ಈ ತಿಂಗಳಲ್ಲಿ ಕಾನೂನು-ಸುವ್ಯವಸ್ಥೆ ಟೆನ್ಶನ್‌!

10 ದಿನಗಳ ಅವಧಿಯಲ್ಲಿ ಈದ್‌ ಮಿಲಾದ್‌, ಪಾಲಿಕೆ ಚುನಾವಣೆ, ಅಯೋಧ್ಯಾ ವಿವಾದ ತೀರ್ಪು

Team Udayavani, Nov 6, 2019, 11:26 AM IST

ದಾವಣಗೆರೆ: ನವೆಂಬರ್‌ 10 ರಿಂದ 20ರ ವರೆಗಿನ ಅವಧಿಯಲ್ಲಿ ಪ್ರಮುಖ ಘಟನೆಗಳ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮನವಿ ಮಾಡಿದ್ದಾರೆ.

ಮಂಗಳವಾರ, ತಮ್ಮ ಕಚೇರಿ ಸಭಾಂಗಣದಲ್ಲಿ ನಾಗರಿಕ ಸೌಹಾರ್ದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಹಿಂದೆ ದಾವಣಗೆರೆ, ಚನ್ನಗಿರಿ ಮತ್ತು ಮಲೆಬೆನ್ನೂರಿನಲ್ಲಿ ಶಾಂತಿ ಕದಡುವಂತಹ ಘಟನೆಗಳು ನಡೆದಿದ್ದು, ಮುಂದೆ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಎಲ್ಲರೂ ಸಹಕರಿಸಬೇಕೆಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ನ. 10 ರಂದು ಈದ್‌ ಮಿಲಾದ್‌ ಹಬ್ಬ, 12ರಂದು ಮಹಾನಗರಪಾಲಿಕೆ ಚುನಾವಣೆ, 14ರಂದು ಮತ ಎಣಿಕೆ ಹಾಗೂ ನ.17 ರಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ನಿವೃತ್ತಿ ಹಿನ್ನೆಲೆಯಲ್ಲಿ ಅಯೋಧ್ಯ ಕುರಿತಾದ ತೀರ್ಪು ಹೊರಬೀಳುವ ಹಿನ್ನೆಲೆಯಲ್ಲಿ ನಗರದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈ ಗೊಳ್ಳಲಾಗಿದೆ. ಈ ಸಂಬಂಧ ಎಲ್ಲ ಧರ್ಮದ ಮುಖಂಡರು ತಮ್ಮ ಸಲಹೆ ನೀಡಬಹುದು ಎಂದರು.

ಡಿ.ಅಸ್ಲಂ ಖಾನ್‌ ಮಾತನಾಡಿ, ಭಾನುವಾರ ಈದ್‌ ಮಿಲಾದ್‌ ಹಬ್ಬ ಇದೆ. ಅಂದು ಮಂಡಿಪೇಟೆಯಲ್ಲಿ ಸಂತೆ ನಡೆಯುತ್ತದೆ. ಮೆರವಣಿಗೆ ಚಾಮರಾಜಪೇಟೆಯಿಂದ ಮಂಡಿಪೇಟೆಗೆ ಬಂದಾಗ ಯಾವುದೇ ಅಡಚಣೆ ಆಗದಂತೆ ಸಂತೆ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದರು.

ಮುಸ್ಲಿಂ ಸಮಾಜದ ಮುಖಂಡ ಕೋಳಿ ಇಬ್ರಾಹಿಂ ಸಾಬ್‌ ಮಾತನಾಡಿ, ಹಬ್ಬ ಸೌಹಾರ್ದಯುತವಾಗಿ ಆಚರಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು. ನಗರದಲ್ಲಿ ಬೀಡಾಡಿ ಹಂದಿ, ದ®-‌ಕರು, ನಾಯಿಗಳ ಹಾವಳಿ ಹೆಚ್ಚಿದ್ದು, ಇದನ್ನು ನಿಯಂತ್ರಿಸುವ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ನಗರದಲ್ಲಿ ಬೀಡಾಡಿ ಪ್ರಾಣಿಗಳನ್ನು ನಿಯಂತ್ರಿಸಲು ಟಾಸ್‌ R´ೋರ್ಸ್‌ ಸಮಿತಿ ರಚಿಸಿ, ಪಾಲಿಕೆ ಚುನಾವಣೆ ನಂತರ ಕ್ರಮ ವಹಿಸಲಾಗುವುದು ಎಂದರು.

ಹಿಂದೂ ಸಮಾಜದ ಮುಖಂಡ ಶಂಕರನಾರಾಯಣ ಮಾತನಾಡಿ, ನಗರದಲ್ಲಿ ಶಾಂತಿ ಮತ್ತು ಸೌಹಾರ್ದದಿಂದ ಹಬ್ಬಗಳನ್ನು ಆಚರಿಸುತ್ತಿದ್ದೇವೆ. ಈದ್‌ಮಿಲಾದ್‌, ಪಾಲಿಕೆ ಚುನಾವಣೆ ಹಾಗೂ ಸುಪ್ರೀಂಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್‌ ಇಲಾಖೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಕಿಡಿಗೇಡಿಗಳನ್ನು ನಿಗ್ರಹಿಸಬೇಕು.

ಮದ್ಯದಂಗಡಿ ಬಂದ್‌ ಮಾಡಬೇಕು ಹಾಗೂ ಸರ್ವೋಚ್ಚ ನ್ಯಾಯಾಲಯದ ತೀರ್ಪು ಏನೇ ಇದ್ದರೂ ಎಲ್ಲ ಧರ್ಮೀಯರು ಶಾಂತಿಯಿಂದ ಸ್ವೀಕರಿಸಬೇಕು ಎಂದರು.

ವಿನೋಬನಗರದ ಇಸ್ಮಾಯಿಲ್‌ ಖಾನ್‌ ಮಾತನಾಡಿ, ಈದ್‌ ಮಿಲಾದ್‌ ಶಾಂತಿ ಸಂದೇಶ ಸಾರುವ ಹಬ್ಬ. ಈ ಹಬ್ಬದಲ್ಲಿ ಮೋಟಾರ್‌ ಬೈಕ್‌ ರ್ಯಾಲಿ ಇತರೆಗಳಿಗೆ ಆಸ್ಪದ ಕೊಡದೆ, ರಸ್ತೆ ಸಂಚಾರ ಸುಗಮವಾಗಿರಲಿ ಎಂದು ಕೋರಿದರು.

ಪೌರ ಕಾರ್ಮಿಕರ ಸಂಘದ ಕಾರ್ಯದರ್ಶಿ ನೀಲಗಿರಿಯಪ್ಪ, ಆಜಾದ್‌ ನಗರ ಮತ್ತು ಗಾಂಧಿ ನಗರ ಸೂಕ್ಷ್ಮ ಪ್ರದೇಶಗಳಾಗಿದ್ದು, ಈ ಭಾಗದಲ್ಲಿ ಪೊಲೀಸ್‌ ಇಲಾಖೆ ಹೆಚ್ಚು ನಿಗಾ ವಹಿಸಬೇಕು ಎಂದರು.

ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಆರ್‌ಪಿ ಕಾಯ್ದೆ ಪ್ರಕಾರ ಹೆದರಿಸುವುದು, ಭಯಪಡಿಸಿವುದು ಶಿಕ್ಷಾರ್ಹ ಅಪರಾಧ. ಅಂತಹ ಪ್ರಕರಣ ಕಂಡು ಬಂದಲ್ಲಿ ಎಸ್‌ಪಿಯವರಿಗೆ ಲಿಖೀತ ದೂರು ನೀಡಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದಾಗ, ಎಸ್ಪಿ ಮಾತನಾಡಿ, ಬೆದರಿಕೆ ಪ್ರಕರಣದ ಬಗ್ಗೆ ಮುಕ್ತವಾಗಿ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಿಪಿಐನ ಆವರಗೆರೆ ಉಮೇಶ್‌ ಮಾತನಾಡಿ, ನಗರದ 17, 28 ಮತ್ತು 36ನೇ ವಾರ್ಡ್‌ಗಳು ಸೂಕ್ಷ್ಮ ಪ್ರದೇಶಗಳಾಗಿದ್ದು, ಪೊಲೀಸರು ನಿಗಾ ವಹಿಸಬೇಕು ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌ ಮಾತನಾಡಿ, 1990-92ರ ಘಟನೆಗಳು ಪಾಠದಂತಿದ್ದು, ಸೌಹಾರ್ದತೆ ಕದಡದ ರೀತಿಯಲ್ಲಿ ನಾವೆಲ್ಲ ಹಬ್ಬ ಆಚರಣೆಗಳಲ್ಲಿ ಭಾಗಿಯಾಗೋಣ. ಅಣ್ಣ ತಮ್ಮಂದಿರಂತೆ ಎಲ್ಲ ಹಬ್ಬಗಳನ್ನು ಆಚರಿಸುತ್ತಿದ್ದೇವೆ. ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಸಹಮತ ತೋರಬೇಕು ಎಂದು ಹೇಳಿದರು.

ಪಾಲಿಕೆಯ ಮಾಜಿ ಉಪ ಮಹಾಪೌರ ಕೆ.ಎಚ್‌. ಚಮನ್‌ ಸಾಬ್‌ ಮಾತನಾಡಿ, ಸಭೆಯಲ್ಲಿರುವ ಎಲ್ಲ ಮುಖಂಡರೂ ಹೇಳಿದಂತೆ ನಡೆದುಕೊಂಡರೆ ಇನ್ನೂ ಎಷ್ಟು ವರ್ಷ ಬೇಕಾದರೂ ಸೌಹಾರ್ದಯುತವಾಗಿ ಹಬ್ಬ ಆಚರಿಸಬಹುದು. ಪೊಲೀಸ್‌ ಇಲಾಖೆ ಮತ್ತು ಜಿಲ್ಲಾಡಳಿತದವರು ಚುನಾವಣಾ ಸಮಯದಲ್ಲಿ ಅಪರಾಧಗಳು ನಡೆಯುದಂತೆ ಭದ್ರತೆ ಒದಗಿಸಬೇಕು.

ಅಯೋಧ್ಯ ಬಗೆಗಿನ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ನಾವೆಲ್ಲಾ ಒಪ್ಪಿಕೊಳ್ಳಲೇಬೇಕು ಎಂದರು.

ಸೈಯದ್‌ ಮರ್ದನ್‌ ಸಾಬ್‌ ಮಾತನಾಡಿ, ನಮ್ಮದು ಜಾತ್ಯಾತೀತ ರಾಷ್ಟ್ರ. ಸಂವಿಧಾನಕ್ಕನುಗುಣವಾಗಿ ನಡೆಯಬೇಕಿದ್ದು, ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಬದ್ಧರಾಗೋಣ. ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ಮಕ್ಕಳು, ವೃದ್ಧರಾದಿಯಾಗಿ ಸಾವಿರಾರು ಜನರು ಭಾಗವಹಿಸಲಿದ್ದಾರೆ. ಆಜಾದ್‌ ನಗರ ಮತ್ತು ರಿಂಗ್‌ ರಸ್ತೆಯಲ್ಲಿನ ಸ್ಮಾರ್ಟ್‌ ಸಿಟಿ ಕೆಲಸದಿಂದ ಆದ ಅಡಚಣೆ ತೆರವುಗೊಳಿಸಿಕೊಡಬೇಕೆಂದರು.

ಕೊನೆಗೆ ಜಿಲ್ಲಾಧಿಕಾರಿ ಮಾತನಾಡಿ, ಇಂದಿನ ಸಭೆಯಲ್ಲಿ ಮಾತನಾಡಿದಂತೆ ಎಲ್ಲರೂ ನಡೆದುಕೊಳ್ಳೋಣ. ಜಿಲ್ಲೆಯಲ್ಲಿ ಶಾಂತಿಗೆ ಭಂಗ ತರುವಂತಹ ಯಾವುದೇ ಘಟನೆಗಳಿಗೆ ಆಸ್ಪದವಿಲ್ಲ. ಅಹಿತರಕರ ಘಟನೆಗಳನ್ನು ಕಾನೂನಾತ್ಮಕವಾಗಿ ಯಾವುದೇ ಮುಲಾಜಿಲ್ಲದೇ, ಎಂತಹದ್ದೇ ಸಂದಿಗ್ಧ ಸ್ಥಿತಿ ಬಂದರೂ ನಿಭಾಯಿಸಲು ಶಕ್ತರಿದ್ದೇವೆ. ಅದಕ್ಕೆ ತಮ್ಮೆಲ್ಲರ ಸಹಕಾರ ಇರಲಿ ಎಂದರು.

ಎಎಸ್‌ಪಿ ರಾಜೀವ್‌, ಉಪವಿಭಾಗಾಧಿಕಾರಿ ಮಮತ, ನಗರ ಡಿವೈಎಸ್‌ಪಿ ನಾಗೇಶ್‌ ಐತಾಳ್‌, ಗ್ರಾಮಾಂತರ ಡಿವೈಎಸ್‌ಪಿ ಗಂಗಲ್‌, ತಹಶೀಲ್ದಾರ್‌ ಸಂತೋಷ್‌ ಕುಮಾರ್‌, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಮಾಜದ ಮುಖಂಡರು ಸಭೆಯಲ್ಲಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ