ಯೂರಿಯಾದೊಂದಿಗೆ ಡಿಎಪಿ ಮಾರಾಟ ಆರೋಪ

ಮಾರಾಟಗಾರರ ಷರತ್ತು ಆರೋಪ•ಕೆಲವೇ ರೈತರಿಗೆ ಇಲಾಖೆಯಿಂದ ಸೌಲಭ್ಯ: ದೂರು

Team Udayavani, Aug 7, 2019, 10:47 AM IST

ದಾವಣಗೆರೆ: ಜಿಪಂ ಅಧ್ಯಕ್ಷೆ ಶೈಲಜಾ ಬಸವರಾಜ ಅಧ್ಯಕ್ಷತೆಯಲ್ಲಿ ಮುಂದುವರೆದ ಸಾಮಾನ್ಯ ಸಭೆ ನಡೆಯಿತು.

ದಾವಣಗೆರೆ: ರಸಗೊಬ್ಬರ ಡೀಲರ್‌ಗಳು ಯೂರಿಯಾ ಜೊತೆ ಡಿಎಪಿ ಕಡ್ಡಾಯವಾಗಿ ಖರೀದಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂಬ ವಿಚಾರ ಮಂಗಳವಾರ ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಶೈಲಜಾ ಬಸವರಾಜ್‌ ಅಧ್ಯಕ್ಷತೆಯಲ್ಲಿ ನಡೆದ ಮುಂದುವರೆದ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು.

ಸೊಕ್ಕೆ ಕ್ಷೇತ್ರದ ಬಿಜೆಪಿ ಸದಸ್ಯ ಎಸ್‌.ಕೆ. ಮಂಜುನಾಥ್‌ ಮಾತನಾಡಿ, ಜಗಳೂರು ತಾಲೂಕಿನಲ್ಲಿ ಮಳೆಯಾಗುತ್ತಿದ್ದು, ಮೆಕ್ಕೆಜೋಳಕ್ಕೆ ಯೂರಿಯಾ ಸಿಗದಂತಾಗಿದೆ. ರಸಗೊಬ್ಬರ ಅಂಗಡಿಯವರು ಯೂರಿಯಾದ ಜೊತೆಗೆ ಕಡ್ಡಾಯವಾಗಿ ಡಿಎಪಿ ಕೊಂಡುಕೊಳ್ಳಬೇಕು ಎಂದು ಷರತ್ತು ಹಾಕುತ್ತಿದ್ದಾರೆ. ಒಂದು ವಾರದ ಒಳಗೆ ಮೆಕ್ಕೆಜೋಳಕ್ಕೆ ಯೂರಿಯಾ ಹಾಕಲೇಬೇಕು. ಸುಖಾಸುಮ್ಮನೆ ಡಿಎಪಿ ಖರೀದಿ ಮಾಡಬೇಕಾಗುವುದು ರೈತರಿಗೆ ಹೊರೆಯಾಗಿತ್ತಿದೆ. ಕೃಷಿ ಇಲಾಖೆ ಗಮನ ಹರಿಸಬೇಕು ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಬಿ. ಮುದಗಲ್ ಮಾತನಾಡಿ, ಅತೀ ಶೀಘ್ರವೇ ಎಲ್ಲಾ ಡೀಲರ್‌ಗಳ ಸಭೆ ನಡೆಸಿ, ಯಾವುದೇ ಕಾರಣಕ್ಕೂ ಯೂರಿಯಾದ ಜೊತೆಗೆ ಕಡ್ಡಾಯವಾಗಿ ಡಿಎಪಿ ಗೊಬ್ಬರ ಖರೀದಿ ಮಾಡುವಂತೆ ಒತ್ತಾಯಿಸಬಾರದು ಎಂದು ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದರು.

ಕೆಲವೇ ಕೆಲ ರೈತರಿಗೆ ಮಾತ್ರ ಕೃಷಿ ಇಲಾಖೆಯ ಸೌಲಭ್ಯ ದೊರೆಯುತ್ತಿವೆ. ಮಧ್ಯವರ್ತಿಗಳದ್ದೇ ಹಾವಳಿ ಜಾಸ್ತಿ ಇದೆ ಎಂದು ಮಾಜಿ ಅಧ್ಯಕ್ಷೆ ಮಂಜುಳಾ ಟಿ.ವಿ. ರಾಜು ದೂರಿದರು.

ಮಂಜುಳಾ ಟಿ.ವಿ. ರಾಜು ಆರೋಪಕ್ಕೆ ಧ್ವನಿಗೂಡಿಸಿದ ನಲ್ಲೂರು ಕ್ಷೇತ್ರದ ಬಿಜೆಪಿ ಸದಸ್ಯ ಲೋಕೇಶ್ವರಪ್ಪ, ಮಧ್ಯವರ್ತಿಗಳ ಮೂಲಕ ಕೆಲವಾರು ದೊಡ್ಡ ರೈತರ ಮನೆಗೆ ಸೌಲಭ್ಯ ದೊರೆಯುತ್ತಿವೆ. ಮಧ್ಯಮ ವರ್ಗದ ರೈತರಿಗೆ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ ಎಂದು ದೂರಿದರು.

ಕೃಷಿಯಲ್ಲಿ ಸಾಧನೆ ಮಾಡಿದವರನ್ನು ಸೌಲಭ್ಯಕ್ಕೆ ಪರಿಗಣಿಸಬೇಕು. ಎಲ್ಲಾ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಕೃಷಿ ಮತ್ತು ತೋಟಗಾರಿಕಾ ಇಲಾಖೆಯಿಂದ ರೈತರಿಗೆ ದೊರೆಯುವ ಎಲ್ಲಾ ಸೌಲಭ್ಯಗಳ ಮಾಹಿತಿ ಫಲಕ ಅಳವಡಿಸ ಬೇಕು ಎಂದು ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಬಸವರಾಜೇಂದ್ರ ಸೂಚಿಸಿದರು.

ಕಳೆದ ವರ್ಷ ಹಾಸ್ಟೆಲ್ಗಳಿಗೆ ಸೇರಿದ್ದಂತಹ ಹೆಚ್ಚುವರಿ ವಿದ್ಯಾರ್ಥಿಗಳು ಈ ವರ್ಷ ಹಾಸ್ಟೆಲ್ಗಳಲ್ಲಿ ಸೀಟು ಸಿಗದೇ ಮನೆಯಲ್ಲೇ ಇದ್ದಾರೆ ಎಂದು ಸದಸ್ಯರು ತಿಳಿಸಿದರು. ಹೆಚ್ಚುವರಿಯಾಗಿ ಇದ್ದವರಿಗೆ ಅವಕಾಶ ಕಲ್ಪಿಸುವಂತೆ ಸೂಚಿಸಲಾಗುವುದು ಎಂದು ಸಿಇಒ ತಿಳಿಸಿದರು.

ಲಕ್ಕವಳ್ಳಿಯ ಭದ್ರಾ ಡ್ಯಾಂ ನಿರೀಕ್ಷಿತ ಪ್ರಮಾಣದಲ್ಲಿ ತುಂಬದೇ ಇರುವುದರಿಂದ ಮಳೆಗಾಲದ ಭತ್ತ ಬೆಳೆಯುವ ಬದಲಿಗೆ ಪರ್ಯಾಯ ಬೆಳೆ ಬೆಳೆಯುವುದು ಒಳಿತು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಬಿ. ಮುದಗಲ್ ತಿಳಿಸಿದರು.

ಕೆಲವಾರು ಕಡೆ ಭದ್ರಾ ಡ್ಯಾಂನಲ್ಲಿ 150 ಅಡಿ ನೀರು ಇಲ್ಲ. ನೀರು ಬಿಡಬಹುದು ಎಂದು ಭತ್ತದ ನಾಟಿ ಮಾಡಲಾಗಿದೆ. ನೀರು ಬಿಟ್ಟೆ ಬಿಡುವರು ಎಂದು ಹೇಳುವಂತೆ ಇಲ್ಲ. ನಾಲೆಯಲ್ಲಿ ನೀರು ಬಿಡದ ಕಾರಣಕ್ಕೆ ನಾಟಿ ತಡವಾಗಿದೆ. ಇನ್ನು ಮುಂದೆ ನಾಟಿ ಮಾಡಿದರೆ, ನವೆಂಬರ್‌ನಲ್ಲಿ ಕಾಳು ಬಿಡುವುದರಿಂದ ತೊಂದರೆ ಆಗುತ್ತದೆ. ಹಾಗಾಗಿ ಮಳೆಗಾಲದ ಭತ್ತ ಬೆಳೆಯುವ ಬದಲಿಗೆ ಪರ್ಯಾಯ ಬೆಳೆಯುವುದು ಉತ್ತಮ ಎಂದು ಸಭೆಗೆ ತಿಳಿಸಿದರು.

ಭತ್ತ ಬೆಳೆಯುವುದರಿಂದ ದುಡ್ಡು ಸಿಕ್ಕುತ್ತದೆ ಎಂದು ರೈತರು ಭತ್ತಕ್ಕೆ ಮನಸ್ಸು ಮಾಡಿದ್ದಾರೆ. ಭತ್ತಕ್ಕೆ ನೀರಿನ ಸಮಸ್ಯೆ ಆಗುತ್ತದೆ. ಹಾಗಾಗಿ ಆದಾಯ ಬರುವಂತಹ ಪರ್ಯಾಯ ಬೆಳೆಯ ಬಗ್ಗೆ ರೈತರಿಗೆ ತಿಳಿಸಿ, ಕಾಡಾ ಸಮಿತಿ, ನೀರಾವರಿ ನಿಗಮದ ಸಭೆ ನಡೆಸಿ, ಆ ಮೂಲಕ ರೈತರಿಗೆ ತಿಳಿಸಿ ಎಂದು ಹೊಸಕೆರೆ ಕ್ಷೇತ್ರದ ಪಕ್ಷೇತರ ಸದಸ್ಯ ತೇಜಸ್ವಿ ಪಟೇಲ್ ಸೂಚಿಸಿದರು. ಸಾಕಷ್ಟು ಚರ್ಚೆಯ ನಂತರ ಆ. 14 ರಂದು ರೈತರೊಂದಿಗೆ ಸಭೆಗೆ ತೀರ್ಮಾನಿಸಲಾಯಿತು. ಉಪಾಧ್ಯಕ್ಷ ಸಿ. ಸುರೇಂದ್ರನಾಯ್ಕ ಇತರರು ಇದ್ದರು.

35 ಲಕ್ಷ ದುರುಪಯೋಗ ಆರೋಪ…
ಅಂಗನವಾಡಿ ಕೇಂದ್ರಗಳಿಗೆ ಅಗತ್ಯವಾಗಿ ಬೇಕಾದ ಆಹಾರ ಧಾನ್ಯಗಳಿಗೆ ಬದಲಿಗೆ ಹೆಚ್ವು ಲಾಭ ಇರುವಂತದ್ದನ್ನ ಪೂರೈಕೆ ಮಾಡುವ ಮೂಲಕ ದಾವಣಗೆರೆಯ ಶಿಶು ಅಭಿವೃದ್ಧಿ ಯೋಜನೆಯಲ್ಲಿ 35 ಲಕ್ಷ ರೂ. ದುರುಪಯೋಗ ಮಾಡಲಾಗಿದೆ. ಹಾಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಲೆಕ್ಕಪರಿಶೋಧಕರಿಂದ ಸೂಕ್ತ ತನಿಖೆ ನಡೆಸಬೇಕು ಎಂದು ಲೋಕಿಕೆರೆ ಕ್ಷೇತ್ರದ ಕಾಂಗ್ರೆಸ್‌ ಸದಸ್ಯ ಕೆ.ಎಚ್. ಓಬಳೇಶಪ್ಪ ಒತ್ತಾಯಿಸಿದರು.

ಮೇಲ್ವಿಚಾರಕರ ವರದಿ ಆಧರಿಸಿಯೇ ಸಿಡಿಪಿಓಗಳು ಮಹಿಳಾ ಸಪ್ಲಿಮೆಂಟರಿ ನ್ಯೂಟಿಷನ್‌ ಪ್ರೊಡಕ್ಷನ್‌ ಆ್ಯಂಡ್‌ ಟ್ರೈನಿಂಗ್‌ ಸೆಂಟರ್‌(ಎಂ.ಎಸ್‌.ಪಿ.ಟಿ.ಸಿ) ಮೂಲಕ ಆಹಾರ ಧಾನ್ಯ ಖರೀದಿ ಮಾಡಬೇಕು. ಆದರೆ, ಆ ರೀತಿ ಖರೀದಿ ನಡೆದಿಲ್ಲ. ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಕಾಲಮಿತಿಯಲ್ಲಿ ತನಿಖೆಗೆ ಇಲಾಖೆಗೆ ಪತ್ರ ಬರೆಯಲಾಗುವುದು. ತನಿಖೆಯ ವರದಿ ಆಧಾರದಲ್ಲಿ ಸಂಬಂಧಿತರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧ್ಯಕ್ಷೆ ಶೈಲಜಾ ಬಸವರಾಜ್‌ ತಿಳಿಸಿದರು. ಸಿಇಒ ಎಚ್. ಬಸವರಾಜೇಂದ್ರ ಸಹಮತ ವ್ಯಕ್ತಪಡಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ