ಮಲ್ಲಣ್ಣ ನಿಲ್ಲದೇ ಚುನಾವಣೆಗೆ ಖದರೇ ಇಲ್ಲಣ್ಣ!

ಕ್ಷೇತ್ರದಲ್ಲಿ ಸಮಸ್ಯೆಗಳಿಗಿಂತ ಬೇರೆ ವಿಷಯವೇ ಚರ್ಚೆಕೈ ಭದ್ರಕೋಟೆಯಲ್ಲೂ ಸದ್ದು ಮಾಡ್ತಿದೆ ಪುಲ್ವಾಮಾ, ಬಾಲಕೋಟ್‌

Team Udayavani, Apr 15, 2019, 3:17 PM IST

ದಾವಣಗೆರೆ: ನಗರದ ಗಾಂಧಿನಗರದಲ್ಲಿ ಪಾರ್ಕ್‌ ಅಭಿವೃದ್ಧಿ.

ದಾವಣಗೆರೆ: ಮಧ್ಯಕರ್ನಾಟಕದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲೇ ಕಾಂಗ್ರೆಸ್‌ನ ಅತೀ ಸುರಕ್ಷಿತ, ಹಾಗೂ ಭದ್ರಕೋಟೆ ಎಂದರೆ ಅದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಇಲ್ಲಿ ಅಭಿವೃದ್ಧಿ ಕಾರ್ಯಗಳಿಗಿಂತಲೂ ಮಲ್ಲಣ್ಣ (ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌) ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ ಎಂಬುದೇ ಬಹು ಚರ್ಚಿತ ವಿಷಯ.

‘ಈ ಎಲೆಕ್ಷನ್‌ನಲ್ಲಿ ಮಲ್ಲಣ್ಣ ನಿಂತಿದ್ದರೆ ನಿಜವಾಗಿಯೂ ಗೆಲ್ತಾ ಇದ್ರು. ಮೂರು ಸಾರಿ ಸೋತಿದ್ದಾರೆ ಅಂತ ಬಹಳ ಅನುಕಂಪ ಇತ್ತು. ನಿಂತ್ಕೋಬೇಕಿತ್ತು. ಯಾಕೆ ನಿಂತುಕೊಂಡಿಲ್ಲೋ… ಒಂದೂ
ಗೊತ್ತಿಲ್ಲ. ಮಲ್ಲಣ್ಣ ಗೆದ್ದಿದ್ರೆ ಒಳ್ಳೇ ಡೆವಲಪ್‌ ಮೆಂಟ್‌ ಆಗ್ತಾ ಇತ್ತು’. ಎನ್ನುವುದು ದಕ್ಷಿಣ ಕ್ಷೇತ್ರದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್‌ ಸಿಟಿ ಯೋಜನೆಯ ಬಹುತೇಕ ಕಾಮಗಾರಿ ನಡೆಯುತ್ತಿರುವುದೇ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ.

ಸ್ಮಾರ್ಟ್‌ಸಿಟಿ ಯೋಜನೆಯ ಪ್ರಥಮ ಹಂತದಲ್ಲೇ 2015ರಲ್ಲಿ ದಾವಣಗೆರೆ ಆಯ್ಕೆಗೊಂಡಿದ್ದರೂ ಹಲವಾರು ಕಾರಣಕ್ಕೆ ಕಾಮಗಾರಿ ಬಹು ವಿಳಂಬವಾಗಿ ಪ್ರಾರಂಭವಾಗಿದ್ದವು. ಎಸ್‌.ಎಸ್‌. ಮಲ್ಲಿಕಾರ್ಜುನ್‌ ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ
ಒಂದಷ್ಟು ಚುರುಕು ಸಿಕ್ಕಿತ್ತು. ಆದರೆ ಈ ಬಾರಿ ಲೋಕಸಭಾ ಚುನಾವಣಾ ಕಣದಿಂದ ಮಲ್ಲಿಕಾರ್ಜುನ್‌ ಹಿಂದಕ್ಕೆ ಸರಿದಿರುವುದು ಈ ಕ್ಷೇತ್ರದ ಕೆಲವರಿಗೆ ಶಾಕ್‌ ನೀಡಿದೆ.

ಸಮಸ್ಯೆಗಿಲ್ಲ ಬರ: ದಾವಣಗೆರೆ ಮಹಾನಗರ ಪಾಲಿಕೆಯ 1ರಿಂದ
17ನೇ ವಾರ್ಡ್‌, 22 ರಿಂದ 27 ಹಾಗೂ ಹದಡಿ ಜಿಲ್ಲಾ ಪಂಚಾಯತ್‌
ಕ್ಷೇತ್ರ ವ್ಯಾಪ್ತಿ ಹೊಂದಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ಭದ್ರಾ ಅಚ್ಚುಕಟ್ಟಿನ ಕೊನೆ ಭಾಗ ಇದೆ. ಭದ್ರಾ ಜಲಾಶಯ ನಿರ್ಮಾಣವಾದಾಗಿನಿಂದಲೂ ಕೊನೆ
ಭಾಗಕ್ಕೆ ಸಮರ್ಪಕ ಪ್ರಮಾಣದಲ್ಲಿ ನೀರು ಹರಿಯದೇ ಇರುವ ಸಮಸ್ಯೆ 6 ದಶಕಗಳ ನಂತರವೂ ಬಗೆಹರಿದಿಲ್ಲ.

ಭದ್ರಾ ನಾಲಾ ಮೇಲ್ಭಾಗದಲ್ಲಿ ಅಳವಡಿಸಿಕೊಂಡಿರುವ ಅಕ್ರಮ ಪಂಪ್‌ಸೆಟ್‌ ತೆರವು ಕಾರ್ಯ ಆಗಾಗ ಸದ್ದು ಮಾಡುವುದು, ಕೆಲ ದಿನಗಳ ನಂತರ ಸದ್ದಡಗುವುದು ನಡೆಯುತ್ತಲೇ ಇದೆ. ಹಾಗಾಗಿ ಸಮರ್ಪಕ ಪ್ರಮಾಣದ ನೀರು ಹರಿಸಲಿ ಎಂಬ ಅಚ್ಚುಕಟ್ಟುದಾರರ ಬೇಡಿಕೆ ಅಕ್ಷರಶಃ ಅರಣ್ಯರೋದನ. ಇದು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮುನ್ನೆಲೆಯಲ್ಲಿರುವ ಮತ್ತೊಂದು ಚರ್ಚೆಯ ವಿಷಯ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಹುತೇಕ ಪ್ರದೇಶ ನಗರ ವ್ಯಾಪ್ತಿಯಲ್ಲೇ ಇರುವ ಕಾರಣಕ್ಕೆ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ, ಚರಂಡಿ, ಒಳ ಚರಂಡಿ, ಬೀದಿ ದೀಪ… ಇತರೆ ವಿಚಾರಗಳ ಚರ್ಚೆ ಬಲು ಗೌಣ. ಆದರೆ, ನಿವೇಶನ ರಹಿತರಿಗೆ ನಿವೇಶನ, ಆಶ್ರಯ ಮನೆ ಕಟ್ಟಿಸಿಕೊಡಬೇಕು.ಕೊಳಗೇರಿಯಲ್ಲಿ ಅಭಿವೃದ್ಧಿ ಮಾಡಬೇಕು ಎಂಬ ಒತ್ತಾಯ ಬಹಳವಾಗಿಯೇ ಇದೆ.

ಸೂರು ಮುಖ್ಯ ಬೇಡಿಕೆ: ದಾವಣಗೆರೆ ದಕ್ಷಿಣ
ಕ್ಷೇತ್ರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತರು, ಕೂಲಿ ಕಾರ್ಮಿಕರು, ಬೀಡಿ ಕಾರ್ಮಿಕರು, ಹಮಾಲಿಗಳು, ಅಂದೇ ದುಡಿದು ಜೀವನ ನಡೆಸುವರಿಗೆ ಬಹು ಮುಖ್ಯವಾಗಿ ಆಶ್ರಯ ಒಳಗೊಂಡಂತೆ ಸರ್ಕಾರದ ಯಾವುದೇ ಯೋಜನೆಯಡಿ ಸೂರು ಒದಗಿಸಬೇಕು.

ಇಂದಿನ ದಿನಗಳಲ್ಲಿ ಬಾಡಿಗೆ ಕಟ್ಟಿಕೊಂಡು, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯದ ಜೊತೆಗೆ ಜೀವನ ಮಾಡುವುದು ಬಹಳ ಕಷ್ಟ. ಸ್ವಂತ ಸೂರು ಎನ್ನುವುದು ಇದ್ದಲ್ಲಿ ಏನೋ ಒಂದು ಮಾಡಿಕೊಂಡು
ನೆಮ್ಮದಿಯಿಂದ ಜೀವನ ನಡೆಸಲು ಅನುಕೂಲ ಆಗುತ್ತದೆ. ನಿವೇಶನ, ಮನೆ ಸೌಲಭ್ಯ ಒದಗಿಸಬೇಕು ಎಂಬುದು ಬಹು
ಸಂಖ್ಯಾತರ ಒತ್ತಾಯ. ದಾವಣಗೆರೆ ದಕ್ಷಿಣ ಭಾಗದಲ್ಲಿ 800ಕ್ಕೂ ಹೆಚ್ಚು ಮಂಡಕ್ಕಿ ಭಟ್ಟಿ ಇವೆ. ರಾಜ್ಯದ ಅನೇಕ ಭಾಗಗಳಿಗೆ ಇಲ್ಲಿಂದಲೇ ಮಂಡಕ್ಕಿ ರಫ್ತಾಗುತ್ತದೆ ಎಂಬ ಹೆಗ್ಗಳಿಕೆ ಮಂಡಕ್ಕಿ ಭಟ್ಟಿಯಲ್ಲಿನ ಕಾರ್ಮಿಕರ ಜೀವನವನ್ನೇನು ಸುಧಾರಿಸಿಲ್ಲ. ಆಧುನಿಕ ಒಲೆ ಬಳಕೆ ಮಾಡಬೇಕು ಎಂಬ ಸರ್ಕಾರದ ಫರ್ಮಾನು ಇಲ್ಲಿ ಜಾರಿಗೆ ಬಂದಿಲ್ಲ.

ಸ್ಮಾರ್ಟ್‌ ಸಿಟಿ ಯೋಜನೆಯಡಿ ಮಂಡಕ್ಕಿ ಭಟ್ಟಿ ಸ್ಥಳಾಂತರಿಸುವ ಯೋಜನೆ ಕಾರ್ಮಿಕರ ಚಿಂತೆಗೆ ಕಾರಣವಾಗಿದೆ. ಊರಿನಿಂದ ಬಹಳ ದೂರ ಶಿಫ್ಟ್‌ ಮಾಡಿದರೆ ಹೇಗೆ ಎಂಬುದು ಅವರ ಅಳಲು. ಈಗ ಚುನಾವಣೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳ ಚರ್ಚೆ ನಡೆಯುವುದೇ ಇಲ್ಲ. ಯಾರು ಎಷ್ಟು ಕೊಡುತ್ತಾರೆ ಎಂಬುದೇ
ಹೆಚ್ಚು ಚರ್ಚೆ ಆಗುತ್ತದೆ. ಮೊದಲು ಎಲೆಕ್ಷನ್‌ ಎಂದರೆ ಭಾಷಣ, ಭಾರೀ ಎಂದರೆ ಮಂಡಕ್ಕಿ ತಿನ್ನುವುದು ಆಗಿತ್ತು. ಈಗ ಅಂತಹ ಪರಿಸ್ಥಿತಿ ಇಲ್ಲ ಎನ್ನುತ್ತಾರೆ ಮಹಾನಗರಪಾಲಿಕೆ 12ನೇ ವಾರ್ಡ್‌
ಸದಸ್ಯ ಅಲ್ತಾಫ್‌ ಹುಸೇನ್‌.

ಈ ಲೋಕಸಭಾ ಚುನಾವಣೆಯಲ್ಲಿ ಬಹು ಚರ್ಚೆಯಲ್ಲಿರುವ ಪುಲ್ವಾಮಾ, ಬಾಲಾಕೋಟ್‌ ದಾಳಿ ಚರ್ಚೆ ಈ ಕ್ಷೇತ್ರದಲ್ಲೂ
ನಡೆಯುತ್ತಿದೆ. ಮುಖ್ಯವಾಗಿ ಯುವ ಸಮೂಹದಲ್ಲಿ ಈ ವಿಚಾರಗಳ ಚರ್ಚೆ ಹೆಚ್ಚಾಗಿಯೇ ಇದೆ. ಈವರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌
ಸಮಿತಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಪ್ರಚಾರ ನಡೆಸಿದ್ದಾರೆ. ಎರಡು ಪಕ್ಷಗಳಿಂದ ಮನೆ ಮನೆ ಪ್ರಚಾರ ನಡೆದಿದೆ. ಎಸ್‌.ಎಸ್‌. ಮಲ್ಲಿಕಾರ್ಜುನ್‌ ಕಣದಲ್ಲೇ ಇಲ್ಲದಿರುವುದರಿಂದ ಚುನಾವಣಾ ಖದರ್‌ ಅಷ್ಟಾಗಿ ಕಂಡು ಬರುತ್ತಿಲ್ಲ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ