ಚುನಾವಣೆಯಲ್ಲಿ ಸಂಬಂಧಿಕರ ಫೈಟ್‌

ಗಂಡ-ಹೆಂಡತಿ, ಚಿಕ್ಕಪ್ಪ-ಮಗ, ಅತ್ತೆ-ಸೊಸೆ, ಮಾವ-ಅಳಿಯನ ಸೆಣಸಾಟ!ಫಲಿತಾಂಶದ್ದೇ ಕುತೂಹಲ

Team Udayavani, Nov 6, 2019, 11:17 AM IST

„ರಾ. ರವಿಬಾಬು

ದಾವಣಗೆರೆ: ಗಂಡ- ಹೆಂಡತಿ…, ಚಿಕ್ಕಪ್ಪ-ಮಗ…, ಅತ್ತೆ-ಸೊಸೆ…, ಭಾವ -ಸೊಸೆ…, ಮಾವ- ಅಳಿಯ…, ಅತ್ಯಾಪ್ತ ಗೆಳತಿಯರ ರೋಚಕ ಸೆಣಸಾಣಕ್ಕೆ ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ವೇದಿಕೆಯಾಗಿದೆ!. ನ.12 ರಂದು 45 ಸ್ಥಾನಕ್ಕೆ ನಡೆಯಲಿರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗಂಡ-ಹೆಂಡತಿ, ಚಿಕ್ಕಪ್ಪ- ಮಗ, ಮಾವ-ಅಳಿಯ, ಅತ್ತೆ-ಸೊಸೆ ಸ್ಪರ್ಧಿಸಿದ್ದಾರೆ.

ಮಹಾನಗರ ಪಾಲಿಕೆ ಪ್ರವೇಶಕ್ಕೆ ಸಂಬಂಧಿಕರು, ಬೀಗರು ಮತ್ತು ಗೆಳತಿಯರ ನಡುವೆ ಫೈಟ್‌ ಈಗಾಗಲೇ ರಂಗೇರಿದೆ. ಸಂಬಂಧಗಳು ಏನೇ ಇರಲಿ, ಚುನಾವಣಾ ಕಣದಲ್ಲಿ ಇಳಿದ ನಂತರ ವಿರೋಧ ಪಕ್ಷದ ಹುರಿಯಾಳು.

ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂಬ ಹಟಕ್ಕೆ ಬಿದ್ದು ಹೋರಾಡುತ್ತಿರುವರು ತಮ್ಮ ಸಂಬಂಧವನ್ನು ಕೌಟಂಬಿಕ ವಿಚಾರಕ್ಕೆ ಮಾತ್ರವೇ ಸೀಮಿತಗೊಳಿಸಿದ್ದಾರೆ. ಮತದಾರರ ಮನ ಗೆಲ್ಲಲು ಹರ ಸಾಹಸ ಮಾಡುತ್ತಿದ್ದಾರೆ.

ಮರು ಆಯ್ಕೆ ಬಯಸಿರುವ ಕಾಂಗ್ರೆಸ್‌ನ ಜೆ.ಎನ್‌. ಶ್ರೀನಿವಾಸ್‌ ಭಗತ್‌ಸಿಂಗ್‌ ನಗರ(28ನೇ ವಾರ್ಡ್‌) ಹುರಿಯಾಳು. ಅವರ ಪತ್ನಿ ಎಸ್‌. ಶ್ವೇತಾ ಕೆ.ಇ.ಬಿ. ಕಾಲೋನಿ (37ನೇ ವಾರ್ಡ್‌) ನಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದಾರೆ.

ಗಂಡ- ಹೆಂಡತಿ ಒಟ್ಟಿಗೆ ಚುನಾವಣೆಯಲ್ಲಿ ಸ್ಪರ್ಧಿಸಿರುವುದು ವಿಶೇಷ. ನ.12 ರಂದು ನಡೆಯುವ ಚುನಾವಣೆಯಲ್ಲಿ ಗೆದ್ದು ಇಬ್ಬರೂ ಮಹಾನಗರ ಪಾಲಿಕೆ ಪ್ರವೇಶಿಸುವರೇ ಎಂಬುದು ಬಹಳ ಕುತೂಹಲ ಮೂಡಿಸಿದೆ.

ಗಣೇಶಪೇಟೆಯಿಂದ (10ನೇ ವಾರ್ಡ್‌) ಸ್ಪರ್ಧಿಸಿರುವ ಕಾಂಗ್ರೆಸ್‌ನ ಮಾಲತೇಶ್‌ ಜಾಧವ್‌ ಹಾಗೂ ಬಿಜೆಪಿಯ ಎ.ವೈ. ರಾಕೇಶ್‌ ಜಾಧವ್‌ ಸಂಬಂಧದಲ್ಲಿ ಚಿಕ್ಕಪ್ಪ-ಮಗ. ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌ ತಮ್ಮ ಪುತ್ರನಿಗೆ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಿದ್ಧ ಮಾಡಿಕೊಟ್ಟಿದ್ದಾರೆ.

ಮಾಜಿ ಮೇಯರ್‌ ಅನಿತಾ ಜಾಧವ್‌ ಬದಲಿಗೆ ಸ್ಪರ್ಧಿಸುತ್ತಿರುವ ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಾಲತೇಶ್‌ ಜಾಧವ್‌ ಹಾಗೂ ರಾಕೇಶ್‌ ಜಾಧವ್‌ ನಡುವೆ ತೀವ್ರ ಪೈಪೋಟಿ ಇದೆ. ಚಿಕ್ಕಪ್ಪ-ಮಗನ ನಡುವೆ ಗೆಲ್ಲುವರಾರು ಎಂಬುದಕ್ಕೆ ನ.14 ರಂದು ಉತ್ತರ ದೊರೆಯಲಿದೆ.

ಜಾಲಿನಗರ(7ನೇ ವಾರ್ಡ್‌)ದಲ್ಲೂ ಚಿಕ್ಕಪ್ಪ ಮತ್ತು ಮಗನ ನಡುವೆ ಫೈಟ್‌ ಇದೆ. ಕಾಂಗ್ರೆಸ್‌ನ ವಿನಾಯಕ ಪೈಲ್ವಾನ್‌- ಪಕ್ಷೇತರ ಅಭ್ಯರ್ಥಿ ಎಸ್‌. ಬಸಪ್ಪ ಸಂಬಂಧದಲ್ಲಿ ಚಿಕ್ಕಪ್ಪ-ಮಗ. ಕಳೆದ ಪಾಲಿಕೆ ಅವಧಿಯಲ್ಲಿ 1ನೇ ವಾರ್ಡ್‌ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ನಂತರ ಕಾಂಗ್ರೆಸ್‌ ಸೇರ್ಪಡೆಯಾಗಿದ್ದ ಎಸ್‌. ಬಸಪ್ಪ ಮೀಸಲಾತಿ ಕಾರಣಕ್ಕೆ 7ನೇ ವಾರ್ಡ್‌ನಲ್ಲಿ ಕಣಕ್ಕೆ ಇಳಿದಿದ್ದಾರೆ.

ಚುನಾವಣೆಯಲ್ಲಿ ತಮ್ಮ ಮಗನ ವಿರುದ್ಧ ಜಯಿಸಿ, ಸತತ ಎರಡನೇ ಬಾರಿಗೆ ನಗರಪಾಲಿಕೆಗೆ ಆಯ್ಕೆಯಾಗುವರೇ ಎಂಬುದು ಮಿಲಿಯನ್‌ ಡಾಲರ್‌ ಪ್ರಶ್ನೆ. ಸರಸ್ವತಿ ಬಡಾವಣೆ(33ನೇ ವಾರ್ಡ್‌)ನಿಂದ ಬಿಜೆಪಿ ಟಿಕೆಟ್‌ ಬಯಸಿ, ದೊರೆಯದ ಕಾರಣಕ್ಕೆ ಬಂಡಾಯ ಅಭ್ಯರ್ಥಿಯಾಗಿರುವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್‌. ರಾಜಶೇಖರ್‌ ತಮ್ಮ ಸ್ವಂತ ಅಳಿಯ, ಬಿಜೆಪಿಯ ಕೆ.ಎಂ. ವೀರೇಶ್‌ ವಿರುದ್ಧವೇ ಸೆಣಸಾಡುತ್ತಿದ್ದಾರೆ.

ಮಾವ-ಅಳಿಯನ ಪ್ರಚಾರ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಮಾವ-ಅಳಿಯನ ನಡುವಿನ ಸ್ಪರ್ಧೆ ರೋಚಕತೆಗೆ ಕಾರಣವಾಗಿದೆ. ಇಬ್ಬರು ಪೈಲ್ವಾನರ ನಡುವೆ ಚುನಾವಣಾ ಕುಸ್ತಿ ಭರ್ಜರಿಯಾಗಿಯೇ ಇದೆ. ಮಾವ ಗೆಲ್ಲುವರಾ ಇಲ್ಲ ಅಳಿಯ ಗೆಲ್ಲುವರಾ ಎಂಬುದನ್ನ ಕಾದು ನೋಡಬೇಕಾಗಿದೆ.

ನಿಟುವಳ್ಳಿ ಚಿಕ್ಕನಹಳ್ಳಿ(32ನೇ ವಾರ್ಡ್‌)ನಲ್ಲಿ ಕಾಂಗ್ರೆಸ್‌ನ ಅನ್ನಪೂರ್ಣ ಬಸವರಾಜ್‌ ತಮ್ಮ ಸೊಸೆ, ಬಿಜೆಪಿಯ ರೇಖಾ ಶ್ರೀನಿವಾಸ್‌ ವಿರುದ್ಧ ಸ್ಪರ್ಧೆಗೆ ಇಳಿದಿದ್ದಾರೆ. ಅನ್ನಪೂರ್ಣ ಬಸವರಾಜ್‌ ಪುನರಾಯ್ಕೆ ಬಯಸಿ ಮತ್ತೆ ಅಖಾಡಕ್ಕಿಳಿದಿದ್ದಾರೆ. ಅತ್ತೆ ಸೊಸೆಯನ್ನ ಮಣಿಸಿ ಮತ್ತೆ ನಗರಪಾಲಿಕೆಗೆ ಪ್ರವೇಶಿಸುವರೆ ಎಂಬುದು ಸದ್ಯದ ಕುತೂಹಲ.

ಎಸ್‌ಒಜಿ ಕಾಲೋನಿ(31ನೇ ವಾರ್ಡ್‌) ಬಿಜೆಪಿ ಅಭ್ಯರ್ಥಿ ಅಂಜಿನಪ್ಪ, ಜೆಡಿಎಸ್‌ನ ಕೆ.ಆರ್‌. ರಂಗಸ್ವಾಮಿ ಮಾವ- ಅಳಿಯ. ಇಬ್ಬರು ಚುನಾವಣಾ ಅಖಾಡದಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆಸುತ್ತಿದ್ದಾರೆ. ಮಾವ-ಅಳಿಯ ಇಬ್ಬರ ನಡುವೆ ಗೆಲ್ಲುವರು ಯಾರು ಎಂಬುದಕ್ಕೆ ನ.14ರ ವರೆಗೆ ಕಾಯಬೇಕಾಗಿದೆ.

ಕೆ.ಬಿ. ಬಡಾವಣೆ(25ನೇ ವಾರ್ಡ್‌) ಕಾಂಗ್ರೆಸ್‌ ನಿಂದ ಕೆ.ಜಿ. ಶಿವಕುಮಾರ್‌ ಸ್ಪರ್ಧಿಸಿದ್ದಾರೆ. ಅವರ ಸಹೋದರನ ಪತ್ನಿ ವಿಜಯಾ ಲಿಂಗರಾಜ್‌ ಸಿದ್ದವೀರಪ್ಪ ಬಡಾವಣೆ(42ನೇ ವಾರ್ಡ್‌) ಕಾಂಗ್ರೆಸ್‌ ನ ಹುರಿಯಾಳು. ನಗರಸಭೆಗೆ ಭಾವ-ಸೊಸೆ ಇಬ್ಬರೂ ಒಂದೇ ಪಕ್ಷದಿಂದ ಆಯ್ಕೆಯಾಗಿದ್ದರು.

ಈ ಚುನಾವಣೆಯಲ್ಲಿ ಮತ್ತೆ ಇಬ್ಬರು ಕಣದಲ್ಲಿ ಇದ್ದಾರೆ. ಭಾವ-ಸೊಸೆ ನಗರಪಾಲಿಕೆ ಪ್ರವೇಶಿಸುವರೇ ಎಂಬುದು ಕುತೂಹಲ ಮೂಡಿಸಿದೆ. ಸುರೇಶ್‌ ನಗರ(8ನೇ ವಾರ್ಡ್‌)ನ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಎನ್‌. ಗೌರಮ್ಮ ಹಾಗೂ ಬಂಡಾಯ ಅಭ್ಯರ್ಥಿ ಲಕ್ಷ್ಮಿದೇವಿ ವೀರಣ್ಣ ದೂರದ ಸಂಬಂಧಿಗಳು ಮಾತ್ರವಲ್ಲ ಅತ್ಯಾಪ್ತ ಗೆಳತಿಯರು.

ಕಳೆದ ಪಾಲಿಕೆ ಅವಧಿಯಲ್ಲಿ ಇಬ್ಬರೂ ಅಕ್ಕ-ಪಕ್ಕದ ವಾರ್ಡ್‌ಗಳಿಂದ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. ಮೀಸಲಾತಿ ಬದಲಾವಣೆಯ ಪರಿಣಾಮ ಈಗ ಇಬ್ಬರು ಪ್ರತಿಸ್ಪರ್ಧಿಗಳಾಗಿದ್ದಾರೆ. ಇಬ್ಬರು ಗೆಳತಿಯರ ನಡುವೆ ಸತತ ಎರಡನೇ ಬಾರಿಗೆ ನಗರಪಾಲಿಕೆ ಸದಸ್ಯೆ ಆಗುವರು ಯಾರು ಎಂಬುದು ಕುತೂಹಲಕ್ಕೆಕಾರಣವಾಗಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕಲಬುರಗಿ: ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನ ಬರುವ 2020 ರ ಫೆಬ್ರುವರಿ 5ರಿಂದ ನಡೆಸಲು ನಿರ್ಧರಿಸಲಾಗಿದೆ. ಮಂಗಳವಾರ ಜಿಲ್ಲಾ ಅಧಿಕಾರಿ ಸಭಾಂಗಣದಲ್ಲಿ ನಡೆದ...

  • ತುಮಕೂರು: ನಗರ ಸ್ಮಾರ್ಟ್‌ಸಿಟಿಯಾಗುವ ಬದಲು ಧೂಳು ಸಿಟಿಯಾಗಿದೆ. ಅಧಿಕಾರಿಗಳು ಜನರ ಕಷ್ಟ ಅರ್ಥ ಮಾಡಿಕೊಳ್ಳಬೇಕು. ಜನರಿಗೆ ತೊಂದರೆಯಾಗದಂತೆ ಕಾಮಗಾರಿ ಶೀಘ್ರ...

  • ಮಾಗಡಿ: ಕೆಂಪೇಗೌಡರ ತವರೂರು ಹಾಗೂ ಕಲಾರಂಗ ಸಜ್ಜಿಕೆ ಸಾಂಸ್ಕೃತಿಕ ತೊಟ್ಟಿಲು ಎಂದೆಲ್ಲ ಕರೆಯಿಸಿಕೊಳ್ಳುವ ಮಾಗಡಿ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ...

  • ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಶಾಸಕ ಎಂ . ಶ್ರೀನಿವಾಸ್‌ 15.86 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ನಗರದ...

  • ಮಂಡ್ಯ: ಕೆ.ಆರ್‌.ಪೇಟೆ ಉಪ ಚುನಾವಣೆಗೆ ಚುನಾವಣಾ ಅಧಿಸೂಚನೆ ಪ್ರಕಟಗೊಂಡಿದ್ದು, ಚುನಾವಣಾ ನೀತಿ ಸಂಹಿತೆ ಜಿಲ್ಲಾದ್ಯಂತ ಜಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌...

ಹೊಸ ಸೇರ್ಪಡೆ