ಜನಜಾಗೃತಿ ಮೂಡಿಸುವುದೊಂದೇ ಜಲ ಸಂರಕ್ಷಣೆಯ ದಾರಿ

ಜಲಮರುಪೂರಣ, ಮಳೆಕೊಯ್ಲಿಗೆ ಊರು ಸಿದ್ಧಗೊಳ್ಳಬೇಕು: ನಟ ರಿಷಭ್‌ ಶೆಟ್ಟಿ

Team Udayavani, Jul 22, 2019, 5:00 AM IST

ಸುಳ್ಯ: ರಿಷಭ್‌ ಶೆಟ್ಟಿ ಕನ್ನಡ ಚಿತ್ರರಂಗದ ಭರವಸೆಯ ನಟ, ನಿರ್ದೇಶಕ. ಕನ್ನಡ ಚಿತ್ರರಂಗಕ್ಕೆ ಹಿಟ್‌ ಚಿತ್ರಗಳನ್ನು ಕೊಟ್ಟ ಕರಾವಳಿ ಮೂಲದ ಪ್ರತಿಭೆ. ಇನ್ನೂ ಸಾಕಷ್ಟು ಸಿನೆಮಾಗಳು ಅವರ ಕೈಯಲ್ಲಿವೆ. 2020ರೊಳಗೆ ಏಳು ಕನ್ನಡ ಸಿನೆಮಾದ ಕೆಲಸಗಳನ್ನು ಮುಗಿಸಬೇಕಾಗಿದ್ದು, ಸಾಕಷ್ಟು ಬ್ಯುಸಿ ಇದ್ದಾರೆ. ನಟನೆ, ನಿರ್ದೇಶನದ ಒತ್ತಡದ ಮಧ್ಯೆ ಸುಳ್ಯ ತಾಲೂಕಿನ ಕನಕಮಜಲು ಮಕ್ಕಳ ಚಿತ್ರೋತ್ಸವದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು “ಉದಯವಾಣಿ’ಗೆ ನೀಡಿದ ಸಂದರ್ಶನ ಇಲ್ಲಿದೆ.

ನೀರಿನ ಸಮೃದ್ಧ ನೆಲೆಯಾಗಿದ್ದ ಕರಾವಳಿ ಇತ್ತೀಚೆಗೆ ಬರಿದಾಗಿದೆ. ಎಚ್ಚರ ವಹಿಸುವ ಬಗ್ಗೆ ನಿಮ್ಮ ಸಲಹೆ ಏನು?
ಮಳೆ ನಿರೀಕ್ಷೆಗಿಂತ ಕಡಿಮೆ ಸುರಿಯು ತ್ತಿರುವುದು ನಿಜ. ಮಳೆಗಾಲದಲ್ಲೇ ಬೇಸಗೆ ಕಾಲದ ಸ್ಥಿತಿ ಇದೆ. ಇದು ಗಂಭೀರ ಸಂಗತಿ. ಈ ಸಮಸ್ಯೆ ಎದುರಿಸಲು ಪ್ರತಿಯೊಬ್ಬರೂ ಜವಾ ಬ್ದಾರಿ ಹೊರಬೇಕು. ಜನರು ಸ್ವತಃ ಜಾಗೃತಿ ಗೊಳ್ಳುವುದು ನೀರಿನ ಸಂರಕ್ಷಣೆಗೆ ಇರುವ ಏಕೈಕ ಹಾದಿ. ರಾಜಕಾರಣಿ ಗಳು, ನಾಯಕರು ನಮ್ಮನ್ನು ಉದ್ಧಾರ ಮಾಡಬಹುದು ಎಂಬಭ್ರಮೆಯಿಂದ ಹೊರಬಂದು, ನಾವೇ ಸೃಷ್ಟಿಸಿದ ಸಮಸ್ಯೆಯ ಪರಿಹಾರಕ್ಕೆ ನಾವೇ ದಾರಿ ಕಂಡುಕೊಳ್ಳುವುದು ಅತ್ಯುತ್ತಮ ಮಾರ್ಗ.

ಮಳೆ ನೀರಿನ ಸಂರಕ್ಷಣೆ ಸಾಧ್ಯವಿರುವ ದಾರಿಗಳಾವು?
ಮಳೆಕೊಯ್ಲು, ಜಲಮರುಪೂರಣ ಘಟಕ ನಿರ್ಮಾಣಕ್ಕೆ ಒತ್ತು ನೀಡಬೇಕಾದ ಅಗತ್ಯ ಇಂದಿದೆ. ಗದ್ದೆ ಬಳಕೆ, ಹಸರು ಸಂಪತ್ತು ರಕ್ಷಣೆಗೆ ಗಮನ ಹರಿಸಬೇಕು. ಸರಕಾರದ ಕೆಲವು ಯೋಜನೆ ಗಳು ದುಡ್ಡು ಲೂಟಿಗೆ ಸೀಮಿತ. ಉದಾ ಹರಣೆಗೆ, ಕರಾವಳಿ ನದಿ ನೀರನ್ನು ಇನ್ನೆಲ್ಲೋ ಕೊಂಡೊಯ್ಯುವ ಪ್ರಯತ್ನ. ಇದರಿಂದ ಜನರಿಗೆ ಲಾಭವಾಗದು. ನೀರು ಕೊಂಡೊಯ್ಯವ ಊರಲ್ಲಿ ಹಣದ ಆಸೆಗಾಗಿ ಕೆರೆ, ನದಿಗಳನ್ನು ಮುಚ್ಚಿ ಬಹು ಮಹಡಿ ಕಟ್ಟಡ ಕಟ್ಟುವುದಕ್ಕೆ ಅವಕಾಶ ನೀಡಿರುವುದೇ ನೀರಿನ ಮೂಲ ಬತ್ತಲು ಕಾರಣ. ಕರಾವಳಿ ನದಿಯಿಂದ ನೀರು ಕೊಂಡೊಯ್ದರೆ ಇಲ್ಲಿನ ಜನರು ಅಂತಹುದೇ ಸಮಸ್ಯೆಗೆ ಈಡಾಗಬಹುದು. ಹೀಗಾಗಿ ನೈಸರ್ಗಿಕ ನೀರಿನ ಮೂಲಗಳನ್ನು ಅದರ ಪಾಡಿಗೆ ಬಿಟ್ಟು, ಅಂತರ್ಜಲ ಸಂರಕ್ಷಿಸಲು ಸಾಧ್ಯವಿರುವ ಕ್ರಮಗಳಿಗೆ ಆದ್ಯತೆ ನೀಡಬೇಕು.

ಸಿನೆಮಾ ಮೂಲಕ ಜಲ ಸಂರಕ್ಷಣೆಯ ಜಾಗೃತಿ ಮೂಡಿಸಲು ಸಾಧ್ಯವೇ? ನೀವು ಪ್ರಯುತ್ನ ಪಡುತ್ತೀರಾ?
ಎಲ್ಲೂ ಒಂದು ಶೇಕಡಾ ಬದಲಾ ವಣೆ ಆದರೂ ಅದು ದೊಡ್ಡ ಸಾಧನೆ. ಉದಾಹರಣೆಗೆ, “ಸರಕಾರಿ ಹಿ.ಪ್ರಾ. ಶಾಲೆ ಕಾಸರಗೋಡು’ ಚಿತ್ರದಿಂದ ಕೆಲವು ಸರಕಾರಿ ಶಾಲೆಗಳಲ್ಲಿ ಶೇ. 1ರಷ್ಟು ಬದಲಾವಣೆ ಆಗಿರಬಹುದು. ಎಷ್ಟೋ ಶಿಕ್ಷಕರು, ಹೆತ್ತವರು ಈ ಬಗ್ಗೆ ಮಾತನಾಡಿದ್ದನ್ನು ನೋಡಿದ್ದೇನೆ, ಕೇಳಿದ್ದೇನೆ. ಆದರೆ ಈ ಶೇ. 1 ಸಂಪೂರ್ಣ ಬದಲಾವಣೆ ಅನ್ನುವುದು ಅಸಾಧ್ಯ. ಒಂದು ಸಿನೆಮಾದಿಂದ ಬಹುದೊಡ್ಡ ಪರಿಣಾಮ ನಿರೀಕ್ಷಿಸು ವುದು ಸುಲಭವಲ್ಲ. ನೀರಿನ ಸಂರಕ್ಷಣೆ ನಿಟ್ಟಿನಲ್ಲಿ ಜನ ಜಾಗೃತಿಗೊಂಡು ಊರಿಗೆ ಊರೇ ಕೈ ಜೋಡಿಸುವುದೇ ಸಿನೆಮಾಕ್ಕಿಂತಲೂ ಉತ್ತಮ ಮಾರ್ಗ.

ತುಳು ಸಿನೆಮಾ ರಂಗದ ಬಗ್ಗೆ ಏನು ಹೇಳ್ತೀರಾ?
ಸಿನೆಮಾಕ್ಕೆ ಭಾಷೆಯ ಬೇಲಿ ಇಲ್ಲ. ಒಳ್ಳೆಯದನ್ನು ಎಲ್ಲರೂ ಒಪ್ಪಿಕೊಳ್ಳು ತ್ತಾರೆ. ಉತ್ತಮ ನಿರ್ದೇಶಕರು, ನಟರು ಇಲ್ಲಿದ್ದಾರೆ. ತುಳು ಸಿನೆಮಾಕ್ಕೆ ರಾಷ್ಟ್ರಪ್ರಶಸ್ತಿ ಸಿಕ್ಕಿರುವುದು ಅದಕ್ಕೆ ಉದಾಹರಣೆ. ತುಳು ಚಿತ್ರರಂಗ ಇನ್ನಷ್ಟು ಬೆಳವಣಿಗೆ ಕಾಣುವ ನಿಟ್ಟಿನಲ್ಲಿ ತುಳು ಸಂಸ್ಕೃತಿಯನ್ನು ಸಿನೆಮಾದ ಮೂಲಕ ಪ್ರಚುರಪಡಿಸುವ ಅಗತ್ಯತೆ ಇದೆ. ಇದು ಬಹಳ ಆಸಕ್ತಿಕರ ವಿಚಾರ. ನಾನು ಗಮನಿಸಿದ ಹಾಗೆ ಕೆಲವು ವಿಭಾಗದಲ್ಲಿ ಗುಣಮಟ್ಟ ಸುಧಾರಣೆಯ ಅಗತ್ಯ ಇದೆ. ಆ ಬಗ್ಗೆ ಚಿತ್ರರಂಗ ಹೆಚ್ಚು ಗಮನ ನೀಡಬೇಕು.

“ಸರಕಾರಿ ಹಿ.ಪ್ರಾ. ಶಾಲೆ ಕಾಸರಗೋಡು’ ಬಿಡುಗಡೆ ಬಳಿಕ ಟೀಕೆ-ಟಿಪ್ಪಣಿ, ವಿರೋಧಗಳು ಬಂತಾ?
ಕಾಸರಗೋಡು, ಕೇರಳ ಕಡೆಯಿಂದ ಯಾವುದೇ ಟೀಕೆ-ಟಿಪ್ಪಣಿ, ವಿರೋಧ ಬಂದಿಲ್ಲ. ಕಾಸರಗೋಡಿನಲ್ಲಿ ಸಿನೆಮಾ 100 ದಿವಸ ಪ್ರದರ್ಶನ ಕಂಡಿದೆ.

ಮಲೆಯಾಳಿಗಳು ತಪ್ಪು, ಕನ್ನಡದವರು ಸರಿ ಎಂದು ಮಾಡಿದ ಸಿನೆಮಾ ಇದು ಅಲ್ಲ. ಯಾವುದೇ ಪ್ರದೇಶದ ಜನರಿಗೆ ಅಲ್ಲಿನ ಜನಜೀವನ ಮುಖ್ಯ ಆಗುತ್ತದೆಯೇ ವಿನಾ ಜಾತಿ, ಧರ್ಮ, ಭಾಷೆಯ ವಿವಾದದ ಅಗತ್ಯ ಇಲ್ಲ. ಸಿನೆಮಾ ಪ್ರದರ್ಶನ ಕಂಡ ಬಳಿಕ ಮಲೆಯಾಳಿಗಳು, ಕನ್ನಡದವರು ನನ್ನನ್ನು ಅಭಿನಂದಿಸಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಸುಖಾಸುಮ್ಮನೆ ಟೀಕೆ ಮಾಡುವವರು ಇದ್ದೇ ಇರುತ್ತಾರೆ. ಅವರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.

ರಿಷಭ್‌ ಶೆಟ್ಟಿಗೆ ರಾಜಕೀಯ ಪ್ರವೇಶಿಸುವ ಒಲವು ಇದೆಯಂತೆ, ಹೌದಾ?
ನನ್ನಲ್ಲಿ ಸಾಕಷ್ಟು ಕಥೆಗಳಿವೆ. ಅದನ್ನು ಜನರಿಗೆ ತಲುಪಿಸಬೇಕು. ದೀರ್ಘ‌ ಪಯಣದ ಒಂದು ಹಂತದಲ್ಲಿ ನನ್ನ ಸಿನೆಮಾ, ಕಥೆ ಜನರಿಗೆ ಇಷ್ಟಾಗುವುದು ನಿಲ್ಲುತ್ತದೆ. ಆಗ ಬಿಡುವು ಸಿಗುತ್ತದೆ. ಆ ಕಾಲಕ್ಕೆ ರಾಜಕೀಯಕ್ಕೆ ಹೋದರೂ ಹೋಗಬಹುದು. ಆದರೆ ಒಂದಂತೂ ಸತ್ಯ. ನಾನು ಮೌನಿ ಅಲ್ಲ. ಕ್ರಿಯೆಗೆ ಪ್ರತಿಕ್ರಿಯೆ ಕೊಡುವ ಸ್ವಭಾವದವನು. ಹಾಗಾಗಿ ಯಾವುದೇ ಪಕ್ಷಕ್ಕೆ ಹೋದರೂ ಅವರಿಗೆ ಕಷ್ಟವೇ.

-ಕಿರಣ್‌ ಪ್ರಸಾದ್‌ ಕುಂಡಡ್ಕ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ