ಮಾಣಿ-ಮೈಸೂರು ಹೆದ್ದಾರಿ: ಇಕ್ಕೆಲಗಳಲ್ಲಿ ಚರಂಡಿ ಮಾಯ!

Team Udayavani, Jun 17, 2019, 6:20 AM IST

ಬಡಗನ್ನೂರು : ಇದು ಇಂದು ನಿನ್ನೆಯ ಕಥೆಯಲ್ಲ. ಮಾಣಿ-ಮೈಸೂರು ರಾ. ಹೆದ್ದಾರಿಯ ಆರು ವರ್ಷಗಳ ವ್ಯಥೆಯಿದು.

ಒಂದು ಮಳೆ ಬಂದರೆ ಸಾಕು, ಮಳೆ ನೀರೆಲ್ಲ ರಸ್ತೆಯಲ್ಲೇ ಹರಿಯುತ್ತದೆ. ಜೋರು ಮಳೆ ಬಂದರೆ ರಸ್ತೆಯೇ ಕಾಣದಂತಹ ಸ್ಥಿತಿಯಲ್ಲಿ ಇಲ್ಲಿ ನೀರು ಹರಿಯುತ್ತದೆ. ಇದಕ್ಕೆಲ್ಲ ಮುಖ್ಯ ಕಾರಣ ರಸ್ತೆ ಬದಿಯಲ್ಲಿ ಚರಂಡಿ ಇಲ್ಲದೇ ಇರುವುದು.

ರಸ್ತೆ ವಿಸ್ತರಣೆ ಕಾಮಗಾರಿ ಮುಗಿದು ಆರು ವರ್ಷಗಳು ಕಳೆದಿದೆ. ಆದರೆ ಚರಂಡಿ ನಿರ್ಮಾಣ ಕಾಮಗಾರಿ ಆಗಿಲ್ಲ. ರಸ್ತೆ ನಿರ್ಮಾಣಕ್ಕೆ ಮೊದಲು ಎಲ್ಲವೂ ಸರಿ ಇತ್ತು. ಆ ಬಳಿಕ ಚರಂಡಿಯೇ ಇಲ್ಲದಂತಾಗಿದೆ. ಯಾವ ಕಾರಣಕ್ಕೆ ಚರಂಡಿ ಮಾಡಿಲ್ಲ ಎನ್ನುವುದು ಸಾರ್ವಜನಿಕರಿಗೆ ಗೊತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡ ಸಮರ್ಪಕ ಉತ್ತರ ನೀಡುತ್ತಿಲ್ಲ. ರಾಜ್ಯ ಹೆದ್ದಾರಿಯಾಗಿದ್ದ ಈ ರಸ್ತೆ ಈಗ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದೆ. ರಸ್ತೆ ಗುತ್ತಿಗೆದಾರರಲ್ಲಿ ಕೇಳಿದರೆ ರಸ್ತೆ ಈಗ ನಮ್ಮ ಸುಪರ್ದಿಯಲ್ಲಿಲ್ಲ ಎನ್ನುತ್ತ್ತಾರೆ. ರಾ. ಹೆದ್ದಾರಿ ಪ್ರಾಧಿಕಾರದವರಲ್ಲಿ ಕೇಳಿದರೆ ಚರಂಡಿ ಕಾಮಗಾರಿಗೆ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ ಎನ್ನುತ್ತಿದ್ದಾರೆ.

ಅಲ್ಲಲ್ಲಿ ಸ್ಲಾ ್ಯಬ್‌ ಅಳವಡಿಕೆ

ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿ ರುವ ವೇಳೆ ಚರಂಡಿ ನಿರ್ಮಾಣ ಮಾಡಲು ಅಲ್ಲಲ್ಲಿ ಸ್ಲಾ ್ಯಬ್‌ಗಳನ್ನು ಹಾಕಲಾಗಿತ್ತು. ಆದರೆ ಚರಂಡಿ ನಿರ್ಮಾಣವಾಗದೆ ಸ್ಲ್ಯಾಬ್‌ಗಳು ಹಾಗೆಯೇ ಇವೆ. ಕಾಮಗಾರಿ ನಡೆಯುವ ವೇಳೆಯೇ ಚರಂಡಿಯನ್ನು ನಿರ್ಮಾಣ ಮಾಡುವಂತೆ ಕೆಲ ಕಡೆಗಳಲ್ಲಿ ಸಾರ್ವಜನಿಕರು ಪ್ರತಿಭಟನೆಯನ್ನೂ ನಡೆಸಿದ್ದರು. ಆದರೆ ಚರಂಡಿ ನಿರ್ಮಾಣದ ಭರವಸೆ ನೀಡಿರುವ ಕಾರಣ ಪ್ರತಿಭಟನೆ ಹಿಂಪಡೆದುಕೊಂಡಿದ್ದರು. ಆದರೆ ಭರವಸೆ ಈವರೆಗೂ ಈಡೇರಿಲ್ಲ.

ಪ್ಲಾಸ್ಟಿಕ್‌ ತ್ಯಾಜ್ಯಗಳ ರಾಶಿ

ರಸ್ತೆಯ ಇಕ್ಕೆಲ ಹಾಗೂ ಚರಂಡಿಗಳಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯಗಳಿವೆ. ಕಸ, ಕಡ್ಡಿ, ಬಾಟಲಿ ಇತ್ಯಾದಿಗಳನ್ನು ಕಟ್ಟಿ ತಂದು ರಸ್ತೆ ಬದಿಗೆ ಎಸೆಯಲಾಗುತ್ತಿದೆ. ಇದಲ್ಲದೆ ಕೋಳಿ ತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿದೆ. ಮಳೆಗಾಲದಲ್ಲಿ ಇವೆಲ್ಲವೂ ಚರಂಡಿ ಸೇರಿಕೊಳ್ಳುವುದರಿಂದ ಚರಂಡಿ ಹೂಳು ತುಂಬಿ ಬಂದ್‌ ಆಗುತ್ತಿದೆ. ಮೊದಲ ಮಳೆಗೆ ಕೆಲವೊಂದು ಕಡೆಗಳಲ್ಲಿ ಚರಂಡಿ ಬ್ಲಾಕ್‌ ಆಗಿದೆ. ರಸ್ತೆ ಮೇಲೆಯೇ ನೀರು ಹರಿದು ಹೋಗುತ್ತದೆ. ಮಳೆ ನೀರು ರಸ್ತೆ ಮೇಲೆ ಹರಿಯುವ ಕಾರಣ ಕೆಸರು, ಮಣ್ಣು ರಸ್ತೆ ಮೇಲೆ ಬಂದು ಬೀಳಲಿದೆ.

ಇದರಿಂದಾಗಿ ವಾಹನಗಳ ಸಂಚಾರಕ್ಕೆ ತೊಂದರೆ ಯಾಗಲಿದೆ. ರಸ್ತೆಯñ ‌ಗ್ಗು ಪ್ರದೇಶಗಳಲ್ಲಿ ಕೆಸರು ನೀರು ತುಂಬಿಕೊಳ್ಳುವುದರಿಂದ ದ್ವಿಚಕ್ರ ವಾಹನ ಸವಾರರಿಗೆ ಅಪಾಯ ಎದುರಾಗಲಿದೆ. ತ್ಯಾಜ್ಯಗಳು ಮುಂದಿನ ದಿನಗಳಲ್ಲಿ ಎಲ್ಲರಿಗೂ ತೊಂದರೆ ತಂದೊಡ್ಡಲಿವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಅನುದಾನ ಕೇಳಿದ್ದೇವೆ

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಚರಂಡಿಗಳಲ್ಲಿ ಹೂಳು ತುಂಬಿಕೊಂಡಿರುವುದು ಗಮನಕ್ಕೆ ಬಂದಿದೆ. ಚರಂಡಿ ದುರಸ್ತಿಗೆ ಅನುದಾನ ಇನ್ನೂ ಬಂದಿಲ್ಲ. ಅನುದಾನ ಬೇಕು ಎಂದು ಕೇಳಿಕೊಂಡಿದ್ದೇವೆ. ಅನುದಾನ ಬಂದ ಕೂಡಲೇ ದುರಸ್ತಿ ಕೆಲಸ ಆರಂಭಿಸುತ್ತೇವೆ.
– ನಾಗರಾಜ್‌ ಮುಖ್ಯ ಎಂಜಿನಿಯರ್‌, ರಾ.ಹೆ. ಅಭಿವೃದ್ಧಿ ಪ್ರಾಧಿಕಾರ
ಚರಂಡಿ ಹೂಳೆತ್ತಬೇಕು

ರಸ್ತೆ ನಿರ್ಮಾಣ ಮಾಡುವಾಗಲೇ ಚರಂಡಿ ಕಾಮಗಾರಿಯನ್ನು ನಡೆಸಬೇಕಿತ್ತು. ಚರಂಡಿಯಿಲ್ಲದ ಕಾರಣ ಸಾರ್ವಜನಿಕರಿಗೆ ದೊಡ್ಡ ಸಮಸ್ಯೆಯಾಗಿದೆ. ರಾ.ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ ಬಳಿಕವಾದರೂ ಚರಂಡಿ ಕಾಮಗಾರಿ ನಡೆಯಬಹುದು ಎಂದು ಜನ ನಂಬಿದ್ದರು. ಆದರೆ ಆ ಕೆಲಸವೂ ಆಗಿಲ್ಲ. ಇರುವ ಚರಂಡಿಯಲ್ಲಿನ ಹೂಳೆತ್ತುವ ಮೂಲಕ ಇಲಾಖೆ ಮಳೆಗಾಲದಲ್ಲಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು.
– ವಿಶ್ವನಾಥ ಗೌಡ ಬೊಳ್ಳಡಿ, ಗ್ರಾಮಸ್ಥರು

– ದಿನೇಶ್‌ ಪೇರಾಲು


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ