ನಗರದಲ್ಲಿ ಟ್ರಾಫಿಕ್ ಜಾಮ್
Team Udayavani, Aug 25, 2018, 10:54 AM IST
ಮಹಾನಗರ: ನಗರದ ಅನೇಕ ಕಡೆಗಳಲ್ಲಿ ಶುಕ್ರವಾರ ಮಧ್ಯಾಹ್ನ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಒಂದು ಕಡೆಯಿಂದ ಮತ್ತೊಂದು ಕಡೆ ತೆರಳಲು ತೊಂದರೆ ಅನುಭವಿಸಿದರು.
ಶುಕ್ರವಾರ ಸಭೆ-ಸಮಾರಂಭಗಳು ಜಾಸ್ತಿಯಿದ್ದು, ಈ ಕಾರಣಕ್ಕೆ ಹಲವು ಕಡೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪಿವಿಎಸ್ ವೃತ್ತದಿಂದ ಬಲ್ಲಾಳ್ಬಾಗ್ವರೆಗೆ ಬಸ್, ಕಾರು, ಬೈಕ್ ಸೇರಿದಂತೆ ಹತ್ತಾರು ವಾಹನಗಳು ಸುಮಾರು ಅರ್ಧ ತಾಸಿಗೂ ಅಧಿಕ ಹೊತ್ತು ಸಾಲುಗಟ್ಟಿ ನಿಂತಿದ್ದವು. ಅಲ್ಲದೆ, ಲಾಲ್ಬಾಗ್, ನಂತೂರು, ಕಂಕನಾಡಿ, ಬಂಟ್ಸ್ ಹಾಸ್ಟೆಲ್, ಪಡೀಲ್, ಹಂಪನಕಟ್ಟೆ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿಯೂ ವಾಹನ ದಟ್ಟಣೆ ಮಾಮೂಲಿ ದಿನಗಳಿಗಿಂತ ಹೆಚ್ಚಾಗಿತ್ತು. ತುರ್ತು ಕಾರ್ಯದ ನಿಮಿತ್ತ ತೆರಳುವ ಮಂದಿಗೆ ಅಡ್ಡಿಯುಂಟಾಯಿತು.
ಅನೇಕ ಕಡೆಗಳಲ್ಲಿ ಮಳೆಯಿಂದಾಗಿ ರಸ್ತೆಗಳು ಹಾಳಾಗಿ, ಅಲ್ಲಲ್ಲಿ ಗುಂಡಿ ಬಿದ್ದ ಕಾರಣ ವಾಹನಗಳಿಗೆ ಸರಾಗವಾಗಿ ಸಂಚರಿಸುವುದಕ್ಕೂ ತೊಂದರೆಯಾಗುತ್ತಿದೆ. ಅಲ್ಲದೆ, ಕೆಲವು ರಸ್ತೆ ಬದಿಯಲ್ಲಿ ಪಾಲಿಕೆ ವತಿಯಿಂದ ಕಾಮಗಾರಿಗಳು ನಡೆಯುತ್ತಿದ್ದು ಇದರಿಂದಲೂ ಸುಗಮ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.