ರಾಜೀನಾಮೆಗೆ ಇಂದು ಬೆಂಗಳೂರು ಚಲೋ

Team Udayavani, Jun 9, 2018, 12:01 PM IST

ದಾವಣಗೆರೆ: ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ನವರಿಗೆ ಸಚಿವ ಸ್ಥಾನ ನೀಡದೇ ಇರುವುದನ್ನು ಖಂಡಿಸಿ ಕಾಂಗ್ರೆಸ್‌ನ ದಾವಣಗೆರೆ ಜಿಲ್ಲಾ, ಬ್ಲಾಕ್‌, ವಿವಿಧ ಘಟಕಗಳ ಎಲ್ಲ ಅಧ್ಯಕ್ಷರು, ಪದಾಧಿಕಾರಿಗಳು ಶನಿವಾರ ಬೆಂಗಳೂರು ಚಲೋ…ಮೂಲಕ ಕೆಪಿಸಿಸಿ ಕಚೇರಿಗೆ ತೆರಳಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಲಿದ್ದಾರೆ.

ದಾವಣಗೆರೆಯಿಂದ ಶನಿವಾರ ಬೆಳಗ್ಗೆ 50ಕ್ಕೂ ಹೆಚ್ಚು ಬಸ್‌ಗಳಲ್ಲಿ ಬೆಂಗಳೂರಿಗೆ ತೆರಳಿ, ಪ್ರದೇಶ ಕಾಂಗ್ರೆಸ್‌ ಸಮಿತಿ
ಅಧ್ಯಕ್ಷ ಡಾ| ಜಿ. ಪರಮೇಶ್ವರ್‌ ಮತ್ತು ಇತರೆ ಮುಖಂಡರ ಭೇಟಿ ಮಾಡಿ, ಶಾಮನೂರು ಶಿವಶಂಕರಪ್ಪರಿಗೆ ಸಚಿವ ಸ್ಥಾನ ನೀಡದೇ ಇರುವುದನ್ನು ಖಂಡಿಸಿ, ಡಾ| ಜಿ. ಪರಮೇಶ್ವರ್‌ ಗೆ ನೇರವಾಗಿ ಸಾಮೂಹಿಕವಾಗಿ ರಾಜೀನಾಮೆ
ಸಲ್ಲಿಸಲಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಚಲೋ… ಬಗ್ಗೆ ತಿಳಿಸಿದ ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಎಚ್‌.ಬಿ. ಮಂಜಪ್ಪ,
ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರದ ಮೊದಲ ಸಚಿವ ಸಂಪುಟದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ
ನವರಿಗೆ ಅವಕಾಶ ನೀಡದೇ ಇರುವುದು ತೀರಾ ಬೇಸರ ತರಿಸಿದೆ. ಹಲವು ದಶಕಗಳ ಕಾಲ ಕಾಂಗ್ರೆಸ್‌ನ ಖಾಯಂ
ಖಜಾಂಚಿಯಾಗಿ ಪಕ್ಷದ ಬೆಳವಣಿಗೆಗೆ ಶ್ರಮಿಸಿರುವ ಹಿರಿಯ ಮುತ್ಸದ್ದಿಗೆ ಸಚಿವ ಸ್ಥಾನ ನೀಡದೇ ಇರುವುದು
ಇಡೀ ಕಾಂಗ್ರೆಸ್‌ ಕಾರ್ಯಕರ್ತರಿಗೆ ಅಪಾರ ನೋವುಂಟು ಮಾಡಿದೆ ಎಂದು ತಿಳಿಸಿದರು.

ಅವಿಭಜಿತ ಚಿತ್ರದುರ್ಗ ಜಿಲ್ಲೆಯ ಕಾಂಗ್ರೆಸ್‌ ಅಧ್ಯಕ್ಷರಾಗಿ, ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದಿಂದ ಸತತ
ಮೂರು ಬಾರಿ ಸೇರಿ ಒಟ್ಟು ಐದು ಬಾರಿ ಶಾಸಕರಾಗಿ, ಒಮ್ಮೆ ಸಂಸದರಾಗಿ, ತೋಟಗಾರಿಕೆ ಮತ್ತು ಕೃಷಿ ಉತ್ಪನ್ನ
ಮಾರುಕಟ್ಟೆ ಸಚಿವರಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. 87ರ ವಯಸ್ಸಿನಲ್ಲೂ ಕಿರಿಯರು ನಾಚುವಂತೆ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ದೇಶಕ್ಕೆ ಮಾದರಿ ಆಗುವಂತೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಆನ್‌ಲೈನ್‌ ವ್ಯವಸ್ಥೆ ಜಾರಿ ಮಾಡಿದ ಕೀರ್ತಿಯೂ ಅವರದ್ದು. ಅಂತಹವರಿಗೇ ಸಚಿವ ಸ್ಥಾನ ನೀಡದೇ ಇರುವುದು ಅತ್ಯಂತ ಖಂಡನೀಯ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‌ ಪಾಲಿನ ಇನ್ನೂ 6 ಸಚಿವ ಸ್ಥಾನ ಖಾಲಿ ಇವೆ. ಮುಂದಿನ
ಸಚಿವ ಸಂಪುಟ ವಿಸ್ತರಣೆಯಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಸ್ಥಾನ ನೀಡಲೇಬೇಕು. ಇಲ್ಲದಿದ್ದಲ್ಲಿ
ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್‌ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ ಎಂದರು.

ಮೇಯರ್‌ ಶೋಭಾ ಪಲ್ಲಾಗಟ್ಟೆ, ಮುದೇಗೌಡ್ರ ಗಿರೀಶ್‌, ದಿನೇಶ್‌ ಕೆ. ಶೆಟ್ಟಿ, ಕೆ.ಜಿ. ಶಿವಕುಮಾರ್‌,ಎ.
ನಾಗರಾಜ್‌, ಅಶ್ವಿ‌ನಿ ಪ್ರಶಾಂತ್‌, ಮಹಾನಗರ ಪಾಲಿಕೆ, ಜಿಲ್ಲಾ, ತಾಲೂಕು ಪಂಚಾಯತಿ ಕಾಂಗ್ರೆಸ್‌ ಸದಸ್ಯರು,
ಇತರೆ ಮುಖಂಡರು ಇದ್ದರು. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ