“ಪರಿಪೂರ್ಣ ಕಲೆಗಳಲ್ಲಿ ಯಕ್ಷಗಾನ ಅಗ್ರಣಿ’

Team Udayavani, Jun 3, 2019, 10:47 AM IST

ಮಂಗಳೂರು: ಜಗತ್ತಿನ ಅತ್ಯಂತ ಪರಿಪೂರ್ಣ ಕಲೆಗಳ ಪೈಕಿ ಯಕ್ಷಗಾನ ಕಲೆಗೆ ಅಗ್ರಸ್ಥಾನವಿದೆ ಎಂದು ಉಡುಪಿಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದರು.

ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ವತಿಯಿಂದ ನಗರದ ಅಡ್ಯಾರ್‌ ಗಾರ್ಡನ್‌ನಲ್ಲಿ ರವಿವಾರ ಆಯೋಜಿಸಿದ್ದ ಯಕ್ಷಧ್ರುವ ಪಟ್ಲ ಸಂಭ್ರಮ, ಪಟ್ಲ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಯಕ್ಷಗಾನ ಪರಿಪೂರ್ಣ ವಾದುದು. ಈ ಕಲೆಯಲ್ಲಿ ಸಂಗೀತ, ನೃತ್ಯ, ಹಾಸ್ಯ, ಶಿಕ್ಷಣ, ಮಾರ್ಗದರ್ಶನ, ಮೌಲ್ಯಕ್ಕೆ ಅವಕಾಶವಿದೆ. ಸಂಗೀತವನ್ನು ಆಲಿಸ ಬಹುದು. ನೃತ್ಯದಲ್ಲಿ ವಾಕ್‌ ಚಾತುರ್ಯಕ್ಕೆ ಅವಕಾಶವಿಲ್ಲ. ಆದರೆ ಯಕ್ಷಗಾನ ಇವೆಲ್ಲದರ ಸಂಗಮ ಎಂದು ತಿಳಿಸಿದರು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ಚಿಂತನೆ ಅಗತ್ಯ
2019ನೇ ಸಾಲಿನ ಪಟ್ಲ ಪ್ರಶಸ್ತಿಯನ್ನು ಸ್ವೀಕರಿಸಿದ ಹಿರಿಯ ವಿದ್ವಾಂಸ, ಯಕ್ಷಗಾನ ವಿಮರ್ಶಕ ಡಾ| ಎಂ. ಪ್ರಭಾಕರ ಜೋಷಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯಕ್ಷಗಾನ ಕಲೆ ಟ್ರೆಂಡ್‌ಗಳಿಗೆ ಬಲಿಯಾಗುತ್ತಿದೆ. ಹೀಗಿರುವಾಗ ಯಕ್ಷಗಾನವನ್ನು ಯಾವ ರೀತಿಯಾಗಿ ಪ್ರೇಕ್ಷಕರಿಗೆ ನೀಡಬೇಕು ಎಂಬ ಬಗ್ಗೆ ಚಿಂತನೆ ಮಾಡಬೇಕಿದೆ ಎಂದರು.

ನನಗೆ ನೀಡಿದ ಪ್ರಶಸ್ತಿಯು ಯಕ್ಷಗಾನ ರಂಗಕ್ಕೆ ಸಂದ ಗೌರವವಾಗಿದ್ದು, ಪ್ರಶಸ್ತಿಯೊಂದಿಗೆ ನೀಡಿದ ಒಂದು ಲಕ್ಷ ರೂ. ಗೌರವಧನವನ್ನು ನನ್ನ ಮುಂದಿನ ಸಂಶೋಧನೆಗಳಿಗೆ, ಪ್ರಕಟನೆಗಳಿಗೆ ವಿನಿಯೋಗಿಸುತ್ತೇನೆ ಎಂದರು.
ಹೆಸರಾಂತ ವೈದ್ಯ ಡಾ| ಎ.ಎ. ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಯಕ್ಷಧ್ರುವ ಕಲಾ ಗೌರವ
ಇದೇ ವೇಳೆ ಯಕ್ಷಧ್ರುವ ಕಲಾ ಗೌರವ 2019ನ್ನು ತೆಂಕುತಿಟ್ಟಿನ ಪೆರುವಾಯಿ ನಾರಾಯಣ ಭಟ್‌, ಬಂಟ್ವಾಳ ಜಯರಾಮ ಆಚಾರ್ಯ, ಬಡಗುತಿಟ್ಟಿನ ಕಂದಾವರ ರಘುರಾಮ ಶೆಟ್ಟಿ, ಐರೋಡಿ ಗೋವಿಂದಪ್ಪ, ಹವ್ಯಾಸಿ ಕಲಾವಿದರಾದ ಕೈರಂಗಳ ನಾರಾಯಣ ಹೊಳ್ಳ, ವೆಂಕಪ್ಪ ಮಾಸ್ಟರ್‌ ಅಸೈಗೋಳಿ, ಮಹಿಳಾ ಯಕ್ಷಗಾನದ ಸಾಧನೆಗೆ ದಯಾಮಣಿ ಎಸ್‌. ಶೆಟ್ಟಿ ಎಕ್ಕಾರು, ರತ್ನಾ ಕೆ. ಭಟ್‌ ತಲೆಂಜೇರಿ ಅವರಿಗೆ ನೀಡಿ ಗೌರವಿಸಲಾಯಿತು. ವಿಧಿವಶರಾದ 11 ಕಲಾವಿದರ ಕುಟುಂಬಗಳಿಗೆ 50 ಸಾವಿರ ರೂ. ಸಹಾಯ ಧನ ವಿತರಿಸಲಾಯಿತು.

ಹೊರನಾಡು ದೇವಸ್ಥಾನದ ಧರ್ಮದರ್ಶಿ ಭೀಮೇಶ್ವರ ಜೋಷಿ, ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇ0ದ್ರ ಕುಮಾರ್‌, ರೂಪದರ್ಶಿ ರಕ್ಷಿತಾ ಶೆಟ್ಟಿ, ಉಡುಪಿ ಎಡಿಸಿ ವಿದ್ಯಾ ಕುಮಾರಿ, ಮಾರ್ಗದರ್ಶಕರಾದ ಪಟ್ಲಗುತ್ತು ಮಹಾಬಲ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಬೆಂಗಳೂರಿನ ಎಂಆರ್‌ಜಿ
ಗ್ರೂಪ್‌ನ ಪ್ರಕಾಶ್‌ ಶೆಟ್ಟಿ ಬಂಜಾರ, ಸಮೂಹ ಮಹಾ ಪ್ರಬಂಧಕ ಬಿ.ಎಚ್‌. ವಿ. ಪ್ರಸಾದ್‌, ಉದ್ಯಮಿಗಳಾದ ಸದಾಶಿವ ಶೆಟ್ಟಿ ಕನ್ಯಾನ, ಮುರಳಿಕೃಷ್ಣ ಪೊಳಲಿ ಉಪಸ್ಥಿತರಿದ್ದರು. ಯಕ್ಷಧ್ರುವ ಪಟ್ಲ ಫೌಂಡೇಶನ್‌ ಸ್ಥಾಪಕಾಧ್ಯಕ್ಷ ಸತೀಶ್‌ ಶೆಟ್ಟಿ ಪಟ್ಲ ಸ್ವಾಗತಿಸಿದರು.

ಬೆಳಗ್ಗಿನಿಂದಲೇ ಸಂಭ್ರಮ
ಪಟ್ಲ ಸಂಭ್ರಮದಲ್ಲಿ ರವಿವಾರ ಬೆಳಗ್ಗಿನಿಂದ ಮಧ್ಯರಾತ್ರಿ ವರೆಗೆ ವಿವಿಧ ಕಾರ್ಯಕ್ರಮ ಜರಗಿದವು. ಟ್ರಸ್ಟಿನ ಸದಸ್ಯರು, ಯಕ್ಷಾಭಿಮಾನಿಗಳಿಂದ ರಕ್ತದಾನ ಶಿಬಿರ, ಯಕ್ಷಗಾನ ಕಲಾವಿದರು, ಮನೆಯವರಿಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಉಚಿತ ಔಷಧ ವಿತರಣೆ, ಯಕ್ಷ ಸಪ್ತ ಸ್ವರ-ನೃತ್ಯ ವರ್ಷ ದರ್ಶನ, ಮಹಿಳಾ ಯಕ್ಷಗಾನ-ನಾಟ್ಯ ವೈಭವ, ತಾಳಮದ್ದಳೆ, ಯಕ್ಷಗಾನ ನೃತ್ಯ, ಕುರುಕ್ಷೇತ್ರಕ್ಕೊಂದು ಆಯೋಗ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ