ಜಿಲ್ಲೆಯಲ್ಲಿ
6 ಖಾಸಗಿ ಕನ್ನಡ ಪ್ರೌಢಶಾಲೆ ಮತ್ತು 4 ಪ್ರಾಥಮಿಕ ಶಾಲೆಗಳಿವೆ. ಪ್ರೌಢಶಾಲೆ ಯಲ್ಲಿ 864, ಪ್ರಾಥಮಿಕ ಶಾಲೆಯಲ್ಲಿ 465 ವಿದ್ಯಾರ್ಥಿಗಳು ಸೇರಿ ಒಟ್ಟು 1,329 ವಿದ್ಯಾರ್ಥಿಗಳು ಪ್ರಸ್ತುತ ಇದ್ದಾರೆ. ಬಿಸಿಯೂಟ ಯೋಜನೆ ಈ ವರ್ಷವೇ ಜಾರಿಯಾದಲ್ಲಿ ಈ ವಿದ್ಯಾರ್ಥಿಗಳು ಸೌಲಭ್ಯ ಪಡೆಯಲಿದ್ದಾರೆ.
– ಶೇಷಶಯನ ಕಾರಿಂಜ, ಉಡುಪಿ ಡಿಡಿಪಿಐ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ