ಕೊೖಲ ಪುರುಷರ ಗುಂಡಿಯಲ್ಲಿ ಬೇಸಗೆಯಲ್ಲೂ ಬತ್ತದ ನೀರು

ಹೂಳು ತೆಗೆಯಬೇಕಿದೆ; ಸದ್ಯ ಪ್ರಾಣಿ, ಪಕ್ಷಿಗಳಿಗಷ್ಟೇ ಉಪಯೋಗ

Team Udayavani, Jun 3, 2019, 6:00 AM IST

ಆಲಂಕಾರು: ಬಿಸಿಲಿನ ತಾಪಕ್ಕೆ ಎಲ್ಲೆಲ್ಲೂ ನೀರಿಗೆ ಹಾಹಾಕರ. ನೀರಿನ ಸೆಲೆಗಳು ಉರಿ ಬಿಸಿಲಿಗೆ ಇಂಗಿ ಹೋಗುತ್ತಿವೆ. ಆದರೆ ಕಡಬ ತಾಲೂಕು ಕೊೖಲ ಗ್ರಾಮದ ಪುರುಷರ ಗುಂಡಿಯಲ್ಲಿ ನೀರಿನ ಒರತೆ ಇನ್ನೂ ಇದೆ. ಸದ್ಯ ಕಾಡು ಪ್ರಾಣಿ, ಪಕ್ಷಿಗಳಿಗಷ್ಟೆ ಈ ನೀರು ಬಳಕೆಯಾಗುತ್ತಿದೆ. ಪುನಶ್ಚೇತನಗೊಳಿಸಿದಲ್ಲಿ ಕುಡಿಯುವ ನೀರಾಗಿ ಬಳಸಬಹುದು. ಕೊೖಲ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಸಮೀಪದ ಸದ್ಯ ಕೊೖಲ ಪಶುಸಂಗೋಪನ ಇಲಾಖೆ ಜಾಗದಲ್ಲಿರುವ ಪುರುಷರ ಗುಂಡಿಯಲ್ಲಿ ಈ ಉರಿ ಬೇಸಗೆಯಲ್ಲೂ ನೀರಿದೆ.

ಇಲ್ಲಿ ಉದ್ಭವವಾದ ನೀರು ಚಿಕ್ಕದಾದ ತೋಡಿನಲ್ಲಿ ಕೆಳಗಿನ ಕಾಯರಕಟ್ಟ ಪ್ರದೇಶಕ್ಕೆ ಹರಿ ಯುತ್ತದೆ. ಮಳೆಗಾಲದಲ್ಲಿ ಯಥೇಚ್ಛ ನೀರಿನ ಒರತೆ ಇರುತ್ತದೆ. ಈ ಬಾರಿಯ ಬೇಸಗೆಯಲ್ಲಿ ನೀರಿನ ಒರತೆ ಕಡಿಮೆಯಾಗಿದೆೆ. ಆದರೆ ತೋಡಿನ ಪಾತ್ರದಲ್ಲಿರುವ ಹೊಂಡಗಳಲ್ಲಿ ತುಂಬಿಕೊಂಡಿರುವ ನೀರನ್ನು ಕಾಡು ಪ್ರಾಣಿ, ಪಕ್ಷಿಗಳು ಬಳಕೆ ಮಾಡಿರುವುದರಿಂದ ಕಲುಷಿತ ವಾಗಿದೆ. ಸಂಬಂಧಪಟ್ಟವರು ಸ್ಚಚ್ಛಗೊಳಿಸಿ ಈ ಗುಂಡಿಯನ್ನು ಪುನಶ್ಚೇತನಗೊಳಿಸಿದರೆ ನೀರಿನ ಸೆಲೆಯನ್ನು ಉಳಿಸಿಕೊಳ್ಳಬಹುದು ಎನ್ನುವುದು ಸಾರ್ವಜನಿಕರ ಆಶಯ.

ನೀರು ಬಳಕೆ ಮಾಡಬಹುದು
ಪುರುಷಗುಂಡಿಯ ಸುತ್ತ ಪೊದೆ ಗಳು ಆವರಿಸಿದ್ದು, ಕಾಡು ಹಂದಿಗಳು ಸಹಿತ ಹಲವು ಪ್ರಾಣಿ ಗಳು ಇಲ್ಲಿ ಓಡಾಡುತ್ತವೆ. ಹಗಲಲ್ಲಿ ಪಕ್ಷಿಗಳು ಹೆಚ್ಚಾಗಿರುತ್ತವೆ. ನೀರು ಕುಡಿ ಯಲು ಕಾಡು ಪ್ರಾಣಿ, ಪಕ್ಷಿಗಳು ಬರುವುದ ರಿಂದ ಹೊಂಡದಲ್ಲಿ ಶೇಖರಣೆಯಾದ ನೀರು ಕಲುಷಿತವಾಗಿದೆ.

ಶಾಲಾ ಮಕ್ಕಳು ಉಪಯೋಗಿಸುತ್ತಿದ್ದರು
ಹಲವು ವರ್ಷಗಳ ಹಿಂದೆ ಕೊೖಲ ಶಾಲಾ ವಿದ್ಯಾರ್ಥಿಗಳು ಪುರುಷರ ಗುಂಡಿಯಲ್ಲಿನ ನೀರನ್ನು ಆಹಾರದ ಪಾತ್ರೆ ತೊಳೆಯಲು, ಕೈಕಾಲು ಮುಖ ತೊಳೆಯಲು ಉಪಯೋಗಿ ಸುತ್ತಿದ್ದರು. ಬಳಿಕದ ದಿನಗಳಲ್ಲಿ ಬಿಸಿಯೂಟ ಯೋಜನೆಗಳು ಅನುಷ್ಠಾನವಾಗಿ ಶಾಲೆಯಲ್ಲೇ ಊಟ ಸಿಗುತ್ತಿರುವುದ ರಿಂದ ವಿದ್ಯಾರ್ಥಿಗಳು ಈ ಗುಂಡಿಯತ್ತ ಬರುವುದನ್ನೇ ನಿಲ್ಲಿಸಿದ್ದರು.

ಕೃಷಿಗೂ ಬಳಸುತ್ತಿದ್ದರು
ಪುರುಷರ ಗುಂಡಿಯಿಂದ ಪ್ರಕೃತಿದತ್ತವಾಗಿ ಹರಿದು ಬರುತ್ತಿದ್ದ ನೀರನ್ನು ಕಾಯರಕಟ್ಟ ಪ್ರದೇಶದ ಜನತೆ ಕೃಷಿ ಚಟುವಟಿಕೆಗಳಿಗೆ ಉಪಯೋಗಿಸುತ್ತಿದ್ದರು. ಕಾಲಕ್ರಮೇಣ ಈ ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳು ಹೆಚ್ಚಾದಾಗ ಬಾವಿ, ಕೆರೆಗಳು ನಿರ್ಮಾಣವಾದ ಕಾರಣ ಈ ನೀರಿನ ಬಳಕೆಯೂ ಕಡಿಮೆಯಾಯಿತು. ನೀರು ಹರಿದು ಬರುವ ತೋಡಿನ ನಿರ್ವಹಣೆ ಮಾಡುತ್ತಿದ್ದ ಮಂದಿಯೂ ಕಡಿಮೆಯಾದರು. ತೋಡಿನಲ್ಲಿ ಹೂಳು ತುಂಬಿಕೊಂಡಿದೆ. ಇತ್ತ ಪುರುಷರ ಗುಂಡಿಯ ನೀರಿನ ಒರತೆ ಜಾಗಕ್ಕೆ ಗುಂಡಿಯ ಮೇಲ್ಭಾಗದಿಂದ ಮಳೆಗಾಲದಲ್ಲಿ ಮಣ್ಣು ಸಮೇತ ಕೆಸರು ನೀರು ಹರಿದುಬಂದು ಹೂಳು ತುಂಬಿಕೊಂಡಿದ್ದರಿಂದ ಗುಂಡಿಯ ಆಳವೂ ಕಡಿಮೆಯಾಗಿದೆ.

ಹಲವು ವರ್ಷಗಳ ಹಿಂದೆ ಗ್ರಾಮದ ಕೆಲ ಜನರ ತಂಡವೊಂದು ಸಣ್ಣ ನಾಟಕವನ್ನು ಮನೆ ಮನೆಗೆ ತೆರಳಿ ಆಡಿ ತೋರಿಸುತ್ತಿದ್ದರು. ಜಾತಿ, ಮತ, ಧರ್ಮದ ಭೇದವಿಲ್ಲದ ಈ ತಂಡಕ್ಕೆ ಪುರುಷರ ತಂಡವೆಂದು ಹೆಸರಿಸಲಾಗಿತ್ತು. ಈ ತಂಡಕ್ಕೆ ಮನೆಯವರು ನೀಡುತ್ತಿದ್ದ ಹಣ, ಅಕ್ಕಿ ಇನ್ನಿತರ ವಸ್ತು ರೂಪದ ದೇಣಿಗೆಯನ್ನು ಗ್ರಾಮದ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನ ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತಿತ್ತು. ಈ ತಂಡದ ಸದಸ್ಯರು ತಮ್ಮ ಕಲೆಗೆ ತಕ್ಕಂತೆ ವೇಷ ಧರಿಸುವುದು ಮತ್ತು ವೇಷ ಕಳಚುವುದು ಇದೇ ನೀರಿನ ಗುಂಡಿಯ ಬಳಿ. ಹೀಗಾಗಿ ಈ ಗುಂಡಿಗೆ ಪುರುಷರ ಗುಂಡಿಯೆಂದು ಹೆಸರು ಬಂದಿತು ಎನ್ನುತ್ತಾರೆ ಈ ಭಾಗದ ಹಿರಿಯರು.

•ಸದಾನಂದ ಆಲಂಕಾರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ