ದ್ವೇಷ ಅಳಿಸಿ ಪ್ರೀತಿ ಬೆಳೆಸುವುದೇ ವಿಜಯದಶಮಿ

ದಸರಾ ಧರ್ಮ ಸಮ್ಮೇಳನದ ಸಮಾರೋಪದಲ್ಲಿ ರಂಭಾಪುರಿ ಜಗದ್ಗುರುಗಳ ಸಂದೇಶ

Team Udayavani, Oct 9, 2019, 11:17 AM IST

ಮಾನವ ಧರ್ಮ ಮಂಟಪ(ದಾವಣಗೆರೆ): ಬೇಕು-ಬೇಡಗಳ ದ್ವಂದ್ವ ಮೀರಿ ಮುಕ್ತ ನೆಲೆಯಲ್ಲಿ ಯುಕ್ತ ಜೀವನ ವಿಧಾನ ರೂಢಿಸಿಕೊಂಡು ದ್ವೇಷ ಅಳಿಸಿ ಪ್ರೀತಿ ಬೆಳೆಸುವುದೇ ವಿಜಯದಶಮಿ ಪರ್ವಕಾಲದ ವಿಶೇಷತೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ| ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದ್ದಾರೆ.

ನಗರದ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ 10 ದಿನಗಳ ಕಾಲ ಜರುಗಿದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ವಿಜಯದಶಮಿಯ ಶಾಂತಿ ಸಂದೇಶದ ಆಶೀರ್ವಚನ ನೀಡಿದ ಅವರು, ಇಂದು ಎಲ್ಲೆಡೆ ವ್ಯಷ್ಟಿಯೇ ವಿಜೃಂಭಿಸುತ್ತಿದೆ. ವ್ಯಷ್ಟಿಯ ತೀಕ್ಷಣವಾದ ವಿದ್ಯಮಾನಗಳು ಮನುಕುಲದ ಬದುಕಿನ ಪ್ರೀತಿಯನ್ನೇ ಹೊಸಕಿ ಹಾಕಿವೆ. ಪ್ರೀತಿ ಕಳೆದುಕೊಂಡ ಬದುಕು ಯಾರಿಗೂ ಅರ್ಥವಾಗುವದಿಲ್ಲ. ವಿಜಯದಶಮಿಯ ಪರ್ವಕಾಲದ ಕ್ಷಣಗಳು ವ್ಯಷ್ಟಿಯನ್ನು ಹೊರನೂಕಿ ಎಲ್ಲೆಡೆ ಸಮಷ್ಟಿಯೇ ಪಲ್ಲವಿಸಿ ಹೆಮ್ಮರವಾಗಿ ಬೆಳೆಯಲು ಮಾರ್ಗದರ್ಶನ ಮಾಡುತ್ತದೆ. ಸಮಷ್ಟಿಯ ಸಂಕಲ್ಪದೊಂದಿಗೆ ಭಾವೈಕ್ಯದ ಬದುಕು ಹೊಂದಿದಾಗ ಭಯಮುಕ್ತ ಜೀವನಪಥ ಎಲ್ಲರದಾಗುತ್ತದೆ ಎಂದರು ತಿಳಿಸಿದರು.

ಬದುಕು ಎಲ್ಲಿಯೂ ಮುಗ್ಗರಿಸದಂತೆ ಮುನ್ನಡೆಯಲು ನಮ್ಮ ನೆಲದ ಧರ್ಮ, ಸಂಸ್ಕೃತಿ, ಸಂಸ್ಕಾರ, ನೀತಿ-ಸಂಹಿತೆಯ ತತ್ವ-ಸಿದ್ಧಾಂತ ದಾರಿತೋರಿಸಿವೆ. ಈ ಸೈದ್ಧಾಂತಿಕ ತತ್ವ-ಸಂದೇಶ ಅರ್ಥೈಸಿಕೊಂಡು ಆಚರಣೆಯಲ್ಲಿ ತರುವಾಗ ಕುಬ್ಜತೆ ಇಣುಕು ಹಾಕದಂತೆ ನಿರಂತರ ಮುನ್ನೆಚ್ಚರಿಕೆ ಹೊಂದಬೇಕಿದೆ. ಬದುಕಿನ ಭಾವನಾತ್ಮಕ ಒಳ ಅಂತಸ್ತು ಜನಸ್ನೇಹಿಯಾಗಿ ತಿಳಿಗೊಳದ ನೀರಿನಂತೆ ಸದಾ ಶುಭ್ರತೆ ಹೊಂದುವಲ್ಲಿ ವಿಜಯದಶಮಿಯ ಹತ್ತು ದಿನಗಳ ಚಿಂತನೆ ಬೆಳಕು ತುಂಬುತ್ತದೆ ಎಂದು ಅವರು ಹೇಳಿದರು.

ಪ್ರಶಸ್ತಿ ಪ್ರದಾನ: ನಗರದಲ್ಲಿ ಜರುಗಿದ ಶ್ರೀ ರಂಭಾಪುರಿ ಪೀಠದ 2019ರ ದಸರಾ ಧರ್ಮ ಸಮ್ಮೇಳನದ ಅಂಗವಾಗಿ ಎಡೆಯೂರು ಕ್ಷೇತ್ರದ ಬಾಳೆಹೊನ್ನೂರು ಖಾಸಾ ಶಾಖಾಮಠದ ರೇಣುಕ ಶಿವಾಚಾರ್ಯ ಸ್ವಾಮಿಗಳಿಗೆ ಶಿವಾದ್ವೈತ ಸುಧಾ ಸಿಂಧು, ಆವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮಿಗಳಿಗೆ ಧರ್ಮ ಸೇವಾ ವಿಭೂಷಣ, ಶ್ರೀ ಮದ್ವೀರಶೈವ ಸದ್ಭೋಧನಾ ಸಂಸ್ಥೆಯ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ದೇವರಮನೆ ಶಿವಕುಮಾರ್‌ಗೆ ಸಂಸ್ಕೃತಿ ಸಂವರ್ಧನ ರತ್ನ, ಲೆಕ್ಕಪರಿಶೋಧಕ ಅಥಣಿ ವೀರಣ್ಣಗೆ ಧರ್ಮ ಸಮನ್ವಯ ಚಿಂತಕ ಹಾಗೂ ಶ್ರೀ ಜಗದ್ಗುರು ರೇಣುಕ ಸಾಂಸ್ಕೃತಿಕ ಸಂಘಕ್ಕೆ ಆಚಾರ್ಯ
ಸೇವಾನಿಷ್ಠ ಸಂಕುಲ ಪ್ರಶಸ್ತಿಗಳನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಪ್ರದಾನ ಮಾಡಿ, ಆಶೀರ್ವದಿಸಿದರು.

ಸಮಾರಂಭದ ಕೊನೆಯಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳವರಿಗೆ ಭಕ್ತರಿಂದ ಭಕ್ತಿಯ ಬಿನ್ನವತ್ತಳೆ ಸಮರ್ಪಿಸಲಾಯಿತು. ಶ್ರೀಮದ್ವೀರಶೈವ ಸದ್ಭೋದನ ಸಂಸ್ಥೆ ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್‌ ಸ್ವಾಗತಿಸಿದರು. ಪೀಠದ ಆಡಳಿತಾಕಾರಿ ಎಸ್‌. ಬಿ. ಹಿರೇಮಠ, ಹಲಗೂರು, ಕುಪ್ಪೂರು, ಮಳಲಿ, ಸಂಗೊಳ್ಳಿ, ಸೂಡಿ,
ಚನ್ನಗಿರಿ, ಹರಪನಹಳ್ಳಿ, ಬೇರುಗಂಡಿ, ಕಪಿಲಾಧಾರ, ಬೀಳಕಿ, ಕಾರ್ಜುವಳ್ಳಿ, ಮಾದಿಹಳ್ಳಿ, ತಾವರೆಕೆರೆ, ಉಕ್ಕಡಗಾತ್ರಿ, ಪುಣ್ಯಕೋಟಿಮಠ ಸೇರಿದಂತೆ ವಿವಿಧ ಮಠಗಳ ಶ್ರೀಗಳು ಉಪಸ್ಥಿತರಿದ್ದರು.

ವಾರ್ತಾ ಸಂಯೋಜನಾ ಕಾರಿ ಸಿ. ಎಚ್‌. ಬಾಳನಗೌಡ್ರ, ವಾರ್ತಾ ಕಾರ್ಯದರ್ಶಿ ಗುರುಮೂರ್ತಿ ಯರಗಂಬಳಿಮಠ ಪ್ರಶಸ್ತಿ ವಾಚಿಸಿದರು. ಸವಣೂರಿನ ಡಾ| ಗುರುಪಾದಯ್ಯ ಸಾಲಿಮಠ ಮತ್ತು ಶಿವಮೊಗ್ಗದ ಶಾಂತಾ ಆನಂದ ಕಾರ್ಯಕ್ರಮ ನಿರೂಪಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ