ಅಳಕೆಮಜಲು ಶಾಲೆ: ಬಿಸಿಯೂಟಕ್ಕೆ ‘ಉಪ್ಪಡ್‌ ಪಚ್ಚಿಲ್’

ಹೆತ್ತವರ ಸಹಕಾರದಿಂದ ಶಾಲೆ ಅಭಿವೃದ್ಧಿ

Team Udayavani, Jul 12, 2019, 5:53 AM IST

ಕಬಕ: ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಅಳಕೆಮಜಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆಷಾಢ (ಆಟಿ) ತಿಂಗಳ ಬಿಸಿಯೂಟಕ್ಕೆ ವಿದ್ಯಾರ್ಥಿಗಳ ಹೆತ್ತವರು ‘ಉಪ್ಪಡ್‌ ಪಚ್ಚಿಲ್’ (ಉಪ್ಪಲ್ಲಿ ಹಾಕಿದ ಹಲಸು) ಒದಗಿಸಿದ್ದಾರೆ.

ಕೇವಲ 9 ಸೆಂಟ್ಸ್‌ ಜಾಗದಲ್ಲಿರುವ ಈ ಶಾಲೆ ಇಲಾಖೆಯ ದಾಖಲೆಯಂತೆ ಕಿ.ಪ್ರಾ. ವಿಭಾಗದಲ್ಲಿ ಜಿಲ್ಲೆಯಲ್ಲೇ ಗರಿಷ್ಠ ದಾಖಲಾತಿಯನ್ನು ಹೊಂದಿದೆ. ಇಲ್ಲಿನ 89 ವಿದ್ಯಾರ್ಥಿಗಳ ಹೆತ್ತವರು ಶಾಲೆಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಕ್ಕೂ ಸಹಯೋಗ ನೀಡುತ್ತಿದ್ದಾರೆ. ತಮ್ಮ ಮನೆಯ ಕಾರ್ಯಕ್ರಮ ಎಂಬಂತೆ ಎಲ್ಲ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುತ್ತಾರೆ. ಹೀಗಾಗಿ, ಶಾಲೆಯ ಕಾರ್ಯಕ್ರಮ ಊರಿನ ಹಬ್ಬದಂತಾಗುತ್ತದೆ. ಎಲ್ಲ ಸಿದ್ಧತೆಗಳನ್ನು ಸ್ಥಳೀಯರೇ ಮಾಡುತ್ತಾರೆ.

ಶಿಕ್ಷಕರೂ ಶಾಲೆಗೆ ಬರುವ ವಿದ್ಯಾರ್ಥಿಗಳ ಹೆತ್ತವರನ್ನು ಅತಿಥಿಗಳಂತೆ ಸತ್ಕರಿಸುತ್ತಾರೆ. ಅವರ ಮನವೊಲಿಸಿ, ಶಾಲೆಗೆ ಬೇಕಾದ ಪರಿಕರಗಳನ್ನು ಒದಗಿಸಿಕೊಳ್ಳುತ್ತಾರೆ. ಸ್ಥಳೀಯ ಉದ್ಯಮಿಗಳು ಧನಸಹಾಯ ನೀಡುತ್ತಾರೆ. ಮನೆಯಲ್ಲಿ ವಿಶೇಷ ಆಹಾರ ತಯಾರಿಸಿದರೆ ಅದನ್ನು ಹೆತ್ತವರು ಶಾಲೆಗೆ ತಂದು ಮಕ್ಕಳಿಗೆ ಬಡಿಸುತ್ತಾರೆ. ಹೀಗಾಗಿ, ಇಲ್ಲಿ ಪಾಯಸ ಇತ್ಯಾದಿಗಳಿರುವ ವಿಶೇಷ ಊಟವೇ ಜಾಸ್ತಿ. ಕೆಲವು ಹೆತ್ತವರು ತರಕಾರಿ, ತೆಂಗಿನಕಾಯಿ, ಬಾಳೆಹಣ್ಣು ಇತ್ಯಾದಿಗಳನ್ನು ಶಾಲೆಗೆ ಒದಗಿಸುತ್ತಾರೆ. ಹಾಗಂತ, ಇಲ್ಲಿನ ವಿದ್ಯಾರ್ಥಿಗಳ ಹೆತ್ತವರೇನೂ ಆರ್ಥಿಕವಾಗಿ ಶ್ರೀಮಂತರಲ್ಲ. ಶಾಲೆಯ ಕುರಿತಾಗಿ ಅವರ ಪ್ರೀತಿಯೇ ಈ ಉದಾರತೆಗೆ ಕಾರಣ.

ಈ ಶೈಕ್ಷಣಿಕ ವರ್ಷದಿಂದ ಇಲ್ಲಿ ಮಕ್ಕಳ ಹೆತ್ತವರು ಹಾಗೂ ಶಾಲೆಯ ಆಡಳಿತ ಮಂಡಳಿಯ ಸಹಕಾರದಿಂದ ಉತ್ತಮ ಗುಣಮಟ್ಟದ ಆಂಗ್ಲ ಮಾಧ್ಯಮವೂ ಆರಂಭವಾಗಿದೆ. ಇಬ್ಬರು ಅತಿಥಿ ಶಿಕ್ಷಕರ ವೇತನ ಹಾಗೂ ಇತರ ವೆಚ್ಚಗಳನ್ನು ದಾನಿಗಳಿಂದಲೇ ನಿಭಾಯಿಸುತ್ತಿದ್ದಾರೆ. ಕೊಠಡಿಗಳ ಸಂಖ್ಯೆ ಕಡಿಮೆಯಿದ್ದರೂ ವಿದ್ಯಾರ್ಥಿಗಳ ಸಂಖ್ಯೆ ಧಾರಾಳವಿದೆ. ಶಿಕ್ಷಕರ ಹುಮ್ಮಸ್ಸಿನಿಂದಾಗಿ ಹೆಚ್ಚುವರಿ 43 ವಿದ್ಯಾರ್ಥಿಗಳಿರುವ ಎಲ್ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಲು ಸಾಧ್ಯವಾಯಿತು. ಇಸ್ಸಿ ಆಂಗ್ಲ ಮಾಧ್ಯಮ ಶಾಲೆಗೆ ಸರಕಾರದ ಅನುಮತಿ ದೊರಕಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಖಾಸಗಿ ಸಂಸ್ಥೆಗಳಲ್ಲಿ ದುಬಾರಿ ಶುಲ್ಕ ತೆತ್ತು ಮಕ್ಕಳನ್ನು ಕಳುಹಿಸುವುದು ಇಲ್ಲಿನ ಹೆತ್ತವರಿಗೆ ಅಸಾಧ್ಯ. ಹೀಗಾಗಿ, ಸರಕಾರಿ ಶಾಲೆಯಲ್ಲೇ ಎಲ್ಕೆಜಿ, ಯುಕೆಜಿ ಸಹಿತ ಆಂಗ್ಲ ಮಾಧ್ಯಮ ಆರಂಭಿಸಿ, ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಪ್ರಯತ್ನಿಸಲಾಗುತ್ತಿದೆ ಎಂದು ಮುಖ್ಯ ಶಿಕ್ಷಕ ಇಸ್ಮಾಯಿಲ್ ಹೇಳಿದರು.

ಇಲ್ಲಿನ 1ರಿಂದ 5ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ನ್ಪೋಕನ್‌ ಇಂಗ್ಲಿಷ್‌ ತರಗತಿ ನಡೆಸುತ್ತೇವೆ. ಶಾಲಾ ಅವರಣಕ್ಕೆ ಕೃತಕ ಛಾವಣಿ ಮಾಡಿ, ಮಳೆ ನೀರನ್ನು ಕೊಳವೆಬಾವಿಗೆ ಇಂಗಿಸುವ ಉದ್ದೇಶವಿದೆ. ಇಡ್ಕಿದು ಗ್ರಾ.ಪಂ. ಆಡಳಿತವೂ ಶಾಲೆಯ ಅಭಿವೃದ್ಧಿಗೆ ಉತ್ತಮ ಸ್ಪಂದನೆ ನೀಡುತ್ತಿದೆ ಎಂದರು.

ಕೇವಲ 9 ಸೆಂಟ್ಸ್‌ ಜಾಗವಿದ್ದು, ಶಾಲೆಯ ಮಕ್ಕಳಿಗೆ ಆಟದ ಮೈದಾನದ ಕೊರತೆ ಇದೆ. ಆದರೆ, ಆವರಣದಲ್ಲಿ ಹೂವಿನ ತೋಟ, ಟೈಲ್ಸ್ ಅಳವಡಿಸಿದ ಅಂಗಳ ಸಹಿತ ಉತ್ತಮ ವಾತಾವರಣವಿದೆ. ಅಳಕೆಮಜಲು ಶಾಲೆಗೆ ಇತ್ತೀಚೆಗೆ ಭೇಟಿ ನೀಡಿದ ಶಾಸಕ ಸಂಜೀವ ಮಠಂದೂರು, ಇಲ್ಲಿನ ವ್ಯವಸ್ಥೆಗಳ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಸ್‌ಡಿಎಂಸಿ ಅಧ್ಯಕ್ಷೆ ಸುಮಲತಾ, ಉಪಾಧ್ಯಕ್ಷ ಹಕೀಂ ಕೋಲ್ಪೆ, ಸಮಿತಿ ಸದಸ್ಯರು ಮತ್ತು ಅಧ್ಯಾಪಕರು ಮನವಿ ಸಲ್ಲಿಸಿ, ಈಗ ಅಧ್ಯಾಪರಕ ಕೊಠಡಿಯನ್ನೂ ಮಕ್ಕಳ ತರಗತಿಯನ್ನಾಗಿ ಬಳಸಿಕೊಳ್ಳುತ್ತಿರುವ ಕಾರಣ ಹೆಚ್ಚುವರಿ ಎರಡು ಕೊಠಡಿಗಳನ್ನು ಒದಗಿಸುಂತೆ ಶಾಸಕರಿಗೆ ಬೇಡಿಕೆ ಸಲ್ಲಿಸಿದ್ದಾರೆ.

ಈ ಬಾರಿ ವಿದ್ಯಾರ್ಥಿಗಳ ಹೆತ್ತವರು ಹಸಲಿನ ಸೋಳೆ ತೆಗೆದು, ಡ್ರಮ್‌ಗಳಲ್ಲಿ ತುಂಬಿಸಿ ಉಪ್ಪು ಹಾಕಿ ಇಟ್ಟಿ ದ್ದಾರೆ. ಹಲಸಿನ ಬೀಜಗಳಲ್ಲಿಯೂ ಸಾಕಷ್ಟು ಪೌಷ್ಟಿಕಾಂಶವಿದ್ದು, ನಿತ್ಯ ಬಿಸಿ ಯೂಟದ ಸಾಂಬಾರ್‌ನಲ್ಲಿ ಬೆರಕೆ ಮಾಡಲಾಗುತ್ತಿದೆ. ಆಟಿ ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟದ ಜತೆಗೆ ‘ಉಪ್ಪಡ್‌ ಪಚ್ಚಿಲ್’ ಖಾದ್ಯವೂ ದೊರೆಯಲಿದೆ.

– ಉಮ್ಮರ್‌ ಜಿ., ಕಬಕ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ