ಬಿಜೆಪಿಗೆ ಪಾಲಿಕೆ ಆಡಳಿತ ಚುಕ್ಕಾಣಿ ನಿಶ್ಚಿತ

ಕಾಂಗ್ರೆಸ್‌ ದುರಾಡಳಿತಕ್ಕೆ ಬೇಸತ್ತ ಮತದಾರರು ಕಮಲದತ್ತ ಒಲವು: ಜಾಧವ್‌

Team Udayavani, Oct 27, 2019, 11:26 AM IST

ದಾವಣಗೆರೆ: ಕಾಂಗ್ರೆಸ್‌ ದುರಾಡಳಿತದಿಂದ ಬೇಸತ್ತಿರುವ ನಗರದ ಜನತೆ ಈ ಬಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರ ಚುಕ್ಕಾಣಿ ನೀಡಲಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌ ಹೇಳಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ನಗರ ಪಾಲಿಕೆಯಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್‌ ಪಕ್ಷದ ದುರಾಡಳಿತವನ್ನು ಜನರು ಗಮನಿಸಿದ್ದು, ಈ ಬಾರಿ ಬಿಜೆಪಿಗೆ ಬೆಂಬಲ ನೀಡುವ ವಾತಾವರಣ ಸೃಷ್ಟಿಯಾಗಿದೆ. ಚುನಾವಣೆ ಘೋಷಣೆಯಾದ ನಂತರ ವಾರ್ಡ್‌ಗಳಲ್ಲಿ ಪಕ್ಷದ ಮುಖಂಡರು ಭೇಟಿ ಮಾಡಿದ ಸಂದರ್ಭದಲ್ಲಿ ಸಾರ್ವಜನಿಕರು ಕಾಂಗ್ರೆಸ್‌ನ ಪಾಲಿಕೆ ಸದಸ್ಯರು ಮತ್ತು ಪಕ್ಷದ ಆಡಳಿತದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಬಿಜೆಪಿ ಬಗ್ಗೆ ಒಲವು ತೋರುತ್ತಿದ್ದಾರೆ ಎಂದರು.

ಕಳೆದ ಬಾರಿ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ 39 ಮಂದಿಯನ್ನು ಗೆಲ್ಲಿಸಿ ಕಳುಹಿಸಲಾಗಿತ್ತು. ಉತ್ತರ ಮತ್ತು ದಕ್ಷಿಣದಲ್ಲಿ ಅಪ್ಪ (ಶಾಮನೂರು ಶಿವಶಂಕರಪ್ಪ)-ಮಗ (ಎಸ್‌.ಎಸ್‌. ಮಲ್ಲಿಕಾರ್ಜುನ್‌) ಇಬ್ಬರೂ ಇದ್ದರೂ ಸಹ ಸ್ಮಾರ್ಟ್‌ ಸಿಟಿ ಯೋಜನೆಗೆ ಬಂದಂತ ಅನುದಾನ ಸದ್ಬಳಕೆ
ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಪಾಲಿಕೆಯಲ್ಲಿ ದುರಾಡಳಿತ ಇತ್ತು. ಹೀಗೆ ಬಹಳಷ್ಟು ಕಡೆ ಕಾಂಗ್ರೆಸ್‌ ಬಗ್ಗೆ ಅಪಾದನೆಗಳು ಕೇಳಿ ಬರುತ್ತಿವೆ ಎಂದು ಹೇಳಿದರು.

ಕಾಂಗ್ರೆಸ್‌ ಆಡಳಿತದಲ್ಲಿ ಉತ್ತಮವಾದಂತ ರಸ್ತೆ, ಚರಂಡಿ ಇವುಗಳನ್ನು ಸುಖಾಸುಮ್ಮನೆ ಕಿತ್ತುಹಾಕಿ ತಮಗೆ ತೋಚಿದಂತೆ ಕಾಮಗಾರಿ ಮಾಡಿದ್ದಾರೆ. ಇದರಿಂದ ಜನ ಬೇಸತ್ತಿದ್ದು, ಈ ಬಾರಿ ಬಿಜೆಪಿ ಪಾಲಿಕೆ ಚುನಾವಣೆ ಹಿಡಿಯುವುದರಲ್ಲಿ ಯಾವುದೇ ಸಂಶಯವಿಲ್ಲ. ನಾವು ಕಾಂಗ್ರಸ್ಸಿಗರಂತೆ 45ಕ್ಕೆ 45 ವಾರ್ಡ್ಗಳಲ್ಲಿ ಗೆಲ್ಲುತ್ತೇವೆ ಎಂಬುದಾಗಿ ಹೇಳುವುದಿಲ್ಲ.ಆದರೆ, ಅಧಿಕಾರ ಚುಕ್ಕಾಣಿ ಹಿಡಿಯಲು 30 ವಾರ್ಡ್‌ಗಳಲ್ಲಂತೂ ಆಯ್ಕೆಯಾಗಲಿದ್ದೇವೆ ಎಂದರು.

ಹಿಂದೆ ನಾನು ನಗರಸಭಾ ಅಧ್ಯಕ್ಷನಾಗಿದ್ದಾಗ ಲೋಕಾಯುಕ್ತರು ಕಡತಗಳನ್ನು ವಶಕ್ಕೆ ಪಡೆದಿದ್ದರು ಎಂಬುದಾಗಿ ಕಾಂಗ್ರೆಸ್‌ನವರ ಆರೋಪಕ್ಕೆ ಪ್ರತಿಕ್ರಿಯಿಸಿದ ಯಶವಂತರಾವ್‌, ಜಾಧವ್‌, ಲೋಕಾಯುಕ್ತರು ಕಡತಗಳನ್ನು ವಶಕ್ಕೆ ಪಡೆದಿದ್ದರೆಂದರೆ ಯಶವಂತರಾವ್‌ ಜಾಧವ್‌ ಅಪರಾಧಿ ಅಥವಾ ಅವ್ಯವಹಾರ ಮಾಡಿದ್ದಾರೆಂದು ಬಿಂಬಿಸುವುದು ಸರಿಯಲ್ಲ. ಕಡತ ಪರಿಶೀಲನೆ ನಡೆಯಿತಷ್ಟೆ. ಆದರೆ, ಕಾಂಗ್ರೆಸ್‌ ದುರಾಡಳಿತ, ಲೂಟಿ, ಪಾಲಿಕೆ ಜಾಗವನ್ನು ಅತಿಕ್ರಮಣ ಮಾಡಿಕೊಂಡ ಬಗ್ಗೆ ನಾನು ಈ ಹಿಂದೆಯೇ ದಾಖಲೆ ಸಹಿತ ಆರೋಪಿಸಿದ್ದೆ. ಬಹಿರಂಗ ಚರ್ಚೆಗೆ ಸವಾಲು ಹಾಕಿದ್ದೆ. ನನ್ನ ಅಧಿಕಾರಾವ ಧಿಯಲ್ಲಿ ಏನಾದರೂ ಅವ್ಯವಹಾರಗಳು ನಡೆದಿದ್ದರೆ ಅದನ್ನು ದಾಖಲೆ ಸಹಿತ ಸಾರ್ವಜನಿಕರ ಮುಂದಿಡಲಿ ಎಂದು ಹೇಳಿದರು.

ಎಚ್‌.ಎನ್‌.ಶಿವಕುಮಾರ್‌, ಎನ್‌.ರಾಜಶೇಖರ್‌, ರಾಜನಹಳ್ಳಿ ಶಿವಕುಮಾರ್‌, ಪಿ.ಸಿ. ಶ್ರೀನಿವಾಸ್‌, ಎಚ್‌.ಸಿ.ಜಯಮ್ಮ, ಡಿ.ಕೆ.ಕುಮಾರ್‌, ಪಂಚಣ್ಣ, ಆನಂದರಾವ್‌ ಶಿಂಧೆ, ಟಿಂಕರ್‌ ಮಂಜಣ್ಣ, ಮಹೇಶ್‌ ರಾಯಚೂರು, ಕಡ್ಲೆಬಾಳ್‌ ಧನಂಜಯ, ಸುದ್ದಿಗೋಷ್ಠಿಯಲ್ಲಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ