ವಾಹನಗಳ ಬಾಡಿಗೆ ಪಾವತಿ ಇನ್ನೂ ಬಾಕಿ!

Team Udayavani, Jun 26, 2019, 5:53 AM IST

ಸಾಂದರ್ಭಿಕ

ಮಹಾನಗರ: ಲೋಕಸಭೆ ಚುನಾವಣೆ ಮುಗಿದು ಎರಡು ತಿಂಗಳು ಸಮೀಪಿಸಿದರೂ ಚುನಾವಣೆ ಕಾರ್ಯ ನಿಮಿತ್ತ ಅಧಿಕಾರಿ ವರ್ಗದವರ ಓಡಾಟ ಮತ್ತು ಮತದಾನದ ದಿನದಂದು ಬಳಸಿದ್ದ ಬಹುತೇಕ ವಾಹನಗಳಿಗೆ ಬಾಡಿಗೆ ಪಾವತಿ ಇನ್ನೂ ಆಗಿಲ್ಲ. ಈ ಕುರಿತಂತೆ ವಾಹನ ಚಾಲಕರು ಮತ್ತು ಮಾಲಕರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಕಂದಾಯ, ಪೊಲೀಸ್‌ ಹಾಗೂ ಭದ್ರತೆ ದಳಗಳು ಚುನಾವಣ ಕಾರ್ಯದ ನಿಮಿತ್ತ ಜಿಲ್ಲಾದ್ಯಂತ ಸುತ್ತಾಡಲು ವಾಹನಗಳ ಆವಶ್ಯಕತೆ ಇರುತ್ತದೆ. ಈ ಸಂದರ್ಭ ದಲ್ಲಿ ನಗರ ವ್ಯಾಪ್ತಿಯ ಆರ್‌ಟಿಒ ಅಧಿಕಾರಿಗಳು ವಾಹನಗಳನ್ನು ಒದಗಿಸಿಕೊಡಬೇಕಾಗುತ್ತದೆ. ಇಲಾಖೆ ವಾಹನ ಚಾಲಕರು, ಮಾಲಕರು ಸಂಘ ಅಥವಾ ಟ್ಯಾಕ್ಸಿ ಮೆನ್ಸ್‌ ಮ್ಯಾಕ್ಸಿ ಕ್ಯಾಬ್‌ ಅಸೋಸಿಯೇಶನ್‌, ಖಾಸಗಿ ಟೂರಿಸ್ಟ್‌ ವಾಹನ ಚಾಲಕರು ಮತ್ತು ಮಾಲ ಕರನ್ನು ಸಂಪರ್ಕಿಸಿ ವಾಹನಗಳನ್ನು ವ್ಯವಸ್ಥೆಗೊಳಿ ಸಬೇಕಾಗುತ್ತದೆ. ಈ ಬಾರಿ ಜಿಲ್ಲಾದ್ಯಂತ ಸುಮಾರು 360 ವಾಹನಗಳನ್ನು ಪಡೆದು ಕೊಳ್ಳಲಾಗಿತ್ತು. ಅದರಲ್ಲಿ ಶೇ. 25ರಷ್ಟು ವಾಹನಗಳ ಪಾವತಿ ಮಾತ್ರ ಆಗಿದೆ.

ಈ ಬಾರಿ ಎ. 18ರಂದು ನಡೆದ ಲೋಕಸಭಾ ಚುನಾವಣೆಗೆ ಸ್ವಲ್ಪ ಮುಂಚಿತವಾಗಿ ಅಗತ್ಯವಿರುವ ವಾಹನಗಳನ್ನು ಪಡೆದುಕೊಳ್ಳಲಾಗಿತ್ತು. ಆದರೆ ಚುನಾವಣೆ ಮುಗಿದು ಎರಡು ತಿಂಗಳು ಕಳೆದರೂ ಬಹುತೇಕ ವಾಹನಗಳ ಪಾವತಿ ಇನ್ನೂ ಆಗಿಲ್ಲ.

ವಾಹನ ನೀಡಲು ನಿರಾಕರಿಸಿದ್ದರು!
ನಗರಗಳಿಗೆ ಹೊರಭಾಗದಿಂದ ಬರುವ ಗಣ್ಯರ ಭದ್ರತೆ, ಚುನಾವಣೆ, ಪಲ್ಸ್ ಪೋಲಿಯೋ ಹಾಗೂ ಇತರ ತುರ್ತು ಸಂದರ್ಭದಲ್ಲಿ ಸಹಿತ ವಿವಿಧ ಕಾರಣಗಳಿಗೆ ಟ್ಯಾಕ್ಸಿ ಮ್ಯಾಕ್ಸಿ ಕ್ಯಾಬ್‌ಗಳನ್ನು ಆರ್‌ಟಿಒ/ ಪೊಲೀಸರು ಬಳಸಿಕೊಳ್ಳುವ ಅವಕಾಶವಿದೆ. ಕಾರಿಗೆ ದಿನ ಬಾಡಿಗೆಯ ರೀತಿಯಲ್ಲಿ ಹಣ ನಿಗದಿ ಮಾಡಿ ಚಾಲಕನ ಸಮೇತ ವಾಹನಗಳನ್ನು ಆರ್‌ಟಿಒ/ ಪೊಲೀಸರು ಪಡೆದುಕೊಳ್ಳುತ್ತಾರೆ. ತಮ್ಮ ಕೆಲಸದ ಬಳಿಕ ನಿಗದಿ ಮಾಡಿದ ಹಣವನ್ನು ನೀಡಿ ವಾಹನವನ್ನು ಹಿಂತಿರಿಗಿಸುವುದು ನಿಯಮ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಚುನಾವಣೆ ಹಾಗೂ ಗಣ್ಯರ ಆಗಮನದ ಸಂದರ್ಭದಲ್ಲಿ ಬಳಕೆಯಾಗುವ ವಾಹನಗಳ ಬಿಲ್ ಮೊತ್ತ ಪಾವತಿ ಮಾಡಲು ಸರಕಾರ ಹಿಂದೇಟು ಹಾಕಿದ ಹಲವು ಉದಾಹರಣೆಯಿದ್ದ ಕಾರಣದಿಂದ ಪ್ರವಾಸಿ ಕಾರು, ಜೀಪು, ವ್ಯಾನ್‌ನವರು ವಾಹನ ನೀಡಲು ನಿರಾಕರಿಸುತ್ತಿದ್ದರು.

ವಿಧಾನಸಭಾ ಚುನಾವಣೆ ಹಣ ಪಾವತಿ!
ಟಿಪ್ಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ 2016 ನ. 8ರಂದು ಕೊಂಡುಹೋಗಿದ್ದ ಕೆಲವು ಟ್ಯಾಕ್ಸಿಗಳ ಬಿಲ್ ಪಾವತಿಗೆ ಹಲವು ತಿಂಗಳು ಕಾಯಬೇಕಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿಯ ಸಂದರ್ಭದಲ್ಲಿ ಬಳಸಲಾಗಿದ್ದ ವಾಹನಗಳ ಬಿಲ್ ಅನ್ನು ಪೊಲೀಸ್‌ ಇಲಾಖೆ ನೀಡಲು ಹಲವು ತಿಂಗಳು ಕಾಯಿಸಿತ್ತು. ಆದರೆ, ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಳಕೆ ಮಾಡಲಾದ ಎಲ್ಲ ವಾಹನಗಳಿಗೆ ತಡವಾಗಿಯಾದರೂ ಸಮರ್ಪಕ ರೀತಿಯಲ್ಲಿ ಹಣ ನೀಡಿದೆ.

ಆಯಾ ಇಲಾಖೆಯಿಂದಲೇ ಪಾವತಿ

ಚುನಾವಣೆ ಅಥವಾ ಇನ್ನಿತರ ಸರಕಾರಿ ಕೆಲಸಗಳಿಗೆ ವಾಹನಗಳನ್ನು ಒದಗಿಸುವ ಬಗ್ಗೆ ಜಿಲ್ಲಾಧಿಕಾರಿಗಳು ನಮಗೆ ಸೂಚನೆ ನೀಡುತ್ತಾರೆ.ಅದರಂತೆ ನಾವು ವಾಹನಗಳ ವ್ಯವಸ್ಥೆ ಮಾಡುತ್ತೇವೆ. ಆ ಬಳಿಕ ಆಯಾಯಾ ಇಲಾಖೆಯೇ ಅವರಿಗೆ ಪಾವತಿ ಮಾಡುತ್ತದೆ. ಈ ಬಗ್ಗೆ ನಮಗೆ ಯಾವುದೇ ಸಂಬಂಧ ಇರುವುದಿಲ್ಲ.
– ಚಂದ್ರ ಉಪ್ಪಾರ, ಆರ್‌ಟಿಒ, ಮಂಗಳೂರು

15 ದಿನದ ಒಳಗಾಗಿ ಹಣ ಪಾವತಿ ಮಾಡುವ ಭರವಸೆ
ಚುನಾವಣೆ ಬಳಕೆಗೆ ಎ. 12ರಿಂದ ನಮ್ಮ ವಾಹನಗಳನ್ನು ಪಡೆದುಕೊಂಡಿದ್ದರು. ಎ. 18ರ ಅನಂತರ 15 ದಿನದ ಒಳಗಾಗಿ ಹಣ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಎರಡು ತಿಂಗಳು ಕಳೆದರೂ ಹಣ ಪಾವತಿಯಾಗಿಲ್ಲ. ಕೆಲವು ವಾಹನಗಳ ಹಣವನ್ನು ಅಸಮರ್ಪಕವಾಗಿ ನೀಡಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಲ್ಲೂ ಮಾತುಕತೆ ನಡೆಸಿದ್ದೇವೆ.
– ದಿನೇಶ್‌ ಕುಂಪಲ, ಅಧ್ಯಕ್ಷರು, ದ.ಕ. ಟ್ಯಾಕ್ಸಿ ಮೆನ್ಸ್‌ ಮ್ಯಾಕ್ಸಿ ಕ್ಯಾಬ್‌ ಅಸೋಸಿಯೇಶನ್‌.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ