ವಿವಿಧೆಡೆ ಗುಡುಗು, ಗಾಳಿ ಮಳೆ; ಹಾನಿ

Team Udayavani, Nov 17, 2019, 5:21 AM IST

ಮಂಗಳೂರು/ಉಡುಪಿ: ಕರಾವಳಿಯ ವಿವಿಧೆಡೆ ಶನಿವಾರ ಗುಡುಗು, ಮಿಂಚು, ಭಾರೀ ಗಾಳಿ ಸಹಿತ ಉತ್ತಮ ಮಳೆಯಾಗಿದೆ. ಸುಳ್ಯ, ಪುತ್ತೂರು ತಾಲೂಕಿನ ವಿವಿಧೆಡೆ ಗಾಳಿಯಿಂದಾಗಿ ಅಪಾರ ಬೆಳೆ ಹಾನಿ ಸಂಭವಿಸಿದೆ.

ಕಡಬ ಪರಿಸರದಲ್ಲಿ ಗುಡುಗು ಮಿಂಚಿನ ಜತೆ ಉತ್ತಮ ಮಳೆ ಸುರಿದಿದೆ. ಪಿಜಕಳ ಪ್ರದೇಶದಲ್ಲಿ ಬೀಸಿದ ಗಾಳಿಗೆ ಅಡಿಕೆ ಮರ, ತೆಂಗಿನ ಮರ, ರಬ್ಬರ್‌ ಮರಗಳು ಮುರಿದು ಬಿದ್ದು ಅಪಾರ ಹಾನಿಯಾಗಿದೆ. ರಾಮಕುಂಜದ ಆತೂರು ಪೇಟೆಯಲ್ಲಿ ಉಪ್ಪಿನಂಗಡಿ-ಕಡಬ ಮುಖ್ಯರಸ್ತೆಗೆ ಬೃಹತ್‌ ಮಾವಿನ ಮರದ ಕೊಂಬೆ ಮುರಿದುಬಿದ್ದು ಕೆಲಕಾಲ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಕಡಬ ಪೊಲೀಸರ ಮಾರ್ಗದರ್ಶನದಲ್ಲಿ ಸ್ಥಳೀಯರು ಮರದ ಕೊಂಬೆಯನ್ನು ತೆರವುಗೊಳಿಸಿದರು.

ಎಣ್ಮೂರು, ಪಂಬೆತ್ತಾಡಿ, ಪಂಜ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಸುಳಿಗಾಳಿ, ಗುಡುಗು ಸಹಿತ ಮಳೆಯಾಗಿದ್ದು ಫ‌ಸಲು ಇದ್ದ ಹಲವು ಅಡಿಕೆ, ಬಾಳೆಗಿಡಗಳು ಧರೆಗುರುಳಿವೆ. ಕಲ್ಮಡ್ಕ, ಪಂಜ, ಬೆಳ್ಳಾರೆ, ಪೆರುವಾಜೆಯಲ್ಲೂ ಗುಡುಗು ಸಹಿತ ಉತ್ತಮ ಮಳೆಯಾಗಿದೆ.

ಉಡುಪಿ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದ್ದರೆ ಸಿದ್ದಾಪುರ, ಕೊಲ್ಲೂರು, ಕಾರ್ಕಳ, ಕುಂಭಾಶಿ, ತೆಕ್ಕಟ್ಟೆ, ಕುಂದಾಪುರ, ಕೋಟೇಶ್ವರ, ಬೀಜಾಡಿ, ಬೆಳ್ಮಣ್‌, ಬ್ರಹ್ಮಾವರ ಭಾಗದಲ್ಲಿ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಉಡುಪಿ ನಗರದಲ್ಲಿ ಬೆಳಗ್ಗಿನಿಂದ ಮಧ್ಯಾಹ್ನದವರೆಗೂ ಬಿಸಿಲಿನ ವಾತಾವರಣವಿತ್ತು. ಸಂಜೆಯ ವೇಳೆಗೆ ಗುಡುಗು ಸಹಿತ ತುಂತುರು ಮಳೆ ಸುರಿಯಿತು.

ಮನೆಗೆ ಹಾನಿ
ಕಾರ್ಕಳ ಕಸಬಾ ಗ್ರಾಮದಲ್ಲಿ ಗಾಳಿಯಿಂದಾಗಿ ರಮೇಶ್‌ ದೇವಾಡಿಗ ಅವರ ಮನೆ ಹಾನಿಗೀಡಾಗಿದೆ. ಕಾರ್ಕಳ, ಅಜೆಕಾರು, ಹೆಬ್ರಿ, ಬಜಗೋಳಿ, ಸಾಣೂರು ಪ್ರದೇಶಗಳಲ್ಲಿ ಮಳೆ ಪ್ರಮಾಣ ಅಧಿಕವಾಗಿತ್ತು. ಹೆಬ್ರಿಯಲ್ಲಿ ಕೆಲಹೊತ್ತು ವಿದ್ಯುತ್‌‌, ದೂರವಾಣಿ ಸ್ಥಗಿತಗೊಂಡಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ