ರಾಜ್ಯದ ಸಾವಿರ ಗ್ರಾ.ಪಂ.ಗಳಲ್ಲಿ “ಸ್ವಚ್ಛಮೇವ ಜಯತೆ’

ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ-ತ್ಯಾಜ್ಯ ವಿಲೇವಾರಿ ನಿರ್ವಹಣೆಗೆ ಒತ್ತು

Team Udayavani, May 16, 2019, 6:00 AM IST

ಮಂಗಳೂರು: ಕೇಂದ್ರದ ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ಜೂನ್‌ ತಿಂಗಳಿಡೀ ಗ್ರಾಮ ಮಟ್ಟದಲ್ಲಿ “ಸ್ವಚ್ಛ ಮೇವ ಜಯತೆ’ ಎಂಬ ವಿಶೇಷ ಆಂದೋಲನ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯ 230 ಗ್ರಾ.ಪಂ.ಗಳ 366 ಗ್ರಾಮಗಳಲ್ಲಿ ಹಾಗೂ ಉಡುಪಿ ಜಿಲ್ಲೆಯ 158 ಗ್ರಾ.ಪಂ.ಗಳ 225 ಗ್ರಾಮಗಳಲ್ಲಿ ಇದನ್ನು ಕೈಗೆತ್ತಿಕೊಳ್ಳಲಾಗುತ್ತದೆ.

ಗ್ರಾಮೀಣ ಪ್ರದೇಶಗಳಲ್ಲಿ ಸಂಪೂರ್ಣ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ಕೇಂದ್ರ ಸರಕಾರ ಆಯೋಜಿಸಲಿರುವ ಆಂದೋಲನವಿದು. ರಾಜ್ಯದ ಆಯ್ದ ಒಂದು ಸಾವಿರ ಗ್ರಾ.ಪಂ.ಗಳಲ್ಲಿ ನಡೆಯಲಿದೆ.

ವೈಯಕ್ತಿಕ ಗೃಹ ಶೌಚಾಲಯ, ಸಮುದಾಯ ಶೌಚಾಲಯಗಳ ಬಳಕೆ, ಶಾಲಾ-ಅಂಗನವಾಡಿ ಶೌಚಾಲಯಗಳ ಉಪಯೋಗಕ್ಕೆ ಜಾಗೃತಿ, ಗ್ರಾಮಗಳಲ್ಲಿ ಘನ ತ್ಯಾಜ್ಯ ವಿಲೇವಾರಿ, ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದು ಉದ್ದೇಶ. ಇದರ ಭಾಗವಾಗಿ ಗ್ರಾ.ಪಂ., ಪ್ರತೀ ಗ್ರಾಮಗಳಲ್ಲಿ ಗೋಡೆ ಬರಹ ಬರೆಯಲಾಗುತ್ತದೆ. ಬೀದಿ ನಾಟಕದ ಮೂಲಕ ಸ್ವಚ್ಛತೆಯ ಅರಿವು ಮೂಡಿಸಲಾಗುತ್ತದೆ. ಪ್ರಬಂಧ ಸ್ಪರ್ಧೆ, ಶ್ರಮದಾನ, ಜಾಥಾ, ಶೌಚಾಲಯ ಬಳಕೆ ಅಭಿಯಾನ, ವಿವಿಧ ಐಇಸಿ ಕಾರ್ಯಕ್ರಮ, ಬ್ಯಾನರ್‌ಗಳ ಮೂಲಕ ಜಾಗೃತಿ ಮೂಡಿಸಲಾಗುತ್ತದೆ.

ಒಂದು ತಿಂಗಳ ಅರಿವು ಕಾರ್ಯಕ್ರಮ
ಸ್ವಚ್ಛ ಭಾರತ್‌ ಮಿಷನ್‌ನಡಿಯಲ್ಲಿ ಜೂ. 1ರಿಂದ 30ರ ವರೆಗೆ ಜಿಲ್ಲೆ, ತಾಲೂಕು, ಗ್ರಾ.ಪಂ.ಗಳಲ್ಲಿ ತಿಂಗಳ ಕಾಲ “ಸ್ವಚ್ಛಮೇವ ಜಯತೆ’ ಆಂದೋಲನದಡಿ ಅರಿವು ಕಾರ್ಯ ಕ್ರಮ ನಡೆಯಲಿದೆ. ಮುಖ್ಯ ವಾಗಿ ಜಿ.ಪಂ., ತಾ.ಪಂ., ಗ್ರಾ.ಪಂ.ಗಳ ಶಾಲಾ ಅಂಗನವಾಡಿ ಕಟ್ಟಡ, ಪಂ. ಕಚೇರಿ, ಸಾರ್ವಜನಿಕ ಸ್ಥಳಗಳು, ಸಮುದಾಯ ಶೌಚಾಲಯ, ಜನ ನಿಬಿಡ ಪ್ರದೇಶಗಳ ಕಟ್ಟಡ, ಬಹಿರ್ದೆಸೆ ಸ್ಥಳಗಳಲ್ಲಿ, ಬಸ್‌ ನಿಲ್ದಾಣಗಳ ಸಮೀಪ ಮಲ ಸೂಕ್ತ ವಿಲೇವಾರಿ, ಘನ ತ್ಯಾಜ್ಯ ನಿರ್ವಹಣೆಯ ಬಗ್ಗೆ ಗೋಡೆ ಬರಹ ಬರೆಸಲಾಗುತ್ತದೆ. ಆಂದೋಲನದ ಮಾಹಿತಿಯಿರುವ ಪೋಸ್ಟರ್‌ಗಳನ್ನು ಗ್ರಾ.ಪಂ.ಗಳಿಗೆ ಹಂಚಲಾಗುತ್ತದೆ. ಆಂದೋಲನದ ಪ್ರಮುಖ ಉದ್ದೇಶಗಳನ್ನು ಕೆಎಸ್ಸಾ ರ್ಟಿಸಿ ಬಸ್‌ ನಿಲ್ದಾಣಗಳಲ್ಲಿ, ರಾಜ್ಯದ ಪ್ರಮುಖ ರೈಲು ನಿಲ್ದಾಣಗಳಲ್ಲಿ ದೃಶ್ಯ, ಶ್ರವ್ಯ ಮಾಧ್ಯಮದ ಮೂಲಕ ಜಾಹೀರು ಮಾಡಲಾಗುತ್ತದೆ. ಮಕ್ಕಳಿಂದ ಜಾಥಾ, ಸ್ವಚ್ಛತಾ ಪ್ರತಿಜ್ಞಾ ವಿಧಿ, ಸ್ವಚ್ಛತೆಗಾಗಿ ಶ್ರಮದಾನ, ಪ್ರಬಂಧ ಸ್ಪರ್ಧೆ, ಶೌಚಾಲಯ ಬಳಕೆ ಅಭಿಯಾನ, ವಿಶೇಷ ಕೈತೊಳೆಯುವ ಅಭಿಯಾನ, ವಿಶೇಷ ಗ್ರಾಮ ಸಭೆಗಳ ಆಯೋಜನೆಯೂ ಇದರ ಭಾಗವಾಗಿದೆ.

ಸ್ವಚ್ಛತೆಯ ಅರಿವು
ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ಸ್ವಚ್ಛ ಮೇವ ಜಯತೆ ಆಂದೋಲನವನ್ನು ದ.ಕ. ಜಿಲ್ಲೆಯ ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಆಯೋಜಿಸಲಾಗುತ್ತದೆ. ಕಾರ್ಯಕ್ರಮದ ಮೂಲಕ ಸಾರ್ವಜನಿಕರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಾಗುತ್ತದೆ.
– ಡಾ| ಸೆಲ್ವಮಣಿ ಆರ್‌.,
ದ.ಕ. ಜಿ.ಪಂ. ಸಿಇಒ

ಗ್ರಾಮಕ್ಕೆ ಬರಲಿದೆ ಸ್ವಚ್ಛತಾ ರಥ
ಆಂದೋಲನದ ಮಹತ್ವವನ್ನು ಗ್ರಾಮೀಣ ಜನರಿಗೆ ತಿಳಿಸುವ ಉದ್ದೇಶದಿಂದ ಜೂ. 5ರಿಂದ ತಿಂಗಳ ಕಾಲ 2-3 ಸ್ವಚ್ಛತಾ ರಥಗಳು ಪ್ರತೀ ಜಿಲ್ಲೆಯಲ್ಲಿ ಸಂಚರಿಸಲಿವೆ.

-ನವೀನ್‌ ಭಟ್‌ ಇಳಂತಿಲ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ