ಸಮಸ್ಯೆಗಳ ಸುಳಿಯಲ್ಲಿ ಮೆಕ್ಕೆಜೋಳ ಕಣಜದ ರೈತರು

ಮಳೆ ಕೊರತೆ- ಕೀಟ ಬಾಧೆ-ಸಿಗದ ಬೆಲೆ ಮೊದಲಾದ ಕಾರಣಗಳಿಂದ ರೈತ ಕಷ್ಟದಲ್ಲಿ

Team Udayavani, May 16, 2019, 9:47 AM IST

ಸಾಂದರ್ಭಿಕ ಚಿತ್ರ

ದಾವಣಗೆರೆ: ಸಕಾಲಿಕ-ಉತ್ತಮ ಮಳೆಯ ಕೊರತೆ…, ಅನಿವಾರ್ಯ ಎನ್ನುವಂತಾಗಿರುವ ವಿಳಂಬ ಬಿತ್ತನೆ…, ಸೈನಿಕ ಹುಳು ಮತ್ತಿತರ ಹುಳುಗಳ ಬಾಧೆ…, ಕಷ್ಟಪಟ್ಟು ಬೆಳೆದರೂ ಸಿಗದ ನಿರೀಕ್ಷಿತ ಬೆಲೆ…ಇತರೆ ಕಾರಣಗಳಿಂದ ಮೆಕ್ಕೆಜೋಳ ಕಣಜ.. ಖ್ಯಾತಿಯ ದಾವಣಗೆರೆ ಜಿಲ್ಲೆಯ ರೈತರು ಸಮಸ್ಯೆಗಳ ಸುಳಿಯಲ್ಲಿ ಸಿಲುಕುವಂತಾಗಿದೆ.

ಕಣಜ ಎಂಬ ಅನ್ವರ್ಥ: ಭದ್ರಾ ಅಚ್ಚುಕಟ್ಟು ಒಳಗೊಂಡಂತೆ 82,592 ಹೆಕ್ಟೇರ್‌ ನೀರಾವರಿ, 1,61,432 ಹೆಕ್ಟೇರ್‌ ಮಳೆಯಾಶ್ರಿತ ಪ್ರದೇಶ ಸೇರಿ 2,44,024 ಹೆಕ್ಟೇರ್‌ ಬೇಸಾಯ ವಿಸ್ತೀರ್ಣ ಪ್ರದೇಶ ಹೊಂದಿರುವ ಜಿಲ್ಲೆಯಲ್ಲಿ ಹಿಂದೊಮ್ಮೆ ಮಳೆಯಾಶ್ರಿತ ಪ್ರದೇಶದ ಅತ್ಯಂತ ಪ್ರಮುಖ ಬೆಳೆಯಾಗಿದ್ದ ಹತ್ತಿ ಸ್ಥಾನದಲ್ಲಿ ಈಗ ಮೆಕ್ಕೆಜೋಳ ಕಾಣಿಸಿಕೊಂಡಿದೆ. ದಾಖಲೆಯ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆಯುತ್ತಿರುವ ಜಿಲ್ಲೆಗೆ ಮೆಕ್ಕೆಜೋಳದ ಕಣಜ… ಎಂಬ ಅನ್ವರ್ಥ ನಾಮವೂ ಇದೆ.

ಕಣಜದ ವಿವರ: 2009 ರಲ್ಲಿ 1,68,325 ಹೆಕ್ಟೇರ್‌, 2010ರಲ್ಲಿ 1,77,675, 2011 ರಲ್ಲಿ 1,79,190, 2012ರಲ್ಲಿ 1,87,181, 2013ರಲ್ಲಿ 1,94,562, 2014ರಲ್ಲಿ 1,85,615, 2015ರಲ್ಲಿ 1,75,463, 2016ರಲ್ಲಿ 1,95,245, 2017 ರಲ್ಲಿ 1,75,783, 2018 ರಲ್ಲಿ 1,85,728(ಹರಪನಹಳ್ಳಿ ತಾಲೂಕಿನ 64 ಸಾವಿರ ಹೆಕ್ಟೇರ್‌ ಸೇರಿ) ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬೆಳೆಯಲಾಗಿತ್ತು. ದಾವಣಗೆರೆ ಜಿಲ್ಲೆಯಲ್ಲಿ ಇತ್ತೀಚಿನ ವರ್ಷದಲ್ಲಿ ಮೆಕ್ಕೆಜೋಳ ಬೆಳೆಯುವ ಪ್ರದೇಶ ಗಮನಿಸಿದರೆ ಜಿಲ್ಲೆ ಮೆಕ್ಕೆಜೋಳದ ಕಣಜ.. ಆಗಿದೆ ಎಂಬುದು ವೇದ್ಯವಾಗುತ್ತದೆ.

ಈಚೆಗೆ ಹೆಚ್ಚಾಗಿ ಕಂಡು ಬರುತ್ತಿರುವ ಮಳೆಯ ಕೊರತೆ, ಸಾಂಪ್ರದಾಯಿಕ ಭತ್ತ-ರಾಗಿ ಇತರೆ ಬೆಳೆಗಳತ್ತ ರೈತರು ಗಮನ ಹರಿಸದೇ ಇರುವ ಕಾರಣಕ್ಕೆ ಮೆಕ್ಕೆಜೋಳ ಪ್ರಧಾನ ಬೆಳೆಯಾಗುತ್ತಿದೆ. ಕೆಲವೇ ಕೆಲ ವರ್ಷಗಳ ಹಿಂದೆ ಮೆಕ್ಕೆಜೋಳ ಬೆಳೆಯುವುದನ್ನ ಕುತೂಹಲದಿಂದ ನೋಡುವ ಕಾಲವೂ ಇತ್ತು. ಈಗ ಅದೇ ಕುತೂಹಲದ ಬೆಳೆ ಪ್ರಮುಖವಾಗಿದೆ.

ಕಣಜದಲ್ಲಿ ಕಲರವ: ಕಳೆದ ವರ್ಷದ ಮುಂಗಾರು ಹಂಗಾಮಿನಲ್ಲಿ ದಾವಣಗೆರೆ ತಾಲೂಕಿನಲ್ಲಿ 32,650 ಹೆಕ್ಟೇರ್‌ ಪ್ರದೇಶ ಗುರಿ ಹೊಂದಲಾಗಿತ್ತು. 30,887 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು. ಹರಿಹರದಲ್ಲಿ 10,725 ಹೆಕ್ಟೇರ್‌ ಗುರಿಗೆ 7,755, ಜಗಳೂರಿನಲ್ಲಿ 31 ಸಾವಿರಕ್ಕೆ 30,801, ಹೊನ್ನಾಳಿಯಲ್ಲಿ 26,650 ಹೆಕ್ಟೇರ್‌ ಗುರಿಗೆ 27,135, ಚನ್ನಗಿರಿಯಲ್ಲಿ 25,585 ಹೆಕ್ಟೇರ್‌ ಗುರಿಗೆ 25,150 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿತ್ತು.

ಮಳೆಯ ತೀವ್ರ ಕೊರತೆಯಿಂದ ಹರಿಹರ ತಾಲೂಕಿನಲ್ಲಿ 4135,83 ಹೆಕ್ಟೇರ್‌, ದಾವಣಗೆರೆಯಲ್ಲಿ 35,984, ಜಗಳೂರಿನಲ್ಲಿ 26,890 ಹೆಕ್ಟೇರ್‌ ಒಳಗೊಂಡಂತೆ 67009.83 ಹೆಕ್ಟೇರ್‌ ಮೆಕ್ಕೆಜೋಳ ಹಾನಿಗೀಡಾಗಿತ್ತು.

ಹಿಂದೊಮ್ಮೆ ದಾಖಲೆ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆದ ದಾವಣಗೆರೆ ಜಿಲ್ಲೆಯಲ್ಲಿ ಇತ್ತೀಚಿನ ವರ್ಷದಲ್ಲಿ ಅತೀ ಸಾಮಾನ್ಯ ಎನ್ನುವಂತಾಗಿರುವ ಮಳೆಯ ಕೊರತೆಯ ಕಾರಣ ಮೆಕ್ಕೆಜೋಳದ ಇಳುವರಿಯಲ್ಲಿ ಭಾರೀ ಏರಿಳಿತ ಕಂಡು ಬರುತ್ತಿದೆ.

ಅತೀವವಾದ ಮಳೆಯ ಕಣ್ಣಾಮುಚ್ಚಾಲೆಯಾಟದಿಂದ ಈಚೆಗೆ ಬರ… ಖಾಯಂ ಆಗುತ್ತಿರುವುದು, ಈವರೆಗೆ ಕಂಡು ಕೇಳರಿಯದ ಸೈನಿಕ ಹುಳು… ಹಾವಳಿ, ಹರಪನಹಳ್ಳಿ ತಾಲೂಕು ಬಳ್ಳಾರಿ ಜಿಲ್ಲೆಗೆ ಸೇರಿರುವ ಕಾರಣ ಮೆಕ್ಕೆಜೋಳದ ಕಣಜ.. ದ ಖ್ಯಾತಿ ನಿಧಾನವಾಗಿ ಕಣ್ಮರೆಯಾಗುತ್ತಿದೆ.

ಈ ಬಾರಿಯ ಗುರಿ…
ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಮಳೆಯ ನಿರೀಕ್ಷೆಯೊಂದಿಗೆ ಕೃಷಿ ಇಲಾಖೆ ಈವರೆಗೆ ದಾವಣಗೆರೆ ತಾಲೂಕಿನಲ್ಲಿ 32,650 ಹೆಕ್ಟೇರ್‌, ಹರಿಹರದಲ್ಲಿ 10,275, ಜಗಳೂರಿನಲ್ಲಿ 31 ಸಾವಿರ, ಹೊನ್ನಾಳಿಯಲ್ಲಿ 26,650 ಹಾಗೂ 25,180 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬೆಳೆಯುವ ಗುರಿ ಇರಿಸಿಕೊಂಡಿದೆ. ಮಳೆಯ ಆಧಾರದಲ್ಲಿ ಗುರಿಯಲ್ಲಿ ಬದಲಾವಣೆ ಆಗಬಹುದು. ರೈತರು ಸಹ ಹೆಚ್ಚಾಗಿ ಬೆಳೆಯಬಹುದು.

ಸಮಯ ಇದೆ…
ಮೆಕ್ಕೆಜೋಳ ಬಿತ್ತನೆಗೆ ಮೇ ಕೊನೆಯ ವಾರದಿಂದ ಜುಲೈ ಮಾಹೆಯವರೆಗೆ ಕಾಲಾವಕಾಶ ಇದೆ. ಉತ್ತಮ ಮಳೆ ಆದಲ್ಲಿ ನಿಗದಿತ ಗುರಿಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಆಗಲಿದೆ. ಆದರೆ, ಮಳೆ ಆಗದೇ ಹೋದಲ್ಲಿ ಮೆಕ್ಕೆಜೋಳ ಬಿತ್ತುವ ಸಮಯ ಮೀರಿದರೂ ರೈತರು ಅನಿವಾರ್ಯವಾಗಿ ಬಿತ್ತನೆ ಮಾಡುವುದು ಕಂಡು ಬರುತ್ತದೆ. ಅಂತಹ ಮೆಕ್ಕೆಜೋಳ ಸೈನಿಕ ಹುಳು… ಇತರೆ ಕಾಟಕ್ಕೆ ತುತ್ತಾಗುವುದು ಇತ್ತೀಚಿನ ವರ್ಷದಲ್ಲಿ ಕಾಣಿಸಿಕೊಂಡಿದೆ. ಸಕಾಲಿಕ ಉತ್ತಮ ಮಳೆಯಾದಲ್ಲಿ ಎಲ್ಲಾ ರೀತಿಯ ಸಮಸ್ಯೆಗಳು ತಾನೇ ತಾನಾಗಿ ಪರಿಹಾರವಾಗಲಿವೆ. ಹಾಗಾಗಿ ರೈತರು, ಜನರು ಈಗ ಮಳೆಯ ನಿರೀಕ್ಷೆಯಲ್ಲಿದ್ದಾರೆ.

ರಾ.ರವಿಬಾಬು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ